
ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ 8 ಕೋಟಿ ಸಕ್ರಿಯ ಚಂದಾದಾರರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಪಿಎಫ್ ಕಡಿತದ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಇದರಿಂದ ನೌಕರರ ಕೈಗೆ ಸಿಗುವ ಮಾಸಿಕ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ.
EPFO ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯ ಪ್ರಕಾರ, ಪ್ರತಿ ತಿಂಗಳು 1,800 ರೂಪಾಯಿಗಿಂತ ಹೆಚ್ಚಿನ ಪಿಎಫ್ ದೇಣಿಗೆಯನ್ನು ಕಡಿತಗೊಳಿಸುವುದು ಈಗ ಸಂಪೂರ್ಣವಾಗಿ ಉದ್ಯೋಗಿಯ ಇಚ್ಛೆಗೆ ಅಥವಾ 'ಸ್ವಯಂಪ್ರೇರಿತ' (Voluntary) ಆಯ್ಕೆಗೆ ಬಿಟ್ಟ ವಿಷಯವಾಗಿದೆ. ಅಂದರೆ, ನಿಮ್ಮ ಒಪ್ಪಿಗೆಯಿಲ್ಲದೆ ಕಂಪನಿಗಳು ನಿಮ್ಮ ಸಂಬಳದಿಂದ ಹೆಚ್ಚಿನ ಪಿಎಫ್ ಹಣವನ್ನು ಕಡಿತಗೊಳಿಸುವಂತಿಲ್ಲ.
ಈ ನಿಯಮವು ಮುಖ್ಯವಾಗಿ 15,000 ರೂಪಾಯಿಗಿಂತ ಹೆಚ್ಚಿನ ಮೂಲ ವೇತನ (Basic Salary) ಹೊಂದಿರುವ ನೌಕರರಿಗೆ ಅನ್ವಯಿಸುತ್ತದೆ.ಸರ್ಕಾರದ ನಿಯಮದಂತೆ 15,000 ರೂಪಾಯಿ ಕನಿಷ್ಠ ವೇತನ ಮಿತಿಯ ಮೇಲೆ ಶೇ. 12 ರಷ್ಟು ಅಂದರೆ 1,800 ರೂಪಾಯಿ ಕಡಿತ ಮಾಡುವುದು ಕಡ್ಡಾಯ. ಆದರೆ, ನಿಮ್ಮ ಸಂಬಳ ಇದಕ್ಕಿಂತ ಎಷ್ಟೇ ಹೆಚ್ಚಿದ್ದರೂ, ಕಡ್ಡಾಯವಾಗಿ ಕಡಿತವಾಗುವ ಮೊತ್ತ 1,800 ರೂ. ಮಾತ್ರ. ಉಳಿದ ಮೊತ್ತವನ್ನು ಪಿಎಫ್‌ಗೆ ಕಡಿತ ಮಾಡಬೇಕೇ ಅಥವಾ ಸಂಬಳದ ರೂಪದಲ್ಲಿ ಪಡೆಯಬೇಕೇ ಎಂಬ ಆಯ್ಕೆ ಈಗ ನೌಕರರ ಕೈಯಲ್ಲಿದೆ.
ಒಬ್ಬ ನೌಕರನ ಮೂಲ ವೇತನ 50,000 ರೂಪಾಯಿ ಅಂದುಕೊಂಡರೆ, ಹಳೆಯ ನಿಯಮದ ಪ್ರಕಾರ ಆತನ ಸಂಬಳದಿಂದ ಶೇ. 12 ರಷ್ಟು ಅಂದರೆ 6,000 ರೂಪಾಯಿ ಪಿಎಫ್ ಕಡಿತವಾಗುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ ಕಡ್ಡಾಯವಾಗಿ ಕೇವಲ 1,800 ರೂಪಾಯಿ ಮಾತ್ರ ಕಡಿತವಾಗಲಿದೆ. ಉಳಿದ 4,200 ರೂಪಾಯಿಯನ್ನು ನೌಕರನು ಪಿಎಫ್‌ಗೆ ನೀಡುವ ಬದಲಾಗಿ ತನ್ನ 'ಟೇಕ್ ಹೋಮ್ ಸ್ಯಾಲರಿ'ಯಾಗಿ ಪಡೆಯಬಹುದು.
ಒಂದು ವೇಳೆ ನೀವು ಹೆಚ್ಚಿನ ಪಿಎಫ್ ಕಡಿತವನ್ನು ನಿಲ್ಲಿಸಿದರೆ ನಿಮ್ಮ ಮಾಸಿಕ ಸಂಬಳ ಹೆಚ್ಚಾಗಬಹುದು. ಆದರೆ ನಿವೃತ್ತಿಯ ಸಮಯದಲ್ಲಿ ಸಿಗುವ ಒಟ್ಟು ಪಿಎಫ್ ಮೊತ್ತ ಮತ್ತು ಬಡ್ಡಿಯ ಪ್ರಮಾಣ ಕಡಿಮೆಯಾಗಲಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ, 2026ರ ಅಡಿಯಲ್ಲಿ ಈ ಹೊಸ ಬದಲಾವಣೆಗಳನ್ನು ತರಲಾಗಿದೆ. ಹೆಚ್ಚಿನ ಸಂಬಳ ಪಡೆಯುವ ವರ್ಗಕ್ಕೆ ಇದು ದೊಡ್ಡ ಮಟ್ಟದ ಆರ್ಥಿಕ ಸ್ವಾತಂತ್ರ್ಯ ನೀಡಲಿದೆ.