ಮೈಸೂರು: 100 ವರ್ಷ ಹಳೆಯ ಶಾಲೆ ರಾತ್ರೋರಾತ್ರಿ ಹಸ್ತಾಂತರ..?

By Kannadaprabha NewsFirst Published Oct 13, 2019, 10:13 AM IST
Highlights

ಸುಮಾರು 100 ವರ್ಷಗಳ ಇತಿಹಾಸ ಹೊಂದಿರುವ ಎನ್‌ಟಿಎಂಎಸ್‌ ಶಾಲೆಯನ್ನು ಶ್ರೀರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ನೀಡಿದ ಮೌಖಿಕ ಆದೇಶ ಅನುಸಾರ ಪೀಠೋಪಕರಣವನ್ನು ಬೇರೊಂದು ಶಾಲೆಗೆ ಸಾಗಿಸಲು ಸ್ವತಃ ಡಿಡಿಪಿಐ ಡಾ. ಪಾಂಡುರಂಗ ಮುಂದಾಗಿದ್ದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ.

ಮೈಸೂರು(ಅ.13): ಸುಮಾರು 100 ವರ್ಷಗಳ ಇತಿಹಾಸ ಹೊಂದಿರುವ ಎನ್‌ಟಿಎಂಎಸ್‌ ಶಾಲೆಯನ್ನು ಶ್ರೀರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸುವ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ರಾಜ್ಯ ಸರ್ಕಾರವು ರಾತ್ರೋರಾತ್ರಿ ನೀಡಿದ ಮೌಖಿಕ ಆದೇಶಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಕಳೆದ ಆರು ವರ್ಷಗಳಿಂದ ವಿವಾದಕ್ಕೆ ಗುರಿಯಾಗಿರುವ ಎನ್‌ಟಿಎಂಎಸ್‌ ಶಾಲಾ ಆಸ್ತಿ ವಿಚಾರಕ್ಕೆ ಇದೀಗ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಜೀವ ನೀಡಿದೆ. ಶ್ರೀರಾಮಕೃಷ್ಣ ಆಶ್ರಮದಿಂದ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಗೆ ಅನುಸಾರವಾಗಿ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ನೀಡಿದ ಹಿಂಬರಹ ಮತ್ತು ಮೌಖಿಕ ಆದೇಶ ಅನುಸಾರ ಶಾಲೆಯ ಪೀಠೋಪಕರಣವನ್ನು ಬೇರೊಂದು ಶಾಲೆಗೆ ಸಾಗಿಸಲು ಸ್ವತಃ ಡಿಡಿಪಿಐ ಡಾ. ಪಾಂಡುರಂಗ ಮುಂದಾಗಿದ್ದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ.

ನೀರು, ಸೋಲಾರ್, ಫ್ಯಾನ್ ಏನೂ ಇಲ್ಲ, ಮೈಸೂರು ವಿವಿ ಹಾಸ್ಟೆಲ್ ಗೋಳು ಕೇಳೋರಿಲ್ಲ..!

ಬೆಳಗ್ಗೆಯೇ ಶಾಲೆಗೆ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಿ, ಶಾಲೆಯ ಗೋಡೆ ಒಡೆದು ಪೀಠೋಪಕರಣ ಸಾಗಿಸಲು ಶಿಕ್ಷಣ ಇಲಾಖೆ ಮುಂದಾಗಿತ್ತು. ಈ ವಿಷಯ ತಿಳಿದ ಕನ್ನಡಪರ ಸಂಘಟನೆಗಳು ಶಾಲಾ ಮುಂಭಾಗ ಮೊಕ್ಕಾಂ ಹೂಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ಅಲ್ಲದೇ, ಎನ್‌ಟಿಎಂಎಸ್‌ ಶಾಲಾ ಹೋರಾಟ ಸಮಿತಿ, ಕರ್ನಾಟಕ ಕಾವಲುಪಡೆ, ಕರ್ನಾಟಕ ಸಮಗ್ರ ರಕ್ಷಣಾ ವೇದಿಕೆ, ಮೈಸೂರು ಕನ್ನಡ ವೇದಿಕೆ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಕಾಯಕ ಸಮಾಜಗಳ ಒಕ್ಕೂಟ ಹಾಗೂ ಮತ್ತಿತರ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿವೆ.

ದೇಮ, ಸಾರಾ ಭೇಟಿ:

ಸರ್ಕಾರದ ಆದೇಶದ ಪ್ರತಿ ಇಲ್ಲದೆ ಶಾಲಾ ಹಸ್ತಾಂತರಕ್ಕೆ ಸ್ವತಃ ಡಿಡಿಪಿಐ ಅವರೇ ಮುಂದಾದ ವಿಷಯ ತಿಳಿದ ಹಿರಿಯ ಸಾಹಿತಿ ದೇವನೂರ ಮಹಾದೇವ, ಮಾಜಿ ಸಚಿವ ಸಾ.ರಾ. ಮಹೇಶ್‌ ಸ್ಥಳಕ್ಕೆ ಭೇಟಿ ನೀಡಿ ಡಿಡಿಪಿಐ ವಿರುದ್ಧ ಹರಿಹಾಯ್ದರು. ಅಲ್ಲದೇ, ಸರ್ಕಾರದ ಆದೇಶ ತೋರಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು. ಜತೆಗೆ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಎನ್‌ಟಿಎಂಎಸ್‌ ಶಾಲಾ ವಿಚಾರಕ್ಕೆ ಬಾರದಂತೆಯೂ ಎಚ್ಚರಿಕೆ ನೀಡಿದರು. ಅಲ್ಲದೇ, ಶಾಲೆಯೊಳಗೆ ತುಂಬಿಕೊಂಡಿದ್ದ 30ಕ್ಕೂ ಹೆಚ್ಚು ಕೂಲಿ ಕಾರ್ಮಿಕರನ್ನು ಹೊರ ಕಳುಹಿಸುವಲ್ಲಿ ಸಾ.ರಾ.ಮಹೇಶ್‌ ಯಶಸ್ವಿಯಾದರು.

ತೆರಿಗೆ ರಹಿತ ಹಾಲು ಆಮದಿಗೆ ಮೈಮುಲ್‌ ವಿರೋಧ

ಇತಿಹಾಸಜ್ಞ ಪ್ರೊ.ಪಿ.ವಿ. ನಂಜರಾಜ ಅರಸು, ಮಾಜಿ ಶಾಸಕ ಕೆ.ಸಿ. ಪುಟ್ಟಸಿದ್ದಶೆಟ್ಟಿ, ಎನ್‌ಟಿಎಂಎಸ್‌ ಶಾಲಾ ಹೋರಾಟ ಸಮಿತಿಯ ಸ.ರ. ಸುದರ್ಶನ, ಸ್ವರಾಜ್‌ ಇಂಡಿಯಾದ ಬಿ. ಕರುಣಾಕರ್‌, ಆಂದೋಲನ ಸಂಪಾದಕ ರವಿಕೋಟಿ, ದಲಿತ ಸಂಘರ್ಷ ಸಮಿತಿಯ ಶಂಭುಲಿಂಗಸ್ವಾಮಿ, ಕರ್ನಾಟಕ ಕಾವಲು ಪಡೆಯ ರಾಜ್ಯಾಧ್ಯಕ್ಷ ಎಂ.ಮೋಹನ್‌ಕುಮಾರ್‌ ಗೌಡ, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ತೇಜೇಸ್‌ ಲೋಕೇಶ್‌ಗೌಡ, ಅರವಿಂದ ಶರ್ಮಾ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌. ಶಿವರಾಮು, ಮೈಸೂರು ರಕ್ಷಣಾ ವೇದಿಕೆಯ ಎಸ್‌.ಬಾಲಕೃಷ್ಣ, ಸಾಹಿತಿ ಬನ್ನೂರು ಕೆ.ರಾಜು ಮತ್ತಿತರರು ಹಾಜರಿದ್ದರು.

ಮುಚ್ಚಿಸಲು ಬಿಡುತ್ತಿರಲಿಲ್ಲ: ದೇಮ

ಶ್ರೀರಾಮಕೃಷ್ಣ ಆಶ್ರಮದವರು ವಿವೇಕಾನಂದರ ಆದರ್ಶಗಳನ್ನೇ ತಿಳಿದಿಲ್ಲ. ಬಹುಷಃ ವಿವೇಕಾನಂದರು ಬದುಕ್ಕಿದ್ದರೆ ಶಾಲೆ ಮುಚ್ಚಿಸಿ ಮಕ್ಕಳ ಶಿಕ್ಷಣ ಕಸಿದುಕೊಂಡು ಸ್ಮಾರಕ ನಿರ್ಮಿಸಲು ಬಿಡುತ್ತಿರಲಿಲ್ಲ. 100 ವರ್ಷಗಳಷ್ಟುಇತಿಹಾಸವಿರುವ ಕನ್ನಡ ಶಾಲೆ ಮುಚ್ಚಿಸುತ್ತಿರುವುದು ವಿವೇಕಾನಂದರ, ರಾಮಕೃಷ್ಣ ಪರಮಹಂಸರ ಆದರ್ಶಕ್ಕೆ ವಿರುದ್ಧವಾದದ್ದು. ವಿವೇಕಾನಂದರಿಗೆ ಅಂತಃಕರಣವಿತ್ತು, ಅದು ಆಶ್ರಮದವರಿಗೆ ಇಲ್ಲದಂತಾಗಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ತಿಳಿಸಿದರು.

