
ನವದೆಹಲಿ(ಅ. 10): ಅಯೋಧ್ಯೆಯ ಸರಯೂ ನದಿಯ ತಟದಲ್ಲಿ 100 ಮೀಟರ್ ಎತ್ತರ ಶ್ರೀರಾಮನ ಬೃಹತ್ ಪ್ರತಿಮೆ ಸ್ಥಾಪನೆ ಮಾಡಲು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಯೋಜನೆ ರೂಪಿಸಿದೆ. ಉತ್ತರಪ್ರದೇಶ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಧಾರ್ಮಿಕ ಪ್ರವಾಸೋದ್ಯಮ ಯೋಜನೆಯನ್ವಯ ಹಾಗೂ ಅಯೋಧ್ಯೆಯನ್ನು ಜಗತ್ತಿನ ಮುಂದಿಡುವ ಅಂಗವಾಗಿ ಅಯೋಧ್ಯೆಯ ಸರಯೂ ನದಿಯ ತಡದಲ್ಲಿ ಶ್ರೀರಾಮನ ಬೃಹತ್ ಪ್ರತಿಮೆ ಸ್ಥಾಪಿಸಲು ಯೋಜನೆ ರೂಪಿಸಿದ್ದು, ಯೋಜನೆ ಕುರಿತ ಪ್ರಸ್ತಾವನೆಯನ್ನು ರಾಜ್ಯಪಾಲ ರಾಮ್ ನಾಯ್ಕ್ ಅವರಿಗೆ ಸಲ್ಲಿಸಲಾಗಿದೆ. ರಾಜ್ಯಪಾಲರೂ ಕೂಡ ಈ ಯೋಜನೆಗೆ ಒಪ್ಪಿಗೆ ನೀಡಿದ್ದಾರೆ. ಕೇಂದ್ರದ ಎನ್'ಜಿಟಿಯಿಂದ ಒಪ್ಪಿಗೆ ಪಡೆಯುವ ಕೆಲಸ ಬಾಕಿ ಇದೆ.
ಇತ್ತೀಚೆಗಷ್ಟೇ ಉತ್ತರಪ್ರದೇಶದ ಪ್ರವಾಸೋದ್ಯಮ ಇಲಾಖೆಯು ತನ್ನ ಕಿರುಹೊತ್ತಗೆಯಲ್ಲಿ ತಾಜ್'ಮಹಲ್'ನ್ನು ಕೈಬಿಟ್ಟಿತ್ತು. ಇದೀಗ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯನ್ನು ಸ್ಥಾಪಿಸುವ ಉ.ಪ್ರ. ಸರ್ಕಾರದ ನಿರ್ಧಾರ ಹೊಸ ವಿವಾದವನ್ನು ಹುಟ್ಟುಹಾಕಿದಾಗಿದೆ.
ಅಯೋಧ್ಯೆಯನ್ನು ಪ್ರಮುಖ ಧಾರ್ಮಿಕ ಪ್ರವಾಸೀ ತಾಣವನ್ನಾಗಿ ಮಾರ್ಪಡಿಸಲು "ನವ್ಯ ಅಯೋಧ್ಯಾ" ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ಭಾಗವಾಗಿ ಶ್ರೀರಾಮಚಂದ್ರನ ಬೃಹತ್ ಪ್ರತಿಮೆ ನಿರ್ಮಾಣದ ಪ್ರಸ್ತಾವವಾಗಿದೆ. ನವ್ಯ ಅಯೋಧ್ಯಾ ಯೋಜನೆಗೆ 195.89 ಕೋಟಿ ವೆಚ್ಚವಾಗುವ ನಿರೀಕ್ಷೆ ಇದ್ದು, ಕೇಂದ್ರಕ್ಕೆ ಯೋಜನೆಯ ವರದಿ ಸಲ್ಲಿಸಲಾಗಿದೆ. ಕೇಂದ್ರದ ಪ್ರವಾಸೋದ್ಯಮ ಇಲಾಖೆಯು ಈ ಯೋಜನೆಗೆ ಸದ್ಯ 133 ಕೋಟಿ ರೂ ಹಣ ಬಿಡುಗಡೆ ಮಾಡಿದೆ. ರಾಮನ ಮೂರ್ತಿ ಸೇರಿದಂತೆ ಇನ್ನೂ ಹಲವು ಕಟ್ಟಡಗಳು, ಸ್ಮಾರಕಗಳು ಅಯೋಧ್ಯೆಯಲ್ಲಿ ತಲೆ ಎತ್ತಲಿವೆ. ಇಂಡೋನೇಷ್ಯಾದ ಬಾಲಿಯಲ್ಲಿ ಇಂತಹ ಬೃಹತ್ ವಿಗ್ರಹಗಳಿದ್ದು ಪ್ರವಾಸಿಗರ ಆಕರ್ಷಣೆಯಾಗಿವೆ. ಇಲ್ಲಿಯೂ ಅಂತಹ ಯೋಜನೆಗಳನ್ನು ರೂಪಿಸುವುದು ಉ.ಪ್ರ. ಸರಕಾರದ ಉದ್ದೇಶವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.