ಸಮೀಕ್ಷೆಯೊಂದರ ಪ್ರಕಾರ ವರ್ಷವೂ ವಿಶ್ವಾದ್ಯಂತ 50-100 ಮಿಲಿಯನ್ ಜನ ಡೆಂಗೀ ಜ್ವರದಿಂದ ಪೀಡಿತರಾಗುತ್ತಾರೆ. 5 ಲಕ್ಷಕ್ಕೂ ಅಧಿಕ ಜನರು ಡೆಂಗೀ ರಕ್ತಸ್ರಾವದ ಜ್ವರದಿಂದ ನರಳುತ್ತಾರೆ. ಡೆಂಗೀಯಿಂದಾಗಿ ಸತ್ತವರ ಅಂಕಿ ಸುಮಾರು 22 ಸಾವಿರ ದಾಟಿದೆ. ಇವರಲ್ಲಿ ಹದಿಮೂರರಿಂದ ಹದಿನಾರು ವರ್ಷಗಳ ಮಕ್ಕಳ ಸಂಖ್ಯೆಯೇ ಹೆಚ್ಚು. ಕಳೆದ ಮೂರುವರ್ಷಗಳಲ್ಲಿ ಡೆಂಗಿಯಿಂದಾಗಿ ಕರ್ನಾಟಕಕ್ಕೆ ಮೂರನೇ ಸ್ಥಾನ. ಈ ವರ್ಷ ಇನ್ನೂ ಜಾಸ್ತಿ, ಡೆಂಗೀ ಪೀಡಿತರ ಸಂಖ್ಯೆ ಎರಡು ಸಾವಿರ ದಾಟುತ್ತದೆ. ಬೆಂಗಳೂರು ನಗರವೊಂದರಲ್ಲೆ ಅಂದಾಜು 1100 ರೋಗಿಗಳು ಗುರುತಿಸಲ್ಪಟ್ಟಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದಲೂ ಡೆಂಗೀ ವೈರಸ್ ವೃದ್ಧಿಸುತ್ತಲೇ ಸಾಗಿದೆ.
ಮೋಡಮುಸುಕಿದ ವಾತಾವರಣದಲ್ಲೇ ಡೆಂಘೀ ಬರುತ್ತದೆ!
ಜೋರು ಮಳೆ, ಸುಡುಬಿಸಿಲಿಗೆ ಸೂಕ್ಷ್ಮಜೀವಿಗಳು ವರ್ಧಿಸಲಾರವು. ಶಿಲೀಂಧ್ರ, ಪಾಚಿಗಳೂ, ವೈರಸ್ಸಿನಂತಹ ಏಕಕೋಶೀಯ ಜೀವಿಗಳೂ ಇಂತಹ ಮಳೆ-ಬಿಸಿಲಿನಾಟದಲ್ಲಿ ಮುದಗೊಳ್ಳುತ್ತವೆ. ಇವುಗಳು ದುಪ್ಪಟ್ಟು ತಮ್ಮ ಪ್ರತಿರೂಪವನ್ನು ರೂಪಿಸಬಲ್ಲವು, ರೂಪಾಂತರವಾಗಬಲ್ಲವು. ಈ ಬಾರಿಯ ಮುಂಗಾರಿನ ಮುಂದೂಡಿಕೆ, ವೈಷಮ್ಯದಿಂದಾಗಿ ಎಲ್ಲಾ ರೀತಿಯ ಸೂಕ್ಷ್ಮಜೀವಿಗಳ ಸಂಕ್ರಮಣ ಹೆಚ್ಚಿದೆ. ಋತುವೈಪರೀತ್ಯ ಇಡೀ ಜನಪದದ ಉಧ್ವಂಸಕ್ಕೆ ಕಾರಣವೆಂಬುದು ಎಲ್ಲಾ ವೈದ್ಯಕೀಯ ವಿಜ್ಞಾನಗಳು ಗುರುತಿಸುತ್ತವೆ. ಪ್ರತೀವರ್ಷ ವಾತಾವರಣದ ಅಸಮತೋಲನ ಹೆಚ್ಚುತ್ತಲೇ ಸಾಗಿದೆ, ಜೊತೆಗೆ ರೋಗಗಳ ಸಾಥ್ ಕೂಡಾ. ಚಿಕುನ್ ಗೂನ್ಯ, ಎಚ್ 1 ಎನ್ 1, ವೈರಲ್ ಫೀವರ್, ಮಂಕಿ ಫಿವರ್ ಗಳಂತಹ ಜ್ವರಗಳೂ ಇದೇ ವಾತಾವರಣದಲ್ಲಿ ಸಮುದಾಯವನ್ನು ಪೀಡಿಸಿವೆ. ವೈರಸ್ ಗಳ ಸ್ವಭಾವವೆಂದರೆ ಅವು ತಮ್ಮನ್ನು ಶೀಘ್ರವಾಗಿ ರೂಪಾಂತರ ಮಾಡಿಕೊಳ್ಳಬಲ್ಲವು. ಈ ರೀತಿ ರೋಗಗಳು ಹೊಸದಾಗಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ.
undefined
ಎಲ್ಲಿ ಡೆಂಗೀ ಆರ್ಭಟ?
