ಸಮಾಜ ಸೇವೆ ಮಾಡುತ್ತಿರುವ ಬೆಳಗಾವಿಯ ಮಂಜುನಾಥ ಪೂಜಾರಿ ಅವರು ‘ರಾತ್ರಿಯ ಆ್ಯಂಬುಲೆನ್ಸ್ ಮನುಷ್ಯ’ ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದ್ದಾರೆ| ಬೆಳಿಗ್ಗೆ 6 ಗಂಟೆಯಿಂದ 9 ರಾತ್ರಿ 9 ಗಂಟೆವರೆಗೂ ಆಟೋ ಓಡಿಸುತ್ತಾರೆ| ಸಂಜೆ 6 ರಿಂದ 11 ಗಂಟೆವರೆಗೂ ಆಟೋ ಓಡಿಸುವ ಮಂಜುನಾಥ ಪೂಜಾರಿ ಅದರಲ್ಲಿ ಬಂದ ಹಣವನ್ನ ಚಾರಿಟಿಗೆ ಕೊಡುತ್ತಾರೆ|
ಮಂಜುನಾಥ ಗದಗಿನ
ಬೆಳಗಾವಿ[ಜ.22]: ನಮ್ಮ ಕುಂದಾನಗರಿ ಬೆಳಗಾವಿಯ ಅಶೋಕ ನಗರದ ನಿವಾಸಿ ಮಂಜುನಾಥ ಪೂಜಾರಿ ಅವರ ದಿನಚರಿ ಬೆಳಿಗ್ಗೆ 6 ಗಂಟೆಯಿಂದ ಆರಂಭ. ಅಲ್ಲಿಂದ 9 ಗಂಟೆವರೆಗೂ ಆಟೋ ಓಡಿಸುತ್ತಾರೆ. ಈ ವೇಳೆ ಬಂದ ಹಣವನ್ನು ಸಂಗ್ರಹಿಸಿ ಒಂದು ಚಾರಿಟಿಗೆ ಕೊಡುತ್ತಾರೆ. ಇದಾದ ಮೇಲೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಇದು ಇವರ ಸಂಸಾರಕ್ಕೆ. ಕೆಲಸ ಬಿಟ್ಟ ಮೇಲೆ, ಸಂಜೆ 6 ರಿಂದ 11 ಗಂಟೆವರೆಗೂ ಮತ್ತೆ ಆಟೋ ಓಡಿಸುತ್ತಾರೆ. ಈ ವೇಳೆ ಬಂದ ಹಣ ಆಟೋ ಪೆಟ್ರೋಲ್ ಹಾಗೂ ನಿರ್ವಹಣೆಗೆ ಮೀಸಲು. ಇದರೊಂದಿಗೆ ಮಧ್ಯ ರಾತ್ರಿಯಲ್ಲಿ ಯಾರೇ ಸಹಾಯಕ್ಕಾಗಿ ಕರೆ ಮಾಡಿದರೂ ತಕ್ಷಣ ಸ್ಪಂದಿಸಿ ಉಚಿತ ಸೇವೆ ನೀಡುತ್ತಾರೆ. ಇಂತಹ ಅನುಪಮ ಸಮಾಜ ಸೇವಕರಾದ ಮಂಜುನಾಥ್ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರಿದ್ದಾರೆ.
