ಅತಿ ವೇಗದ ಬೈಕ್ ಚಾಲನೆ : ಮೂವರು ಯುವಕರು ಬಲಿ

By Web DeskFirst Published May 7, 2019, 8:34 AM IST
Highlights

ಅತಿ ವೇಗವಾಗಿ ಬೈಕ್ ಚಾಲನೆ ಮಾಡಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು :  ವೇಗವಾಗಿ ಬೈಕ್‌ ಚಾಲನೆ ಮಾಡಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮೂವರು ಎಂಜಿನಿಯರ್‌ಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಸವೇಶ್ವರ ನಗರದ ಡಾ.ಸಿದ್ದಯ್ಯ ಪುರಾಣಿಕ ರಸ್ತೆಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಮಾಗಡಿ ಮುಖ್ಯರಸ್ತೆಯ ಕಾಚೋಹಳ್ಳಿ ನಿವಾಸಿ ಅನಿಲ್‌ (29), ಮೈಸೂರು ಜಿಲ್ಲೆ ನರಸೀಪುರ ತಾಲೂಕಿನ ಕಾರ್ತಿಕ್‌ (25), ಮೂಲತಃ ಗೌರಿಬಿದನೂರಿನ ಶ್ರೀನಾಥ್‌ (28) ಮೃತರು. ಕಾರ್ತಿಕ್‌ ಕೆಂಗೇರಿಯಲ್ಲಿ ನೆಲೆಸಿದ್ದು, ಶ್ರೀನಾಥ್‌ ನಾಗರಬಾವಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಅನಿಲ್‌ ಪುಣೆಯ ಎಚ್‌ಎಎಲ್‌ ಸಂಸ್ಥೆಯಲ್ಲಿ ಎಂಜಿನಿಯರ್‌ ಆಗಿದ್ದರೆ, ಕಾರ್ತಿಕ್‌ (ಕೆಆರ್‌ಡಿಐಎಲ್‌) ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಲ್ಲಿ ಎಂಜಿನಿಯರ್‌ ಆಗಿದ್ದರು. ಉಳಿದಂತೆ ಶ್ರೀನಾಥ್‌ ನಗರದ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾಗಿದ್ದರು.

ಮೂವರು ಸ್ನೇಹಿತರು ಪಾರ್ಟಿ ಮುಗಿಸಿಕೊಂಡು ಭಾನುವಾರ ರಾತ್ರಿ 12.30ರ ಸುಮಾರಿಗೆ ಒಂದೇ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಆರ್‌15 ಬೈಕ್‌ಅನ್ನು ಕಾರ್ತಿಕ್‌ ಚಾಲನೆ ಮಾಡುತ್ತಿದ್ದರು. ಬಸವೇಶ್ವರ ನಗರದ ಡಾ.ಸಿದ್ಧಯ್ಯ ಪುರಾಣಿಕ ರಸ್ತೆಯಲ್ಲಿ ಸರ್ಕಾರಿ ರಾಷ್ಟ್ರೀಯ ಯುನಾನಿ ಮೆಡಿಕಲ್‌ ಕಾಲೇಜು ಬಳಿ ತಿರುವು ಪಡೆಯುವಾಗ ಬೈಕ್‌ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ನಂತರ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಮೂವರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಅಸುನೀಗಿದ್ದಾರೆ. ಅಪಘಾತದ ತೀವ್ರತೆಗೆ ಬೈಕ್‌ ಮೂರು ಬಾರಿ ಪಲ್ಟಿಹೊಡೆದಿದೆ ಎಂದು ಪೊಲೀಸರು ಹೇಳಿದರು.

ಬೈಕ್‌ ಮೃತ ಕಾರ್ತಿಕ್‌ನ ಸ್ನೇಹಿತನಿಗೆ ಸೇರಿದ್ದು, ಎಂಬುದು ಗೊತ್ತಾಗಿದೆ. ಆದರೆ ಮೂವರು ಸ್ನೇಹಿತರು ಎಲ್ಲಿಂದ ಬರುತ್ತಿದ್ದರು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. 140 ಕಿ.ಮೀ ವೇಗದಲ್ಲಿ ಬರುವಾಗ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮೃತರ ಕುಟುಂಬಸ್ಥರು ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ. ಮರಣೋತ್ತರ ಪರೀಕ್ಷೆ ನಡೆಸಿ ಸೋಮವಾರ ಬೆಳಗ್ಗೆಯೇ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ ಎಂದರು.

ಮದ್ಯ ಸೇವನೆ ಶಂಕೆ?: ಮೃತ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಮದ್ಯ ಸೇವಿಸಿ ಬೈಕ್‌ ಚಾಲನೆ ಮಾಡಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೂವರು ಮೃತರ ರಕ್ತ ಮಾದರಿಯನ್ನು ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಈ ಬಗ್ಗೆ ವಿಷಯ ತಿಳಿಯಲಿದೆ ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಹೆಲ್ಮೆಟ್‌ ಧರಿಸಿರಲಿಲ್ಲ: ಸವಾರ ಕಾರ್ತಿಕ್‌ ಸೇರಿ ಹಿಂಬದಿ ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ. ಹೆಲ್ಮೆಟ್‌ ಧರಿಸಿದ್ದರೆ ತುಸು ತಲೆಗೆ ಬಿದ್ದಿದ್ದ ಪೆಟ್ಟು ತಡೆಯಬಹುದಿತ್ತು. ಸ್ಥಳೀಯ ಸಿಸಿಟಿವಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ವಿವರಿಸಿದರು.

ಇಬ್ಬರ ಮದುವೆ ನಿಗದಿಯಾಗಿತ್ತು

ಅನಿಲ್‌ ಪುಣೆಯ ನಾಸಿಕ್‌ನಲ್ಲಿರುವ ಹಿಂದೂಸ್ತಾನ್‌ ಏರೋನಾಟಿಕಲ್‌ ಲಿಮಿಟೆಡ್‌ (ಎಚ್‌ಎಎಲ್‌) ಕೆಲಸದಲ್ಲಿದ್ದರು. ಗುರುವಾರ ಅನಿಲ್‌ ಅವರ ಮದುವೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಹೀಗಾಗಿ ಭಾನುವಾರವಷ್ಟೇ ನಗರಕ್ಕೆ ಆಗಮಿಸಿದ್ದರು. ಇನ್ನು ಕಾರ್ತಿಕ್‌ ವಿವಾಹ ಸೆಪ್ಟೆಂಬರ್‌ಗೆ ನಿಗದಿಯಾಗಿತ್ತು. ಬಹಳ ದಿನಗಳ ನಂತರ ಸ್ನೇಹಿತರು ಒಟ್ಟಿಗೆ ಭೇಟಿಯಾಗಿದ್ದರು. ಹೊರಗೆ ಹೋಗಿದ್ದ ವೇಳೆ ಅವಘಡ ಸಂಭವಿಸಿದೆ ಎಂದು ಸಂಬಂಧಿಕರು ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

click me!