ನಾನಂತು ಸುಮ್ಮಿನಿರಲ್ಲ: ಸಾರಾ

ಎನ್‌ಟಿಎಂಎಸ್‌ ಶಾಲೆಯ ಗೋಡೆ ಒಡೆಯುವುದಾಗಲಿ ಅಥವಾ ಅಲ್ಲಿರುವ ಪೀಠೋಪಕರಣ ಹೊತ್ತೊಯ್ಯುವುದಾಗಲಿ ಮಾಡಬಾರದು. ಶಾಲೆಗೆ ಸಣ್ಣ ಡ್ಯಾಮೇಜ್‌ ಆದರೂ ನಾನಂತು ಸುಮ್ಮನಿರುವುದಿಲ್ಲ. ಸರ್ಕಾರದ ಆದೇಶವಿಲ್ಲದೆ ಕನ್ನಡ ಶಾಲೆ ಖಾಲಿ ಮಾಡಿಸಲು ಮುಂದಾಗಬಾರದು. ಡಿಸಿ, ಎಸಿ, ತಹಸೀಲ್ದಾರ್‌ ಉಪಸ್ಥಿತಿಯಿಲ್ಲದೆ ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ಹೇಗೆ ಹಸ್ತಾಂತರ ಮಾಡುತ್ತೀರಿ? ಅದಕ್ಕೂ ಕೆಲವು ಲೆಕ್ಕಾಚಾರಗಳಿವೆ. ಅದರಂತೆ ನಡೆದುಕೊಳ್ಳಬೇಕು. ಸರ್ಕಾರದ ನಿರ್ಧಾರಕ್ಕೆ ಡಿಡಿಪಿಐ ಡಾ.ಪಾಂಡುರಂಗ ಅವರು ಬಲಿಪಶು ಆಗಬಾರದು ಎಂದು ಮಾಜಿ ಸಚಿವ ಸಾ.ರಾ. ಮಹೇಶ್‌ ಸಲಹೆ ನೀಡಿದರು.

ಎಸ್‌ಡಿಎಂಸಿಯಿಂದ ಹಲವು ನಿರ್ಣಯ

ಎನ್‌ಟಿಎಂಎಸ್‌ ಶಾಲೆ ಹಸ್ತಾಂತರಕ್ಕೆ ಮುಂದಾಗುತ್ತಿರುವ ವಿಷಯ ತಿಳಿದ ಎಸ್‌ಡಿಎಂಸಿಯು ತುರ್ತು ಸಭೆ ನಡೆಸಿ ಹಲವು ನಿರ್ಣಯ ಕೈಗೊಂಡಿದೆ. ನಮ್ಮ ಶಾಲೆಯನ್ನು ಯಾವುದೇ ಕಾರಣಕ್ಕೂ ಹಸ್ತಾಂತರಿಸಬಾರದು. ಇಲ್ಲಿನ ಮಕ್ಕಳನ್ನು ಬೇರೊಂದು ಶಾಲೆಗೆ ವರ್ಗಾಯಿಸಬಾರದು. ಇಲ್ಲಿನ 48 ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲು ಸದರಿ ಶಾಲೆಯಲ್ಲಿಯೇ ಶಿಕ್ಷಣ ಮುಂದುವರೆಸುವುದು. ಅ.13 ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಗುವುದೆಂದು ಎಸ್‌ಡಿಎಂಸಿ ಅಧ್ಯಕ್ಷ ಮಲ್ಲೇಶ್‌, ಮುಖ್ಯೋಪಾಧ್ಯಾಯ ಆರ್‌.ಕೆ.ಶ್ರೀನಿವಾಸ ನಿರ್ಣಯ ಕೈಗೊಂಡರು.

ಹುಣಸೂರು ಉಪ ಚುನಾವಣೆ : ಜೆಡಿಎಸ್ ಅಭ್ಯರ್ಥಿ ಫಿಕ್ಸ್

click me!