
ಸಾಮಾನ್ಯವಾಗಿ ನಿವೃತ್ತಿ (Retirement) ಜೀವನದ ಬಗ್ಗೆ ಯೋಚಿಸುವಾಗ ಪ್ರಶ್ನೆ ಏನೆಂದರೆ ನಿವೃತ್ತಿ ನಂತರ ಎಷ್ಟು ಹಣ ಬೇಕಾಗಬಹುದು?. ಒಬ್ಬರು 1 ಕೋಟಿ ರೂಪಾಯಿ ಇದ್ದರೆ ಸಾಕು ಎನ್ನಬಹುದು. ಇನ್ನು ಕೆಲವರು ಕನಿಷ್ಠ 2 ಕೋಟಿ ರೂಪಾಯಿ ಬೇಕು ಎನ್ನಬಹುದು. ವಾಸ್ತವದಲ್ಲಿ ಎಲ್ಲರಿಗೂ ಒಂದೇ ರೀತಿಯ ನಿವೃತ್ತಿ ನಿಧಿ (Retirement Corpus) ಸಾಕಾಗುವುದಿಲ್ಲ. ಸ್ವಂತ ಮನೆ ಹೊಂದಿದ್ದು, ಕಡಿಮೆ ಖರ್ಚು ಇರುವವರಿಗೆ 1 ಕೋಟಿ ರೂಪಾಯಿ ಸಾಕಾಗಬಹುದು. ಅದೇ ಸಮಯದಲ್ಲಿ ಬಾಡಿಗೆ ಮನೆಯಲ್ಲಿದ್ದು, ವೈದ್ಯಕೀಯ ವೆಚ್ಚಗಳು ಹಾಗೂ ಕುಟುಂಬದ ಜವಾಬ್ದಾರಿ ಹೊಂದಿರುವವರಿಗೆ 2 ಕೋಟಿ ರೂಪಾಯಿ ಕೂಡ ಸಾಲದೇ ಬರಬಹುದು. ಹಾಗಾಗಿ ನಿವೃತ್ತಿ ನಿಧಿಯನ್ನು ಹೇಗೆ ಯೋಜಿಸಬೇಕು? ಇದನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಇಲ್ಲಿದೆ ಕೆಲವು ಪ್ರಮುಖ ಹಂತಗಳು.
ಇಂದು ಸಿಗುವ ವಸ್ತುಗಳ ಬೆಲೆ ಮುಂದಿನ ಹತ್ತು ಅಥವಾ ಇಪ್ಪತ್ತು ವರ್ಷಗಳ ನಂತರ ಅಷ್ಟೇ ಇರುವುದಿಲ್ಲ. ಭಾರತದಲ್ಲಿ ಶೇ. 4 ರಷ್ಟು ಹಣದುಬ್ಬರ ದರವನ್ನು (Tolerance band 2% ರಿಂದ 6%) ಅಂದಾಜಿಸಲಾಗಿದೆ. ಇದರರ್ಥ ಇಂದು ತಿಂಗಳಿಗೆ ₹50,000 ಖರ್ಚು ಮಾಡುತ್ತಿರುವ ವ್ಯಕ್ತಿ, ಇನ್ನು 20 ವರ್ಷಗಳ ನಂತರ ಅದೇ ರೀತಿಯ ಜೀವನ ಶೈಲಿ ಮುಂದುವರಿಸಲು ಅದಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಬೆಲೆ ಏರಿಕೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನಿವೃತ್ತಿ ನಿಧಿಯನ್ನು ಲೆಕ್ಕ ಹಾಕಬೇಕು.
