ಮುಂಬೈ ವಿಮಾನಗಳಿಗೆ ‘ಮಂಗಳೂರು’ ಅಡ್ಡಿ!

By Web DeskFirst Published Jul 4, 2019, 10:09 AM IST
Highlights

ಮುಂಬೈ ವಿಮಾನಗಳಿಗೆ ‘ಮಂಗಳೂರು’ ಅಡ್ಡಿ| ವಿಮಾನ ಮೇಲೆತ್ತಲು ದೇಶದಲ್ಲಿ ಇರೋದೇ ಒಂದು ಉಪಕರಣ| ಅದೂ ಮಂಗಳೂರಿನಲ್ಲಿ ಕಾರ್ಯ ನಿರತ ಮುಂಬೈಗೆ ಸಮಸ್ಯೆ| 2 ದಿನದಲ್ಲಿ 275ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದು

ಮುಂಬೈ/ನವದೆಹಲಿ[ಜು.04]: ಸ್ಪೈಸ್‌ ಜೆಟ್‌ ವಿಮಾನವೊಂದು ಭಾರಿ ಮಳೆ ಹಿನ್ನೆಲೆಯಲ್ಲಿ ಮುಂಬೈ ವಿಮಾನ ನಿಲ್ದಾಣದ ಮುಖ್ಯ ರನ್‌ವೇಯಿಂದ ಹೊರಗೆ ಜಾರಿರುವವ ಹಿನ್ನೆಲೆಯಲ್ಲಿ ಮಂಗಳವಾರ 201 ವಿಮಾನಗಳ ಸಂಚಾರ ರದ್ದಾಗಿತ್ತು. ಬುಧವಾರವೂ 75ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ವಿಮಾನವನ್ನು ರನ್‌ವೇಯಿಂದ ಬೇರೆಡೆಗೆ ಸಾಗಿಸಲು ಬಳಸುವ ದೇಶದ ಏಕೈಕ ಉಪಕರಣ ಮಂಗಳೂರಿನಲ್ಲಿ ಕಾರ್ಯಾಚರಣೆಯಲ್ಲಿ ನಿರತವಾಗಿರುವುದು ಇದಕ್ಕೆ ಕಾರಣ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ರನ್‌ ವೇಯಿಂದ ಜಾರಿದ ವಿಮಾನಗಳನ್ನು ಎತ್ತಿ ರನ್‌ವೇಗೆ ಕೂರಿಸಿ ಬೇರೆಡೆಗೆ ಕಳುಹಿಸಲು ‘ಡಿಸೇಬಲ್ಡ್‌ ಏರ್‌ಕ್ರ್ಯಾಫ್ಟ್‌ ರಿಟ್ರೀವಲ್‌ ಕಿಟ್‌’ (ಡಾರ್ಕ್) ಎಂಬ ಸಾಧನ ಬೇಕು. ಭಾರತ ಅಷ್ಟೇ ಏಕೆ ದಕ್ಷಿಣ ಏಷ್ಯಾದಲ್ಲೇ ಇಂತಹ ಸಾಧನ ಇರುವುದು ಒಂದೇ. ಅದೂ ಏರ್‌ ಇಂಡಿಯಾ ಬಳಿ ಮಾತ್ರ ಇದೆ. ದುಬಾರಿ ಎಂಬ ಕಾರಣಕ್ಕೆ ಬೇರೆ ಕಂಪನಿಗಳು ಇದನ್ನು ಹೊಂದಿಲ್ಲ.

ಭಾನುವಾರ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ರನ್‌ವೇಯಿಂದ ಜಾರಿತ್ತು. ಅದನ್ನು ಎತ್ತುವ ಕಾರ್ಯಾಚರಣೆಗೆ ‘ಡಾರ್ಕ್’ ಸಾಧನ ಬಳಸಲಾಗಿದೆ. ಹೀಗಾಗಿ ಮುಂಬೈನಲ್ಲಿ ವಿಮಾನ ತೆರವು ಕಾರ್ಯಾಚರಣೆ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿಗೆಲ್ಲಾ ಏರ್‌ ಇಂಡಿಯಾ ಕಂಪನಿ ಡಾರ್ಕ್ ಉಪಕರಣ ಕಳುಹಿಸಿಕೊಡುತ್ತದೆ. ಒಮ್ಮೆ ನೇಪಾಳದಿಂದಲೂ ಈ ಸಾಧನಕ್ಕೆ ಬೇಡಿಕೆ ಬಂದಿತ್ತು. ಬಂಡವಾಳ ಹಾಗೂ ನಿರ್ವಹಣಾ ವೆಚ್ಚ ಹೆಚ್ಚು ಎಂಬ ಕಾರಣಕ್ಕೆ ಇತರೆ ಕಂಪನಿಗಳು ಅದನ್ನು ಖರೀದಿಸುವುದಿಲ್ಲ ಎಂದು ಅಧಿಕಾರಿಯೊಬ್ಬರು ಮಾಡಿದ್ದಾರೆ.

ವಿಮಾನ ರನ್‌ವೇಯಿಂದ ಜಾರುವ ಪ್ರಕರಣಗಳು ಅಪರೂಪ. ಒಂದೇ ಸಮಯದಲ್ಲಿ ಎರಡು ಕಡೆ ಈ ರೀತಿ ಆಗುವುದಿಲ್ಲ ಎಂದು ಹೇಳುತ್ತಾರೆ. ಆದರೆ ಈ ಬಾರಿ ಆ ರೀತಿ ಆಗಿರುವುದರಿಂದ ಸಮಸ್ಯೆಯಾಗಿದೆ.

ಕಾರ್ಯಾಚರಣೆ ಹೇಗೆ?

ನೆಲಕ್ಕೆ ಜಾರಿರುವ ವಿಮಾನದ ಕೆಳ ಭಾಗದಲ್ಲಿ ‘ಡಾರ್ಕ್’ ಸಾಧನ ಅಳವಡಿಸಲಾಗುತ್ತದೆ. ಬಲೂನ್‌ ರೀತಿ ಇದನ್ನು ಊದಿದಾಗ ವಿಮಾನ ಮೇಲಕ್ಕೆ ಬರುತ್ತದೆ. ಆಗ ಸಾಗಿಸಬಹುದು.

click me!