ಕರ್ನಾಟಕ ಚುನಾವಣೆ 2018 ಬಗ್ಗೆ ಶಾಗೆ 12 ನೇರಾನೇರ ಪ್ರಶ್ನೆಗಳು

Published : Aug 21, 2017, 11:11 AM ISTUpdated : Apr 11, 2018, 12:51 PM IST
ಕರ್ನಾಟಕ ಚುನಾವಣೆ 2018 ಬಗ್ಗೆ ಶಾಗೆ 12 ನೇರಾನೇರ ಪ್ರಶ್ನೆಗಳು

ಸಾರಾಂಶ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬಿಜೆಪಿಯ ಎರಡನೇ ಅತ್ಯಂತ ಪ್ರಭಾವೀ ನಾಯಕ ಅಮಿತ್ ಶಾ ಕಳೆದ ವಾರ ಬೆಂಗಳೂರಿಗೆ ಭೇಟಿ ನೀಡಿ ಹವಾ ಎಬ್ಬಿಸಿದ್ದರು. ಬರಲಿರುವ 2018ರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅವರು ಸ್ವಂತ ಪಕ್ಷ ಬಿಜೆಪಿಗಷ್ಟೇ ಅಲ್ಲ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೂ ಏನು ಸಂದೇಶ ನೀಡಬೇಕೋ ಅದನ್ನು ಕೊಟ್ಟು ಹೋಗಿದ್ದಾರೆ. ಮೂರು ದಿನಗಳ ಗಡಿಬಿಡಿಯ ಕಾರ್ಯಕ್ರಮಗಳ ನಡುವೆಯೇ ನಡೆದ ಸಂಪಾದಕರೊಂದಿಗಿನ ಸಂವಾದದ ನಂತರ, ಔತಣಕೂಟದ ಸೈಡ್ ವಿಂಗಲ್ಲಿ, ಕನ್ನಡಪ್ರಭದ ಜೊತೆ ಅನೌಪಚಾರಿಕ ಮಾತುಕತೆಗೆ ಸಿಕ್ಕಿದ್ದರು ಅಮಿತ್ ಶಾ. ಈ ವಿಶೇಷ ಅನೌಪಚಾರಿಕ ಮಾತುಕತೆಯ 12 ನೇರಾ-ನೇರ ಹಾಗೂ ಕುತೂಹಲಕರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಕರ್ನಾಟಕದ ಚುನಾವಣೆಯ ಬಗ್ಗೆ ಚಾಣಕ್ಯನ ಲೆಕ್ಕಾಚಾರ ಏನು? ಇಲ್ಲಿದೆ ನೋಡಿ...

-ರವಿ ಹೆಗಡೆ, ಬೆಂಗಳೂರು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬಿಜೆಪಿಯ ಎರಡನೇ ಅತ್ಯಂತ ಪ್ರಭಾವೀ ನಾಯಕ ಅಮಿತ್ ಶಾ ಕಳೆದ ವಾರ ಬೆಂಗಳೂರಿಗೆ ಭೇಟಿ ನೀಡಿ ಹವಾ ಎಬ್ಬಿಸಿದ್ದರು. ಬರಲಿರುವ 2018ರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅವರು ಸ್ವಂತ ಪಕ್ಷ ಬಿಜೆಪಿಗಷ್ಟೇ ಅಲ್ಲ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೂ ಏನು ಸಂದೇಶ ನೀಡಬೇಕೋ ಅದನ್ನು ಕೊಟ್ಟು ಹೋಗಿದ್ದಾರೆ. ಮೂರು ದಿನಗಳ ಗಡಿಬಿಡಿಯ ಕಾರ್ಯಕ್ರಮಗಳ ನಡುವೆಯೇ ನಡೆದ ಸಂಪಾದಕರೊಂದಿಗಿನ ಸಂವಾದದ ನಂತರ, ಔತಣಕೂಟದ ಸೈಡ್ ವಿಂಗಲ್ಲಿ, ಕನ್ನಡಪ್ರಭದ ಜೊತೆ ಅನೌಪಚಾರಿಕ ಮಾತುಕತೆಗೆ ಸಿಕ್ಕಿದ್ದರು ಅಮಿತ್ ಶಾ. ಈ ವಿಶೇಷ ಅನೌಪಚಾರಿಕ ಮಾತುಕತೆಯ 12 ನೇರಾ-ನೇರ ಹಾಗೂ ಕುತೂಹಲಕರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಕರ್ನಾಟಕದ ಚುನಾವಣೆಯ ಬಗ್ಗೆ ಚಾಣಕ್ಯನ ಲೆಕ್ಕಾಚಾರ ಏನು? ಇಲ್ಲಿದೆ ನೋಡಿ...

1. ಅಮಿತ್ ಶಾ ಅಂದರೆ ಬಿಜೆಪಿ ಪಾಲಿಗೆ ಚುನಾವಣೆಯ ವಿನ್ನಿಂಗ್ ಮಷಿನ್. ಚುನಾವಣೆ ತಂತ್ರಗಾರಿಕೆ ಹೆಣೆಯುವುದರಲ್ಲಿ ನೀವು ನಿಸ್ಸಿಮ ಅಂತ ಎಲ್ಲರೂ ಒಪ್ಪಿಕೊಂಡಿದ್ದಾರೆ. ನೀವು ಯಾವುದೇ ಚುನಾವಣೆಗೆ 2 ವರ್ಷಗಳಿರುವಾಗಲೇ ಚುನಾ ವಣೆಯ ಪ್ರಕ್ರಿಯೆಯನ್ನು ಆರಂಭಿಸುತ್ತೀರಿ ಎನ್ನುತ್ತಾರೆ ನಿಮ್ಮನ್ನು ಬಲ್ಲವರು. ಕರ್ನಾಟಕದಲ್ಲೂ ನೀವು 2018ರ ಚುನಾವಣಾ ಪ್ರಕ್ರಿಯೆಯನ್ನು 2 ವರ್ಷದ ಹಿಂದೆಯೇ ಆರಂಭಿಸಿದ್ದೀರಾ?

-ಕೆಲ ರಾಜ್ಯಗಳಲ್ಲಿ ತಳಮಟ್ಟದಲ್ಲಿ ಬಿಜೆಪಿಯ ಅಸ್ತಿತ್ವ ಇರಲಿಲ್ಲ. ಕೆಲವೆಡೆ ತಳಮಟ್ಟದಲ್ಲಿ ಇದ್ದ ಬಿಜೆಪಿ ಬಲ ಸವೆದು ಹೋಗಿದೆ. ಅಂಥ ರಾಜ್ಯಗಳಲ್ಲಿ ಚುನಾವಣಾ ಚಟುವಟಿಕೆಗಳನ್ನು ಬೇಗನೆ ಆರಂಭಿಸಿದ್ದು ಹಾಗೂ ಆರಂಭಿಸುವುದು ನಿಜ. ಉದಾಹರಣೆಗೆ ಮಣಿಪುರದಲ್ಲಿ, ಉತ್ತರ ಪ್ರದೇಶದಲ್ಲಿ, ಕೇರಳದಲ್ಲಿ. ಆದರೆ, ಕರ್ನಾಟಕದಲ್ಲಿ ಹಾಗಲ್ಲ. ಇಲ್ಲಿ ಬಿಜೆಪಿ ತಳಮಟ್ಟದಿಂದ ಬಲವಾಗಿದೆ. ಬಿಜೆಪಿಯ ಸಾಂಸ್ಥಿಕ ವ್ಯವಸ್ಥೆ ಇಲ್ಲಿ ಗಟ್ಟಿಯಾಗಿದೆ. ಹಾಗಾಗಿ, ಇಲ್ಲಿ ತುಂಬಾ ಬೇಗ ಚುನಾವಣಾ ಚಟುವಟಿಕೆಗೆ ಗಮನ ಹರಿಸುವುದು ಬೇಕಾಗಲಿಲ್ಲ. ಹಾಗಂತ, ನಮ್ಮದು ರಾಜಕೀಯ ಪಕ್ಷ. ನಾವು ಯಾವುದೇ ಕ್ಷಣದಲ್ಲೂ ಚುನಾವಣೆಗೆ ಸನ್ನದ್ಧವಾಗಿರುತ್ತೇವೆ.

2 ನಿಜ. ಕರ್ನಾಟಕದಲ್ಲಿ ಬಿಜೆಪಿ ಬಲವಾದ ಪಕ್ಷ. ಆದರೆ, ಕಳೆದ ಆರೆಂಟು ತಿಂಗಳಿನಿಂದ ಪಕ್ಷದಲ್ಲಿ ಆಗಿರುವ ಆಂತರಿಕ ಗೊಂದಲಗಳಿಂದ ಈಗ ಪಕ್ಷ ತುಸು ಸಡಿಲವಾಗಿದೆ ಎನ್ನಿಸುತ್ತಿದೆ?

-ಈಗ ಆ ಗೊಂದಲಗಳು ಇಲ್ಲ. ಆಂತರಿಕ ವಿಷಯಗಳು ಚುನಾವಣೆಯ ಮೇಲೆ ಪರಿಣಾಮ ಬೀರದಂತೆ ಮಾಡಲೆಂದೇ ನಾವಿದ್ದೇವೆ. ನೀವೇ ನೋಡುತ್ತಿರಿ... ನಾವು ಹೇಗೆ ಚುನಾವಣಾ ವ್ಯೆಹ ರಚಿಸುತ್ತೇವೆ ಎಂದು. ನಾವು ಅತ್ಯಧಿಕ ಅಂತರದಿಂದ ಗೆಲುವು ಸಾಧಿಸುತ್ತೇವೆ. ಬಿಜೆಪಿಗೆ 132 ಸ್ಥಾನಗಳು ಖಚಿತ. ಅದಕ್ಕಿಂತ ಎಷ್ಟು ಹೆಚ್ಚು ಸೀಟುಗಳು ಬರುತ್ತವೆ ಎಂಬುದನ್ನಷ್ಟೇ ನಾವೀಗ ಲೆಕ್ಕ ಹಾಕಬೇಕಿದೆ.

3. ಕಳೆದ ಡಿಸೆಂಬರ್‌ವರೆಗೂ ನೀವು ಹೇಳುವಂಥ ಭಾವನೆ ಎಲ್ಲರಿಗೂ ಇತ್ತು. ಈಗ ಸಿದ್ದರಾಮಯ್ಯ ನವರ ಅಹಿಂದ ಹಾಗೂ ಇತರ ಜಾತಿ ಸಮೀಕರಣ ತಂತ್ರಗಾರಿಕೆಯಿಂದಾಗಿ ಕಾಂಗ್ರೆಸ್ ರಾಜ್ಯದಲ್ಲಿ ತುಸು ಬಲವಾದಂತೆ ಅನ್ನಿಸುತ್ತಿದೆಯಲ್ಲ?

-ಜಾತಿ ಲೆಕ್ಕಾಚಾರದಲ್ಲಿ ನಾವು ಚುನಾವಣೆ ನಡೆಸುವುದಿಲ್ಲ. ಉತ್ತರ ಪ್ರದೇಶ ಸೇರಿದಂತೆ ನಾವು ಗೆದ್ದಿರುವ ಅನೇಕ ರಾಜ್ಯಗಳಲ್ಲಿ ನಮಗೆ ಜಾತಿಯ ಬಲವಿರಲಿಲ್ಲ. ಜಾತಿ ಸಮೀಕರಣ ಎಂಬುದು ಚುನಾವಣೆಯ ಒಂದು ಸಣ್ಣ ಅಂಶ ಮಾತ್ರ. ನೀವೇ ನೋಡುತ್ತಿರಿ, ಕರ್ನಾಟಕದಲ್ಲಿ ಬಿಜೆಪಿ ಎಷ್ಟು ಅಂತರದ ಗೆಲುವು ಸಾಧಿಸುತ್ತದೆ ಎಂದು.

4 ಹಾಗಾದರೆ, ಕರ್ನಾಟಕದಲ್ಲಿ ನಿಮ್ಮ ಚುನಾವಣೆ ಯಾವ ವಿಷಯಗಳ ಮೇಲೆ ನಡೆಯುತ್ತದೆ?

ಕಾಂಗ್ರೆಸ್‌ನ ಕೆಟ್ಟ ಆಡಳಿತ ಹಾಗೂ ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ ಸೇರಿದಂತೆ ಅನೇಕ ವಿಷಯಗಳು ಈ ಬಾರಿ ಚುನಾವಣೆಯ ವಿಷಯಗಳಾಗಲಿವೆ. ಸ್ಥೂಲವಾಗಿ... ಭ್ರಷ್ಟಾಚಾರ, ದುರಾಡಳಿತ, ಅಭಿವೃದ್ಧಿಯ ಕೊರತೆ, ರೈತ ಸಮಸ್ಯೆಗಳು ಈ ಬಾರಿ ಕರ್ನಾಟಕದ ವಿಷಯಗಳಾಗಲಿವೆ.

5. ಲಿಂಗಾಯತ - ವೀರಶೈವ ಮತಗಳ ವಿಭಜನೆ ಹಾಗೂ ಕನ್ನಡ ಅಸ್ಮಿತೆಯ ಚುನಾವಣಾ ದಾಳವನ್ನು ಸಿದ್ದರಾಮಯ್ಯ ಚೆನ್ನಾಗಿ ಪ್ರಯೋಗಿಸಿದ್ದಾರೆ ಎಂಬ ಭಾವನೆಯಿದೆಯೇ?

-ಚುನಾವಣೆಯ ಸೆಣಸಿನಲ್ಲಿ ಅಂತಹ ಭಾವನಾತ್ಮಕ ವಿಷಯಗಳ ಪಾಲು ಸೀಮಿತವಾಗಿರುತ್ತದೆ. ಇಷ್ಟಕ್ಕೂ ಸಿದ್ದರಾಮಯ್ಯನವರ ಈ ಚುನಾವಣಾ ಗಿಮಿಕ್ಕುಗಳನ್ನು ಅರಿಯದಷ್ಟು ದಡ್ಡರಲ್ಲ ಲಿಂಗಾಯತರು ಹಾಗೂ ಕನ್ನಡಿಗರು. ಕಾಂಗ್ರೆಸ್‌ನ ಈ ಜಾತಿ ಮತ್ತು ಕನ್ನಡ ಪ್ರೀತಿ ಮತ ಎಣಿಕೆ ದಿನದವರೆಗೆ ಮಾತ್ರ.

6. ಭಾರತದಲ್ಲಿ ಚುನಾವಣೆಗಳು ಬಹುತೇಕ ನಡೆಯುವುದು ಒಂದಲ್ಲ ಒಂದು ಭಾವನಾತ್ಮಕ ವಿಷಯಗಳ ಮೇಲೆ. ವೀರಶೈವ ಹಾಗೂ ಲಿಂಗಾಯತ ಧರ್ಮ ಮತ್ತು ಕನ್ನಡ ಅಸ್ಮಿತೆಯಂಥ ಭಾವನಾತ್ಮಕ ವಿಷಯಗಳು ಕರ್ನಾಟಕ ಚುನಾವಣೆಯ ಮೇಲೆ ಪ್ರಭಾವ ಬೀರುವುದಿಲ್ಲ ಅಂತೀರಾ?

-ಭಾವನಾತ್ಮಕ ವಿಷಯಗಳನ್ನೇ ಚುನಾವಣಾ ವಿಷಯ ಮಾಡಬೇಕು ಅಂದರೆ ನಮ್ಮ ಬತ್ತಳಿಕೆಯಲ್ಲಿ ಇನ್ನೂ ಬಲವಾದ ಅಸ್ತ್ರಗಳಿವೆ. ಆದರೆ, ನಾವು ಆಡಳಿತ, ಭ್ರಷ್ಟಾಚಾರ, ಅಭಿವೃದ್ಧಿ, ರೈತ ಸಮಸ್ಯೆಗಳಂಥ ಸುಧರಣಾ ವಿಷಯಗಳ ಮೇಲೆ ಚುನಾವಣೆ ನಡೆಸಲು ಬಯಸುತ್ತೇವೆ

7 ಲಿಂಗಾಯತ ಧರ್ಮ, ಕನ್ನಡ ಬಾವುಟ, ಹಿಂದಿ ಹೇರಿಕೆಯಂಥ ವಿಷಯಗಳಲ್ಲಿ ಬಿಜೆಪಿ ಗೊಂದಲದಲ್ಲಿದೆ. ಸಿದ್ದರಾಮಯ್ಯನವರ ಈ ತಂತ್ರಗಾರಿಕೆಗೆ ನಿಮ್ಮ ಪಕ್ಷದಿಂದ ಏನೂ ಪ್ರತಿಕ್ರಿಯೆ ಇಲ್ಲ.

-ಇಂಥ ವಿಷಯಗಳಿಗೆ ನಾವು ಪ್ರತಿಕ್ರಿಯೆ ಕೊಡಬೇಕಾದ ಅಗತ್ಯವಿಲ್ಲ. ಇಂಥ ವಿಷಯಗಳಿಗೆ ನಾವು ಬೇರೆ ರಾಜ್ಯಗಳಲ್ಲೂ ಪ್ರತಿಕ್ರಿಯೆ ಕೊಟ್ಟಿಲ್ಲ. ನಾವು ಯಾವ ವಿಷಯಗಳಿಗೆ ಪ್ರತಿಕ್ರಿಯಿಸಬೇಕೋ ಅದಕ್ಕೆ ಪ್ರತಿಕ್ರಿಯೆ ನೀಡುತ್ತೇವೆ. ಬರೀ ಪ್ರತಿಕ್ರಿಯೆ ನೀಡುವ ಮೂಲಕ ಚುನಾವಣೆ ನಡೆಸಬಾರದು

8. ಬಿಜೆಪಿಯಂಥ ರಾಷ್ಟ್ರೀಯ ಪಕ್ಷಕ್ಕೆ ರಾಷ್ಟ್ರೀಯ ಚೌಕಟ್ಟೇ ಮುಖ್ಯವಾಗುತ್ತದೆ. ಅದಕ್ಕಾಗಿ, ಬಿಜೆಪಿ ಒಂದು ದೇಶ ಒಂದು ಸಂಸ್ಕೃತಿ ಎನ್ನುವ ಮೂಲಕ ಹಿಂದಿ ಭಾಷೆಯನ್ನು ದಕ್ಷಿಣ ರಾಜ್ಯಗಳ ಮೇಲೂ ಹೇರುತ್ತದೆ ಎಂಬ ಆಪಾದನೆಯಿದೆ.

-ವಿವಿಧತೆಯಲ್ಲಿ ದೇಶದ ಏಕತೆ ಎಂಬ ಸಾಂವಿಧಾನಿಕ ತತ್ವವನ್ನು ಬಿಜೆಪಿ ಗೌರವಿಸುತ್ತದೆ. ಇಡೀ ದೇಶಕ್ಕೆಲ್ಲ ಒಂದೇ ಸಂಸ್ಕೃತಿ, ಒಂದೇ ಧರ್ಮ ಒಂದೇ ಭಾಷೆ ಎಂಬ ಹೇರಿಕೆ ಮಾಡುವುದಿಲ್ಲ. ಕರ್ನಾಟಕದಲ್ಲಿ ಕನ್ನಡಕ್ಕೇ ಆದ್ಯತೆ ಎಂಬುದನ್ನು ನಮ್ಮ ಪಕ್ಷದ ಎಲ್ಲ ನಾಯಕರೂ ಈ ಹಿಂದೆಯೂ ತೋರಿಸಿಕೊಟ್ಟಿದ್ದಾರೆ. ಸ್ಥಳೀಯ ಸಂಸ್ಕೃತಿಯನ್ನು ಬಲಗೊಳಿಸುವ ಮೂಲಕವೇ ನಮ್ಮ ಪಕ್ಷವೂ ಬಲಗೊಂಡಿದೆ.

9. ಇತ್ತೀಚೆಗೆ ನೀವು ಯಾವ ರಾಜ್ಯಕ್ಕೆ ಕಾಲಿಟ್ಟರೂ ಅಲ್ಲಿನ ಆಡಳಿತ ಪಕ್ಷದಲ್ಲಿ ಗೊಂದಲ - ವಿಭಜನೆ ಉಂಟಾಗಿ ಬಿಜೆಪಿಗೆ ಲಾಭವಾಗುತ್ತಿದೆ. ಇದು ಕೇವಲ ಕಾಕತಾಳೀಯ ಅಲ್ಲ?

-ಎಲ್ಲ ಪಕ್ಷಗಳಲ್ಲೂ ಆಂತರಿಕ ಗೊಂದಲ ಇದ್ದೇ ಇರುತ್ತದೆ. ಅದಕ್ಕೆಲ್ಲ ನಾವು ಕಾರಣರಲ್ಲ. ಆ ಗೊಂದಲಗಳಿಗೂ ನಮಗೂ ಸಂಬಂಧ ಇಲ್ಲ. ಆದರೆ, ಹಾಗೊಂದು ವೇಳೆ ಅಂತಹ ಗೊಂದಲದಿಂದ ಬಿಜೆಪಿಗೆ ರಾಜಕೀಯ ಲಾಭ ಆಗುವುದಿದ್ದರೆ ನಾವು ಅವುಗಳನ್ನು ಖಂಡಿತ ಬಳಸಿಕೊಳ್ಳುತ್ತೇವೆ. ನಾವು ರಾಜಕೀಯ ಮಾಡಲು ಬಂದಿದ್ದೇವೆ. ನಮ್ಮದು ರಾಜಕೀಯ ಪಕ್ಷ. ಭಜನಾ ಮಂಡಳಿಯಲ್ಲ.

10. ಬರಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ರೀತಿ ಸಾಕಷ್ಟು ಹೊಸ ಮುಖಗಳಿಗೆ ಟಿಕೆಟ್ ನೀಡುತ್ತೀರಿ ಎಂಬ ಮಾತಿದೆ? ಹಾಲಿ ಶಾಸಕರಿಗಿಂತ ಹೊಸಬರಿಗೇ ಮಣೆ ಹಾಕುತ್ತೀರಂತೆ?

-ಖಂಡಿತ ಸಾಕಷ್ಟು ಹೊಸಬರಿಗೆ ಟಿಕೆಟ್ ನೀಡುತ್ತೇವೆ. ಆದರೆ, ಹಾಲಿ ಶಾಸಕರ ಬದಲಿಗೆ ಎನ್ನಲು ಈಗ ನಮ್ಮ ಬಳಿ ಅಷ್ಟು ಶಾಸಕರಾದರೂ ಎಲ್ಲಿದ್ದಾರೆ? ಹಳಬರು ಹೊಸಬರು ಎಂಬ ಭೇದಭಾವ ನಮಗೆ ಇಲ್ಲ. ಗೆಲ್ಲುವಿಕೆಯಷ್ಟೇ ನಮಗೆ ಮಾನದಂಡ.

