
ಬೆಂಗಳೂರು : ನಗರದ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಮನೆಯಲ್ಲಿ ದರೋಡೆ ನಡೆಸಿದ್ದ ಆರೋಪದ ಮೇಲೆ ಕುಖ್ಯಾತ ದಂಡುಪಾಳ್ಯದ ತಂಡದ ಐವರು ಆರೋಪಿಗಳಿಗೆ 34 ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ (ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ವಿಶೇಷ ನ್ಯಾಯಾಲಯ) ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಬುಧವಾರ ರದ್ದುಪಡಿಸಿದೆ.
ಇದರೊಂದಿಗೆ ದಂಡಪಾಳ್ಯದ ಹಂತಕರ ವಿರುದ್ಧ ಒಟ್ಟು 14 ಪ್ರಕರಣಗಳು ಹೈಕೋರ್ಟ್‌ನಲ್ಲಿ ಮುಕ್ತಾಯ ಕಂಡಂತಾಗಿದೆ. ಬೆಂಗಳೂರು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ರಚಿಸಲಾಗಿದ್ದ ವಿಶೇಷ ಸೆಷನ್ಸ್ ನ್ಯಾಯಾಲಯವು ಒಟ್ಟು 13 ಪ್ರಕರಣಗಳಲ್ಲಿ ದಂಡುಪಾಳ್ಯ ತಂಡದ ಆರು ಮಂದಿ ಸದಸ್ಯರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಆ 13 ಪ್ರಕರಣಗಳಲ್ಲೂ ಆರೋಪಿಗಳಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ಈಗಾಗಲೇ ರದ್ದುಪಡಿಸಿದೆ. ಇದೀಗ 14 ನೇ ಪ್ರಕರಣ ಮುಕ್ತಾಯಗೊಂಡಿದೆ.
ಸದ್ಯ ಬಿಡುಗಡೆ ಇಲ್ಲ: ಇತ್ತೀಚೆಗೆ ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿ ನಿವಾಸಿ ಗೀತಾ ಎಂಬಾಕೆಯ ಕೊಲೆ ಹಾಗೂ ದರೋಡೆ ಪ್ರಕರಣದಲ್ಲಿ ಜೀವಿತಾವಧಿ ಜೈಲು ಶಿಕ್ಷೆಯನ್ನು ದಂಡುಪಾಳ್ಯದ ಸದಸ್ಯರಿಗೆ ಅಧೀನ ನ್ಯಾಯಾಲಯ ವಿಧಿಸಿತ್ತು. ಹಾಗೆಯೇ ಮಂಗಳೂರಿನ ರಂಜಿತ್ ವೇಗಸ್ ಮತ್ತು ಲೂಯಿಸ್ ಡಿ ಮೆಲ್ಲೊ ಕೊಲೆ ಹಾಗೂ ದರೋಡೆ ಪ್ರಕರಣದ ವಿಚಾರಣೆ ಅಧೀನ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ, ದಂಡು ಪಾಳ್ಯದ ತಂಡದ ಸದಸ್ಯರಿಗೆ ಸದ್ಯ ಬಿಡುಗಡೆ ಭಾಗ್ಯವಿಲ್ಲ.
ನಗರದ ಎಚ್‌ಆರ್‌ಬಿಆರ್ ಲೇಔಟ್‌ನ ಸಿ.ಆನಂದ್ ಮತ್ತು ಮಂಗಳ ಎಂಬುವರ ಮನೆಯಲ್ಲಿ ದರೋಡೆ ನಡೆಸಿದ್ದ ಆರೋಪದ ಮೇಲೆ ಅಧೀನ ನ್ಯಾಯಾಲಯವು ತಮಗೆ 2005 ರಲ್ಲಿ ವಿಧಿಸಿದ್ದ ಜೀವಾವಧಿ ಶಿಕ್ಷೆ ರದ್ದುಪಡಿಸುವಂತೆ ಕೋರಿ ದಂಡುಪಾಳ್ಯ ಹಂತಕರು ತಂಡದ ಕೃಷ್ಣ, ದೊಡ್ಡ ಹನುಮ, ಮುನಿಕೃಷ್ಣ, ವೆಂಕಟರಮಣ ಮತ್ತು ತಿಮ್ಮ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಿದ ನಾಯಮೂರ್ತಿ ಆರ್.ಬಿ. ಬೂದಿಹಾಳ್ ಮತ್ತು ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಮೇಲ್ಮನವಿಯನ್ನು ಪುರಸ್ಕರಿಸಿ, ಎಲ್ಲ ಆರೋಪಿಗಳನ್ನು ದರೋಡೆ ಪ್ರಕರಣದಿಂದ ಖುಲಾಸೆಗೊಳಿಸಿತು. ಬೇರೆ ಪ್ರಕರಣದಲ್ಲಿ ಆರೋಪಿಗಳ ಬಂಧನದ ಅಗತ್ಯವಿಲ್ಲ ಎಂದಾದರೆ, ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.
ಪ್ರಕರಣದಲ್ಲಿ ಅಧೀನ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ ಮತ್ತೊಬ್ಬ ಆರೋಪಿ ಚಿನ್ನಪ್ಪ ಜೈಲಿನಲ್ಲಿಯೇ ಸಾವನ್ನಪ್ಪಿದ್ದಾನೆ. ಮೇಲ್ಮನವಿದಾರರು ಯುವಕ ವೇದಮೂರ್ತಿಯ ಕೊಲೆ ಹಾಗೂ ಮನೆಯ ದರೋಡೆ ನಡೆಸಿದ್ದನ್ನು ಯಾರೂ ಕಣ್ಣಾರೆ ಕಂಡಿಲ್ಲ. ಆರೋಪಿಗಳ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳನ್ನು ಪ್ರಾಸಿಕ್ಯೂಷನ್ (ತನಿಖಾಧಿಕಾರಿಗಳು) ಒದಗಿಸಿಲ್ಲ. ಆರೋಪಿಗಳ ಹೇಳಿಕೆ ಮತ್ತು ಅವರಿಂದ ವಶಪಡಿಸಿಕೊಂಡ ಚಿನ್ನಾಭರಣ ಆಧರಿಸಿ ಅಧೀನ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಇನ್ನು ಪ್ರಕರಣದಲ್ಲಿನ 20-25 ಮಹಜರು ವಸ್ತುಗಳಿಗೆ ಒಬ್ಬ ವ್ಯಕ್ತಿಯೇ ಪಂಚನಾಮೆ ಸಾಕ್ಷಿಯಾಗಿರುವುದು ಸಂಶಯಾಸ್ಪದವಾಗಿದೆ.
ಆದ್ದರಿಂದ ಪ್ರಕರಣದಲ್ಲಿ ಮೇಲ್ಮನವಿದಾರನ್ನು ದೋಷಿಗಳಾಗಿ ಪರಿಗಣಿಸಿ ಜೀವಾವಶಿಕ್ಷೆ ವಿಧಿಸಿರುವುದು ನ್ಯಾಯಸಮ್ಮತವಾಗಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ, ಆರೋಪಿಗಳಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ರದ್ದುಪಡಿಸಿತು. ಆರೋಪಿಗಳ ಪರ ವಕೀಲರ ಹಸ್ಮತ್ ಪಾಷಾ ವಾದ ಮಂಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.