ಭೂಮಧ್ಯರೇಖೆಯು ಹಾದುಹೋಗುವ, ಸನಿಹವಾಗಿರುವ ಉಷ್ಣವಲಯದ, ಅರೆ ಉಷ್ಣವಲಯದ ಪ್ರದೇಶಗಳಲ್ಲಿ ಡೆಂಗೀ ಪೀಡೆ ಜಾಸ್ತಿ. ವಾತಾವರಣದ ಆರ್ದ್ರತೆ, ತಾಪಮಾನದ ಏರುಪೇರು, ಮನುಷ್ಯ ಮತ್ತು ಪ್ರಾಣಿಗಳ ದೇಶಾಂತರ ಪ್ರವಾಸ ಇವು ಸಾಂಕ್ರಾಮಿಕ ರೋಗಗಳ ಉಲ್ಬಣಕ್ಕೆ ಅನುಕೂಲಕರ ವ್ಯವಸ್ಥೆಯನ್ನು ಒದಗಿಸುತ್ತವೆ.
ಸೊಳ್ಳೆಗಳದೇನು ತಪ್ಪು?
ಸೊಳ್ಳೆಗಳು ‘ಏಡಿಸ್’ ಬಗೆಯವು, ‘ಈಜಿಪ್ಟಿ’ ಜಾತಿಯವು. ಇವು ಡೆಂಗಿ ವೈರಸ್ಸುಗಳ ವಾಹಕಗಳಷ್ಟೇ. ಸೊಳ್ಳೆಗಳು ನಿಂತ ನೀರಲ್ಲಿ, ಮಳೆನೀರು ಶೇಖರವಾಗುವ ಖಾಲಿ ಟೈರ್ ಟ್ಯೂಬ್, ಚಿಪ್ಪು, ಹಳೆಯ ಬಕೆಟ್, ಪಾತ್ರೆಗಳಲ್ಲಿ ಹಳೆಯ, ಕೊಳಕು ನೀರು ಸಿಕ್ಕಲ್ಲಿ ಮೊಟ್ಟೆಯಿಟ್ಟು ಸಂಸಾರ ಬೆಳೆಸುತ್ತವೆ.
ಡೆಂಗಿ ಜ್ವರ ಸೋಂಕುವುದು ಯಾರಿಗೆ?
ಸಾಂಕ್ರಾಮಿಕ ರೋಗಗಳು, ಸೋಂಕು ಪೀಡಿಸುವುದೂ ಕೂಡಾ ವ್ಯಕ್ತಿಗತ. ಹೇಗೆ ನಮ್ಮೊಳಗಿನ ರೋಗನಿರೋಧಕಶಕ್ತಿಯೋ ಹಾಗೆ.
ಒಮ್ಮೆ ಮಳೆ ಮತ್ತೆ ಬಿಸಿಲು, ತಾಪಮಾನದ ಏರಿಳಿತ, ಆರ್ದ್ರತೆಯ ವ್ಯತ್ಯಾಸಗಳು ವಾತಾವರಣವು ಬದಲಾವಣೆಗೆ ಗುರಿಯಾದಂತೆ ನಮ್ಮೊಳಗಿನ ಸ್ವಾಭಾವಿಕ ಕ್ರಿಯೆಗಳಾದ ದೇಹದ ಉಷ್ಣತೆ, ರಕ್ತದ ಪರಿಚಲನೆ, ಸಂಚಲನೆ, ಜೀರ್ಣಕ್ರಿಯೆ, ಮಲವಿಸರ್ಜನೆ ಕ್ರಿಯೆಗಳೂ ಪ್ರಭಾವಿಸಲ್ಪಡುತ್ತವೆ. ಜೀರ್ಣಶಕ್ತಿಯು ಪ್ರಧಾನವಾಗಿ ರೋಗನಿರೋಧಿಸುವ ಬಲವನ್ನು ನಿರ್ಧರಿಸುತ್ತದೆ. ಸದಾ ತಮ್ಮ ಹಸಿವು, ಬಾಯಾರಿಕೆ, ಮಲಪ್ರವೃತ್ತಿ, ನಿದ್ರೆಗಳ ಮೇಲೆ ನಿಗಾವಹಿಸಿ ಸರಿಯಾದ ರೀತಿಯಲ್ಲಿ ವ್ಯಾಯಾಮ, ಆಹಾರಗಳ ಅಭ್ಯಾಸ ಮಾಡುತ್ತಿರುತ್ತಾರೋ, ಅಗತ್ಯ ಜಿಡ್ಡುಳ್ಳ, ತಾಜಾ ಸೂಕ್ತ ಆಹಾರ ತಿನ್ನುವ ಅಭ್ಯಾಸವಿಟ್ಟುಕೊಂಡಿರುತ್ತಾರೋ ಅಂತಹವರಿಗೆ ಸಾಮಾನ್ಯವಾಗಿ ಡೆಂಗೀ ಅಥವಾ ಯಾವುದೇ ಸೋಂಕು ಸುಲಭದಲ್ಲಿ ಕಾಡಿಸದು.
