Raksha Bandhan : ಮುದ್ದು ತಂಗಿಗೆ, ಪ್ರೀತಿಯ ಅಕ್ಕನಿಗೆ SIP ಉಡುಗೊರೆ ನೀಡಬಹುದು - ರೂಲ್ಸ್ ಹೀಗಿದೆ..

Ganesh Mabla Gowda   | Kannada Prabha
Published : Aug 28, 2026, 07:03 AM IST
Raksha Bandhan

ಸಾರಾಂಶ

ಹಣಕ್ಕಿಂತ ಹೆಚ್ಚಾಗಿ ಆರ್ಥಿಕ ಸ್ವಾತಂತ್ರ್ಯವನ್ನು ಉಡುಗೊರೆಯಾಗಿ ನೀಡುವುದು ನಿಜವಾದ ಪ್ರೀತಿ. ಈ ರಕ್ಷಾಬಂಧನದಂದು ನಿಮ್ಮ ಸೋದರಿಯ ಹೆಸರಿನಲ್ಲಿ ಒಂದು ಎಸ್‌ಐಪಿ ಆರಂಭಿಸಿ ಅವರ ಕನಸುಗಳಿಗೆ ನೀರೆರೆಯಿರಿ. ಈ ಕುರಿತ ಮಾಹಿತಿ ಇಲ್ಲಿದೆ..

ಇವತ್ತು ರಕ್ಷಾಬಂಧನ! ಈ ಬಾರಿ ನಿಮ್ಮ ತಂಗಿ ಅಥವಾ ಅಕ್ಕನಿಗೆ ಬಟ್ಟೆ, ಸಿಹಿ ಅಥವಾ ಒಡವೆ ಕೊಡುವ ಬದಲು ಅವರ ಭವಿಷ್ಯಕ್ಕೆ ನೆರವಾಗುವ 'ಎಸ್‌ಐಪಿ' (SIP-Systematic Investment Plan) ಉಡುಗೊರೆ ನೀಡುವ ಪ್ಲಾನ್ ಮಾಡಬಹುದು. ಇದು ಅವರ ಆರ್ಥಿಕ ಭದ್ರತೆಗೆ ನೀವು ನೀಡುವ ಅತ್ಯುತ್ತಮ ಕೊಡುಗೆಯಾಗಬಲ್ಲದು. ಆದರೆ ಮ್ಯೂಚುಯಲ್ ಫಂಡ್‌ನಲ್ಲಿ ಹಣ ಹೂಡುವಾಗ ಕೆಲವು ನಿಯಮಗಳಿವೆ.

ನೇರವಾಗಿ ಹಣ ಪಾವತಿಸಲು ಸಾಧ್ಯವಿಲ್ಲ

ಮ್ಯೂಚುಯಲ್ ಫಂಡ್ ನಿಯಮಗಳ ಪ್ರಕಾರ.. ಯಾರ ಹೆಸರಿನಲ್ಲಿ ಹೂಡಿಕೆ (Folio) ಇರುತ್ತದೆಯೋ, ಅವರದ್ದೇ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಬೇಕು. ಅಂದರೆ, ನೀವು ನಿಮ್ಮ ಬ್ಯಾಂಕ್ ಖಾತೆಯಿಂದ ನಿಮ್ಮ ಸೋದರಿಯ ಎಸ್‌ಐಪಿ ಖಾತೆಗೆ ನೇರವಾಗಿ ಹಣ ಪಾವತಿಸಲು ಬರುವುದಿಲ್ಲ. ಇದನ್ನು 'ಥರ್ಡ್ ಪಾರ್ಟಿ ಪೇಮೆಂಟ್' ನಿರ್ಬಂಧ ಎನ್ನಲಾಗುತ್ತದೆ.

ಉಡುಗೊರೆ ನೀಡುವುದು ಹೇಗೆ?

ನಿಮ್ಮ ಸೋದರಿಗೆ ಎಸ್‌ಐಪಿ ಉಡುಗೊರೆ ನೀಡಲು ಅತ್ಯಂತ ಸುಲಭವಾದ ದಾರಿ ಇಲ್ಲಿದೆ

  • ಮೊದಲು ನೀವು ಉಡುಗೊರೆ ನೀಡಲು ಬಯಸುವ ಹಣವನ್ನು ನಿಮ್ಮ ಸೋದರಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಿ
  • ನಂತರ ಆ ಹಣವನ್ನು ಬಳಸಿ ಅವರದ್ದೇ ಬ್ಯಾಂಕ್ ಖಾತೆಯ ಮೂಲಕ ಎಸ್‌ಐಪಿ ಆರಂಭಿಸಲು ಅವರಿಗೆ ತಿಳಿಸಿ
  • ಉದಾಹರಣೆ: ನೀವು ತಿಂಗಳಿಗೆ 5,000 ರೂ. ನೀಡಲು ಬಯಸಿದರೆ ಪ್ರತಿ ತಿಂಗಳು ಅವರ ಖಾತೆಗೆ ಅಷ್ಟು ಹಣ ಹಾಕಿ ಅಥವಾ ವರ್ಷಕ್ಕೆ ಒಮ್ಮೆಯೇ 60,000 ರೂ.ಗಳನ್ನು ಅವರ ಖಾತೆಗೆ ವರ್ಗಾಯಿಸಿ ಎಸ್‌ಐಪಿ ಆರಂಭಿಸಬಹುದು.

