ಮೂರು ತಿಂಗಳಿಂದ ಅಂಗನವಾಡಿ ಮಕ್ಕಳಿಗಿಲ್ಲ ಹಾಲಿನ ಪೌಡರ್| ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಮತ್ತಷ್ಟು ಸಂಕಷ್ಟ| ಬಾಕಿ ಹಣ ಪಾವತಿಸದಿರುವುದಕ್ಕೆ ಹಾಲಿನ ಪೌಡರ್ ಪೂರೈಕೆ ಇಲ್ಲ| ಸರ್ಕಾರ ಸಕಾಲಕ್ಕೆ ಅನುದಾನ ನೀಡದೆ ಇರುವುದರಿಂದ ಬಾಕಿ ಮೊತ್ತ ಪಾವತಿಯಾಗಿಲ್ಲ| ಹಾಲಿನ ಪೌಡರ್ ಪೂರೈಕೆಯನ್ನು ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಹಾಲು ಒಕ್ಕೂಟ ಸ್ಥಗಿತ ಮಾಡಿದೆ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಅ.10): ಜಿಲ್ಲಾದ್ಯಂತ ಮಕ್ಕಳಲ್ಲಿ ಅಪೌಷ್ಟಿಕತೆ ತಾಂಡವಾಡುತ್ತಿದೆ. ಇದರಿಂದ ಬಳಲುತ್ತಿರುವ ಮಕ್ಕಳನ್ನು ಪಾರು ಮಾಡಲು ಸರ್ಕಾರ ನಾನಾ ಪೌಷ್ಟಿಕ ಆಹಾರ ಮತ್ತು ವಿಶೇಷವಾಗಿ ಹಾಲಿನ ಪೌಡರ್ ಪೂರೈಕೆ ಮಾಡುತ್ತಿದೆ. ಆದರೆ, ಕಳಗೆ ಮೂರು ತಿಂಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ಹಾಲಿನ ಪೌಡರ್ ಪೂರೈಕೆಯೇ ಆಗಿಲ್ಲ.
ಹೌದು, ಸರ್ಕಾರ ಸಕಾಲಕ್ಕೆ ಅನುದಾನ ನೀಡದೆ ಇರುವುದರಿಂದ ಬಾಕಿ ಮೊತ್ತ ಪಾವತಿಯಾಗಿಲ್ಲ. ಹೀಗಾಗಿ ಹಾಲಿನ ಪೌಡರ್ ಪೂರೈಕೆಯನ್ನು ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಹಾಲು ಒಕ್ಕೂಟ ಸ್ಥಗಿತ ಮಾಡಿದೆ. ಕೇವಲ ಕೊಪ್ಪಳ ಜಿಲ್ಲೆಯಷ್ಟೇ ಅಲ್ಲ, ಬಳ್ಳಾರಿ, ರಾಯಚೂರು ಸೇರಿದಂತೆ ರಾಜ್ಯಾದ್ಯಂತ ಇದೇ ಸಮಸ್ಯೆಯಿಂದ ಅಂಗನವಾಡಿ ಮಕ್ಕಳಿಗೆ ಕಳೆದ ಮೂರು ತಿಂಗಳಿಂದ ಹಾಲಿನ ಪೌಡರ್ ಪೂರೈಕೆಯಾಗಿಲ್ಲ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಹಾಲು ಒಕ್ಕೂಟದಲ್ಲಿ 150 ಟನ್ ಹಾಲಿನ ಪೌಡರ್ ಉತ್ಪಾದನೆ ಆಗುತ್ತದೆ. ಮೂರು ಜಿಲ್ಲೆಗಳ ಮಕ್ಕಳಿಗೆ ವಿತರಿಸಲು ಬೇಕಾಗಿರುವುದು 400 ಟನ್. ಉಳಿದ ಹಾಲಿನ ಪುಡಿಯನ್ನು ಬೇರೆ ಬೇರೆ ಒಕ್ಕೂಟಗಳಿಂದ ತರಿಸಿಕೊಳ್ಳಲಾಗುತ್ತಿದೆ. ಆದರೆ ಹಣ ಬಾಕಿ ಇರುವುದರಿಂದ ಆ ಒಕ್ಕೂಟಗಳು ಹಾಲಿನ ಪುಡಿ ನೀಡಲು ನಿರಾಕರಿಸುತ್ತಿವೆ. ಇದರಿಂದ ಸಮಸ್ಯೆ ಎದುರಾಗಿದೆ.
ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಹಾಲಿನ ಪುಡಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನುದಾನ ನೀಡುವುದಿಲ್ಲ. ಅವರು ತಮ್ಮ ಅನುದಾನವನ್ನು ಬೇರೆ ಬೇರೆಯದ್ದಕ್ಕೆ ಬಳಕೆ ಮಾಡಿಕೊಂಡು ಹಾಲಿನ ಪೌಡರ್ ಹಣವನ್ನು ನೀಡುತ್ತಿಲ್ಲ ಎನ್ನುವ ಆರೋಪವೂ ಇದೆ.
ಪಾಲಕರ ಪಾಲು:
ಅಂಗನವಾಡಿಗಳಲ್ಲಿ ಹಾಲಿನ ಪುಡಿಯಯನ್ನು ಮಕ್ಕಳ ಕೈಯಲ್ಲಿ ಮನೆಗೆ ಒಯ್ಯಲು ಕೊಡಲಾಗುತ್ತದೆ. ಹೀಗಾಗಿ, ಮಕ್ಕಳ ಬದಲು ಪಾಲಕರೇ ಬಳಕೆ ಮಾಡಿಕೊಳ್ಳುತ್ತಾರೆ ಎಂಬ ಆರೋಪವೂ ಇದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಹಾಲಿನ ಪೌಡರ್‌ನ್ನು ಬಳಸಿ ಅಲ್ಲಿಯೇ ಹಾಲು ಮಾಡಿ, ಕೂಡಿಸಲಾಗುತ್ತದೆ, ಮನೆಗೆ ಕಳುಹಿಸುವುದಿಲ್ಲ. ಅಂಗನವಾಡಿಗಳಲ್ಲಿಯೂ ಇದೇ ಪದ್ಧತಿ ಜಾರಿಗೊಳಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.
ಮಿತಿಮೀರಿದ ಅಪೌಷ್ಟಿಕತೆ:
ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಟಿಕತೆ ಮಿತಿಮೀರಿದೆ. ಇದರಿಂದ ಮಕ್ಕಳನ್ನು ಪಾರು ಮಾಡಲು ಜಿಲ್ಲಾಡಳಿತ ಶತಾಯ ಗತಾಯ ಶ್ರಮಿಸುತ್ತದೆ. ಆದರೆ, ಅಪೌಷ್ಟಿಕತೆ ನಿವಾರಣೆ ಮಾಡುವ ಉದ್ದೇಶದಿಂದ ನೀಡಲಾಗುತ್ತಿರುವ ಹಾಲು ಮಕ್ಕಳ ಬದಲು ಪಾಲಕರ ಪಾಲಾಗುತ್ತಿರುವುದು ಹಾಗೂ ನಿಯಮಿತವಾಗಿ ಹಾಲು ಪೂರೈಕೆ ಆಗದಿರುವುದು ಅಪೌಷ್ಟಿಕತೆ ನಿವಾರಣೆ ಮಾಡುವ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗುತ್ತಿದೆ. ಈ ದಿಸೆಯಲ್ಲಿ ಅಗತ್ಯ ಕ್ರಮ ವಹಿಸುವ ಅಗತ್ಯವಿದೆ.
ಮಕ್ಕಳಲ್ಲಿರುವ ಅಪೌಷ್ಟಿಕತೆ ನಿವಾರಣೆ ಮಾಡಲು ಜಾಗೃತಿಗಾಗಿ ಸರ್ಕಾರ ಕೋಟಿ ಕೋಟಿ ಹಣ ವ್ಯಯ ಮಾಡುತ್ತದೆ. ಆದರೆ ಹಾಲಿನ ಪೌಡರ್ ಪೂರೈಕೆ ಮಾಡುವುದಕ್ಕೆ ಅನುದಾನ ನೀಡುವುದಿಲ್ಲ. ನೀಡಿದರೂ ಇಲಾಖೆಯಲ್ಲಿ ಕಮಿಷನ್ ಬರಬಹುದಾದ ಯೋಜನೆಗಳಿಗೆ ಖರ್ಚು ಮಾಡುತ್ತಾರೆಯೇ ಹೊರತು, ಹಾಲಿನ ಪೌಡರ್ ಪೂರೈಕೆ ಮಾಡುವುದಕ್ಕೆ ