
ನವದೆಹಲಿ(ಸೆ.18): ದೇಶದಲ್ಲಿ ಒಬ್ಬ ವಿಐಪಿ (ಗಣ್ಯವ್ಯಕ್ತಿ)ಯ ರಕ್ಷಣೆಗೆ ಮೂವರು ಪೊಲೀಸರನ್ನು ನಿಯೋಜಿಸಲಾಗಿದೆ. ಆದರೆ, 663 ಸಾಮಾನ್ಯ ವ್ಯಕ್ತಿಯ ರಕ್ಷಣೆಗೆ ಇರುವುದು ಕೇವಲ ಓರ್ವ ಪೊಲೀಸ್ ಸಿಬ್ಬಂದಿ ಮಾತ್ರ. ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ಬಿಡುಗಡೆ ಮಾಡಿದ ಜನಸಂಖ್ಯಾವಾರು ಪೊಲೀಸ್ ಡೇಟಾದಿಂದ ಈ ಸಂಗತಿ ತಿಳಿದು ಬಂದಿದೆ.
ದತ್ತಾಂಶದ ಪ್ರಕಾರ, ದೇಶದಲ್ಲಿ 19.26 ಲಕ್ಷ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ 56,944 ಪೊಲೀಸರನ್ನು 29 ರಾಜ್ಯಗಳು ಮತ್ತು ಆರು ಕೇಂದ್ರಾಡಳಿತ ಪ್ರದೇಶಗಳ 20,828 ಗಣ್ಯವ್ಯಕ್ತಿಗಳ ಭದ್ರತೆಗೆ ನಿಯೋಜಿಸಲಾಗಿದೆ. ಅಂದರೆ ಪ್ರತಿ ವಿಐಪಿಗೆ ಸರಾಸರಿ 2.73 ಪೊಲೀಸರನ್ನು ಒದಗಿಸಲಾಗಿದೆ. ಆದರೆ. 100 ಕೋಟಿ ಜನರ ರಕ್ಷಣೆಗೆ ಇರುವುದು 19 ಲಕ್ಷ ಪೊಲೀಸರು ಮಾತ್ರ. ಜನತೆವಾರು ಅತೀ ಕಡಿಮೆ ಪೊಲೀಸರನ್ನು ಹೊಂದಿರುವ ದೇಶಗಳಲ್ಲಿ ಭಾರತ ಒಂದೆನಿಸಿದೆ. 663 ಜನರಿಗೆ ಕೇವಲ ಒಬ್ಬ ಪೊಲೀಸ್ ರಕ್ಷಣೆ ಇದೆ.
ವಿಐಪಿಗಳಿಗೆ ಪೊಲೀಸರ ನಿಯೋಜನೆಯಲ್ಲಿ ಬಿಹಾರ ಮೊದಲ ಸ್ಥಾನ ಪಡೆದಿದ್ದು, 3200 ಗಣ್ಯವ್ಯಕ್ತಿಗಳಿಗೆ 6248 ಪೊಲೀಸರ ರಕ್ಷಣೆ ಇದೆ. ಆ ನಂತರದ ಸ್ಥಾನದಲ್ಲಿರುವ ಪಶ್ಚಿಮ ಬಂಗಾಳದಲ್ಲಿ 2207 ವಿಐಪಿಗಳನ್ನು 4233 ಪೊಲೀಸರು ಕಾಯುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 2075 ಗಣ್ಯವ್ಯಕ್ತಿಗಳಿಗೆ 4499 ಪೊಲೀಸರ ರಕ್ಷಣೆ ಇದೆ. ಉತ್ತರ ಪ್ರದೇಶದಲ್ಲಿ 4681 ಪೊಲೀಸರು 1901 ವಿಐಪಿಗಳನ್ನು ಕಾವಲು ಕಾಯುತ್ತಿದ್ದಾರೆ. ಪ್ರಧಾನಿ ಮತ್ತು ರಾಷ್ಟ್ರಪತಿಯ ನಿವಾಸವಿರುವ ದೆಹಲಿಯಲ್ಲಿ 489 ಗಣ್ಯರ ಭದ್ರತೆಗೆ 7420 ಪೊಲೀಸರನ್ನು ನಿಯೋಜಿಸಲಾಗಿದೆ. ಮಹಾರಾಷ್ಟ್ರದಲ್ಲಿ 74 ಗಣ್ಯರಿಗೆ 961 ಪೊಲೀಸರನ್ನು ಮತ್ತು ಕೇರಳದಲ್ಲಿ ಕೇವಲ 57 ಗಣ್ಯರ ಭದ್ರತೆಗೆ 214 ಪೊಲೀಸರಿದ್ದಾರೆ. ಲಕ್ಷದ್ವೀಪದಲ್ಲಿ ಮಾತ್ರ ವಾವುದೇ ಗಣ್ಯವ್ಯಕ್ತಿಗೂ ಪೊಲೀಸ್ ಭದ್ರತೆ ನೀಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.