ನೀವು ಯಾವ ವಯಸ್ಸಿನಲ್ಲಿ ನಿವೃತ್ತರಾಗುತ್ತೀರಿ ಎಂಬುದು ನಿವೃತ್ತಿ ನಿಧಿಯ ಗಾತ್ರ ನಿರ್ಧರಿಸುತ್ತದೆ. ನೀವು 55ನೇ ವಯಸ್ಸಿಗೆ ನಿವೃತ್ತರಾದರೆ ಮುಂದಿನ 25-30 ವರ್ಷಗಳ ಜೀವನಕ್ಕಾಗಿ ಹೆಚ್ಚಿನ ಹಣ ಬೇಕಾಗುತ್ತದೆ. ಅದೇ 65ನೇ ವಯಸ್ಸಿಗೆ ನಿವೃತ್ತರಾದರೆ ಬೇಕಾಗುವ ಹಣದ ಪ್ರಮಾಣ ಸ್ವಲ್ಪ ಕಡಿಮೆಯಾಗಬಹುದು. ವಯಸ್ಸಾದಂತೆ ವೈದ್ಯಕೀಯ ವೆಚ್ಚಗಳು ಹೆಚ್ಚಾಗುವುದರಿಂದ ಕೇವಲ 75 ಅಥವಾ 80 ವರ್ಷಕ್ಕೆ ಮಾತ್ರ ಯೋಜನೆ ರೂಪಿಸದೆ, ಅದಕ್ಕಿಂತ ಹೆಚ್ಚು ವರ್ಷಗಳ ಅಗತ್ಯಕ್ಕೆ ತಕ್ಕಂತೆ ಹಣ ಉಳಿಸುವುದು ಸೂಕ್ತ.
ನಿವೃತ್ತಿಯ ನಂತರವೂ ನಿಮಗೆ ಪೆನ್ಷನ್, ಇಪಿಎಫ್ (EPF), ಮನೆಯ ಬಾಡಿಗೆ ಅಥವಾ ಇನ್ಯಾವುದೇ ಮಾಸಿಕ ಆದಾಯ ಬರುತ್ತಿದ್ದರೆ ನಿಮ್ಮ ನಿವೃತ್ತಿ ನಿಧಿಯ ಮೇಲಿನ ಹೊರೆ ಕಡಿಮೆಯಾಗುತ್ತದೆ. ಬಾಡಿಗೆ ಮನೆಗಳು ಯಾವಾಗಲೂ ಬಾಡಿಗೆಗೆ ಇರುತ್ತವೆ ಅಥವಾ ಬ್ಯಾಂಕ್ ಬಡ್ಡಿ ದರಗಳು ಯಾವಾಗಲೂ ಒಂದೇ ಸಮನಾಗಿರುತ್ತವೆ ಎಂದು ನಂಬಲು ಸಾಧ್ಯವಿಲ್ಲ. ಆದ್ದರಿಂದ ಇವುಗಳ ಮೇಲಿನ ಅವಲಂಬನೆಯಲ್ಲಿ ಜಾಗರೂಕತೆ ಇರಲಿ.
ಕೇವಲ ಹಣ ಉಳಿಸುವುದು ಮುಖ್ಯವಲ್ಲ, ಅದನ್ನು ಎಲ್ಲಿ ಹೂಡಿಕೆ ಮಾಡುತ್ತೀರಿ ಎಂಬುದು ಮುಖ್ಯ. ಎಲ್ಲಾ ಹಣವನ್ನು ಬ್ಯಾಂಕ್ ಉಳಿತಾಯ ಖಾತೆಯಲ್ಲೇ ಇಟ್ಟರೆ, ಹಣದುಬ್ಬರದಿಂದಾಗಿ ಹಣದ ಮೌಲ್ಯ ಕುಸಿಯುತ್ತದೆ. ಹಾಗಂತ ಎಲ್ಲಾ ಹಣವನ್ನು ಶೇರು ಮಾರುಕಟ್ಟೆಯಂತಹ ರಿಸ್ಕ್ ಇರುವ ಕಡೆ ಹೂಡಿದರೆ ಮಾರುಕಟ್ಟೆ ಕುಸಿದಾಗ ನಷ್ಟ ಅನುಭವಿಸಬೇಕಾಗಬಹುದು. ಆದ್ದರಿಂದ ಸುರಕ್ಷಿತ ಯೋಜನೆಗಳು ಮತ್ತು ಉತ್ತಮ ಆದಾಯ ನೀಡುವ ಯೋಜನೆಗಳ ನಡುವೆ ಸಮತೋಲನ ಕಾಯ್ದುಕೊಳ್ಳಿ.
