ಜಿಗ್ನೇಶ್ ಮೇವಾನಿಗೆ ಎದುರಾಗಿದೆ ಸಂಕಷ್ಟ

First Published Jun 8, 2018, 1:08 PM IST
Highlights

ಭೀಮಾ-ಕೋರೆಗಾಂವ್ ಕದನದ 200 ನೇ ವರ್ಷಾಚರಣೆಯನ್ನು ಎಲ್ಗಾರ್ ಪರಿಷದ್ ಎಂಬ ದಲಿತ ಸಂಘಟನೆ ಕಳೆದ ಜ.1ರಂದು ಹಮ್ಮಿಕೊಂಡಿತ್ತು. ಈ ವೇಳೆ ಭಾರೀ ಹಿಂಸಾಚಾರ ನಡೆದಿತ್ತು. ಇದೇ ಆಚರಣೆಯಲ್ಲಿ ಪಾಲ್ಗೊಂಡಿದ್ದ ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಮೇಲೆಯೂ ಪುಣೆ ಪೊಲೀಸರು ಕಣ್ಣಿಟ್ಟಿದ್ದಾರೆ.

ಪುಣೆ: ದಲಿತರು ಹಾಗೂ ಮರಾಠರ ಸಂಘರ್ಷಕ್ಕೆ ಕಾರಣವಾದ ಭೀಮಾ-ಕೋರೆಗಾಂವ್ ಗಲಭೆ ಸಂಬಂಧ ದಲಿತ ಕಾರ್ಯಕರ್ತ ಸುಧೀರ್ ಧಾವಳೆ ಸೇರಿ ಐವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಇವರಿಗೆ ನಕ್ಸಲರ ನಂಟು ಇದೆ ಎಂದು ದೂರಲಾಗಿದೆ.  ಭೀಮಾ-ಕೋರೆಗಾಂವ್ ಕದನದ 200 ನೇ ವರ್ಷಾಚರಣೆಯನ್ನು ಎಲ್ಗಾರ್ ಪರಿಷದ್ ಎಂಬ ದಲಿತ ಸಂಘಟನೆ ಕಳೆದ ಜ.1ರಂದು ಹಮ್ಮಿಕೊಂಡಿತ್ತು. ಈ ವೇಳೆ ಭಾರೀ ಹಿಂಸಾಚಾರ ನಡೆದಿತ್ತು. 

ಈ ಹಿನ್ನೆಲೆ ಇತ್ತೀಚೆಗೆ ಕೆಲ ವ್ಯಕ್ತಿಗಳ ಮನೆ ಮೇಲೆ ದಾಳಿ ನಡೆಸಿದ್ದ ಪೊಲೀಸರು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದರು. ಇದರ ಆಧಾರದಲ್ಲಿ ಕಾರ್ಯಕ್ರಮದ ಸಂಘಟಕರ ಪೈಕಿ ಒಬ್ಬನಾದ  ಧಾವಳೆ, ವಕೀಲ ಸುರೇಂದ್ರ ಗಾದ್ಲಿಂಗ್, ಕಾರ್ಯಕರ್ತ ಮಹೇಶ್ ರಾವುತ್, ನಾಗಪುರ ವಿವಿ ಪ್ರಾಧ್ಯಾಪಕಿ ಶೋಮಾ ಸೇನ್, ರಾಜಕೀಯ ಕೈದಿಗಳ ಪರ ಕಾರ್ಯಕರ್ತೆ ರೋನಾ ವಿಲ್ಸನ್‌ರನ್ನು ಬಂಧಿಸಲಾಗಿದೆ. ಇವರ ವಿರುದ್ಧ ವಿವಾದಾತ್ಮಕ ಕರಪತ್ರಗಳನ್ನು ಹಂಚುವುದರ ಜೊತೆಗೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪ ಹೊರಿಸಲಾಗಿದೆ. ಈ ಕುರಿತ ವಿಚಾರಣೆಗಾಗಿ ನ್ಯಾಯಾಲಯ ಬಂಧಿತರನ್ನು ಪೊಲೀಸ್ ವಶಕ್ಕೆ ಒಪ್ಪಿಸಿದೆ. ಇದೇ ಆಚರಣೆಯಲ್ಲಿ ಪಾಲ್ಗೊಂಡಿದ್ದ ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಮೇಲೆಯೂ ಪುಣೆ ಪೊಲೀಸರು ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

ಪತ್ರದಲ್ಲೇನಿತ್ತು: ಆರೋಪಿಗಳ ಮನೆ ಮೇಲಿನ ದಾಳಿ ವೇಳೆ ಹೋರಾಟಗಾರ್ತಿ ರೋನಾ ವಿಲ್ಸನ್‌ರ ಮನೆಯಲ್ಲಿ ಸ್ಫೋಟಕ ಪತ್ರವೊಂದು ಪತ್ತೆಯಾಗಿತ್ತು. ಅದರಲ್ಲಿ ನಿಷೇಧಿತ ಸಿಪಿಐ (ಎಂ) ಸಂಘಟನೆಯ ಮುಖ್ಯ ಸ್ಥರೊಬ್ಬರು ಜ.2 ರಂದು ರೋನಾಗೆ ಬರೆ ದಿದ್ದ ಪತ್ರದಲ್ಲಿ ಪ್ರತಿಭಟನೆ ಯಶಸ್ವಿಯಾಗಿದ್ದರಲ್ಲಿ ರೋನಾ ಮತ್ತು ಇತರರ ಸಹಕಾರದ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅಲ್ಲದೆ, ಮುಂದಿನ ದಿನಗಳಲ್ಲೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇಂಥ ದ್ದೇ ಕಾರ್ಯಕ್ರಮ ಆಯೋಜಿಸಬೇಕು ಎಂದು ಹೇಳಲಾಗಿತ್ತು. ಬಿಜೆಪಿ ಕಿಡಿ: ಈ ನಡುವೆ ಬಂಧಿತ ನಕ್ಸಲ್ ಅನುಕಂಪವಾದಿಗಳ ಜತೆ ಕಾಂಗ್ರೆಸ್‌ಗೆ ಸಂಬಂಧವಿದೆ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಆಗ್ರಹಿಸಿದ್ದಾರೆ.

click me!