'ಸಚಿವ ಸ್ಥಾನ ತಪ್ಪಿಸಿದ್ದು ಕಾಂಗ್ರೆಸ್‌ನ ನಾಯಕರು': ವಿಶ್ವನಾಥ್ ಕಿಡಿ

By Kannadaprabha News  |  First Published Oct 20, 2019, 2:57 PM IST

ಸಮ್ಮಿಶ್ರ ಸರ್ಕಾರವನ್ನು ಕೆಡವಿದ್ದು ನಾವುಗಳಲ್ಲ ಹಾಗೂ ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಕೊಡುವ ಮನಸ್ಸು ಎಚ್‌.ಡಿ. ದೇವೇಗೌಡರಿಗಿತ್ತು, ಕಾಂಗ್ರೆಸ್‌ನ ನಾಯಕತ್ವ ವಹಿಸಿದ್ದ ನಾಯಕರು ತಪ್ಪಿಸುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಹಂತಹಂತವಾಗಿ ಕೊಂದು ಹಾಕಿದ್ದಾರೆ ಎಂದು ಅನರ್ಹ ಶಾಸಕ ಎಚ್‌. ವಿಶ್ವನಾಥ್‌ ಕಿಡಿಕಾರಿದ್ದಾರೆ.


ಮೈಸೂರು(ಅ.20): ಸಮ್ಮಿಶ್ರ ಸರ್ಕಾರವನ್ನು ಕೆಡವಿದ್ದು ನಾವುಗಳಲ್ಲ ಹಾಗೂ ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಕೊಡುವ ಮನಸ್ಸು ಎಚ್‌.ಡಿ. ದೇವೇಗೌಡರಿಗಿತ್ತು, ಕಾಂಗ್ರೆಸ್‌ನ ನಾಯಕತ್ವ ವಹಿಸಿದ್ದ ನಾಯಕರು ತಪ್ಪಿಸುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಹಂತಹಂತವಾಗಿ ಕೊಂದು ಹಾಕಿದ್ದಾರೆ ಎಂದು ಅನರ್ಹ ಶಾಸಕ ಎಚ್‌. ವಿಶ್ವನಾಥ್‌ ಕಿಡಿಕಾರಿದ್ದಾರೆ.

ಹುಣಸೂರು ಪಟ್ಟಣದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ವಿಶ್ವಾಸಿಗಳ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ್ದಾರೆ.

Latest Videos

undefined

'ಅಯ್ಯಯ್ಯೋ' ತುಂಬಿದ ಸಭೆಯಲ್ಲಿ ಉದುರಿತು ವಿಶ್ವನಾಥ್ ಪ್ಯಾಂಟ್!

ಕಳೆದ ಸಮ್ಮಿಶ್ರ ಸರ್ಕಾರವನ್ನು ಕೆಡವಿದ್ದು, 17 ಜನ ಅನರ್ಹ ಶಾಸಕರಲ್ಲ, ಕಾಂಗ್ರೆಸ್‌ ನಾಯಕತ್ವ ವಹಿಸಿಕೊಂಡಿದ್ದ ನಾಯಕರಿಗೆ ಜೆಡಿಎಸ್‌ ಸಿಎಂ ಇಷ್ಟವಿರಲಿಲ್ಲ, ಹಾಗಾಗಿ ಸರ್ಕಾರ ಮತ್ತು ಜೆಡಿಎಸ್‌ ಮುಗಿಸುವ ಹುನ್ನಾರ ನಡೆಸಿದ್ದರು ಎಂದು ಹೆಸರು ಬಳಸದæೕ ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್‌ ರಮೇಶ್‌ಕುಮಾರ್‌ ಅವರನ್ನು ತರಾಟೆ ತೆಗೆದುಕೊಂಡರು.