ಆಯುರ್ವೇದ ಹೇಳುವಂತೆ ಚಿಕಿತ್ಸೆ ಪರಿಪೂರ್ಣವಾಗಿದ್ದರೆ, ಮತ್ತೆ ಜೀವನದಲ್ಲಿ ಅಸಮತೋಲನವಿಲ್ಲದಿದ್ದರೆ ಒಂದು ರೋಗ ಮುಕ್ತಿಯಾಗಿ ಮತ್ತೊಂದು ರೋಗವು ಬರುವುದೇ ಇಲ್ಲ.
ಮನೆಯೊಳಗೂ ಆಚೆಗೂ. ನಮ್ಮ ದೇಹವನ್ನೆಲ್ಲಾ ಆವರಿಸಿ ರಕ್ಷಾಕವಚದಂತೆ ಕಾಪಾಡಬೇಕಿದ್ದ ಚರ್ಮವೇ ತೆಳುವಾಗಿ, ಸೂಕ್ಷ್ಮವಾಗಿ ಸೋಂಕು ಹೊತ್ತ ಸೊಳ್ಳೆಗಳ ನೆಚ್ಚಿನ ತಾಣವಾಗಿವೆ. ಇಂದಿನ ಪೀಳಿಗೆಯನ್ನು ಸೊಳ್ಳೆ ಆರಾಮವಾಗಿ ಚುಚ್ಚಬಲ್ಲದು!
ಹೀಗೆ ಡೆಂಗೀ ಗುಮ್ಮ ನಮ್ಮನ್ನು ಬೆಚ್ಚಿಬೀಳಿಸುತ್ತಿದೆ.
ಮಕ್ಕಳ ಸೊಳ್ಳೆ ಕಡಿತಕ್ಕೆ ಟೀ ಬ್ಯಾಗ್ ಮದ್ದು
ಸೋಂಕು ವ್ಯಕ್ತವಾಗಲೆಷ್ಟು ಸಮಯ?
ಸೊಳ್ಳೆಗಳು ವೈರಸ್ಸುಗಳನ್ನು ದೇಹಕ್ಕೆ ರವಾನಿಸುತ್ತ್ತವೆ. ಇದಾದ ಮೂರರಿಂದ ಹದಿನಾಲ್ಕು ದಿನಗಳ ಅವಧಿಯಲ್ಲಿ ತನ್ನ ಹೊಸ ಮನೆಯನ್ನು ವೀಕ್ಷಣೆಗೆ ತೊಡಗಿದಂತೆ ರೋಗಕಾರಕ ವೈರಸ್‌ಗಳು ಕಾಯುತ್ತವೆ. ಇಂತಹ ಸಮಯದಲ್ಲಿ ತನ್ನ ಪ್ರತಿರೂಪ ಸೃಷ್ಟಿಗೆ ಅಗತ್ಯ ವಾತಾವರಣ ಸಿಕ್ಕರಂತೂ ಅವಕ್ಕೆ ಉತ್ಸಾಹ ಜಾಸ್ತಿ. ದೇಹದೊಳಗೆ ಶೀಘ್ರವಾಗಿ ಆಕ್ರಮಿಸಿ, ರೋಗವನ್ನು ತಡೆಯುವ ಪ್ರತಿರೋಧವನ್ನು ಗೆದ್ದು ತಮ್ಮ ಆಡಳಿತ ಸ್ಥಾಪಿಸಿ ಅಧಿಕಾರಕ್ಕೆ ಬಂದ ಕುರುಹುಗಳು ಎಂಬಂತೆ ಡೆಂಗೀ ಜ್ವರದ ಲಕ್ಷಣಗಳನ್ನು ವ್ಯಕ್ತಗೊಳಿಸುತ್ತವೆ. ದೇಹವು ಸ್ವಚ್ಛವಾಗಿದ್ದರೆ, ರೋಗನಿರೋಧವಿದ್ದರೆ, ಅಂತಹ ಸೋಂಕಿತ ಪ್ರದೇಶಕ್ಕೆ ಹೋಗಿ ಬಂದ ಮೇಲೆ ಕೆಲವು ಎಚ್ಚರಿಕೆಗಳನ್ನು ಕೈಗೊಂಡರೆ ಸೋಂಕು ಹಾಗೆಯೇ ಅಡಗಬಹುದು.
ಎಷ್ಟು ಬಗೆಯ ವೈರಸ್ ಗಳ ಪತ್ತೆ?
