
ಬ್ರಸೆಲ್ಸ್ (ಏ.22): ಸ್ಮಾರ್ಟ್‌ಫೋನ್‌ಗಳು ಎಷ್ಟು ಕಾಲ ಬಾಳಿಕೆ ಬರಬೇಕು ಮತ್ತು ಅವುಗಳನ್ನು ಹೇಗೆ ತಯಾರಿಸಬೇಕು ಎಂಬ ಬಗ್ಗೆ ಯುರೋಪಿಯನ್ ಯೂನಿಯನ್ (EU) ಕಟ್ಟುನಿಟ್ಟಿನ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. 2025ರ ಜೂನ್‌ನಿಂದ 2027ರ ಫೆಬ್ರವರಿ ನಡುವೆ ಹಂತ ಹಂತವಾಗಿ ಜಾರಿಗೆ ಬರಲಿರುವ ಈ ನಿಯಮಗಳು, ಫೋನ್‌ಗಳ ಬಾಳಿಕೆ ಮತ್ತು ದುರಸ್ತಿ (Repairability) ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡಲಿವೆ. 2027ರಿಂದ ಮಾರುಕಟ್ಟೆಗೆ ಬರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿಯನ್ನು ಬಳಕೆದಾರರೇ ಮನೆಯಲ್ಲಿ ಸಾಮಾನ್ಯ ಪರಿಕರಗಳನ್ನು ಬಳಸಿ ಬದಲಾಯಿಸುವಂತೆ ವಿನ್ಯಾಸಗೊಳಿಸಬೇಕು. ಫೋನ್ ಲಾಂಚ್ ಆದ ನಂತರ ಕನಿಷ್ಠ 10 ವರ್ಷಗಳವರೆಗೆ ಅದರ ಬಿಡಿಭಾಗಗಳು (Spare parts) ಮಾರುಕಟ್ಟೆಯಲ್ಲಿ ಲಭ್ಯವಿರಬೇಕು.
ಬ್ಯಾಟರಿಗಳು ಕನಿಷ್ಠ 800 ಬಾರಿ ಚಾರ್ಜ್ ಮಾಡಿದ ನಂತರವೂ ಶೇ. 80ರಷ್ಟು ಸಾಮರ್ಥ್ಯವನ್ನು ಉಳಿಸಿಕೊಳ್ಳುವಂತಿರಬೇಕು. ಸ್ವತಂತ್ರ ರಿಪೇರಿ ಅಂಗಡಿಗಳಿಗೆ ಅಥವಾ ಥರ್ಡ್ ಪಾರ್ಟಿ ಸೇವೆಗಳಿಗೆ ಯಾವುದೇ ನಿರ್ಬಂಧ ಹೇರುವಂತಿಲ್ಲ. ಕಂಪನಿಗಳು ರಿಪೇರಿ ಮ್ಯಾನುಯಲ್‌ಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕು.
ಸ್ಮಾರ್ಟ್‌ಫೋನ್‌ಗಳು ಸುಲಭವಾಗಿ ತೆರೆಯುವಂತೆ ಮತ್ತು ಸರ್ವಿಸ್ ಮಾಡುವಂತೆ ಇರಬೇಕು. ಮುಖ್ಯ ಬಿಡಿಭಾಗಗಳನ್ನು ಆರ್ಡರ್ ಮಾಡಿದ 5-10 ಕೆಲಸದ ದಿನಗಳೊಳಗೆ ಪೂರೈಸಬೇಕು. ಫೋನ್‌ಗಳ ಮೇಲೆ ಬ್ಯಾಟರಿ ಲೈಫ್, ಬಾಳಿಕೆ ಮತ್ತು ರಿಪೇರಿ ಸ್ಕೋರ್ ಅನ್ನು ತೋರಿಸುವ ಲೇಬಲ್‌ಗಳನ್ನು ಹಾಕಿರಬೇಕು.
ಯಾವೆಲ್ಲಾ ಪರಿಣಾಮಗಳಾಗಬಹುದು?
