
ಬೆಂಗಳೂರು : ಆನ್‌ಲೈನ್ ಮೂಲಕ ಔಷಧಗಳ ಖರೀದಿ ಹಾಗೂ ಮಾರಾಟಕ್ಕೆ (ಇ-ಫಾರ್ಮಸಿ) ಅವಕಾಶ ನೀಡುವುದನ್ನು ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಸೆ. 28 ರಂದು ದೇಶಾದ್ಯಂತ ಔಷಧ ಮಳಿಗೆಗಳ ಬಂದ್‌ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಔಷಧ ಮಳಿಗೆಗಳು ಶುಕ್ರವಾರ ಮುಚ್ಚಲ್ಪಡಲಿವೆ.
ಶುಕ್ರವಾರದ ಔಷಧ ಮಳಿಗೆಗಳಿಗೆ ಬಂದ್‌ಗೆ ಬಹುತೇಕ ಸಂಘಟನೆಗಳು ಬೆಂಬಲ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ದಾಸ್ತಾನು ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ನಿರ್ದೇಶಕರು ಆದೇಶಿಸಿದ್ದಾರೆ.
ಸುವರ್ಣ ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ (ಸುವರ್ಣ ಕೆಸಿಡಿಎ) ಬಂದ್‌ಗೆ ಬೆಂಬಲ ವ್ಯಕ್ತಪಡಿಸಿಲ್ಲ ಎಂದು ಹೇಳಿದೆ. ಆದರೆ, ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್, ಔಷಧ ವ್ಯಾಪಾರಿಗಳ ಸಂಘ ಸೇರಿದಂತೆ ಬಹುತೇಕ ಪ್ರಮುಖ ಸಂಘಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ ಸೆ.28 ರಂದು ಔಷಧ ಮಳಿಗೆಗಳು ಬಹುತೇಕ ಬಂದ್ ಆಗಲಿವೆ ಎಂದು ಔಷಧ ವ್ಯಾಪಾರಿಗಳ ಸಂಘದ ರಾಜ್ಯಾದ್ಯಕ್ಷ ಆರ್. ರಘುನಾಥರೆಡ್ಡಿ ಮಾಹಿತಿ ನೀಡಿದ್ದಾರೆ.
ಔಷಧಗಳು ಜನರ ಆರೋಗ್ಯ ಕಾಪಾಡಲು ಇರುವುದೇ ಹೊರತು ಕೆಡಿಸಲು ಅಲ್ಲ. ಔಷಧ ವಿತರಣೆ ಹಾಗೂ ಸಂಗ್ರಹದಲ್ಲಿ ಅದರದ್ದೇ ಆದ ಕ್ರಮಗಳನ್ನು ಅನುಸರಿಸಬೇಕು. ಹೀಗಿರುವಾಗ ಪರವಾನಗಿ ಇಲ್ಲದೆಯೇ ಮನಸೋ ಇಚ್ಛೆ ರಿಯಾಯಿತಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಔಷಧ ವಿತರಿಸಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಬೆಂಬಲ ನೀಡಬಾರದು ಎಂದು ಒತ್ತಾಯಿಸಿ ಬಂದ್ ನಡೆಸುತ್ತಿದ್ದು ಬೆಂಗಳೂರಿನಲ್ಲಿ 6,500, ಕರ್ನಾಟಕದಲ್ಲಿ 24 ಸಾವಿರ ಸೇರಿದಂತೆ ದೇಶಾದ್ಯಂತ 6.5 ಲಕ್ಷ ಔಷಧ ಮಳಿಗೆಗಳನ್ನು ಸೆ.28 ರಂದು ಮುಚ್ಚಲಾಗುವುದು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.