6 ತಿಂಗಳಲ್ಲಿ 2 ಲಕ್ಷ ಕುಟುಂಬಕ್ಕೆ ಭೂಮಿ: ಕಾಗೋಡು

By Suvarna Web DeskFirst Published Jun 19, 2017, 11:29 AM IST
Highlights

ರಾಜ್ಯದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಫಾರಂ 50, 53 ಹಾಗೂ 94ಸಿ ಪ್ರಕರಣಗಳ ಅಡಿ ವಿಲೇವಾರಿ ಆಗದೇ ಬಾಕಿ ಉಳಿದಿರುವ ಎರಡು ಲಕ್ಷದಷ್ಟು ಅರ್ಜಿಗಳನ್ನು ಆರು ತಿಂಗಳಲ್ಲಿ ವಿಲೇವಾರಿ ಮಾಡಿ ಅರ್ಹರಿಗೆ ಭೂಮಿ ಹಾಗೂ ವಸತಿ ಜಾಗ ಮಂಜೂರು ಮಾಡಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ ನೀಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಫಾರಂ 50, 53 ಹಾಗೂ 94ಸಿ ಪ್ರಕರಣಗಳ ಅಡಿ ವಿಲೇವಾರಿ ಆಗದೇ ಬಾಕಿ ಉಳಿದಿರುವ ಎರಡು ಲಕ್ಷದಷ್ಟು ಅರ್ಜಿಗಳನ್ನು ಆರು ತಿಂಗಳಲ್ಲಿ ವಿಲೇವಾರಿ ಮಾಡಿ ಅರ್ಹರಿಗೆ ಭೂಮಿ ಹಾಗೂ ವಸತಿ ಜಾಗ ಮಂಜೂರು ಮಾಡಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ ನೀಡಿದ್ದಾರೆ.

ಫಾರಂ 50, 53 ಅಡಿ ಅರ್ಜಿ ಸಲ್ಲಿಸಿದವರಿಗೆ ಭೂಮಿ ಮಂಜೂರು ಮಾಡಿ ಹಕ್ಕುಪತ್ರ ಒದಗಿಸಬೇಕಿದೆ. 90ರ ದಶಕದಿಂದಲೂ ಜನರು ಸಲ್ಲಿಸಿರುವ ಅರ್ಜಿಗಳಲ್ಲಿ ಕಳೆದ ಆರು ತಿಂಗಳಲ್ಲಿ 2.5 ಲಕ್ಷದಷ್ಟು ಅರ್ಜಿ ವಿಲೇವಾರಿ ಮಾಡಿದ್ದು, ಇನ್ನೂ ಎರಡು ಲಕ್ಷದಷ್ಟು ಅರ್ಜಿಗಳು ಬಾಕಿ ಉಳಿದಿವೆ. ಇವುಗಳ ವಿಲೇವಾರಿಗೆ ಎದುರಾಗಿರುವ ಸಮಸ್ಯೆಗಳನ್ನು ನಿವಾರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.

ಭಾನುವಾರ ಕನ್ನಡಪ್ರಭ ಮತ್ತು ಸುವರ್ಣನ್ಯೂಸ್‌ ಏರ್ಪಡಿಸಿದ್ದ ‘ಹಲೋ ಮಿನಿಸ್ಟರ್‌' ಕಾರ್ಯಕ್ರಮ ದಲ್ಲಿ ಸಾರ್ವಜನಿಕರ ಕರೆಗಳಿಗೆ ಉತ್ತರಿಸಿ ಮಾತನಾಡಿದ ಅವರು, ಜನರಿಗೆ ಸಾಗುವಳಿ ಜಮೀನು, ವಾಸಸ್ಥಾನದ ಹಕ್ಕು ಮಂಜೂರಾಗಬೇಕು ಎಂದು ದಶಕಗಳ ಕಾಲ ನಮ್ಮ ಹೋರಾಟದ ಫಲವಾಗಿಯೇ ಫಾರಂ 50, 53 ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದಿದೆ. ಇದೀಗ ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ಎಂದು ಆದೇಶಿಸಿದ್ದೇನೆ ಎಂದರು.