ಕಳೆದ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ದೇವೇಗೌಡರು ನನ್ನನ್ನು ಮಂತ್ರಿ ಮಾಡುತ್ತೇವೆಂದು ಭರವಸೆ ನೀಡಿದ್ದರು, 11.30ಕ್ಕೆ ರಾಜಭವನದಿಂದ ನನ್ನ ವೈಯಕ್ತಿಕ ಮಾಹಿತಿ ಪಡೆದುಕೊಂಡರು, 12.30ಕ್ಕೆ ಮತ್ತೆ ನಿಮ್ಮ ಹೆಸರು ಕೈ ಬಿಡಲಾಗಿದೆ ಎಂದರು. 1.20ಕ್ಕೆ ಎಚ್‌.ಡಿ. ಕುಮಾರಸ್ವಾಮಿ ಅವರಿಂದ ಕರೆ ಬಂತು ತಾಜ್‌ ಹೋಟೆಲ್‌ಗೆ ಬನ್ನಿ ಅಂತಾ ನಾನು ಹೋದೆ, ಅಲ್ಲಿ ಪ್ರತ್ಯೇಕ ಮಾತನಾಡಬೇಕು ಎಂದು ಎಚ್‌ಡಿಕೆ ಹೇಳಿದರು, ಬೇಡ ಸಾರ್‌ ಇಲ್ಲಲ್ಲೇ ಹೇಳಿ ಅಂದಾಗ ಒಂದು ತಿಂಗಳು ಸಾ.ರಾ. ಮಹೇಶ್‌ ಅವರನ್ನು ಮಂತ್ರಿ ಮಾಡಿ ರಾಜೀನಾಮೆ ಕೊಡಿಸಿ, ನಿಮ್ಮನ್ನು ಮಂತ್ರಿ ಮಾಡುತ್ತೇವೆಂದು ಹೇಳಿದರು. ಅದಕ್ಕೆ ನಾನು ಒಪ್ಪದೆ ನಮ್ಮೂರಿನ ಹುಡುಗನಿಗೆ ಒಂದು ತಿಂಗಳ ಮಂತ್ರಿ ಬೇಡ ಮಹೇಶ್‌ಗೆ ಕೊಡಿ ಸಾರ್‌ ಎಂದು ಹೇಳಿದೆ, ಆದರೆ ನಂತರ ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರು ಸಹ ನನ್ನೂರಿನ ಪುರಸಭೆಗೆ ಟಿಕೆಟ್‌ ಕೊಡಲು ಬಿಡಲಿಲ್ಲ ಎಂದು ಹೇಳಿದ್ದಾರೆ.

ಚಾಮುಂಡೇಶ್ವರಿ ಸೋಲು: ‌ಚುನಾವಣೆಯಲ್ಲಿ ನಾಯಕರ ಸುಳ್ಳು ಮಾಹಿತಿ ಬಿಚ್ಚಿಟ್ಟ ಸಿದ್ದು...

ಎಂಪಿ ಚುನಾವಣೆಯಲ್ಲಿ ನನ್ನೂರಿಗೆ ಬಂದ ರಾಹುಲ್‌ ಗಾಂಧಿ ಕಾರ್ಯಕ್ರಮಕ್ಕೂ ಅಹ್ವಾನವಿಲ್ಲ ಹಾಗೂ ನನ್ನ ಅಳಿಯನ ವರ್ಗಾವಣೆ ಮಾಡಲಿಲ್ಲ, ಕೆ.ಆರ್‌. ಪೇಟೆ ತಾಲೂಕಿನ ಜೆಡಿಎಸ್‌ ಘಟಕದ ಅಧ್ಯಕ್ಷ ಸ್ಥಾನದ ಪತ್ರ ಕೊಡಲು ಬಿಡಲಿಲ್ಲ, ಸಮನ್ವಯ ಸಮಿತಿಯಲ್ಲಿ ಸದಸ್ಯ ಸ್ಥಾನ ಕೊಡಲಿಲ್ಲ ಹೀಗೆ ಹತ್ತು ಹಲವು ವಿಚಾರಗಳಲ್ಲಿ ನನ್ನನ್ನು ಕಟ್ಟಿಹಾಕಿದ್ದರು.