ಈ ವರೆಗಿನ ಸಂಶೋಧನೆಗಳು ಐದು ರೀತಿಯ ಡೆಂಗೀ ವೈರಸ್‌ಗಳನ್ನು ಗುರುತಿಸಿವೆ. ಒಂದು ಬಗೆಯ ವೈರಸ್ ರೋಗನಿರೋಧಕಶಕ್ತಿಯನ್ನು ವರ್ಧಿಸುತ್ತದೆ. ಉಳಿದವು ತಾತ್ಕಾಲಿಕವಾಗಿ ವಿನಾಯತಿ ನೀಡಬಹುದು. ಆದರೆ ಅವುಗಳು ಕಾಲಾಂತರದಲ್ಲಿ ತೀವ್ರವಾಗಿ ಲಕ್ಷಣಗಳನ್ನು ತರಬಲ್ಲವು. ಹಾಗಾಗಿ ವ್ಯಕ್ತಿಯ ಅಸಮತೋಲಿತ ಜೀವನಶೈಲಿಯಿಂದ ಡೆಂಗೀ ಜ್ವರ ಮರುಕಳಿಸುವ ಸಾಧ್ಯತೆಯೂ ಇದೆ.
ಡೆಂಗೀ ಜ್ವರದ ಸಾಮಾನ್ಯ ಲಕ್ಷಣಗಳು:
ಸೋಂಕಿತಜ್ವರಗಳು ಸಾಮಾನ್ಯಜ್ವರದಂತೆ ಮುನ್ಸೂಚನೆಯನ್ನು ನೀಡುವುದಿಲ್ಲ. ಅಜೀರ್ಣ, ಹಸಿವು ಕುಂದುವುದು, ಚಡಪಡಿಕೆ, ಬಿಸಿ-ಶೀತಗಳ ಇಚ್ಛೆ, ಮೈಭಾರ, ತಲೆಭಾರ, ಆಲಸ್ಯ ಇತ್ಯಾದಿ ಪೂರ್ವಲಕ್ಷಣಗಳನ್ನೂ ತೋರುವುದಿಲ್ಲ. ಹಾಗಾಗಿ ತಕ್ಷಣ ೧೦೩ ಡಿಗ್ರಿಗಿಂತಲೂ ಏರುವ ತೀವ್ರತಾಪ, ಕಣ್ಣುಗುಡ್ಡೆಯ ಹಿಂದೆ ಸೆಳೆತ, ನೋವು, ಬೆನ್ನುಹುರಿಯ ಗುಂಟ ನೋವು, ಸೊಂಟ ಮೊದಲಾದ ಸಂದುಗಳ ನೋವು, ತಲೆನೋವು, ಮಾಂಸಖಂಡ ಮತ್ತು ಸ್ನಾಯುಗಳ ಸೆಳೆತ, ಹಸಿವು ಅತಿಯಾಗಿ ಕುಂದುವುದು, ಹೊಟ್ಟೆಯ ನೋವು - ಅಸ್ವಸ್ಥತೆ, ಮಕ್ಕಳಲ್ಲಿ ಹೆಚ್ಚಾಗಿ ವಾಂತಿ, ಭೇದಿ, ತುರಿಕೆ, ಸುಸ್ತಾಗುವುದು.
ಮಲೇರಿಯಾದ ಬಗ್ಗೆ ಇರುವ 6 ತಪ್ಪು ಕಲ್ಪನೆಗಳಿವು....
ಡೆಂಗೀ ರಕ್ತಸ್ರಾವದ ಜ್ವರದ ಲಕ್ಷಣಗಳು:
ಇವು ಜ್ವರದ ತೀವ್ರತೆಯನ್ನು ಸೂಚಿಸುತ್ತವೆ. ಮೈಮೇಲೆ ದಡಸಲು/ ದದ್ದು ಏಳುವುದು, ಚಿಕ್ಕ ಕೆಂಪು ಹಾಸಿದಂತೆ ಗುಳ್ಳೆಗಳು, ತುರಿಕೆ, ಅಲ್ಲಲ್ಲಿ ಕೆಂಪು ವಿವರ್ಣತೆ, ವಸಡು, ಮೂಗುಗಳಿಂದ ರಕ್ತ ಒಸರುವುದು, ಕಣ್ಣು ರಣಗೆಂಪಾಗಬಹುದು. ಮಲಮೂತ್ರಗಳ ವರ್ಣವೂ ಬದಲಾಗಬಹುದು. ಸುಸ್ತು ಹೆಚ್ಚುತ್ತಲೇ ಹೋಗುವುದು. ರಕ್ತದೊತ್ತಡ ಇಳಿಯುತ್ತಲೇ ಹೋಗುವುದು. ರಕ್ತಸ್ರಾವದ ನಿಯಂತ್ರಣವು ಕಷ್ಟವಾಗುವುದು. ರಕ್ತಸೋರಿಕೆಯಿಂದ ಆಘಾತಕ್ಕೂ ಒಳಗಾಗಬಹುದು.