undefined
ರಾತ್ರಿ ವೇಳೆಯ ಆ್ಯಂಬುಲೆನ್ಸ್ ಮ್ಯಾನ್ ಬೆಳಗಾವಿ ನಗರದಲ್ಲಿ ಯಾರಿಗಾದರೂ ಆರೋಗ್ಯ ಕೆಟ್ಟರೆ, ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ನೋವು ಕಾಣಿಸಿಕೊಂಡರೆ, ಇನ್ಯಾವುದೇ ರೀತಿಯ ಸಮಸ್ಯೆಯಾದರೆ ತಕ್ಷಣ ಅಲ್ಲಿ ಮಂಜುನಾಥ್ ಪೂಜಾರಿ ಮತ್ತವರ ಆಟೋ ಇರುತ್ತದೆ. ಬೆಳಗಾವಿ ಮಂದಿಯ ಪಾಲಿಗೆ ಇವರು ತಕ್ಷಣದ ಆ್ಯಂಬುಲೆನ್ಸ್ ಇದ್ದ ಹಾಗೆ. ಪರರ ಕಷ್ಟಗಳಿಗೆ ಮಿಡಿಯುವ ಹೃದಯದ ಮಂಜುನಾಥ್ ಇದುವರೆಗೂ 150 ಕ್ಕೂ ಅಧಿಕ ಮಂದಿಯ ಕಷ್ಟಕ್ಕೆ ನೆರವಾಗಿದ್ದಾರೆ. ಗರ್ಭಿಣಿಯರು, ಮಕ್ಕಳು, ವೃದ್ಧರು, ಅಪಘಾತಕ್ಕೊಳಗಾದವರು ಸೇರಿದಂತೆ ಅನೇಕರನ್ನು ತಕ್ಷಣ ಹತ್ತಿರದ ಆಸ್ಪತ್ರೆಗಳಿಗೆ ಸೇರಿಸಿ ದೊಡ್ಡತನ ಮೆರೆದಿದ್ದಾರೆ.
ಸೇನೆಗೆ ಸೇರಲು ಆಗಲೇ ಇಲ್ಲ ಮಂಜುನಾಥ ಅವರದ್ದು ದೇಶ ಭಕ್ತರ ಕುಟುಂಬ. ಹೀಗಾಗಿ ಮಂಜುನಾಥ ಅವರೂ ದೇಶ ಸೇವೆ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿದ್ದರು. ಆದರೆ, ವಿಧಿ ಇವರ ಈ ಆಸೆಗೆ ತಣ್ಣೀರು ಎರಚಿದ್ದು ಅಪಘಾತದ ಮೂಲಕ. 2003 ರಲ್ಲಿ ಇವರ ವಾಹನ ಅಪಘಾತಕ್ಕೀಡಾಗುತ್ತದೆ, ಈ ವೇಳೆ ಮಂಜುನಾಥ ಕೈ-ಕಾಲುಗಳು ಮುರಿತಕ್ಕೊಳಗಾಗಿ, ಕಾಲಿಗೆ ರಾಡ್ ಹಾಕುವ ಅನಿವಾರ್ಯತೆ ಉಂಟಾಗುತ್ತದೆ. ಅಲ್ಲಿಗೆ ಸೈನ್ಯಕ್ಕೆ ಸೇರಲು ಮಂಜುನಾಥ್ ಫಿಸಿಕಲಿ ಅನ್‌ಫಿಟ್ ಆಗುತ್ತಾರೆ. ಅಲ್ಲಿಗೆ ತಮ್ಮ ಬಹುದಿನ ಬಯಕೆ ನಿರಾಶೆಯ ಕಾರ್ಮೋಡದೊಳಗೆ ಸೇರಿಬಿಡುತ್ತದೆ. ಅದೇ ವೇಳೆಗೆ ಸಣ್ಣ ಆಶಾಕಿರಣವಾಗಿ ಬಂದದ್ದು ನಾಡಿನಲ್ಲಿಯೇ ಇದ್ದುಕೊಂಡು ದೇಶ ಸೇವೆ ಮಾಡುವ ಕನಸು.