ಸೋದರಿ ಮೈನರ್ ಆಗಿದ್ದರೆ ನಿಯಮಗಳೇನು?

ಒಂದು ವೇಳೆ ನಿಮ್ಮ ಸೋದರಿ ಇನ್ನೂ ಅಪ್ರಾಪ್ತರಾಗಿದ್ದರೆ (Minor), ಅವರ ಪರವಾಗಿ ಪೋಷಕರು ಅಥವಾ ಕಾನೂನುಬದ್ಧ ರಕ್ಷಕರು ಖಾತೆ ನಿರ್ವಹಿಸುತ್ತಾರೆ. ಇಲ್ಲಿ ಒಂದು ವಿನಾಯಿತಿ ಇದೆ. ಪೋಷಕರು ಅಥವಾ ಹತ್ತಿರದ ಸಂಬಂಧಿಗಳು ಅಪ್ರಾಪ್ತರ ಖಾತೆಗೆ ಉಡುಗೊರೆಯಾಗಿ ತಿಂಗಳಿಗೆ 50,000 ರೂ.ವರೆಗೂ ನೇರವಾಗಿ ಪಾವತಿಸಲು ಅವಕಾಶವಿದೆ.

ತೆರಿಗೆ ವಿನಾಯಿತಿ ಇದೆಯೇ?

ಭಾರತದ ಆದಾಯ ತೆರಿಗೆ ನಿಯಮದ ಪ್ರಕಾರ, ಅಣ್ಣ-ತಂಗಿ ಅಥವಾ ಅಕ್ಕ-ತಮ್ಮನ ನಡುವಿನ ಹಣದ ವರ್ಗಾವಣೆಗೆ ಯಾವುದೇ ತೆರಿಗೆ ಇರುವುದಿಲ್ಲ. ನೀವು ಎಷ್ಟು ಹಣ ನೀಡಿದರೂ ಅದಕ್ಕೆ ನಿಮ್ಮ ಸೋದರಿ ತೆರಿಗೆ ಕಟ್ಟಬೇಕಿಲ್ಲ. ಎಸ್‌ಐಪಿ ಹೂಡಿಕೆಯಿಂದ ಬರುವ ಲಾಭವನ್ನು (Capital Gains) ಅವರು ಹಿಂಪಡೆದಾಗ (Redeem), ಆ ಲಾಭದ ಮೇಲೆ ಅವರು ತೆರಿಗೆ ಪಾವತಿಸಬೇಕಾಗುತ್ತದೆ.

ಗಿಫ್ಟ್ ಡೀಡ್ (Gift Deed) ಅಗತ್ಯವೇ?

ಚಿಕ್ಕ ಮೊತ್ತದ ಹಣ ವರ್ಗಾವಣೆಗೆ ಯಾವುದೇ ದಾಖಲೆ ಬೇಕಿಲ್ಲ. ಆದರೆ, ನೀವು ದೊಡ್ಡ ಮೊತ್ತದ ಹಣವನ್ನು ಉಡುಗೊರೆಯಾಗಿ ನೀಡುತ್ತಿದ್ದರೆ ಒಂದು 'ಗಿಫ್ಟ್ ಲೆಟರ್' ಅಥವಾ 'ಗಿಫ್ಟ್ ಡೀಡ್' ಬರೆದಿಟ್ಟುಕೊಳ್ಳುವುದು ಒಳ್ಳೆಯದು. ನಾಳೆ ಆದಾಯ ತೆರಿಗೆ ಇಲಾಖೆಯವರು ಪ್ರಶ್ನೆ ಮಾಡಿದರೆ ಇದು ಉಡುಗೊರೆ ಎಂದು ತೋರಿಸಲು ಸಹಕಾರಿಯಾಗುತ್ತದೆ. ಹಣಕ್ಕಿಂತ ಹೆಚ್ಚಾಗಿ ಆರ್ಥಿಕ ಸ್ವಾತಂತ್ರ್ಯವನ್ನು ಉಡುಗೊರೆಯಾಗಿ ನೀಡುವುದು ನಿಜವಾದ ಪ್ರೀತಿ. ಈ ರಕ್ಷಾಬಂಧನದಂದು ನಿಮ್ಮ ಸೋದರಿಯ ಹೆಸರಿನಲ್ಲಿ ಒಂದು ಎಸ್‌ಐಪಿ ಆರಂಭಿಸಿ ಅವರ ಕನಸುಗಳಿಗೆ ನೀರೆರೆಯಿರಿ.

PREV
Read more Articles on
click me!

Recommended Stories

Nepal: ಭಾರತದಲ್ಲಿ ವಿಮೆ, ನೇಪಾಳದಲ್ಲಿ ಸಾವು; ಕುಟುಂಬಕ್ಕೆ ಸಿಗುತ್ತಾ ಕೋಟ್ಯಂತರ ರೂ., ಟರ್ಮ್ ಇನ್ಶೂರೆನ್ಸ್? ಇಲ್ಲಿದೆ ಸಂಪೂರ್ಣ ಲೆಕ್ಕ!
Raksha Bandhan: ಬರಿ ಉಡುಗೊರೆಯಲ್ಲ, ಇದು ಆಕೆಯ ಭದ್ರತೆಯ ಭರವಸೆ! ನಿಮ್ಮ ಸಹೋದರಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ಸ್