51 ಮಹಿಳೆಯರಿಂದ ಅಯ್ಯಪ್ಪ ದರ್ಶನ

By Web DeskFirst Published Jan 19, 2019, 10:49 AM IST
Highlights

10ರಿಂದ 50 ವರ್ಷ ನಡುವಿನ 51 ಮಹಿಳೆಯರು ಇದುವರೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ ಎಂದು ಕೇರಳ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

ನವದೆಹಲಿ: 10 - 50ರ ವಯೋಮಾನದ 51 ಮಹಿಳೆಯರು ಇದುವರೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ ಎಂದು ಕೇರಳ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. 

ಆದರೆ ದೇಗುಲಕ್ಕೆ ಪ್ರವೇಶ ಮಾಡಿದ ಹೆಚ್ಚಿನ ಮಾಹಿತಿಯನ್ನು ಅದು ಹಂಚಿಕೊಂಡಿಲ್ಲ. ಭದ್ರತೆ ಕೋರಿ ಬಿಂದು ಮತ್ತು ಕನಕದುರ್ಗ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೋರ್ಟ್‌ಗೆ ಈ ಮಾಹಿತಿ ನೀಡಿದ ಕೇರಳ ಸರ್ಕಾರದ ಪರ ವಕೀಲ ವಿಜಯ್‌ ಹನ್ಸಾರಿಯಾ, ಬಿಂದು, ಕನಕದುರ್ಗ ಸೇರಿದಂತೆ ಈಗಾಗಲೇ ದೇಗುಲ ಪ್ರವೇಶ ಮಾಡಿದ ಎಲ್ಲಾ ಮಹಿಳೆಯರಿಗೂ ಸರ್ಕಾರ ಸೂಕ್ತ ಭದ್ರತೆ ಒದಗಿಸುತ್ತಿದೆ. 

ಈ ವರ್ಷ ಋುತುಮತಿ ವಯಸ್ಸಿನ 7564 ಮಹಿಳೆಯರು ದೇಗುಲ ಭೇಟಿಗೆ ಹೆಸರು ನೊಂದಾಯಿಸಿಕೊಂಡಿದ್ದರು. ಈ ಪೈಕಿ ಇದುವರೆಗೆ 10-50ರ ವಯೋಮಾನದ 51 ಮಹಿಳೆಯರು ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿಯೂ ಸರ್ಕಾರ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲಿದೆ ಎಂದು ಭರವಸೆ ನೀಡಿದರು. 

ಈ ನಡುವೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ಕೊಟ್ಟಸುಪ್ರೀಂ ಆದೇಶವನ್ನು ಮರುಪರಿಶೀಲಿಸಬೇಕೆಂದು ಅರ್ಜಿ ಸಲ್ಲಿಸಿರುವ ವಕೀಲ ಮ್ಯಾಥ್ಯೂಸ್‌ ಜೆ. ನೆಡುಂಪರ, ಯಾವುದೇ ಮಹಿಳೆಯರೂ ಇದುವರೆಗೆ ದೇಗುಲ ಪ್ರವೇಶಿಸಿಲ್ಲ. ಸರ್ಕಾರ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಆರೋಪಿಸಿದರು. ಈ ನಡುವೆ ಬಿಜೆಪಿ ಮತ್ತು ಕಾಂಗ್ರೆಸ್‌ ಕೂಡಾ ಕೇರಳ ಸರ್ಕಾರ ನೀಡಿರುವ ಮಾಹಿತಿಯನ್ನು ಸುಳ್ಳು ಎಂದು ಆರೋಪಿಸಿವೆ.

click me!