
ನವದೆಹಲಿ(ಜೂ.26): ನವದೆಹಲಿಯಲ್ಲಿ ನಡೆದಿದ್ದ ಮೇಜರ್ ದ್ವಿವೇದಿ ಪತ್ನಿ ಶೈಲಜಾ ಅವರ ಭೀಕರ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಕೊಲೆಗೂ ಮುನ್ನ ಮೇಜರ್ ಪತ್ನಿ ಹಾಗೂ ಕೊಲೆ ಆರೋಪಿ ಮೇಜರ್ ಹಂಡಾ ನಡುವೆ ಕೇವಲ ಆರು ತಿಂಗಳ ಅವಧಿಯಲ್ಲಿ ಬರೊಬ್ಬರಿ 3500ಕ್ಕೂ ಹೆಚ್ಚು ಬಾರಿ ದೂರವಾಣಿ ಸಂಭಾಷಣೆ ನಡೆದಿತ್ತು ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಮೇಜರ್ ಹಂಡಾ ಮತ್ತು ಕೊಲೆಯಾದ ಮೇಜರ್ ದ್ವಿವೇದಿ ಪತ್ನಿ ಶೈಲಜಾ ಅವರ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದು, ಅದರಲ್ಲಿರುವ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ದೂರವಾಣಿ ಕರೆಗಳು ಮಾಹಿತಿ, ಎಸ್ ಎಂಎಸ್, ವಾಟ್ಸಪ್ ಸಂದೇಶಗಳು, ಫೇಸ್ ಬುಕ್ ದತ್ತಾಂಶ ಸೇರಿದಂತೆ ಹಲವು ಮಾಹಿತಿಗಳನ್ನು ಪೊಲೀಸರು ಕಲೆಹಾಕಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸರು, ಮೇಜರ್ ಹಂಡಾ ಅವರು ಮೇಜರ್ ದ್ವಿವೇದಿ ಪತ್ವಿ ಶೈಲಜಾ ಅವರ ಮೇಲೆ ವ್ಯಾಮೋಹ ಹೊಂದಿದ್ದರು. ಆಕೆಗಾಗಿ ತನ್ನ ಪತ್ನಿಯನ್ನೇ ತೊರೆಯಲು ಹಮಡಾ ಸಿದ್ಧನಾಗಿದ್ದ. ಶೈಲಜಾ ಕೊಲೆಯಾಗುವ ಹಿಂದಿನ ದಿನ ಕೂಡ ಆಕೆಗಾಗಿ ತನ್ನ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ. ಬಳಿಕ ಮಾರನೆಯ ಆಕೆಯೊಂದಿಗೆ ಮಾತನಾಡಬೇಕು ಎಂದು ಹೇಳಿ ಕರೆಸಿಕೊಂಡಿದ್ದಾನೆ. ಆಕೆ ಕೂಡ ತನ್ನ ಶಾಪಿಂಗ್ ಅನ್ನು ಅರ್ಧಕ್ಕೆ ಮೊಚಕುಗೊಳಿಸಿ ಆತನ ಭೇಟಿಯಾಗಿದ್ದಾಳೆ.
ಅಂದು ಕಾರಿನಲ್ಲಿ ಆತ ಮದುವೆ ಕುರಿತಂತೆ ಆಕೆಯ ಮೇಲೆ ಒತ್ತಡ ಹೇರಿದ್ದು, ಆಕೆ ಮದುವೆಯಾಗಲು ನಿರಾಕರಿಸಿದಾಗ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಇನ್ನು ಕಾರಿನಲ್ಲಿ ಆಕೆಯ ರಕ್ತ, ಕೂದಲು ದೊರೆತಿದ್ದು, ಇದು ಶೈಲಜಾ ಅವರದ್ದೇ ಎಂದು ವೈದ್ಯಕೀಯ ಪರೀಕ್ಷೆಗಳಿಂದ ತಿಳಿದುಬಂದಿದೆ. ಕಾರಿನಿಂದ ಆಕೆಯನ್ನು ತಳ್ಳಿ ಇದು ಆಪಘಾತ ಎಂಬಂತೆ ಬಿಂಬಿಸಲು ಆತ ಯತ್ನಿಸಿದ್ದ. ಕಾರನ್ನು ವಾಶ್ ಮಾಡಿ ಯಾವುದೇ ಸಾಕ್ಷಿ ದೊರೆಯದಂತೆ ಮಾಡಲು ಯತ್ನಿಸಿದ್ದ. ಆದರೆ ಆತನ ಹೋಂಡಾ ಸಿಟಿ ಕಾರನ್ನು ಪರಿಶೀಲಿಸಿದ ವಿಧಿವಿಜ್ಞಾನ ತಜ್ಞರು ಕಾರಿನಲ್ಲಿದ್ದ ರಕ್ತದ ಮಾದರಿ ಮತ್ತು ಕೂದಲನ್ನು ವಶಕ್ಕೆ ಪಡೆದಿದ್ದರು.
ಅಂತೆಯೇ ಶೈಲಜಾ ಅವರನ್ನು ಫೋನ್ ಅನ್ನು ಛಿದ್ರ ಮಾಡಿದ್ದ ಹಂಡಾ ತನ್ನದೇ ಮನೆಯ ಸಮೀಪದ ಕಸದ ಬುಟ್ಟಿಗೆ ಎಸೆದಿದ್ದ. ತನಿಖೆ ವೇಳೆ ಇದು ಪತ್ತೆಯಾಗಿತ್ತು. ಮೇಜರ್ ಹಂಡಾ ಕಾರಿನಲ್ಲಿ ಶೈಲಜಾ ಅವರ ಫಿಂಗರ್ ಪ್ರಿಂಟ್ ಪತ್ತೆಯಾಗಿದ್ದು, ಅಲ್ಲದೆ ಘಟನೆ ನಡೆದ ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಮೇಜರ್ ಹಂಡಾರೊಂದಿಗೆ ಶೈಲಜಾ ಕಾರಿನಲ್ಲಿ ತೆರಳಿದ್ದ ದೃಶ್ಯಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.