ಆಯುರ್ವೇದದ ದೃಷ್ಟಿಯಲ್ಲಿ ಇವೆಲ್ಲವೂ ವಾತ ಮತ್ತು ಪಿತ್ತಗಳ ದುಷ್ಟಿಲಕ್ಷಣಗಳು. ಇವುಗಳ ಹೊರತಾಗಿಯೂ ಚಿಕ್ಕ ಚಿಕ್ಕ ವಾತಪಿತ್ತಗಳ ಕಿರಿಕಿರಿಗಳೂ ಕಾಡಬಹುದು. ಉದಾಹರಣೆಗೆ ಹುಳಿತೇಗು, ಹಳದಿ, ಹಸಿರು ದ್ರವದಂತಹ ವಾಂತಿ, ಕೆಲವೊಮ್ಮೆ ಮಲಬದ್ಧತೆ, ಮೈಕೈನೋವು, ನಿದ್ರೆ ಬಾರದಿರುವುದು, ವಾಂತಿ ಬಂದಂತೆ ಮೇಲೆ ಮೇಲೆ ಉಮ್ಮಳಿಸುವುದು.
ಪ್ರಯೋಗಾಲಯದ ಪರೀಕ್ಷೆಗಳು:
ಡೆಂಗೀ ವೈರಾಣು ವಿಧಗಳಿಗಾಗಿ ಆಂಟಿಬಾಡಿ ಟೈಟರ್ ಪರೀಕ್ಷೆ ಸಂಪೂರ್ಣ ರಕ್ತ ಪರೀಕ್ಷೆ ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಟೆಸ್ಟ್
ಅಲೋಪತಿಯ ಲಭ್ಯ ಚಿಕಿತ್ಸೆ:
ಡೆಂಗೀ ಚಿಕಿತ್ಸೆಯು ನಿರ್ದಿಷ್ಟವಾಗಿಲ್ಲ.ಸಾಮಾನ್ಯವಾಗಿ ಒಂದೆರಡು ದಿನಗಳಿಂದ ವಾರದೊಳಗೆ ತಾನಾಗಿಯೇ ಜ್ವರವು ಇಳಿಯುವ ಸ್ವಭಾವದ್ದು. ಆದರೆ ನೋವು ತಗ್ಗಿಸಲು ನೋವು ನಿವಾರಕಗಳ ಬಳಕೆ, ದೇಹದ ದ್ರವದ ಪ್ರಮಾಣವನ್ನು ಕಾಪಾಡಲು ಡ್ರಿಪ್ ಮೂಲಕ ಜಲೀಯತೆಯನ್ನು ಕಾಪಾಡುವುದು, ರಕ್ತದ ಪ್ಲೇಟ್ ಲೆಟ್ ಮಟ್ಟವನ್ನು ಕಾಪಾಡಲು ರಕ್ತವನ್ನು ಪೂರೈಸುವುದು ಮುಂತಾದ ಲಕ್ಷಣಗಳಿಗನುಸಾರ ಚಿಕಿತ್ಸೆ ನೀಡಲಾಗುತ್ತದೆ. ನೋವು ನಿವಾರಕಗಳು ಸಾಮಾನ್ಯವಾಗಿ ರಕ್ತಕಣಗಳನ್ನು ನಾಶಮಾಡಲೂಬಹುದಾದ್ದರಿಂದ ವಿಶಿಷ್ಟ ಬಗೆಯ ನೋವು ನಿವಾರಕಗಳನ್ನು ಬಳಸಲಾಗುತ್ತದೆ. ವೈದ್ಯರ ಸಹಾಯ ಪಡೆಯುವುದು ಉತ್ತಮ.
ಆಯುರ್ವೇದದ ಚಿಕಿತ್ಸೆ:
ಸಂಪೂರ್ಣವಿಶ್ರಾಂತಿ ಜ್ವರ ಶಾಮಕ. ಸೋಂಕು ಡೆಂಗೀಯಂತೆ ಪ್ರಾಣಿಜನ್ಯವಾಗಿದ್ದಾಗ ಸಸ್ಯಜನ್ಯ, ವಿಷಹರ, ಜ್ವರಹರ ಔಷಧಗಳನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೆಣ್ಣೆಯಂತಹ ಹಗುರವಾಗಿ ಜೀರ್ಣವಾಗುವ ಜಿಡ್ಡಿನೊಂದಿಗೆ ಕೊಡಲಾಗುತ್ತದೆ. ಸಾಮಾನ್ಯವಾಗಿ ಒಂದೆರಡು ಸಲದ ಆಂತರಿಕ ಪ್ರಯೋಗದಿಂದ ಜ್ವರ ಇಳಿಯುತ್ತದೆ.
