ಮರಳಿ ಬಿಜೆಪಿ ಸೇರಿ, ನಾವು ಬರ್ತೀವಿ: ಸಿದ್ದು ಆಪ್ತನಿಗೆ ಅಭಿಮಾನಿಗಳ ಒತ್ತಾಯ

By Kannadaprabha NewsFirst Published Oct 26, 2019, 3:03 PM IST
Highlights

ಮಾಜಿ ಸಂಸದ ಸಿ.ಎಚ್‌. ವಿಜಯಶಂಕರ್‌ ಮರಳಿ ಬಿಜೆಪಿಗೆ ಸೇರ್ಪಡೆಗೊಳ್ಳಬೇಕೆಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಎರಡು ವರ್ಷಗಳ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಮಾಜಿ ಶಾಸಕ ಸಿ.ಎಚ್‌. ವಿಜಯಶಂಕರ್‌ರ ಹುಣಸೂರು ಸ್ವಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾನ ಮನಸ್ಕರ ಸಭೆಯಲ್ಲಿ ಸಿಎಚ್‌ವಿ ಅಭಿಮಾನಿಗಳು ಬಿಜೆಪಿ ಮರಳಲು ಒತ್ತಡ ಹೇರಿದ್ದಾರೆ.

ಮೈಸೂರು(ಅ.26): ಮಾಜಿ ಸಂಸದ ಸಿ.ಎಚ್‌. ವಿಜಯಶಂಕರ್‌ ಮರಳಿ ಬಿಜೆಪಿಗೆ ಸೇರ್ಪಡೆಗೊಳ್ಳಬೇಕೆಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಎರಡು ವರ್ಷಗಳ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಮಾಜಿ ಶಾಸಕ ಸಿ.ಎಚ್‌. ವಿಜಯಶಂಕರ್‌ರ ಹುಣಸೂರು ಸ್ವಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾನ ಮನಸ್ಕರ ಸಭೆಯಲ್ಲಿ ಸಿಎಚ್‌ವಿ ಅಭಿಮಾನಿಗಳು ಬಿಜೆಪಿ ಮರಳಲು ಒತ್ತಡ ಹೇರಿದ್ದಾರೆ.

ಮುಖಂಡ ಎ.ಪಿ. ಸ್ವಾಮಿ ಮಾತನಾಡಿ, ಬಿಜೆಪಿಗಾಗಿ ನೀವು ದುಡಿದಿದ್ದೀರಿ. ನಿಮಗೂ ಬಿಜೆಪಿ ಉತ್ತಮ ಗೌರವವನ್ನೇ ನೀಡಿದೆ. ಇದೀಗ ಪುನಃ ನೀವು ಬಿಜೆಪಿಗೆ ಹೋದರೆ ನಿಮ್ಮ ಹಿಂದೆ ನಾವೂ ಬರುತ್ತೇವೆ. ಆದರೆ ಈ ಹಿಂದೆ ಮಾಡಿದಂತೆ ಕಾರ್ಯಕರ್ತರು, ಅಭಿಮಾನಿಗಳನ್ನು ಮರೆಯಬೇಡಿ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಕರೆದುಕೊಂಡು ಹೋಗಿರೆಂದು ತಿಳಿಹೇಳಿದ್ದಾರೆ.

 

ತಾಲೂಕು ಕುರುಬರ ಸಂಘದ ಅಧ್ಯಕ್ಷ ಡಿ.ಕೆ. ಕುನ್ನೇಗೌಡ ಮಾತನಾಡಿ, ಬಿಜೆಪಿ ತೊರೆದಿದ್ದು ತಪ್ಪಾಗಿದೆ. ಮುಂದೆ ಇಂತಹ ತಪ್ಪು ಆಗದಂತೆ ಎಚ್ಚರವಹಿಸಿ. ತಾಲೂಕಿನಲ್ಲಿ ನಿಮಗೆ ನಿಮ್ಮದೇ ಆದ ಅಭಿಮಾನಿಗಳು ಇದ್ದಾರೆ. ನಿಮ್ಮ ಸರಳತೆ, ಎಲ್ಲರನ್ನು ಒಂದಾಗಿ ಕರೆದುಕೊಂಡು ಹೋಗುವ ಗುಣವೇ ನಿಮ್ಮನ್ನು ಕಾಪಾಡಲಿದೆ ಎಂದರೆ, ವೀರತಪ್ಪ, ಅಭಿಮಾನಿಗಳ, ಕಾರ್ಯಕರ್ತರ ಮಾತು ಕೇಳಿ, ಹಿತ್ತಾಳೆ ಕಿವಿ ಆಗಬೇಡಿರೆಂದು ಸೂಚಿಸಿದ್ದಾರೆ.