ಆಪಲ್, ಸ್ಯಾಮ್‌ಸಂಗ್, ಶಿಯೋಮಿ ಅಂತಹ ಕಂಪನಿಗಳು ತಮ್ಮ ಡಿಸೈನ್ ಶೈಲಿಯನ್ನು ಬದಲಾಯಿಸಬೇಕಾಗುತ್ತದೆ. ಅಂಟು ಬಳಸಿ ಬಿಗಿಯಾಗಿ ಪ್ಯಾಕ್ ಮಾಡುವ ಡಿಸೈನ್ ಬದಲಿಗೆ, ಬಿಡಿಭಾಗಗಳನ್ನು ಸುಲಭವಾಗಿ ಬೇರ್ಪಡಿಸುವ 'ಮಾಡ್ಯುಲರ್ ಡಿಸೈನ್' ಅಳವಡಿಸಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಫೋನ್ ಚೆನ್ನಾಗಿದ್ದರೂ ಬ್ಯಾಟರಿ ಹಳೆಯದಾದಾಗ ಜನರು ಹೊಸ ಫೋನ್ ಖರೀದಿಸುತ್ತಾರೆ. ಆದರೆ ಇನ್ನು ಮುಂದೆ ಕೇವಲ ಬ್ಯಾಟರಿ ಬದಲಾಯಿಸುವ ಮೂಲಕ ಅದೇ ಫೋನ್ ಅನ್ನು 5-6 ವರ್ಷಗಳ ಕಾಲ ಬಳಸಬಹುದು. ಇದರಿಂದ ಹಣ ಉಳಿತಾಯವಾಗಲಿದೆ.
ಬ್ಯಾಟರಿ ಬದಲಾಯಿಸುವ ಸೌಲಭ್ಯ ನೀಡಲು ಹೋಗಿ ಫೋನ್‌ಗಳು ಸ್ವಲ್ಪ ದಪ್ಪವಾಗಬಹುದು ಅಥವಾ ವಾಟರ್ ರೆಸಿಸ್ಟೆನ್ಸ್ (ನೀರು ನಿರೋಧಕ) ಸಾಮರ್ಥ್ಯದಲ್ಲಿ ಸ್ವಲ್ಪ ಬದಲಾವಣೆಯಾಗಬಹುದು.
ಜಾಗತಿಕ ಮಟ್ಟದಲ್ಲಿ ಬದಲಾವಣೆ ಖಚಿತ
ಇದು ಯುರೋಪಿಯನ್ ಯೂನಿಯನ್ ನಿಯಮವಾಗಿದ್ದರೂ, ಇದರ ಪರಿಣಾಮ ಭಾರತ ಸೇರಿದಂತೆ ವಿಶ್ವದಾದ್ಯಂತ ಉಂಟಾಗಲಿದೆ. ಕಂಪನಿಗಳು ಕೇವಲ ಯುರೋಪ್‌ಗೆ ಮಾತ್ರ ಪ್ರತ್ಯೇಕ ಫೋನ್ ತಯಾರಿಸುವುದು ಲಾಭದಾಯಕವಲ್ಲದ ಕಾರಣ, ಜಾಗತಿಕವಾಗಿ ಒಂದೇ ಮಾದರಿಯ ಫೋನ್‌ಗಳನ್ನು ಬಿಡುಗಡೆ ಮಾಡುತ್ತವೆ. ಈ ಹಿಂದೆ ಯುರೋಪ್ USB-C ಪೋರ್ಟ್ ಕಡ್ಡಾಯಗೊಳಿಸಿದಾಗ ಆಪಲ್ ಕಂಪನಿ ತನ್ನ ಐಫೋನ್ 15 ಸರಣಿಯಲ್ಲಿ ಜಾಗತಿಕವಾಗಿ ಈ ಬದಲಾವಣೆ ತಂದಿದ್ದೇ ಇದಕ್ಕೆ ಸಾಕ್ಷಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.