ಕೆಎಲ್‌ಇಗೆ ದೇಹ ದಾನ ಕಳೆದ ಮೂರು ವರ್ಷಗಳಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು, ಬಿಡುವಿನ ವೇಳೆಯಲ್ಲಿ ಆಟೋ ಓಡಿಸಿಕೊಂಡು ಅದರಲ್ಲಿ ಸಂಪಾದನೆಯಾದ ಒಂದು ಭಾಗವನ್ನು ಟ್ರಸ್ಟ್‌ಗೆ ನೀಡುತ್ತಾ, ಆಟೋ ನಿರ್ವಹಣೆ ಮಾಡುತ್ತಾ ಬಂದಿರುವ ಮಂಜುನಾಥ್ ಅವರ ಸೇವೆ ಇಷ್ಟಕ್ಕೇ ನಿಲ್ಲದೇ, ರಕ್ತ ದಾನ, ದೇಹದಾನ, ಎಚ್‌ಐವಿ ಕುರಿತ ಜಾಗೃತಿಯನ್ನೂ ಮಾಡುತ್ತಿದ್ದಾರೆ. ಅಲ್ಲದೇ ತಾವೇ ಮಾದರಿಯಾಗಿ ಮರಣದ ನಂತರ ತಮ್ಮ ದೇಹವನ್ನು ಬೆಳಗಾವಿಯ ಕೆಎಲ್‌ಇ ವೈದ್ಯಕೀಯ ಮಹಾವಿದ್ಯಾಲಯಕ್ಕೆ ನೀಡುವ ವಾಗ್ದಾನ ಮಾಡಿದ್ದಾರೆ. ಇವರ ಈ ನಿಸ್ವಾರ್ಥ ಸೇವೆ ಹೀಗೆ ಮುಂದುವರಿಯಲಿ, ಇತರರಿಗೆ ಮಾದರಿಯಾಗಲಿ ಎಂಬ ಆಶಯ ಎಲ್ಲರದ್ದು. ಇವರ ಒಳ್ಳೆಯ ಕಾರ್ಯಕ್ಕೆ ನಿಮ್ಮದೂ ಒಂದು ಮೆಚ್ಚುಗೆ ಇರಲಿ. ಕರೆ ಮಾಡಿ ಮಾತನಾಡಿ. ದೂ. 9964375115
ಟ್ಯಾಕ್ಸಿಯ ಮೂಲಕ ಸೇವೆ ಆರಂಭ ಸಮಾಜ ಸೇವೆ ಮಾಡಿಯಾದರೂ ನಾನು ನಾಲ್ಕು ಜನಕ್ಕೆ ಸಹಾಯವಾಗಬೇಕು ಎಂದುಕೊಂಡು ಟ್ಯಾಕ್ಸಿ ಖರೀದಿಸುತ್ತಾರೆ ಮಂಜುನಾಥ್. ಅಂದುಕೊಂಡ ಹಾಗೆ ಎಲ್ಲವೂ ಆಗುತ್ತಿರುತ್ತದೆ. ಬೆಳಿಗ್ಗೆ ಬದುಕಿಗಾಗಿ ಟ್ಯಾಕ್ಸಿ ಓಡಿಸಿ, ರಾತ್ರಿ ಸಹಾಯ ಬೇಡಿ ಕರೆ ಮಾಡುವ ಜನರಿಗೆ ಉಚಿತ ಟ್ಯಾಕ್ಸಿ ಸೇವೆ ನೀಡುತ್ತಿರುತ್ತಾರೆ. ಆದರೆ ಕೆಲವು ದಿನಗಳ ನಂತರ ಮಂಜುನಾಥ್‌ಗೆ ಬೇರೆ ಕೆಲಸ ಸಿಕ್ಕಿದ್ದರ ಫಲ ಮತ್ತು ಸಂಸಾರ ನಡೆಸುವ ಒತ್ತಡದಿಂದ ಟ್ಯಾಕ್ಸಿ ಮಾರಿ ಕೆಲಸಕ್ಕೆ ಸೇರಿಬಿಡುತ್ತಾರೆ. ಮಂಜುನಾಥ್ ಇಲ್ಲಿಗೆ ನಿಂತುಬಿಟ್ಟಿದ್ದರೆ ಅವರು ಇಂದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೂ ಸೇರುತ್ತಿರಲಿಲ್ಲ, ಬೆಳಗಾವಿ ಮಂದಿಗೆ ಬೆಳಕೂ ಆಗುತ್ತಿರಲಿಲ್ಲ, ನಾವೂ ನೀವು ಇವರ ಬಗ್ಗೆ ತಿಳಿದುಕೊಳ್ಳಬೇಕಾಗಿಯೂ ಇರಲಿಲ್ಲ. ಆದರೆ ಮಂಜುನಾಥ್ ಮತ್ತೆ ಸೇವಾ ರಂಗಕ್ಕೆ ಇಳಿದು ಬಿಡುತ್ತಾರೆ.