ಸ್ನಾನ ಮಾಡಬಾರದು. ಆದರೆ, ಬೆಚ್ಚಗಿನ ನೀರಿನಿಂದ ಮೃದುಬಟ್ಟೆಯಿಂದ ಮೈ ಒರೆಸಬಹುದು. ಹಣೆಗೆ ಸದಾ ಚಂದನದಂತಹ ಶೀತಲೇಪ, ತಲೆಗೆ ತುಪ್ಪದ ಪಿಚು, ಮಾಸ್ತಿಷ್ಕ್ಯದಂತಹ ತಾಪವನ್ನು ಇಳಿಸುವ ಜೊತೆಗೆ ಜ್ವರಕಾರಕ ದೋಷಗಳನ್ನು ಜೀರ್ಣಾಂಗವ್ಯೆಹಕ್ಕೆ ಎಳೆದು ತಂದು ಮಲಮೂತ್ರದ ಮೂಲಕ ವಿಸರ್ಜನೆಗೆ ಅನುವಾಗುವಂತಹ ಚಿಕಿತ್ಸೆ ನೀಡಲಾಗುತ್ತದೆ. ಇದು ಹೆಚ್ಚೆಂದರೆ ಮೊದಲ ಮೂರು ದಿನಗಳಲ್ಲಿ ಸರಿಯಾಗುತ್ತದೆ. ನಂತರವೂ ವಾತಪಿತ್ತದೋಷಗಳು ದೇಹದಲ್ಲಿ ಉಳಿದಿದ್ದರೆ ಮೃದುವಾಗಿ ದೇಹದಾಚೆ ಕಳಿಸಲು ವ್ಯವಸ್ಥೆ ಮಾಡಲಾಗುತ್ತದೆ.
ಡೆಂಗ್ಯೂ ಪೀಡಿತರ ಪಾಲಿಗೆ ಆಪದ್ಭಾಂದವ- ಹಿಟ್ ಪ್ಲೇಟ್‌ಲೆಟ್ ಹೆಲ್ಪ್‌ಲೈನ್
ಏನಾದರು ರುಚಿರುಚಿ ತಿನ್ನಲುಂಟೆ?
ಆಹಾರ ಕೂಡಾ ಚಿಕಿತ್ಸೆಯಂತೆ ವ್ಯಕ್ತಿಗತ. ಕುದಿಸಿದ ನೀರನ್ನು ಕುಡಿಯಲು ಬಳಸಬಹುದು. ಭತ್ತದ ಅರಳಿನ ಪುಡಿ, ಜೋಳದ ಅರಳಿನ ಪುಡಿಯನ್ನು ಗಂಜಿಯಂತೆ ಮಾಡಿ ಕುಡಿಸಬಹುದು. ದಾಳಿಂಬೆ ರಸ, ನೆಲ್ಲಿಪುಡಿ ಅಥವಾ ನೆಲ್ಲಿಕಾಯಿ ರಸದ ಸಾರನ್ನು ಆಹಾರವಾಗಿ ಕೊಡಬಹುದು. ಹೆಸರುಬೇಳೆ ಬೇಯಿಸಿದ ನೀರಿಗೆ ಉಪ್ಪೂ ಸಹ ಹಾಕದೆ ಅಥವಾ ರುಚಿಗೆ ಚಿಟಿಕೆ ಸೈಂಧವ ಲವಣ/ ಕಲ್ಲುಪ್ಪು/ ಇಂದುಪ್ಪು ಸೇರಿಸಿ ಕುಡಿಯಲು ಆಹಾರಕಾಲದಲ್ಲಿ ಮಾತ್ರ ಕೊಡಬಹುದು. ಹಸಿವೆ ಹೆಚ್ಚಾದಂತೆ ಗಂಜಿಯಿಂದ, ಸಾರು, ಬೇಳೆ ತಿಳಿಗಳ ಜೊತೆಗೆ ಹುರಿದ ಅಕ್ಕಿಯ ಮೆತ್ತಗಿನ ಅನ್ನವನ್ನು ಸ್ವಲ್ಪ ಹೆಚ್ಚಿಸುತ್ತಾ ಹೋಗಬಹುದು. ಒಟ್ಟಾರೆ ಜೀರ್ಣಕ್ರಿಯೆ, ರಕ್ತದ ದುಷ್ಟಿಯನ್ನೂ ಮಾಡದ, ದೋಷಗಳೂ ದೇಹದಾಚೆ ಹೋಗುವಂತೆ ಮಾಡುವ ಆಹಾರವನ್ನು ಆಯಾ ವ್ಯಕ್ತಿಗಳ ಆಹಾರಾಭ್ಯಾಸವನ್ನು, ಅಗತ್ಯವನ್ನು ಗಮನಿಸಿ ಆಯ್ಕೆ ಮಾಡಲಾಗುತ್ತದೆ.
ಜ್ವರಮುಕ್ತ ಲಕ್ಷಣಗಳು:
ಭಾವಿಕ ಶಾರೀರಿಕ ತಾಪ, ಮೈ ಬೆವರುವುದು, ದ್ರವರೂಪದ ದೋಷಯುಕ್ತ ಮಲವಿಸರ್ಜನೆ,ಹಸಿವು ಗೋಚರಿಸುವುದು, ಸುಸ್ತು ಹೋಗಿ ಉತ್ಸಾಹ, ಮೈ ಮೇಲೆ ಸಹಜವರ್ಣ,ಎಲ್ಲಾ ಇಂದ್ರಿಯಗಳ ಚಟುವಟಿಕೆಯು ಕಿರಿಕಿರಿ ಇಲ್ಲದೆ ಸ್ವಚ್ಛವಾಗಿ ಕಾರ್ಯನಿರ್ವಹಿಸುವುದು.