ನನ್ನೊಬ್ಬ ಮಾತ್ರವಲ್ಲದೆ ಜಿಲ್ಲಾ ಸಚಿವರಾಗಿದ್ದ ಜಿ.ಟಿ. ದೇವೇಗೌಡರಿಗೆ ಒಂದು ತಹಸೀಲ್ದಾರ್‌ ಅಥವಾ ಎಸ್‌ಐ ಅವರನ್ನು ವರ್ಗಾಹಿಸುವ ಅಧಿಕಾರ ನೀಡಲಿಲ್ಲ , ಯಾವುದೇ ಒಬ್ಬ ಕಾರ್ಯಕರ್ತನಿಗೂ ಸಹಾಯ ಮಾಡಲು ಬಿಡಲಿಲ್ಲ, ಅವರು ಕೂಡ ನೊಂದು ಸಾಕಾಗಿ ಮಾತನಾಡದೇ ರಾಜಕೀಯವೇ ಬೇಡ ಎಂದು ಮೌನವಹಿಸಿದ್ದಾರೆ. ಹೀಗೆ ಹೇಳುತ್ತಾ ಹೋದರೆ ಹಲವಾರು ಮಂದಿಯ ನೋವಿನ ಕಥೆ ಇದೆ. ಪಕ್ಷ ಸಂಘಟನೆ ಮಾಡುವಾಗ ಅಧಿಕಾರಕ್ಕೆ ಬಂದರೆ ಏನೋ ಮಾಡುತ್ತೇವೆಂದು ಆಶ್ವಾಸನೆ ನೀಡುತ್ತಾರೆ, ಅಧಿಕಾರಕ್ಕೆ ಬಂದ ಬಳಿಕ ಯಾವ ಯಾರ ನೆನಪು ಬರುವುದಿಲ್ಲ, ಅಧಿಕಾರದ ಭ್ರಮೆಯಲ್ಲಿ ಎಚ್‌ಡಿಕೆ ತೇಲುತ್ತಾರೆ ಎಂದರು.

ನಾನು ಏಕೆ ಪಕ್ಷ ಬದಲಾಯಿಸಿದೆ?:

ನಾನು ಕಾಂಗ್ರೆಸ್‌ ಬಿಟ್ಟಿದ್ದು, ಜೆಡಿಎಸ್‌ ಸೇರಿ, ಮುಂದಿನ ಪಕ್ಷಕ್ಕೆ ಏಕೆ ಸೇರುತ್ತಿದ್ದೇನೆಂಬ ಸಾರ್ವಜನಿಕರ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂಬ ಕಾರಣದಿಂದ ಇಂದು ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣ ನಾಡಿನ ಸಮಾಜ ಸೇವಾ ಕಾರ್ಯಕರ್ತರಾದ ವೀಣಾ ಮತ್ತು ಪ್ರಭು ಅವರಿಂದ ಉದ್ಘಾಟನೆ ಮಾಡಿಸಿ, ವಿಶ್ವಾಸಿಗಳ ಚಿಂತನಾ ಸಭೆಯ ಸಂವಾದ ನಡೆಸುತ್ತಿದ್ದೇನೆ. ನಾನು ನಿಮ್ಮನ್ನು ಕೇಳದೆ ರಾಜೀನಾಮೆ ನೀಡಿದ ತಪ್ಪಿಗೆ ಕ್ಷಮೆ ಕೇಳುವೆ, ನಂತರ ಒಬ್ಬೊಬ್ಬರು ಪ್ರಶ್ನೆ ಕೇಳಿ ಎಲ್ಲಕ್ಕೂ ಉತ್ತರ ನೀಡುವೆ ಎಂದರು.

ನನ್ನನ್ನು ಕರೆತಂದವರು ಯಾರು ?

ಕಾಂಗ್ರೆಸ್‌ ಪಕ್ಷದಿಂದ ಬೇಸತ್ತು, ಅಂತ್ಯಕಾಲದಲ್ಲಿ ಕೈ ಹಿಡಿದಿದ್ದು ಜೆಡಿಎಸ್‌, ಆದರೆ ನನ್ನನ್ನು ಕರೆ ತಂದವರು ಕೆ.ಆರ್‌. ನಗರದ ಶಾಸಕರಲ್ಲ, ಚಿಕ್ಕಮಾದು ಮತ್ತು ಜಿ.ಟಿ. ದೇವೇಗೌಡರ ಕುಟುಂಬ ಹಾಗೂ ಕ್ಷೇತ್ರದ ಜನತೆ ಚುನಾವಣೆಯಲ್ಲಿ ಕರೆತಂದು ಗೆಲ್ಲಿಸಿದ್ದಾರೆ ಎಂದರು.