ನಂಬಿ ಬಂದವರಿಗೆ ಸಹಾಯ ಮಾಡಬೇಕು ‘ಅದೊಂದು ದಿನ ನಡುರಾತ್ರಿಯಲ್ಲಿ ಗರ್ಭಿಣಿಯೊರ್ವಳು ಬಂದು ಸಹಾಯ ಕೇಳಿದಾಗ ನನಗೆ ಸಹಾಯ ಮಾಡಲು ಟ್ಯಾಕ್ಸಿ ಇರಲಿಲ್ಲ. ಇದರಿಂದ ತುಂಬಾ ನೋವಾಯಿತು. ಆದರೆ, ಬೇರೆ ವ್ಯವಸ್ಥೆ ಮಾಡುವ ಮೂಲಕ ಆ ಮಹಿಳೆಯನ್ನು ಆಸ್ಪತ್ರೆ ತಲುಪಿಸಿದೆ. ಆದರೆ, ನನ್ನನ್ನೇ ನಂಬಿ ಬರುವ ಜನರಿಗೆ ನಾನು ಸಹಾಯ ಮಾಡಬೇಕು. ಎಷ್ಟೇ ಕಷ್ಟವಾದರೂ ಒಂದು ಅಟೋ ಖರೀದಿ ಮಾಡಬೇಕು ಎಂದುಕೊಂಡು ಒಂದಿಷ್ಟು ಸಾಲ ಹಾಗೂ ಸ್ನೇಹಿತರ ಸಹಾಯದಿಂದ ಆಟೋ ಖರೀದಿ ಮಾಡಿ ನನ್ನ ಕೈಲಾದ ಸೇವೆ ನೀಡುತ್ತಿದ್ದೇನೆ ಎಂದು ಮಂಜುನಾಥ ಪೂಜಾರಿ ಅವರು ಹೇಳಿದ್ದಾರೆ.
ಮಧ್ಯರಾತ್ರಿ ಸಹಾಯ ಬೇಡಿ ಬಂದ ಗರ್ಭಿಣಿ ಕೆಲಸಕ್ಕೆ ಸೇರಿ ನೆಮ್ಮದಿಯಿಂದ ಇದ್ದ ಮಂಜುನಾಥ್ ಅವರ ಬಳಿ ಒಂದು ಮಧ್ಯರಾತ್ರಿಯ ವೇಳೆ ತುಂಬು ಗರ್ಭಿಣಿಯೊಬ್ಬರು ತಮ್ಮನ್ನು ಆಸ್ಪತ್ರೆಗೆ ಸೇರಿಸುವಂತೆ ಸಹಾಯ ಕೋರಿ ಬರುತ್ತಾರೆ. ಆದರೆ ಆ ವೇಳೆಗೆ ಮಂಜುನಾಥ್ ಅವರ ಬಳಿ ಟ್ಯಾಕ್ಸಿ ಇಲ್ಲ, ಬೇರೆ ವಾಹನಗಳೂ ಇಲ್ಲ. ಅಂದಿನ ತುರ್ತಿಗೆ ಬೇರೆಯವರ ಸಹಾಯ ಪಡೆದು ಆ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಆಗಲೇ ನಾನು ಇನ್ನು ಮುಂದೆ ನನ್ನ ಸೇವೆಯನ್ನು ನಿಲ್ಲಿಸಬಾರದು ಎಂದುಕೊಂಡು ಸಾಲ ಮಾಡಿ ಆಟೋ ಕೊಂಡುಕೊಳ್ಳುತ್ತಾರೆ.