ಆಹಾರದ ಬಗ್ಗೆ ಎಚ್ಚರ:
ಹಸಿತರಕಾರಿ,ಬ್ರೊಕೋಲಿ, ಪಪ್ಪಾಯಿ ಕಾಯಿ,ಅವುಗಳ ಸಲಾಡ್, ಮೊಳಕೆ ಕಾಳುಗಳನ್ನೆಲ್ಲಾ ತಿನ್ನುವಂತೆ, ಯಥೇಚ್ಛ ನೀರು, ಎಳನೀರು, ತರಕಾರಿ ರಸ, ಹಣ್ಣಿನ ರಸ, ಪಪ್ಪಾಯಿ ಎಲೆಗಳ ರಸ, ಪಪ್ಪಾಯಿ ಹಣ್ಣು, ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ಮೂಸುಂಬಿ ಹಣ್ಣುಗಳನ್ನೆಲ್ಲಾ ಅಧಿಕವಾಗಿ ಸೇವಿಸಲು ಮಾಹಿತಿಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇವೆಲ್ಲಾ ಆಹಾರವೂ, ದ್ರವವೂ ರಕ್ತವನ್ನು ಇನ್ನೂ ಕೆಡಿಸುತ್ತವೆ, ತುರಿಕೆ ಹೆಚ್ಚಿಸುತ್ತವೆ. ಮುಖ್ಯವಾಗಿ ಕರುಳಿನಲ್ಲಿ ಜೀರ್ಣಕ್ಕೆ ಶಕ್ತಿಯೇ ಇಲ್ಲವಾದಾಗ ಹಸಿಯಾದ, ಹುಳಿಯಾದ ನಾರು, ಹಣ್ಣಿನ ರಸಗಳೆಲ್ಲಾ ಇನ್ನೂ ಹಿಂಸೆಯಾಗುತ್ತವೆ.
ಕೀಟಗಳಿಗೆ ಅಲರ್ಜಿ ತರೋ ಈ ಗಿಡಗಳು ಮನುಷ್ಯನಿಗೆ ಹಿತ !
ಯಾವ ತರಕಾರಿಗಳು ಕಿರಿಕಿರಿಯಲ್ಲ?
ಹಸಿವು ಹೆಚ್ಚುತ್ತಾ ಹೋದಂತೆ ಅನ್ನ, ಬೇಳೆಯೊಂದಿಗೆ ಕಡಿಮೆ ಪ್ರಮಾಣದಲ್ಲಿ ಮೃದುವಾಗಿ ಬೇಯುವ, ನಾರು ಕಡಿಮೆಯಿರುವ, ರಕ್ತವನ್ನು ತಂಪುಮಾಡಿ ವರ್ಧಿಸುವ ಪಡವಲಕಾಯಿ, ಹೀರೆಕಾಯಿ, ಸೋರೆಕಾಯಿ, ನೆಲ್ಲಿಕಾಯಿ, ಅಮೃತಬಳ್ಳಿಯ ಎಳೆ ಚಿಗುರು, ದುಗ್ಧಿಕಾ ಅಥವಾ ಕೆಂಪು/ ಬಿಳಿ ನೆನೆ ಹಕ್ಕಿ ಸೊಪ್ಪು, ಇವುಗಳನ್ನು ತುಪ್ಪದಲ್ಲಿ ಬಾಡಿಸಿ ಬೇಯಿಸಿ ತಿಳಿ ಸಾರು, ಪಲ್ಯ, ಗೊಜ್ಜು ಇಂತಹ ಜೀರ್ಣಕಾರಿ ಅಡುಗೆಮಾಡಿ ಸೇವಿಸಬಹುದು.
ಯಾವ ಹಣ್ಣುಗಳು ಸೇಫ್?
ದಾಳಿಂಬೆ, ಒಣದ್ರಾಕ್ಷಿ, ಅಂಜೂರ, ಖರ್ಜೂರದ ಹಣ್ಣು, (ಒಣ ಖರ್ಜೂರ ಅಥವಾ ಉತ್ತುತ್ತಿ ಬೇಡ)ಇವುಗಳು ಹಿತ. ಇವು ದೇಹತಾಪವನ್ನು, ರಕ್ತವನ್ನು ಕಾಪಾಡುತ್ತವೆ. ಈ ಹಣ್ಣುಗಳು ಪಿತ್ತವನ್ನು ದೇಹದಾಚೆ ವಿಸರ್ಜಿಸಲು ಸಹಕಾರಿ. ಯಾವುದೇ ಹಣ್ಣುಗಳ ರಸವನ್ನು ಯಥೇಚ್ಛ ಕುಡಿಯುವುದು ಜೀರ್ಣಕ್ರಿಯೆಯನ್ನು ತಗ್ಗಿಸುತ್ತದೆ. ಮೇಲಿನ ಹಣ್ಣುಗಳನ್ನು ಅಗೆದು ತಿನ್ನುವುದು ನಿರಪಾಯಕಾರಿ.
