ಈ ಜಿಟಿ-ಜಿಟಿ ಮಳೆಯಲ್ಲಿ ಅವನದೇ ಧ್ಯಾನ

Published : Jul 13, 2018, 03:24 PM IST
ಈ ಜಿಟಿ-ಜಿಟಿ ಮಳೆಯಲ್ಲಿ ಅವನದೇ ಧ್ಯಾನ

ಸಾರಾಂಶ

ಆಕಾಶಕ್ಕೆ ತೂತು ಬಿದ್ದಂತೆ ಒಂದೇ ಸಮನೇ ಸುರಿಯುತ್ತಿರುವ ಜಿಟಿ-ಜಿಟಿ ಮಳೆ ಮನದಲ್ಲಿ ಅದೆಷ್ಟೋ ಭಾವನೆಗಳನ್ನು ಗೀಚಲು ಶುರು ಮಾಡಿದೆ. ಮನಸ್ಸಿಗೆ ಮಂದಹಾಸ ನೀಡುವ ಕಾಲ ಸನಿಹಕ್ಕೆ ಬಂದಿರುವಾಗ ನೀನೆಲ್ಲಿಗೆ ಹೋಗಿರುವೆ ಗೆಳೆಯಾ? ಒಮ್ಮೆ ಇತ್ತ ನೋಡು! ನೀ ತಂದು ಕೊಟ್ಟ ಬಣ್ಣದ ಛತ್ರಿಯೂ ನಿನ್ನಾಗಮನವನ್ನೇ ಬಯಸುತ್ತಿದೆ. ಮಾನ್ಸೂನ್‌ಗಾಗಿಯೇ ಕಾಯುತ್ತ ಕುಳಿತಿದ್ದ ಅದೆಷ್ಟೋ ಆಸೆ-ಕನಸುಗಳು ತಿರು-ತಿರುಗಿ ನನ್ನತ್ತಲೇ ನೋಡುತ್ತಿವೆ. ಅವಕ್ಕೆಲ್ಲ ಏನೆಂದು ಉತ್ತರಿಸಲಿ ಹೇಳು? ಯೋಚಿಸಿದಷ್ಟೂ ಬರಿಯ ಪ್ರಶ್ನಾರ್ಥಕ ಚಿಹ್ನೆಗಳು ಮೂಡುತ್ತಿವೆ ಮನದಲ್ಲಿ.  

ಮೊದ-ಮೊದಲು ನಿನ್ನ ನೆನಪು ಬಂದ ಕ್ಷಣ ಮಾತ್ರದಲ್ಲಿಯೇ ಕಣ್ಣೆದುರಿಗೆ ಪ್ರತ್ಯಕ್ಷವಾಗುತ್ತಿದ್ದ ನಿನಗೆ ಈಗ ನನ್ನ ನೋವು ಅರ್ಥವಾಗುತ್ತಲೇ ಇಲ್ಲವೇ? ನನ್ನ ಬಾಳ ರಥದ ಗಾಲಿಗಳು ನೀನಿಲ್ಲದೇ ಮುನ್ನಡೆಯುತ್ತಲೇ ಇಲ್ಲ. ನೀನಿಲ್ಲದೇ ನಿದ್ರೆಗೂ ಬರ ಬಂದುಬಿಟ್ಟಿದೆ ಕಣೋ.! ನಿನ್ನ ನೆನಪಿನ ಚಿಂತೆಯಲ್ಲಿ ನಿದ್ದೆ ಮಾಡಿ ಎಷ್ಟು ರಾತ್ರಿಗಳಾದವೋ..! ನೀನಿಲ್ಲದಿರೆ ಎಲ್ಲವೂ ಶೂನ್ಯವಾಗಲಿದೆ.