ಕೇವಲ ಹಣವನ್ನು ಕೂಡಿಡುವುದು ಮುಖ್ಯವಲ್ಲ, ನಿವೃತ್ತಿಯ ನಂತರ ಆ ಹಣವನ್ನು ಹೇಗೆ ನಿಯಮಿತ ಆದಾಯವನ್ನಾಗಿ ಪರಿವರ್ತಿಸಬೇಕು ಎಂಬುದು ಮುಖ್ಯ. ಇದಕ್ಕಾಗಿ ಪಿಎಫ್‌ಆರ್‌ಡಿಎ (PFRDA) ನ್ಯಾಷನಲ್ ಪೆನ್ಷನ್ ಸಿಸ್ಟಮ್ (NPS) ಅಡಿಯಲ್ಲಿ ಹೊಸ ಹಂತ-ಹಂತದ ವಿತ್‌ಡ್ರಾ ಆಯ್ಕೆಗಳನ್ನು ಪರಿಚಯಿಸಿದೆ. ಇದು ನಿವೃತ್ತಿ ನಿಧಿಯನ್ನು ವ್ಯವಸ್ಥಿತವಾಗಿ ಬಳಸಲು ನೆರವಾಗುತ್ತದೆ.
ಬೆಲೆ ಏರಿಕೆ ಲೆಕ್ಕ ಹಿಡಿದು ನಿವೃತ್ತಿ ನಂತರ ನಿಮಗೆ ತಿಂಗಳಿಗೆ ಎಷ್ಟು ಹಣ ಬೇಕಾಗಬಹುದು ಎಂದು ಅಂದಾಜಿಸಿ. ನಿಮಗೆ ಪೆನ್ಷನ್ ಅಥವಾ ಇತರ ಮೂಲಗಳಿಂದ ಬರುವ ನಿಶ್ಚಿತ ಆದಾಯ ಖರ್ಚಿನಿಂದ ಕಳೆಯಿರಿ. ಉಳಿದ ಮೊತ್ತವನ್ನು ನಿಮ್ಮ ನಿವೃತ್ತಿ ನಿಧಿಯ ಹೂಡಿಕೆಯಿಂದ ಪಡೆದುಕೊಳ್ಳಬೇಕಾಗುತ್ತದೆ. ಆ ಮೊತ್ತವನ್ನು ತಲುಪಲು ಈಗಿನಿಂದಲೇ ಸೂಕ್ತವಾಗಿ ಹೂಡಿಕೆ ಮಾಡಲು ಆರಂಭಿಸಿ. ನಿವೃತ್ತಿ ಯೋಜನೆ ಎಂಬುದು ಕೇವಲ ಒಂದು ನಿರ್ದಿಷ್ಟ ಸಂಖ್ಯೆಯನ್ನು ತಲುಪುವುದಲ್ಲ. ಇದು ನಿಮ್ಮ ಅಗತ್ಯಗಳಿಗೆ ತಕ್ಕಂತೆ ಕಾಲಕಾಲಕ್ಕೆ ಬದಲಾಗುವ ನಿರಂತರ ಪ್ರಕ್ರಿಯೆಯಾಗಿದೆ. ಇಂದೇ ಯೋಜಿಸಿ, ನೆಮ್ಮದಿಯ ನಿವೃತ್ತಿ ಜೀವನ ನಿಮ್ಮದಾಗಿಸಿಕೊಳ್ಳಿ.