ಮೈಸೂರು(ಏ.10): ಮೈಸೂರು ವಿವಿ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಪ್ರೊ.ಪಿ.ವಿ. ನಂಜರಾಜ ಅರಸ್ ಅವರ ಟೀಪೂ ಮಾನ್ಯತೆ ಸಿಗದ ಸುಲ್ತಾನ್ ಅಂದು ಇಂದು ಎಂಬ ಕೃತಿಯನ್ನು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬಿಡುಗಡೆಗೊಳಿಸಿದರು. ನ್ಯಾ. ಎಚ್.ಎಸ್. ನಾಗಮೋಹನ್ ದಾಸ್, ಪ್ರೊ. ಮಹೇಶಚಂದ್ರ ಗುರು, ಬಿ.ಕೆ. ಶಿವರಾಂ, ಡಾ. ಶಿವಕುಮಾರ್, ಸೋಸಲೆ ಸಿದ್ದರಾಜು, ಅಭಿರುಚಿ ಗಣೇಶ್ ಇದ್ದರು.
ಟಿಪ್ಪು ಈ ನಾಡಿನ ಮಣ್ಣಿನ ಮಗ. ಇಲ್ಲಾಂಥ ಹೇಳಲು ಸಾಧ್ಯವೇ? ಚರಿತ್ರೆ ಸುಳ್ಳಾಗಿಸಲು ಸಾಧ್ಯವೇ? ಟಿಪ್ಪು ಜಗತ್ತಿನ ಚಕ್ರವರ್ತಿ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಗುಣಗಾನ ಮಾಡಿದರು. ಅಭಿರುಚಿ ಪ್ರಕಾಶನ ಮತ್ತು ಭಾರತೀಯ ವಿದ್ಯಾರ್ಥಿ ಸಂಘವು ಮೈಸೂರು ವಿವಿ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರೊ.ಪಿ.ವಿ. ನಂಜರಾಜ ಅರಸ್ ಅವರ ಟಿಪ್ಪು ಮಾನ್ಯತೆ ಸಿಗದ ಸುಲ್ತಾನ್ ಅಂದು: ಇಂದು ಎಂಬ ಕೃತಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ಬಿಜೆಪಿಗೆ ಬಂದು ವಿಶ್ವನಾಥ್ ಅನಾಥರಾದ್ರಾ? ಸಚಿವರೊಬ್ಬರ ಪ್ರತಿಕ್ರಿಯೆ ಹೀಗಿದೆ ನೋಡಿ..!
ನಂಜರಾಜ ಅರಸ್ ಅವರು ಟಿಪ್ಪು ಮಾನ್ಯತೆ ಸಿಗದ ಎಂದಿದ್ದಾರೆ. ಆದರೆ, ಟಿಪ್ಪು ಜಗತ್ತಿನ ಮಾನ್ಯತೆಗೆ ಒಳಗಾದ ಚಕ್ರವರ್ತಿ. ಸೂರ್ಯನ ಪ್ರಕಾಶಕ್ಕೆ ಪರದೆ ಎಳೆಯಲು ಸಾಧ್ಯವೇ? ಆಗಲ್ಲ. ಕಾಮಲೆ, ಮತಾಂಧ ಪೊರೆ ಕಳಚಿ ಟಿಪ್ಪು ಸುಲ್ತಾನ್ ಅನ್ನು ಶುದ್ಧ ಶ್ವೇತ ಕಣ್ಣುಗಳಿಂದ ನೋಡಬೇಕಿದೆ. 250 ವರ್ಷಗಳ ಹಿಂದೆ ಕೊಡಗಿನಲ್ಲಿ 80 ಸಾವಿರ ಜನರನ್ನು ಟಿಪ್ಪು ಕೊಲೆ ಮಾಡಿದ್ದಾನೆ ಎನ್ನುತ್ತಾರೆ. ಆಗ ಅಷ್ಟುಜನರಿದ್ದರೇ? ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಟಿಪ್ಪು ಸುಲ್ತಾನ್ ಯಾರಿಗೂ ತಲೆಬಾಗಲಿಲ್ಲ, ಮಂಡಿಯೂರಲಿಲ್ಲ. ಪಠ್ಯದಿಂದ ಟಿಪ್ಪು ಚರಿತ್ರೆ ತೆಗೆದ ಮಾತ್ರಕ್ಕೆ ಭಾರತೀಯ ಹೃದಯ ಸಾಮ್ರಾಜ್ಯದಲ್ಲಿರುವ ಟಿಪ್ಪು ಮರೆಯಾಗುವನೇ? ಟಿಪ್ಪು ಮುಸ್ಲಿಂನಾಗಿ ಹುಟ್ಟಿದ, ರಾಷ್ಟ್ರೀಯನಾಗಿ ಬದುಕಿ, ಭಾರತಕ್ಕೆ ಗೌರವ ತಂದುಕೊಟ್ಟ. ಇದನ್ನು ಸುಳ್ಳು ಅನ್ನಲಾಗದು ಎಂದರು.
