ದಸರೆ ವೇಳೆ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ

By Kannadaprabha NewsFirst Published Oct 10, 2019, 3:51 PM IST
Highlights

ವಾರಾಂತ್ಯದೊಡನೆ ಸಾಲು ಸಾಲು ರಜೆ ಬಂದ ಹಿನ್ನೆಲೆಯಲ್ಲಿ ಮೈಸೂರಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ನಗರದ ಅರಮನೆ ಮತ್ತು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ ಇದನ್ನು ಸಾಕ್ಷೀಕರಿಸಿದೆ.

ಮೈಸೂರು(ಅ.10): ವಾರಾಂತ್ಯದೊಡನೆ ಸಾಲು ಸಾಲು ರಜೆ ಬಂದ ಹಿನ್ನೆಲೆಯಲ್ಲಿ ಮೈಸೂರಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ನಗರದ ಅರಮನೆ ಮತ್ತು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ ಇದನ್ನು ಸಾಕ್ಷೀಕರಿಸಿದೆ.

ಪ್ರತಿವರ್ಷ ದಸರಾ ಮಹೋತ್ಸವ ಸಂದರ್ಭದಲ್ಲಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆಯೇ ಹೊರತು ಕಡಿಮೆಯಾಗಿಲ್ಲ. ಕಳೆದ ಎರಡು ವರ್ಷದ ದಸರಾ ಮಹೋತ್ಸವದ ಹತ್ತು ದಿನಗಳಲ್ಲಿ ಅರಮನೆ ಮತ್ತು ಮೃಗಾಲಯಕ್ಕೆ ಭೇಟಿ ನೀಡಿದವರ ಸಂಖ್ಯೆಯನ್ನು ಗಮನಿಸಿದರೆ ಇದಕ್ಕೆ ಇಂಬು ಸಿಗುತ್ತದೆ. ಅರಮನೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ಕಳೆದ ವರ್ಷಕ್ಕೂ ಈ ವರ್ಷಕ್ಕೂ 14 ಸಾವಿರ ಮಂದಿ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡಿದ್ದರೆ, ಮೃಗಾಲಯಕ್ಕೆ ಭೇಟಿ ನೀಡಿದವರ ಸಂಖ್ಯೆ ಕಳೆದ ವರ್ಷಕ್ಕೂ ಈ ವರ್ಷಕ್ಕೂ 12 ಸಾವಿರದಷ್ಟುಹೆಚ್ಚಿದೆ.

ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ: ಈ ರಸ್ತೆಯಲ್ಲಿ ಹೋಗೋ ಮುನ್ನ ಯೋಚಿಸಿ!

ಸೆ. 29 ರಂದು ಮೈಸೂರು ಅರಮನೆಗೆ 11,163 ಮಂದಿ, 30 ರಂದು 9,275, ಅ. 1 ರಂದು 9,906, 2 ರಂದು 16,354, 3 ರಂದು 8,948, 4 ರಂದು 11,351, 5 ರಂದು 15,384, 6 ರಂದು 24,501 ಮತ್ತು 7 ರಂದು 13,899 ಮಂದಿ ಭೇಟಿ ನೀಡಿದ್ದಾರೆ. ಈ ಪೈಕಿ 884 ಮಂದಿ ವಿದೇಶಿಯರು, 13,577 ಮಂದಿ ವಿದ್ಯಾರ್ಥಿಗಳು, 11,422 ಮಂದಿ ಮಕ್ಕಳು ಸೇರಿದ್ದಾರೆ. ವಿಜಯದಶಮಿ ಹಿನ್ನೆಲೆಯಲ್ಲಿ ಅ. 8 ರಂದು ಪ್ರವಾಸಿಗರಿಗೆ ಅರಮನೆ ಪ್ರವೇಶ ನಿಷೇಧಿಸಲಾಗಿತ್ತು. ಕಳೆದ ವರ್ಷ ದಸರಾ ಅವಧಿಯಲ್ಲಿ ಒಟ್ಟು 1,06,354 ಮಂದಿ ಭೇಟಿ ನೀಡಿದ್ದರು. ಆದರೆ ಈ ಬಾರಿ ಒಟ್ಟು 1,20,781 ಮಂದಿ ಭೇಟಿ ನೀಡಿರುವುದು ನೂತನ ದಾಖಲೆ.

ಮೈಸೂರು ಪ್ರವಾಸೋದ್ಯಮಕ್ಕೆ ದಸರೆಯೇ ಬ್ರ್ಯಾಂಡ್‌!

ಕಳೆದ ವರ್ಷ ವಿಜಯದಶಮಿಯ ಮಾರನೇ ದಿನ 32,889 ಮಂದಿ ಭೇಟಿ ನೀಡಿದ್ದು ದಾಖಲೆಯಾಗಿತ್ತು. ಒಂದೇ ದಿನದಲ್ಲಿ ಇಷ್ಟೊಂದು ಪ್ರವಾಸಿಗರು ಭೇಟಿ ನೀಡಿರುವುದು ಒಂದು ದಾಖಲೆಯೇ. ಅಂತೆಯೇ ಆಯುಧಪೂಜೆ ಮುನ್ನಾ ದಿನವಾದ ಅ. 6 ರಂದು ಒಂದೇ ದಿನ 24,501 ಮಂದಿ ಭೇಟಿ ನೀಡಿದ್ದಾರೆ.

ನಾನು ಇಲ್ಲಿಂದ ಹೋಗಲ್ಲ ಬಿಟ್ಟುಬಿಡಿ..! ಚೈನ್ ಕಿತ್ತುಕೊಂಡು ಓಡಿದ ಲಕ್ಷ್ಮೀ ಆನೆ

ನಗರದ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಕಳೆದ ವರ್ಷ 1.53 ಲಕ್ಷ ಮಂದಿ ಭೇಟಿ ನೀಡಿದ್ದರು. ಆದರೆ ಈ ಬಾರಿ 1.65 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಆಯುಧಪೂಜೆಯ ದಿನ 30,273 (29.77 ಲಕ್ಷ ಆದಾಯ) ಮಂದಿ, ವಿಜಯದಶಮಿ ದಿನ 28,386 (28.28 ಲಕ್ಷ) ಮಂದಿ ಭೇಟಿ ನೀಡಿದ್ದರು. ಆಯುಧಪೂಜೆಯ ದಿನ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದ್ದರೆ, ವಿಜಯದಶಮಿಯ ದಿನ ಭೇಟಿ ನೀಡುವವರ ಸಂಖ್ಯೆಯಲ್ಲಿ ವ್ಯತ್ಯಾಸವಾಗುತ್ತಿದೆ. 2016ರಲ್ಲಿ ಮೃಗಾಲಯಕ್ಕೆ 1.24 ಲಕ್ಷ ಮಂದಿ, 2017ರಲ್ಲಿ 1.23 ಲಕ್ಷ, 2018ರಲ್ಲಿ 1.53 ಲಕ್ಷ ಮತ್ತು 2019ರಲ್ಲಿ 1.65 ಲಕ್ಷ ಮಂದಿ ಭೇಟಿ ನೀಡಿದ್ದರು. ಪ್ರಸಕ್ತ ದಸರೆಯ ಹತ್ತು ದಿನಗಳ ಟಿಕೆಟ್‌ ಸಂಗ್ರಹದ ಮೂಲಕ ಮೃಗಾಲಯಕ್ಕೆ ಒಟ್ಟಾರೆ 1.59 ಕೋಟಿ ಆದಾಯ ಬಂದಿದೆ.

ಜನವೋ ಜನ:

ದಸರಾ ನಂತರ ಪ್ರವಾಸಿಗರ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತದೆ. ಅನೇಕ ಜಿಲ್ಲೆಗಳಲ್ಲಿ ದಸರೆ ರಜೆ ಇರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ರಜೆ ಅವಕಾಶ ಸದುಪಯೋಗಪಡಿಸಿಕೊಂಡು ಕುಟುಂಬ ಸಮೇತರಾಗಿ ಪ್ರವಾಸಕ್ಕೆ ಆಗಮಿಸಿದವರ ಸಂಖ್ಯೆ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ನಗರದ ಅನೇಕ ರಸ್ತೆಗಳ ಸಂಚಾರವನ್ನು ಏಕಮುಖಗೊಳಿಸಲಾಗಿದೆ. ಮೃಗಾಲದ ಮುಂದಿನ ರಸ್ತೆ, ಅರಮನೆ ಸುತ್ತಮುತ್ತಲಿನ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಯಲ್ಲಿದೆ. ಇದರ ಜೊತೆಗೆ ವಿದ್ಯುತ್‌ ದೀಪಾಲಂಕಾರದ ವ್ಯವಸ್ಥೆ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದವರೆಗೂ ಇರುತ್ತದೆ.

-ಮಹೇಂದ್ರ ದೇವನೂರು

click me!