ಪ್ಲೇಟ್ ಲೆಟ್ ಸ್ಕೋರ್
ಡೆಂಗೀ ಹೊರತಾಗಿ ಹಲವು ಜ್ವರಗಳಲ್ಲಿ ಪ್ಲೇಟ್ ಲೆಟ್, ರಕ್ತದ ಪ್ರಮಾಣ ಇಳಿಯಬಹುದು. ಇದಕ್ಕೆ ಕಾರಣ ದೇಹದೊಳಗಿನ ಉಷ್ಣತೆ ಅಥವಾ ಪಿತ್ತದ ದ್ರವದ ಅಂಶ ಹೆಚ್ಚುವುದರಿಂದ ರಕ್ತದ ಸಹಜ ಸ್ವರೂಪ ಶೀಘ್ರವಾಗಿ ಬದಲಾಗುವುದು. ಹತ್ತು ಸಾವಿರಕ್ಕಿಂತಲೂ ಕಡಿಮೆ ಇದ್ದಾಗಲೂ ಒಂದೇ ದಿನದಲ್ಲಿ ಲಕ್ಷಕ್ಕೆ ಸ್ಕೋರ್ ಶೂಟ್ ಆಗುತ್ತದೆ. ಎಲ್ಲವೂ ರೋಗಿಯ ಸ್ಥಿತಿಯ ಅರಿವು ಮತ್ತು ವಿವೇಚಿತ ಚಿಕಿತ್ಸೆ, ಆರೈಕೆಯ ಚಳಕ. ವಿಪರೀತ ಭಯಪಡುವ ಅಗತ್ಯವಿಲ್ಲ.
ಡೆಂಘೀ ನಿಯಂತ್ರಣಕ್ಕೆ ಬಿಬಿಎಂಪಿ ಹೊಸ ಪ್ಲ್ಯಾನ್!
ಡೆಂಗಿ ಮಾರಣಾಂತಿಕವಾಗಬಹುದೇ?
ರಕ್ತದ ಅತೀಸ್ರಾವ, ಪ್ಲೇಟ್ ಲೆಟ್ ಕೌಂಟ್ ಏರದ ಸ್ಥಿತಿ,ರಕ್ತದ ಒತ್ತಡ ಇಳಿಯುತ್ತಲೇ ಸಾಗುವುದು ಅತಿಯಾಗಿ ಜೀರ್ಣಶಕ್ತಿ ಕುಂದುವುದರ ಪರಿಣಾಮ. ಅಂದರೆ ಮತ್ತೆ ದೇಹ ತಾನೇ ಯಾವ ಚಿಕಿತ್ಸೆಯ ಸಹಾಯ ನೀಡಿಯೂ ಚೇತರಿಸಿಕೊಳ್ಳಲು ಸಾಧ್ಯವೇ ಆಗದ ಸ್ಥಿತಿ. ಇದು ಮಾರಣಾಂತಿಕ. ಸರಿಯಾದ ಆರೈಕೆ, ಚಿಕಿತ್ಸೆಯಿಂದ ಮೂರರಿಂದ ಏಳು ದಿನಗಳಲ್ಲಿ ಸಂಪೂರ್ಣ ಚೇತರಿಕೆಯಾಗಬೇಕು.ಡೆಂಗೀ ಮರಣದ ಪ್ರಮಾಣ 1 ರಿಂದ 5 ಶೇಕಡಾ ಮಾತ್ರ.
ಡೆಂಗಿಗೂ ವಾಕ್ಸಿನೇಷನ್
ಇದನ್ನು ೨೦೧೬ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಭಿವೃದ್ಧಿ ಪಡಿಸಲಾಗಿದೆ ಎಂದು ಘೋಷಿಸಿದೆ. ಆದರೆ ಲಭ್ಯತೆಯ ಬಗ್ಗೆ ಮಾಹಿತಿ ಪರಿಪೂರ್ಣವಿಲ್ಲ. ಮುಖ್ಯವಾಗಿ ವಾಕ್ಸಿನ್ ಅವಲಂಬಿತ ದೇಹ ಡೆಂಗೀ ಬದಲು ಇನ್ನೊಂದು ಸೋಂಕಿಗೆ ಗುರಿಯಾಗುವ ಸಾಧ್ಯತೆ. ಜೀವನಶೈಲಿಯ ತಪ್ಪುಗಳನ್ನು ಸರಿಪಡಿಸದೆ ಅಸಂಖ್ಯ ರೋಗಗಳು ಮತ್ತು ಸಾವಿರಾರು ವಾಕ್ಸಿನ್ ಗಳು ದೇಹವನ್ನು ಮತ್ತಷ್ಟು ರೋಗಕ್ಕೆ ಎಡೆ ಮಾಡಿಕೊಟ್ಟಿವೆ ಎಂಬುದು ಪ್ರತ್ಯಕ್ಷ.
-ಡಾ. ಪಲ್ಲವಿ ಹೆಗಡೆ