
ಮಂಗಳೂರು (ಜ.07) : ಕಾಟಿಪಳ್ಳ ನಿವಾಸಿ ದೀಪಕ್ ರಾವ್ ಹತ್ಯೆಗೆ 50 ಲಕ್ಷ ರು. ಸುಪಾರಿ ಪಡೆದಿದ್ದ ದುಷ್ಕರ್ಮಿಗಳು ಕೊಲೆ ನಡೆಸುವ 2 ದಿನ ಹಿಂದೆಯೇ ರಿಹರ್ಸಲ್ ನಡೆಸಿದ್ದರು ಎಂಬ ಅಂಶಗಳು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಬಂಧಿತ ಆರೋಪಿಗಳ ಪೈಕಿ ಪೊಲೀಸ್ ಕಸ್ಟಡಿಯಲ್ಲಿ ಇರುವ ನೌಷದ್ ಮತ್ತು ಮೊಹಮ್ಮದ್ ಇರ್ಷಾದ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಜ.3ರಂದು ಮಧ್ಯಾಹ್ನ ಕಾಟಿಪಳ್ಳದಲ್ಲಿ ಮೊಬೈಲ್ ಅಂಗಡಿಯಿಂದ ಹೊರಗೆ ಬರುತ್ತಿದ್ದಾಗ ದೀಪಕ್ ರಾವ್ ಅವರನ್ನು ತಲವಾರಿನಿಂದ ಕಡಿದು ಹತ್ಯೆ ಮಾಡಲಾಗಿತ್ತು. ಇದಕ್ಕೂ ಮೊದಲು ಹತ್ಯೆ ನಡೆಸುವ ಬಗ್ಗೆ ಸ್ಕೆಚ್ ಹಾಕಿಕೊಂಡಿದ್ದ ಆರೋಪಿಗಳು ಒಂದು ಬಾರಿ ರಿಹರ್ಸಲ್ ನಡೆಸಿದ್ದಾರೆ. ಹತ್ಯೆ ನಡೆದ ಎರಡು ದಿನ ಮೊದಲು ತಮ್ಮ ಪ್ಲಾನ್ ಹೇಗೆ ಫಲಕಾರಿಯಾಗಬೇಕು ಎಂಬ ಬಗ್ಗೆ ಆರೋಪಿಗಳು ಘಟನಾ ಸ್ಥಳಕ್ಕೆ ಬಂದು ನೋಡಿ ಹೋಗಿದ್ದರು. ಆಗ ದೀಪಕ್ ರಾವ್ ಸ್ಥಳದಲ್ಲಿ ಇರಲಿಲ್ಲ.
ಆದರೆ ದೀಪಕ್ ರಾವ್ ಹೆಚ್ಚಾಗಿ ಬಂದು ಹೋಗುವ ಸಮಯವನ್ನು ಆರೋಪಿಗಳು ಮೊದಲೇ ತಿಳಿದುಕೊಂಡಿದ್ದು ಆ ಬಗ್ಗೆ ನಿಗಾ ಇರಿಸಿಕೊಂಡಿದ್ದರು. ಹಾಗಾಗಿಯೇ ಬುಧವಾರ ಮಧ್ಯಾಹ್ನ ವೇಳೆಗೆ ದೀಪಕ್ ರಾವ್ ಅವರನ್ನು ಸುಲಭದಲ್ಲಿ ಕಡಿದು ಹತ್ಯೆ ಮಾಡಿದ್ದಾರೆ. ಬುಧವಾರ ಮಧ್ಯಾಹ್ನ ಮಜೀದ್ ಅವರ ಅಂಗಡಿಗೆ ದೀಪಕ್ ರಾವ್ ಕಲೆಕ್ಷನ್ ಮೊತ್ತವನ್ನು ಕೊಟ್ಟು ಹೋಗುವುದು ಆರೋಪಿಗಳಿಗೆ ತಿಳಿದಿತ್ತು.
ಅಲ್ಲದೆ ಅಂಗಡಿ ಮಾಲೀಕರು ಊಟಕ್ಕೆ ತೆರಳುವ ಸಂದರ್ಭ ಅಲ್ಲಿ ಯಾರೂ ರಕ್ಷಣೆಗೆ ಇರುವುದಿಲ್ಲ ಎಂಬುದು ಖಚಿತವಾಗಿತ್ತು. ಇದೇ ಸಮಯ ಕೊಲೆಗೆ ಸೂಕ್ತ ಎಂಬ ತೀರ್ಮಾನಕ್ಕೆ ಆರೋಪಿಗಳು ಬಂದಿದ್ದರು ಎಂದು ಮಾಹಿತಿ ದೊರೆತಿದೆ.
50 ಲಕ್ಷ ಸುಪಾರಿ: ಕೊಲೆ ನಡೆಸುವ ಕೆಲವು ದಿನಗಳ ಮೊದಲು ದೊಡ್ಡ ಮೊತ್ತದ ಸುಪಾರಿ ಪಡೆದಿದ್ದ ಆರೋಪಿಗಳು ನಂತರ ಕೊಲೆಗೆ ಸ್ಕೆಚ್ ಹಾಕಿದ್ದರು. ಬಂಧನ ಕಾರ್ಯಾಚರಣೆ ವೇಳೆ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಮುಖ ಆರೋಪಿ ಪಿಂಕಿ ನವಾಜ್ ಎಂಬಾತನೇ ಕೊಲೆಗೆ ಸುಪಾರಿ ಪಡೆದವ.
ಸುಮಾರು 50 ಲಕ್ಷ ರು.ಗಳಷ್ಟು ದೊಡ್ಡ ಮೊತ್ತವನ್ನು ಸುಪಾರಿ ಪಡೆದಿದ್ದು, ಅದರಲ್ಲಿ ಅರ್ಧದಷ್ಟು ಮೊತ್ತವನ್ನು ತಾನು ಇಟ್ಟುಕೊಂಡು ಉಳಿದ ಮೊತ್ತವನ್ನು ಆರೋಪಿಗಳಿಗೆ ಹಂಚಿದ್ದಾನೆ ಎಂದು ಬಂಧಿತರು ತನಿಖೆಯಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.