
ಬೆಂಗಳೂರು(ನ.09): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುವುದನ್ನು ತಡೆಯಲು ಸಾಮ, ದಂಡ, ಬೇಧ ಸೇರಿದಂತೆ ಬಿಜೆಪಿಯು ನಡೆಸುತ್ತಿರುವ ತಂತ್ರಗಳಿಗೆ ಕಾಂಗ್ರೆಸ್'ನ ಕೆಲ ಸಚಿವರು ಮಣಿಯಲು ಆರಂಭಿಸಿದ್ದು, ಜನವರಿ ವೇಳೆಗೆ ಕನಿಷ್ಠ ಮೂವರು ಸಚಿವರು ಬಿಜೆಪಿ ಪಾಲಾಗುವ ಸಾಧ್ಯತೆಯಿದೆ ಎಂಬ ಗುಲ್ಲು ಇದೀಗ ಕಾಂಗ್ರೆಸ್ ಪಾಳಯದಲ್ಲೇ ದಟ್ಟವಾಗಿದೆ.
ಇದಿಷ್ಟೇ ಅಲ್ಲದೆ, ಕಾಂಗ್ರೆಸ್ ನಾಯಕತ್ವದ ಬಗ್ಗೆ ರೋಸಿ ಹೋಗಿರುವ ಕೆಲ ಶಾಸಕರು ಸಹ ತಾವಾಗಿಯೇ ಬಿಜೆಪಿ ಸೇರಲು ಮಾತುಕತೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯು ಕಾಂಗ್ರೆಸ್'ನ ಸಚಿವರಾದ ಆರ್.ವಿ. ದೇಶಪಾಂಡೆ, ಪ್ರಮೋದ್ ಮಧ್ವರಾಜ್ ಹಾಗೂ ಈಶ್ವರ ಖಂಡ್ರೆ ಅವರನ್ನು ಸೆಳೆಯಲು ತೀವ್ರ ಪ್ರಯತ್ನ ನಡೆಸುತ್ತಿದ್ದು, ಹಲವು ರೀತಿಯ ತಂತ್ರಗಳನ್ನು ಬಳಸುತ್ತಿದೆ ಎನ್ನಲಾಗಿದೆ. ಈ ಸಚಿವರ ಪೈಕಿ ಹಿರಿಯ ಸಚಿವರೊಬ್ಬರ ಕ್ಷೇತ್ರದಲ್ಲಿ ಎರಡನೇ ಹಾಗೂ ಮೂರನೇ ಹಂತದ ಕಾಂಗ್ರೆಸ್ ನಾಯಕರು ಈಗಾಗಲೇ ಬಿಜೆಪಿಯ ಪಾಲಾಗಿರುವುದು ಸಚಿವರು ಜನವರಿ ವೇಳೆಗೆ ಪಕ್ಷ ತ್ಯಜಿಸುವ ಸಂಕೇತವೆಂದೇ ಕಾಂಗ್ರೆಸ್ ವಲಯದಲ್ಲಿ ಬಿಂಬಿಸಲಾಗುತ್ತಿದೆ.
ಸಚಿವರಾದ ಆರ್.ವಿ. ದೇಶಪಾಂಡೆ ಹಾಗೂ ಪ್ರಮೋದ್ ಮಧ್ವರಾಜ್ ಅವರೊಂದಿಗೆ ಬಿಜೆಪಿಯ ದೆಹಲಿ ಮಟ್ಟದ ನಾಯಕರು ಸಂಪರ್ಕದಲ್ಲಿದ್ದಾರೆ. ಅಲ್ಲದೆ, ಆರ್‌ಎಸ್‌ಎಸ್'ನ ಪ್ರಮುಖರು ಸಹ ಅವರನ್ನು ಸೆಳೆಯುವ ದಿಸೆಯಲ್ಲಿ ತಮ್ಮ ಕೈಜೋಡಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈಶ್ವರ್ ಖಂಡ್ರೆ ಅವರು ಮತ್ತೊಬ್ಬ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ನೇರಾನೇರ ತಿಕ್ಕಾಟ ಹೊಂದಿದ್ದಾರೆ. ಲಿಂಗಾಯತ ಹಾಗೂ ವೀರಶೈವ ಧರ್ಮದ ವಿಚಾರದಲ್ಲಿ ಈ ಇಬ್ಬರು ಸಚಿವರ ನಡುವೆ ಮನಸ್ತಾಪವಿದೆ. ಇದನ್ನೇ ಮುಂದು ಮಾಡಿಕೊಂಡು ರಾಜ್ಯ ಬಿಜೆಪಿ ನಾಯಕರು ಈಶ್ವರ್ ಖಂಡ್ರೆ ಅವರನ್ನು ಸೆಳೆಯಲು ಮುಂದಾಗಿದ್ದಾರೆಂದು ಮೂಲಗಳು ಹೇಳುತ್ತವೆ.
ಉಳಿದಂತೆ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿ.ಕೆ. ಸುರೇಶ್ ಅವರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ಬಿಜೆಪಿ ಈ ಹಿಂದಿನಿಂದಲೂ ಪ್ರಯತ್ನ ನಡೆಸಿದೆ. ಈ ಪ್ರಯತ್ನ ಈಗಲೂ ನಡೆದಿದೆ ಎನ್ನಲಾಗಿದೆ. ಆದರೆ, ಈ ಇಬ್ಬರು ಕಾಂಗ್ರೆಸ್ ತ್ಯಜಿಸುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ.
ಶಕುಂತಳಾ ಶೆಟ್ಟಿಗೆ ಗಾಳ: ಇನ್ನು ಪುತ್ತೂರಿನ ಶಾಸಕರಾದ ಶಕುಂತಳಾ ಶೆಟ್ಟಿ ಅವರನ್ನು ಮತ್ತೆ ಬಿಜೆಪಿ ಸೆಳೆಯಲು ತೀವ್ರ ಪ್ರಯತ್ನ ನಡೆಸಲಾಗುತ್ತಿದೆ ಎನ್ನಲಾಗಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಶಾಸಕರಾದ ಶಕುಂತಲಾ ಶೆಟ್ಟಿ ಅವರು ಈಗಲೂ ಆರ್‌ಎಸ್ಎಸ್'ನ ಹಿರಿಯ ತಲೆಯಾಳುಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಈ ಹಿರಿಯ ತಲೆಯಾಳುಗಳೇ ಅವರನ್ನು ಮತ್ತೆ ಬಿಜೆಪಿಗೆ ಸೆಳೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.