ಮೇಲ್ಮನೆ ಚುನಾವಣೆ : 3 ಸ್ಥಾನಕ್ಕೆ ಅವಿರೋಧ ಆಯ್ಕೆ

By Web DeskFirst Published Sep 28, 2018, 7:36 AM IST
Highlights

ವಿಧಾನ ಪರಿಷತ್ ಚುನಾವಣೆಯ ಕಣದಲ್ಲಿದ್ದ ಮೂವರು ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್‌ನ ಎಂ.ಸಿ.ವೇಣುಗೋಪಾಲ್‌, ನಜೀರ್‌ ಅಹ್ಮದ್‌ ಮತ್ತು ಜೆಡಿಎಸ್‌ನ ಎಚ್‌.ಎಂ.ರಮೇಶ್‌ ಗೌಡ ಆಯ್ಕೆಯಾಗಿದ್ದಾರೆ. 

ಬೆಂಗಳೂರು :  ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಕಾಂಗ್ರೆಸ್‌ನ ಎಂ.ಸಿ.ವೇಣುಗೋಪಾಲ್‌, ನಜೀರ್‌ ಅಹ್ಮದ್‌ ಮತ್ತು ಜೆಡಿಎಸ್‌ನ ಎಚ್‌.ಎಂ.ರಮೇಶ್‌ ಗೌಡ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಗುರುವಾರ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ವಾಪಸ್‌ ಪಡೆಯಲು ಅವಕಾಶ ಇತ್ತು. ಆದರೆ ಯಾರು ಸಹ ನಾಮಪತ್ರವನ್ನು ಹಿಂಪಡೆಯದ ಕಾರಣ ಕಣದಲ್ಲಿದ್ದ ಮೂವರು ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ನಂತರ ವಿಧಾನಸಭೆಯ ಜಂಟಿ ಕಾಯದರ್ಶಿ ಎಂ.ಎಸ್‌.ಕುಮಾರಸ್ವಾಮಿ ಅವರು ಮೂವರು ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಿದರು.

ಕಾಂಗ್ರೆಸ್‌ನ ಎಂ.ಸಿ.ವೇಣುಗೋಪಾಲ್‌, ನಜೀರ್‌ ಅಹ್ಮದ್‌ ತಮ್ಮ ಬೆಂಬಲಿಗರ ಜತೆಗೆ ವಿಧಾನಸೌಧಕ್ಕೆ ಆಗಮಿಸಿ ಚುನಾವಣಾಧಿಕಾರಿಯಿಂದ ಪ್ರಮಾಣಪತ್ರ ಸ್ವೀಕರಿಸಿದರೆ, ಜೆಡಿಎಸ್‌ನ ರಮೇಶ್‌ಗೌಡ ಏಕಾಂಗಿಯಾಗಿ ಬಂದು ಪ್ರಮಾಣಪತ್ರ ಪಡೆದುಕೊಂಡರು. ಶಾಸಕ ವಿ.ಸೋಮಣ್ಣ ಅವರಿಂದ ತೆರವಾದ ಸ್ಥಾನಕ್ಕೆ ಜೆಡಿಎಸ್‌ನಿಂದ ರಮೇಶ್‌ಗೌಡ ಅವಿರೋಧವಾಗಿ ಆಯ್ಕೆಯಾದರೆ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರಿಂದ ತೆರವಾದ ಸ್ಥಾನಕ್ಕೆ ವೇಣುಗೋಪಾಲ್‌ ಮತ್ತು ಶಾಸಕ ಕೆ.ಎಸ್‌.ಈಶ್ವರಪ್ಪ ಅವರಿಂದ ತೆರವಾದ ಸ್ಥಾನಕ್ಕೆ ನಜೀರ್‌ ಅಹ್ಮದ್‌ ಆಯ್ಕೆಯಾಗಿದ್ದಾರೆ.

ಬಿಜೆಪಿಗೆ ಸೋಲು ಖಚಿತವಾಗಿದ್ದ ಹಿನ್ನೆಲೆಯಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿತ್ತು. ಅಲ್ಲದೇ, ಪಕ್ಷೇತರ ಅಭ್ಯರ್ಥಿ ವೆಂಕಟೇಶ್ವರ ಮಹಾಸ್ವಾಮೀಜಿ ಮತ್ತು ಟಿ.ಡಿ.ಹರಿಶ್ಚಂದ್ರಗೌಡ ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ, ಅವರಿಗೆ ಸೂಚಕರು ಇಲ್ಲದ ಕಾರಣ ಅವರ ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ಹೀಗಾಗಿ ಕಣದಲ್ಲಿ ಸ್ಪರ್ಧಿಗಳೇ ಇಲ್ಲದ ಕಾರಣ ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

click me!