ಪೆಲೆಟ್ ಗನ್'ನಿಂದ ಮತ್ತೊಂದು ಸಾವು; ಕಾಶ್ಮೀರ ಕಣಿವೆಯಲ್ಲಿ ಮತ್ತೆ ಭೋರ್ಗರೆದ ಪ್ರತಿಭಟನೆ

By Internet DeskFirst Published Sep 17, 2016, 2:34 PM IST
Highlights

ಶ್ರೀನಗರ(ಸೆ. 17): ಜಮ್ಮು-ಕಾಶ್ಮೀರದಲ್ಲಿ ಪ್ರತಿಭಟನೆಯ ಕಾವು ಮತ್ತೆ ತೀವ್ರಗೊಂಡಿದೆ. ಪೊಲೀಸರ ಪೆಲೆಟ್ ಗನ್ ಫೈರಿಂಗ್'ನಿಂದ ಗಾಯಗೊಂಡಿದ್ದ 15 ವರ್ಷದ ಬಾಲಕನೊಬ್ಬ ನಿನ್ನೆ ಶುಕ್ರವಾರ ಸಂಜೆ ಮೃತಪಟ್ಟಿದ್ದಾನೆ. ಇದು ಪ್ರತಿಭಟನಾಕಾರರನ್ನು ಇನ್ನಷ್ಟು ಕೆರಳಿಸಿದೆ. ಶನಿವಾರ ಹರವಾನ್'ನಲ್ಲಿ ಬಾಲಕನ ಅಂತ್ಯ ಸಂಸ್ಕಾರದ ಪ್ರಾರ್ಥನೆಗೆ ಪ್ರತಿಭಟನಾಕಾರರು ಭಾರೀ ಸಂಖ್ಯೆಯಲ್ಲಿ ಸೇರಿದ್ದರು.

ನಿನ್ನೆ ಸಂಜೆ ಪ್ರತಿಭಟನಾಕಾರರ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಪೆಲೆಟ್ ಗನ್ ಫೈರ್ ಮಾಡಿದ್ದರು. ಈ ಗುಂಪಿನಲ್ಲಿದ್ದ 15 ವರ್ಷದ ಮೋಮಿನ್ ಅಲ್ತಾಫ್ ಎಂಬ ಬಾಲಕ ನಿನ್ನೆ ತಡರಾತ್ರಿ ಶವವಾಗಿ ಪತ್ತೆಯಾಗಿದ್ದಾನೆ. ಆತನ ದೇಹದ ಮೇಲೆ ಗಾಯದ ಗುರುತುಗಳಿದ್ದು, ಅದು ಪೆಲೆಟ್ ಗನ್'ಗಳಿಂದ ಆಗಿರಬಹುದೆಂದು ಸ್ಥಳೀಯರು ಶಂಕಿಸಿದ್ದಾರೆ. ಆದರೆ, ಭದ್ರತಾ ಪಡೆಗಳು ತಾವು ಬಹಳ ದೂರದಿಂದ ಪೆಲೆಟ್'ಗಳನ್ನು ಫೈರ್ ಮಾಡಿದ್ದೆವು. ಅದರಿಂದ ಸಾವು ಉಂಟಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಜುಲೈ 8ರಂದು ಹಿಜ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿಯನ್ನು ಭದ್ರತಾ ಪಡೆಗಳು ಹತ್ಯೆಗೈದ ಬಳಿಕ ಕಣಿವೆ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆ ಮತ್ತು ಹಿಂಸಾಚಾರಗಳು ನಡೆಯುತ್ತಿವೆ. ಈ ಪ್ರತಿಭಟನೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ ಇದೀಗ 85ಕ್ಕೇರಿದೆ. ಹಲವು ದಿನಗಳಿಂದ ಕಾಶ್ಮೀರದಲ್ಲಿ ಕರ್ಫ್ಯೂ ಹೇರಲಾಗಿದೆ. ನಿಷೇಧಾಜ್ಞೆ ಇದ್ದರೂ ಹಲವು ಕಡೆ ಪ್ರತಿಭಟನಾಕಾರರು ಬೀದಿಗಿಳಿದು ಭದ್ರತಾಪಡೆ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

click me!