
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಬಳಸಿ ನಡೆಯುವ ವಂಚನೆಗಳು ಕಂಗಾಲಾಗುವಂತೆ ಮಾಡಿವೆ. ನಿಮ್ಮ ಗಮನಕ್ಕೇ ಬಾರದಂತೆ, ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ವಿವರಗಳನ್ನು ಬಳಸಿ ವಂಚಕರು ನಿಮ್ಮ ಹೆಸರಲ್ಲಿ ಲಕ್ಷಾಂತರ ರೂಪಾಯಿ ಸಾಲ ಎತ್ತಿ ಪರಾರಿಯಾಗುವ ಪ್ರಕರಣಗಳು ವರದಿಯಾಗುತ್ತಿವೆ. ಹೀಗೆ ನಿಮ್ಮ ಹೆಸರಲ್ಲಿ ಯಾರಾದರೂ ಅಕ್ರಮವಾಗಿ ಸಾಲ ಪಡೆದರೆ, ಅದರ ಅರಿವು ನಿಮಗಾಗುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ. ಸಾಲ ಮರುಪಾವತಿಗಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ನೋಟಿಸ್ ಬಂದಾಗಷ್ಟೇ ಈ ಆಘಾತಕಾರಿ ಸತ್ಯ ಹೊರಬರುತ್ತದೆ. ಆದರೆ, ಅಷ್ಟರಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಹಾಳಾಗಿ ನೀವು ಕಾನೂನಿನ ಸಂಕಷ್ಟಕ್ಕೆ ಸಿಲುಕುವ ಅಪಾಯವಿರುತ್ತದೆ.
ನಿಮ್ಮ ಹೆಸರಲ್ಲಿ ನಿಮಗೆ ಗೊತ್ತಿಲ್ಲದೆಯೇ ಯಾವುದಾದರೂ ಸಾಲವಿದೆಯೇ ಎಂದು ತಿಳಿಯಲು ಒಂದು ಸುಲಭವಾದ ಮಾರ್ಗವಿದೆ. ಇದಕ್ಕಾಗಿ ನೀವು ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ ಕ್ರೆಡಿಟ್ ವರದಿಯನ್ನು (Credit Report) ಪರಿಶೀಲಿಸಬೇಕು. ಹಲವಾರು ಹಣಕಾಸು ಸೇವಾ ವೆಬ್‌ಸೈಟ್‌ಗಳು ಈ ಸೌಲಭ್ಯವನ್ನು ಒದಗಿಸುತ್ತವೆ. ನಿಮ್ಮ ಪ್ಯಾನ್ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿದಾಗ ಆ ಪ್ಯಾನ್ ಕಾರ್ಡ್‌ಗೆ ಲಿಂಕ್ ಆಗಿರುವ ಎಲ್ಲಾ ಸಾಲಗಳ ವಿವರಗಳು ನಿಮ್ಮ ಮುಂದೆ ಬರುತ್ತವೆ. ನೀವು ಪಡೆದ ಅಧಿಕೃತ ಸಾಲಗಳ ಜೊತೆಗೆ ಒಂದು ವೇಳೆ ವಂಚಕರು ನಿಮ್ಮ ಹೆಸರಲ್ಲಿ ಬೇರೆ ಯಾವುದಾದರೂ ಸಾಲ ಪಡೆದಿದ್ದರೆ, ಆ ವಿವರವೂ ಅಲ್ಲಿ ಕಾಣಿಸುತ್ತದೆ. ಇದು ಅಕ್ಷರಶಃ ಒಂದೇ ಕ್ಲಿಕ್‌ನಲ್ಲಿ ನಿಮ್ಮ ಸಂಪೂರ್ಣ ಹಣಕಾಸಿನ ಇತಿಹಾಸವನ್ನು ತೆರೆದಿಡುತ್ತದೆ.
ಈ ರೀತಿಯ ವಂಚನೆಗಳಿಂದ ಪಾರಾಗಲು ನಿಯಮಿತವಾಗಿ ನಿಮ್ಮ ಕ್ರೆಡಿಟ್ ವರದಿಯನ್ನು ಪರಿಶೀಲಿಸುತ್ತಿರುವುದು ಉತ್ತಮ ಅಭ್ಯಾಸ. ಯಾವುದೇ ಅನುಮಾನಾಸ್ಪದ ಸಾಲದ ವಿವರ ಕಂಡುಬಂದಲ್ಲಿ ತಕ್ಷಣವೇ ಸಂಬಂಧಪಟ್ಟ ಬ್ಯಾಂಕ್ ಮತ್ತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದು ಅತ್ಯಗತ್ಯ. ನಿಮ್ಮ ವೈಯಕ್ತಿಕ ದಾಖಲೆಗಳನ್ನು ಎಲ್ಲೆಂದರಲ್ಲಿ ಹಂಚಿಕೊಳ್ಳದಿರುವುದು ಕೂಡ ಇಂತಹ ವಂಚನೆಗಳಿಂದ ದೂರವಿರಲು ಇರುವ ಮೊದಲ ಹೆಜ್ಜೆ ಎಂದರೆ ತಪ್ಪಾಗದು.