11. ಹೊಸ ಮುಖಗಳಿಗೆ ಟಿಕೆಟ್ ಕೊಡುವಾಗ ಪಕ್ಷದ ಹಿರಿಯರು, ಹಳಬರು, ಪ್ರಭಾವಿ ಗಳು ಅಸಮಾಧಾನಗೊಳ್ಳುವುದಿಲ್ಲವೆ? ಚುನಾವಣೆಯ ಹೊಸ್ತಿಲಲ್ಲಿ ಇಂಥ ಗೊಂದಲ ಪಕ್ಷಕ್ಕೆ ‘ಕ್ಕೆ ಉಂಟುಮಾಡುವುದಿಲ್ಲವೇ?

ನಾನು ಮೊದಲೇ ಹೇಳಿದಂತೆ ಹೊಸಬರು ಹಳಬರು ಎಂಬ ಭಾವನೆ ನಮಗೆ ಇಲ್ಲ. ಗೆಲ್ಲುವಿಕೆಯಷ್ಟೇ ನಮಗೆ ಮುಖ್ಯ. ಒಂದು ವೇಳೆ ಗೊಂದಲ ಉಂಟಾದರೆ ಅದನ್ನು ನಿವಾರಿಸಲೆಂದೇ ನಾವಿದ್ದೇವಲ್ಲ? ನಮ್ಮನ್ನು ಇಂಥ ಜವಾಬ್ದಾರಿಯ ಹುದ್ದೆಗೆ ನೇಮಿಸುವುದೇ ಇಂತಹ ಸಮಸ್ಯೆ ಪರಿಹರಿಸಲೆಂದು ಅಲ್ಲವೇ?

12. ಈ ಬಾರಿ ಕರ್ನಾಟಕದಲ್ಲಿ ಅತ್ಯಂತ ತುರುಸಿನ ಚುನಾವಣೆ ನಡೆಯುತ್ತದೆ. ಈ ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೂ ಬಹುಮತ ಸಿಗದೇ ಮತ್ತೆ ದೋಸ್ತಿ ಸರ್ಕಾರ ರಚನೆಯಾಗಬಹುದು. ಆಗ ಜೆಡಿಎಸ್ ಕಿಂಗ್ ಮೇಕರ್ ಆಗಬಹುದು ಎನ್ನುವ ಒಂದು ನಿರೀಕ್ಷೆಯೂ ಇದೆ?

-ಹೇಳಿ... ಬಿಹಾರ ಚುನಾವಣೆಯ ನಂತರ ಯಾವ ದೊಡ್ಡ ರಾಜ್ಯದಲ್ಲಿ ದೋಸ್ತಿ ಸರ್ಕಾರ ರಚನೆಯಾಗಿದೆ? ಈಗ ಜನ ಸ್ಪಷ್ಟ ಬಹುಮತ ನೀಡುತ್ತಿದ್ದಾರೆ. ಕರ್ನಾಟಕದಲ್ಲೂ ನಾವು ಸ್ಪಷ್ಟ ಬಹುಮತದಲ್ಲೇ ಸರ್ಕಾರ ರಚಿಸುತ್ತೇವೆ. ಆ ವಿಶ್ವಾಸ ನಮಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿವಾದಿತ Bengaluru Tunnel Road ಟೆಂಡರ್ ಅದಾನಿ ಗ್ರೂಪ್ ಪಾಲು? ಕಾಂಗ್ರೆಸ್ ಸರ್ಕಾರಕ್ಕೆ ಧರ್ಮಸಂಕಟ!
ಕರ್ನಾಟಕದ ನೆಲದಲ್ಲಿ ಕೋಟಿ ಕೋಟಿ ಸಂಪತ್ತು? ಯಾವ ಜಿಲ್ಲೆಗಳಲ್ಲಿದೆ ಚಿನ್ನ, ವಜ್ರದ ನಿಕ್ಷೇಪ?