ಕೊಡಗಿನಲ್ಲಿ ನೆರೆಯಾದರೆ 13 ಜಿಲ್ಲೆಗಳಲ್ಲಿ ಬರ

By Web DeskFirst Published Aug 18, 2018, 10:45 PM IST
Highlights

ಈಗಾಗಲೇ ಹಲವು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ. ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದ್ದು, ಕೃಷಿ ಇಲಾಖೆ ಈಗಾಗಲೇ ವರದಿ ನೀಡಿದೆ.

ಯಾದಗಿರಿ[ಆ.18]: ರಾಜ್ಯದ 13 ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಿದ್ದು, ಬರಗಾಲ ಪರಿಸ್ಥಿತಿ ಇದೆ. ಈ ಭಾಗಗಳಲ್ಲಿ ಬೆಳೆ ಹಾನಿ ಪ್ರದೇಶವನ್ನು ಪರಿಶೀಲಿಸಿದ ವರದಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ತಂದ ಬಳಿಕ ಬರಗಾಲ ಘೋಷಣೆಗೆ ತೀರ್ಮಾನಿಸಲಾಗುವುದು ಎಂದು ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಹೇಳಿದರು.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಂಡಗಳ್ಳಿಯಲ್ಲಿ ಶನಿವಾರ ಹೊಲವೊಂದಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಲವು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ. ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದ್ದು, ಕೃಷಿ ಇಲಾಖೆ ಈಗಾಗಲೇ ವರದಿ ನೀಡಿದೆ. ವಾಸ್ತವಾಂಶವನ್ನು ಖುದ್ದಾಗಿ ಪರಿಶೀಲಿಸಿ ಈ ಭಾಗದ ರೈತರ ಹಿತ ಗಮನದಲ್ಲಿಟ್ಟು ಕೊಂಡು ಬರ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.

15 ದಿನಗಳಲ್ಲಿ ಸಾಲಮನ್ನಾ
15 ದಿನಗಳಲ್ಲಿ ಸಾಲಮನ್ನಾ ಪ್ರಕ್ರಿಯೆ ಸರಿಹೋಗಲಿದ್ದು ರೈತರಿಗೆ ಸಂಪೂರ್ಣವಾಗಿ ಅದರ ಅನುಕೂಲವಾಗಲಿದೆ. ಸರ್ಕಾರ ಈ ದಿಸೆಯಲ್ಲಿ ದಿಟ್ಟನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.

ರೈತರಿಗೆ ಬಿತ್ತನೆ ಬೀಜ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗುವ ಯಾಂತ್ರಿಕ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ಕೃಷಿ ಇಲಾಖೆ ಅನುಕೂಲ ಮಾಡುತ್ತಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕೆಂದರು.

click me!