ಬಹುಶಃ ನೀ ಬರಬಹುದೆಂಬ ಮುನ್ಸೂಚನೆಯಿಂದಲೋ ಏನೋ ಮಳೆ ಮಾತ್ರ ನಿಲ್ಲದೇ ಇನ್ನೂ ಚಲನಾಶೀಲವಾಗಿಯೇ ಇದೆ. ಮನಸ್ಸೂ ಕೂಡ ಭರವಸೆಯ ಭಾವನೆಯಲ್ಲಿ ಮುಳುಗಿ ನಿನ್ನ ದಾರಿಯನ್ನೇ ಎದುರು ನೋಡುತ್ತಿದೆ. ವಸುಂಧರೆಯ ಮಡಿಲಿಗೆ ಮುಂಗಾರಿನ ಆಗಮನವಾಗಿರುವ ಈ ಸುಮಧುರ ಸವಿಘಳಿಗೆಯಲ್ಲಿ ನೀ ನನ್ನ ಜೊತೆಯಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು? ಮಳೆ ಹನಿಗಳು ಮೈಗಂಟಿಕೊಂಡು ಮುತ್ತಿಡುವಾಗಲೆಲ್ಲ ನೀ ನನ್ನೊಡನೆ ಇದ್ದರೆ ಲಕ್ಷ್ಯವೇ ಸಿಗದಷ್ಟು ಖುಷಿ ಸಿಗುತ್ತಿತ್ತೆನೋ! ಆದರೆ ನೀನು ವಿಳಾಸವೂ ಸಿಗದಂತೇ ಕಣ್ಮರೆಯಾಗಿರುವುದರ ಕಾರಣವಾದರೂ

ಏನು? ಹೀಗೆ ಹೇಳದೇ ಕೇಳದೇ ಹೊರಟು ಹೋಗಿರುವೆಯಲ್ಲಾ ನಿನಗೇನಾದರೂ ಪ್ರೀತಿಯ ಆಳ-ಅಗಲ ತಿಳಿದಿದೆಯಾ? ನಿನ್ನ ನೆನಪುಗಳು ಮನದಲ್ಲಿ ಲೆಕ್ಕವಿಲ್ಲದಷ್ಟು ವೇಗದಲ್ಲಿ ಚಲಿಸುತ್ತಿವೆ ಗೊತ್ತಾ? ಅವನ್ನೆಲ್ಲಾ ಹೇಗೆ ಸಾಯಿಸಲಿ ಹೇಳು? ಈ ಪ್ರೀತಿಯ ಕಾರ್ಮೋಡ ಕವಿದದ್ದು ಕಣ್ಣೀರಿನ ಮಳೆ ಸುರಿಯಲೆಂದೇ? ಅಥವಾ ನೋವಿನಾಗಸದಲ್ಲಿ ನಾನು ತೇಲಾಡಲೆಂದೇ?

ಮನದಲ್ಲಿ ಉದ್ಭವಿಸುತ್ತಿರುವ ಈ ಆಲೋಚನೆಗಳಿಗೆಲ್ಲಾ ನನಗೀಗ ಉತ್ತರ ಬೇಕಾಗಿದೆ. ಆ ಕಾರಣಕ್ಕಾದರೂ ನೀನು ಬರಲೇಬೇಕು. ಹೇಗಿದ್ದಿಯೋ, ಎಲ್ಲಿದ್ದಿಯೋ, ಯಾವ ಸನ್ನಿವೇಷದ ಮಧ್ಯೆ ಸಿಲುಕಿದ್ದಿಯೋ ನನಗಂತೂ ಗೊತ್ತಿಲ್ಲ.

ಜಯಶ್ರೀ ಎಸ್ ಕಾನಸೂರ್

ಎಂಎಂ ಕಾಲೇಜ್, ಶಿರಸಿ

PREV
click me!

Recommended Stories

ಮದುವೆ ಔಟ್‌ಡೇಟೆಡ್‌ ಆಗೋಯ್ತಾ!
ಒಟ್ರಾವರ್ಟ್‌ ಅನ್ನೋ ಹೊಸ ವ್ಯಕ್ತಿತ್ವ ಮಾದರಿ, ನೀವಿದ್ದೀರ ಇದ್ರಲ್ಲಿ?