ರಾಜ್ಯದಲ್ಲಿ ಮೂರು ಪಕ್ಷಗಳು ಮತವನ್ನು ಮುಂದಿಟ್ಟುಕೊಂಡು ಮಾತಾಡುತ್ತಿವೆ. ಇದು ಸಲ್ಲದು. ರಾಜಕಾರಣಿಗಳು ಮಾತು, ಚರ್ಚೆ, ವಿವಾದ, ವಾಗ್ವಾದದಲ್ಲಿ ಜನಹಿತ ಇರಬೇಕು. ಧರ್ಮಧಿಕಾರಿಗಳ ಮೌನವೂ ಅಪಾಯಕಾರಿ. ಶಾಂತಿ ಸ್ಥಾಪನೆಗೆ ಪರಸ್ಪರ ಮಾನವ ಸಂಬಂಧ ಗಟ್ಟಿಗೊಳಿಸಲು ಸಲಹೆ ಕೊಡಬೇಕು ಎಂದು ಅವರು ತಿಳಿಸಿದರು.
ಬದುಕಿನ ವಿಚಾರಗಳನ್ನು ಮುನ್ನಲೆಗೆ ತರಬೇಕು:
ಟಿಪ್ಪು ಐತಿಹಾಸಿಕ ವಿಜಯದ ವರ್ಣಚಿತ್ರ 6 ಕೋಟಿಗೆ ಹರಾಜು
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಹೈಕೋರ್ಟ್ (High Court) ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ನಾಗಮೋಹನ್‌ದಾಸ್ (Nagamohandas) ಮಾತನಾಡಿ, ಭಾವನಾತ್ಮಕ ವಿಚಾರಗಳು ಬದಿಗೆ ಸರಿಸಿ ಬದುಕಿನ ವಿಚಾರಗಳನ್ನು ಮುನ್ನಲೆಗೆ ತರಬೇಕಾಗಿದೆ. ಭಾವನತ್ಮಕ ಸಂಗತಿಗಳಾದ ಭಗವದ್ಗೀತೆ ರಾಷ್ಟ್ರೀಯ ಗ್ರಂಥ, ಘರ್ ವಾಪಸ್ಸಿ, ದನದ ಮಾಂಸ, ಲವ್ ಜಿಹಾದ್, ಹಲಾಲ್, ಅಜಾನ್ ಹೀಗೆ 15 ದಿನದಲ್ಲಿ ಮತ್ತೊಂದು ಮುನ್ನಲೆಗೆ ಬರಲಿದೆ. ಆದರೆ, ಬದುಕಿಗೆ ಬೇಕಾಗಿರುವ ಅನ್ನ, ಅಕ್ಷರ, ಆರೋಗ್ಯ, ಉದ್ಯೋಗ ಸಂಗತಿಗಳ ಬಗ್ಗೆ ಯಾರು ಮಾತಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುತ್ತ ದೇಶ ಭಾವೈಕ್ಯತೆ ಕಳೆದುಕೊಂಡರೆ ಭಾರತ ನುಚ್ಚುನೂರಾಗುತ್ತೆ. ಚುನಾವಣೆಯಲ್ಲಿ ಜಾತಿ, ಧರ್ಮ, ಹಣದ ಪ್ರಭಾವ ವ್ಯಾಪಕವಾಗುತ್ತಿದೆ. ಭ್ರಷ್ಟಾಚಾರ, ಅಪರಾಧಿಗಳು ರಾಜಕೀಯಕ್ಕೆ ಬರುತ್ತಿದ್ದಾರೆ. ರಾಜಕಾರಣಕ್ಕೆ ಧರ್ಮವನ್ನು ಬೆರೆಸುವುದನ್ನು ವಿರೋಧಿಸಬೇಕಿದೆ ಎಂದು ಅವರು ಹೇಳಿದರು.
ಟಿಪ್ಪುವಿನ ಮಿಥ್‌ಗಳನ್ನು ಸಾಕ್ಷ್ಯ ಆಧಾರಗಳ ಮೇಲೆ ಧೂಳೀಪಟ ಮಾಡಿದ್ದಾರೆ. ನಂಜರಾಜ ಅರಸರು ಸುಳ್ಳುಗಳನ್ನು ಹೊಡೆದು ಹೊಸ ಬೆಳಕು ಚೆಲ್ಲಿದ್ದಾರೆ. ಇಂದು ಸಮಾಜ ಕತ್ತಲೆಯಲ್ಲಿದೆ. ಸಾಹಿತಿಗಳು, ಚಿಂತಕರು ಬೆಳಕು ಚೆಲ್ಲಬೇಕು.
ಕೃತಿಯ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಪಿ. ಮಹೇಶಚಂದ್ರ ಗುರು (Dr B.P. Maheshchandra Guru) ಮಾತನಾಡಿದರು. ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ (B.K. Shivaram) , ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ. ಶಿವಕುಮಾರ್ (Dr. Shivakumar) , ಲೇಖಕ ಪ್ರೊ. ನಂಜರಾಜ ಅರಸ್ (Nanjaraja Urs,), ಭಾರತೀಯ ಪರಿವರ್ತನ ಸಂಘ ಜಿಲ್ಲಾ ಸಂಚಾಲಕ ಸೋಸಲೆ ಸಿದ್ದರಾಜು (Sosale Siddaraju), ಪ್ರಕಾಶಕ ಅಭಿರುಚಿ ಗಣೇಶ್ (Abiruchi Ganesh) ಇದ್ದರು.