
ಮೈಸೂರು(ಅ.11): ಪ್ರಜಾಪ್ರಭುತ್ವವಾದಿಯಾಗಿದ್ದ ಮೈಸೂರು ಅರಸರು ನಾಡಿಗೆ ನೀಡಿದ ಕೊಡಗೆ ಅಪಾರ, ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವುದೇ ನಾವು ಅವರಿಗೆ ನೀಡುವ ಗೌರವ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅಭಿಪ್ರಾಯಪಟ್ಟಿದ್ದಾರೆ.
ಅವರು ನಗರದ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಗುರುವಾರ ಸಂಜೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ಆಯೋಜಿಸಿದ್ದ ಮೈಸೂರು ಸಂಸ್ಥಾನದ ಕೊನೆಯ ದೊರೆ ಶ್ರೀಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದಾರೆ.
ಪ್ರಜಾಪ್ರಭುತ್ವವಾದಿ ಎಂಬುದನ್ನು ಸಾಬೀತುಪಡಿಸಿದ್ರು:
ದೂರದೃಷ್ಟಿಹೊಂದಿದ್ದ ಮೈಸೂರು ಅರಸರು, ಪ್ರಜಾಪ್ರಭುತ್ವಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅರಸೊತ್ತಿಗೆ ಇದ್ದರೂ ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಪ್ರಜಾಪ್ರಭುತ್ವದಲ್ಲಿ ತಮ್ಮ ಸಂಸ್ಥಾನವನ್ನು ವಿಲೀನಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆ ಸಂದರ್ಭದಲ್ಲಿ ಮೈಸೂರು ಸಂಸ್ಥಾನದ ಪ್ರತಿನಿಧಿಗಳ ಸಭೆ ಕರೆದು ಈ ತೀರ್ಮಾನ ಕೈಗೊಳ್ಳುವ ಮೂಲಕ ತಾವೊಬ್ಬ ಪ್ರಜಾಪ್ರಭುತ್ವವಾದಿ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಕೊಂಡಾಡಿದರು.
ಉನ್ನತ ಶಿಕ್ಷಣ ಸಂಸ್ಥೆಗೆ ಶಿಲಾನ್ಯಾಸ
ಇದೇ ವೇಳೆ ಮೈಸೂರು ವಿವಿಗೆ ಜಯಚಾಮರಾಜ ಒಡೆಯರ್ ಅವರು ನೀಡಿದ 22 ಎಕರೆ ಪ್ರದೇಶದಲ್ಲಿ ಮೈಸೂರು ವಿವಿ ನಿರ್ಮಿಸುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಶಿಲಾನ್ಯಾಸ ನೆರವೇರಿಸಿದರು. ಶ್ರೀವಿದ್ಯಾ ಸಂಕೀರ್ತನ ಸುಧಾಲಹರಿ ಗ್ರಂಥವನ್ನು ರಾಜ್ಯಪಾಲ ವಾಜುಬಾಯ್ ವಾಲಾ ಬಿಡುಗಡೆಗೊಳಿಸಿದರು.
11ರಂದು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ
ಅ.11ರ ಬೆಳಗ್ಗೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ, ನಂತರ ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಶ್ರೀಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅ.11ರ ಬೆಳಗ್ಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬೆಳಗ್ಗೆ 9.45 ರಿಂದ 11.45 ರವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.