ಸತತ ಸೋಲು ಆಘಾತ:

2009, 14 ಮತ್ತು 19ರ ಲೋಕಸಭಾ ಚುನಾವಣೆಯಲ್ಲಿನ ಸತತ ಸೋಲು ನನ್ನನ್ನು ಘಾಸಗೊಳಿಸಿತು. ಮಾನಸಿಕವಾಗಿ ಕುಗ್ಗಿಹೋದೆ. ಇದೇ ವೇಳೆ ಎರಡು ವರ್ಷಗಳ ಹಿಂದೆ ಸಿದ್ಧರಾಮಯ್ಯನವರ ಆಶ್ವಾಸನೆಯನ್ನು ನಂಬಿ ಕಾಂಗ್ರೆಸ್‌ ಸೇರಿದೆ. ಪಕ್ಷ ಸೇರ್ಪಡೆಗೆ ಕೆಪಿಸಿಸಿ ಕಚೇರಿಗೆ ಹೋಗಿದ್ದೆ. ನಂತರ ಇಂದಿನವರೆಗೂ ಆ ಕಚೇರಿಗೆ ಕಾಲಿಟ್ಟಿಲ್ಲ. ಸಿದ್ದರಾಮಯ್ಯ ಟಿಕೆಟ್‌ ಕೊಡಿಸಿದರೂ. ಮೈತ್ರಿ ಸರ್ಕಾರದ ಮೈತ್ರಿ ನಿಯಮ ಪಾಲನೆಯಾಗಲಿಲ್ಲವೆಂದು ವಿಜಯಶಂಕರ್‌ ಬೇಸರಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಮೂಲ, ವಲಸೆ ವಾಗ್ವಾದ ಜೋರಾಗಿದೆ. 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡಸಿದ ಸಿದ್ಧರಾಮಯ್ಯನವರನ್ನೇ ಮೂಲ,ವಲಸಿಗ ಎಂಬ ವಿವಾದಕ್ಕೆ ಸಿಲುಕಿಸಿದ್ದಾರೆ. ಇನ್ನು ನಮ್ಮಂತವರ ಗತಿಯೇನು? ಇಂತಹ ಪದ್ಧತಿ ಬಿಜೆಪಿಯಲ್ಲಿ ನಾನು ಕಂಡಿದ್ದಿಲ್ಲ. ನಾನು ಟಿಕೆಟ್ ನೀಡಿದ ಸಿದ್ಧರಾಮಯ್ಯನವರಿಗೆ ಭಾರವಾಗಿ ಇರಲು ಇಷ್ಟವಿಲ್ಲ. ಹಾಗೆಂದು ಕಾಂಗ್ರೆಸ್‌ನಲ್ಲಿ ಎಮ್ಮೆಲ್ಲೆ, ಎಂಎಲ್ಸಿಗೆ ಅವಕಾಶ ಕೇಳಲು ಆಸ್ಪದವೇ ಇಲ್ಲ. ಕಾರಣ ನನಗಿಂತ ಹಿರಿಯರು ಅಲ್ಲಿದ್ದಾರೆ ಎಂದರು.

ಮುಖಂಡರಾದ ಗಣೇಶ್‌ ಕುಮಾರಸ್ವಾಮಿ, ನಗರಸಭಾ ಸದಸ್ಯ ಸತೀಶ್‌ ಕುಮಾರ್‌, ವಕೀಲ ಸ್ವಾಮಿಗೌಡ, ವೀರತಪ್ಪ, ರಮೇಶ್‌, ಶಂಕರ್‌, ರಾಮಸ್ವಾಮಿ, ಪ್ರಕಾಶ್‌, ಗೋವಿಂದಾಚಾರಿ ಮಾತನಾಡಿದರು.

ಮರಳಲು ಆಹ್ವಾನ

ದೇವರಾಜ ಅರಸರ ಸಾಮಾಜಿಕ ನ್ಯಾಯ ಮತ್ತು ವಾಜಪೇಯಿಯವರ ರಾಜಕೀಯ ಮುತ್ಸದ್ದಿತನ ನನ್ನನ್ನು ಆಕರ್ಷಿಸಿದ ಪ್ರಮುಖ ಅಂಶಗಳಾಗಿವೆ. ಈ ನಡುವೆ ಲೋಕಸಭಾ ಚುನಾವಣೆ ಸೋತ ನಂತರ ಬಿಜೆಪಿ ವರಿಷ್ಠಮಟ್ಟದ ನಾಯಕರಿಂದ ಪಕ್ಷಕ್ಕೆ ಮರಳು ಬರಲು ಆಹ್ವಾನ ನೀಡುತ್ತಿದ್ದಾರೆ. ರಾಜಕೀಯದಲ್ಲಿ ಇಂತಹ ಸ್ಥಿತ್ಯಂತರ ಸಹಜ. ಪಕ್ಷಕ್ಕಾಗಿ ದುಡಿದಿದ್ದೀರಿ. ಮರಳಿ ಬರುವುದಾದರೆ ಸ್ವಾಗತ ಎಂದಿದ್ದಾರೆ. ಇಲ್ಲಿ ನನ್ನ ಅಭಿಮಾನಿಗಳು ಬಿಜೆಪಿ ಸೇರುವುದೇ ಒಳಿತು ಎನ್ನುವ ಮಾತುಗಳನ್ನಾಡಿದ್ದಾರೆ. ಹಾಗಾಗಿ ಬಿಜೆಪಿ ಪಕ್ಷದ ವರಿಷ್ಠರ ಜೊತೆ ಅವರ ನೀಡುರುವ ಆಹ್ವಾನದ ಕುರಿತು ಶೀಘ್ರ ಚರ್ಚಿಸಿ ಸೂಕ್ತ ನಿರ್ಣಯ ಪ್ರಕಟಿಸಲಿದ್ದೇನೆ ಎಂದು ವಿಜಯಶಂಕರ್‌ ಹೇಳಿದ್ದಾರೆ.

ಕಾಂಗ್ರೆಸ್‌ಗೆ ಬಿಗ್ ಶಾಕ್ : ಸಿದ್ದರಾಮಯ್ಯ ಆಪ್ತ ಬಿಜೆಪಿಗೆ.

ಅಕ್ಟೋಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!