ಸಭೆ ನಡೆಯುತ್ತಿದ್ದಾಗ ಜೆಡಿಎಸ್‌ ಅಭಿಮಾನಿ ಹಾಗೂ ಎಚ್‌ಡಿಕೆ ಅಭಿಮಾನಿ ಬಳಗದ ಅಧ್ಯಕ್ಷ ಧಣಿಕುಮಾರ್‌ ನೀವು ಏಕೆ ಜೆಡಿಎಸ್‌ ಶಾಸಕರಾಗಿ, ನಂತರ ಅಧಿಕಾರಕ್ಕಾಗಿ ನಮ್ಮ ಪಕ್ಷ ಮತ್ತು ಸರ್ಕಾರ ಬೀಳಲು ನೀವೇ ಕಾರಣ. ನಿಮಗೆ ಅನ್ಯಾಯವಾಗಿದ್ದರೆ ಸಭೆ ಕರೆದು ತಿಳಸಬೇಕಿತ್ತು ಎಂಬ ಏರು ಧ್ವನಿಯ ಮಾತಿಗೆ ಎಚ್‌ವಿ ಅವರು ಧಣಿಗೆ ಸಮಾಧಾನಪಡಿಸಿ, ನಿಮ್ಮೂರಿಗೆ ಒಂದು ಕೋಟಿ ರು. ಅನುದಾನ ಹಾಕಿದ್ದೇನೆ ಅಲ್ವಾ ಎಂದು ಗೊಂದಲಗಳಿಗೆ ತೆರೆ ಎಳೆದರು.

ಹುಣಸೂರು ಕ್ಷೇತ್ರವನ್ನು ಅರಸು ಜಿಲ್ಲೆ ಮಾಡುವ ವಿಚಾರವಾಗಿ ಈ ಹಿಂದೆ ಅರಸು ಪುತ್ರಿ ಚಂದ್ರಪ್ರಭ ಅರಸು ಅವರು ಹೇಳಿದ್ದರು, ನಂತರ ನಾನು ಹುಣಸೂರಿಗೆ ಚುನಾವಣೆ ಸಂದರ್ಭದಲ್ಲಿ ಜನರ ಒತ್ತಾಸೆಯ ಮೇಲೆ ಮಾತು ಕೊಟ್ಟಿದ್ದೆ, ಹಾಗಾಗಿ ಅರಸು ಜಿಲ್ಲೆಯನ್ನು ಬಿಜೆಪಿ ಸರ್ಕಾರದ ಮುಂದೆ ಇಟ್ಟಿದ್ದೇನೆಯೇ ಹೊರತು ಚುನಾವಣೆ ಗಿಮಿಕ್‌ ಅಲ್ಲ, ವಿಶ್ವನಾಥ್‌ ಅವರ ಸ್ವಾರ್ಥ ರಾಜಕಾರಣವೂ ಅಲ್ಲ, ಜಿಲ್ಲೆಗೆ ಯಾರು ವಿರೋಧ ಮಾಡಿದರೂ ಪ್ರಸ್ತಾವನೆ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ದಸಂಸ ಮುಖಂಡ ನಿಂಗರಾಜ ಮಲ್ಲಾಡಿ ಮಾತನಾಡಿದರು. ಸಮಾಜ ಸೇವಾ ಕಾರ್ಯಕರ್ತ ವೀಣಾ ಹಾಗೂ ಎಂ.ಬಿ. ಪ್ರಭು ಕಾರ್ಯಕ್ರಮ ಉದ್ಘಾಟಿಸಿದರು. ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ದೇವರಾಜು, ಮುಖಂಡ ಹರಹರಾನಂದಸ್ವಾಮಿ, ರಾಜು, ಅಮಿತ್‌ ದೇವರಹಟ್ಟಿ, ಡಿ.ಕೆ. ಕುನ್ನೇಗೌಡ, ಪ್ರಾಣಶೆಟ್ಟಿ, ಶ್ರೀನಿವಾಸ್‌, ಸುಭಾಶ್‌, ಈರೇಗೌಡ, ಅಣ್ಣಯನಾಯಕ, ಚೌಡಪ್ಪ, ವಿಶ್ವನಾಥ್‌, ರಾಜೇಗೌಡ, ಕಿರಂಗೂರು ಬಸವರಾಜ್‌, ಅಬಬಾಸ್‌ ಖಾನ್‌, ನಾಗರಾಜ ಮಲ್ಲಾಡಿ, ಸಾಯಿನಾಥ್‌, ಗಣೇಶ್‌, ಪರಮೇಶ್‌, ಲೋಕೇಶ್‌ ಅಭಿಮಾನಿಗಳು ಇದ್ದರು.

click me!