ಗೋಮಾಳ ಜಾಗ ಮಂಜೂರಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಮೂರು ಗೋವುಗಳು ಇದ್ದರೂ 30 ಎಕರೆ ಗೋಮಾಳ ಇರಲೇಬೇಕು ಎಂಬ ನಿಯಮ ಇದೆ. ಹೀಗಾಗಿ ಸಾಗುವಳಿ ಮಾಡಿದವರಿಗೆ ಮಂಜೂರು ಮಾಡಲಾಗದೆ 50-60 ಸಾವಿರ ಅರ್ಜಿ ಬಾಕಿ ಉಳಿದುಕೊಂಡಿದೆ. ಉಡುಪಿ-ಮಂಗಳೂರು ವ್ಯಾಪ್ತಿಯಲ್ಲಿ ಕಂದಾಯ ಜಾಗವನ್ನು 79/2ರಡಿ ಡೀಮ್ಡ್ ಅರಣ್ಯ ಎಂದು ಮಾಡಿದ್ದಾರೆ. ಹೀಗಾಗಿ ಸಚಿವ ಸಂಪುಟದಲ್ಲಿ ವಿಷಯ ಇಟ್ಟು ಡೀಮ್ಡ್ ಅರಣ್ಯ ಮಾನ್ಯತೆ ರದ್ದು ಪಡಿಸಲು ಚರ್ಚಿಸಲಾಗಿದೆ. ಇದರಿಂದ 30-40 ಸಾವಿರ ಅರ್ಜಿ ಬಗೆಹರಿಸಿ ಸಾಗುವಳಿ ಹಕ್ಕುಪತ್ರ ನೀಡಬಹುದು. ಇವೆರಡೂ ಆದರೆ ಶೇ.80ರಷ್ಟು ಅರ್ಜಿಗಳು ವಿಲೇವಾರಿಯಾಗುತ್ತವೆ. ಇದನ್ನು 6 ತಿಂಗಳಲ್ಲಿ ಮಾಡಲಾಗುವುದು ಎಂದರು.

ಅರ್ಜಿಗೆ 3 ತಿಂಗಳು ಕಾಲಾವಕಾಶ: ಕಂದಾಯ ಜಮೀನಿನಲ್ಲಿ ಮಂಜೂರು ಆಗದೆ ಮನೆ ಕಟ್ಟಿಕೊಂಡಿದ್ದರೆ ಅಂತಹವರು ಅರ್ಜಿ ಸಲ್ಲಿಸಲು ಮತ್ತೆ 3 ತಿಂಗಳು ಕಾಲಾವಕಾಶ ನೀಡಲಾಗಿದೆ. ಹಿಂದಿನ ಸರ್ಕಾರ ಮಂಜೂರಾಗದೆ ಮನೆ ನಿರ್ಮಿಸಿದ್ದರೆ 3 ಸಾವಿರ ದಂಡ, 1 ವರ್ಷ ಜೈಲು ಎಂದು ಹೆದರಿಸಿತ್ತು. ಹೀಗಾಗಿ ಯಾರೂ ಅರ್ಜಿ ಸಲ್ಲಿಸಲು ಮುಂದೆ ಬರದಂತಾಗಿದೆ. ಅಂತಹವರ ಬೆನ್ನು ಹತ್ತಿ ಅರ್ಜಿ ಪಡೆಯಲಾಗುತ್ತಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಕರೆಗೆ ಸ್ಪಂದಿಸಿದ ಅವರು, ಸರ್ಕಾರದ ಭೂಮಿ ಸಾಗುವಳಿಗೆ ಯೋಗ್ಯವಾಗಿದ್ದರೆ ಭೂಮಿಯ ಲಭ್ಯತೆ ಮೇರೆಗೆ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮೇವು ಹಗರಣ ಆಗಿದ್ದರೆ ಕ್ರಮ:

ಕಾಗೋಡು ತಿಮ್ಮಪ್ಪ ಕಂದಾಯ ಸಚಿವ ತುಮಕೂರಿನ ಮಲ್ಲಿಕಾರ್ಜುನ ಅವರು, ಜಿಲ್ಲೆಯಲ್ಲಿ ಮೇವು ಹಂಚಿಕೆ ಹೆಸರಿನಲ್ಲಿ ಅವ್ಯವಹಾರವಾಗಿದೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಸಚಿವರು, ಸುವರ್ಣನ್ಯೂಸ್‌ ಕೂಡ ಮೇವು ಹಗರಣದ ಬಗ್ಗೆ ವರದಿ ಮಾಡಿತ್ತು. ಜತೆಗೆ ಉಪ ಲೋಕಾಯುಕ್ತರು 22 ಕೋಟಿ ಅಕ್ರಮ ಆಗಿದೆ ಎಂದು ವರದಿ ನೀಡಿದ್ದಾರೆ ಎಂಬ ಮಾತಿದೆ. ಆದರೆ, ಅವರು ಸರ್ಕಾರಕ್ಕೆ ವರದಿ ನೀಡಿಲ್ಲ. ಜಿಲ್ಲಾಧಿಕಾರಿಗಳು ಪಾವತಿ ಮಾಡಿರುವುದೇ 15 ಕೋಟಿ. ಹೀಗಾಗಿ ಅಂತಹ ಅಕ್ರಮ ಆಗಿರಲು ಸಾಧ್ಯವಿಲ್ಲ. ಒಂದು ವೇಳೆ ಆಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

click me!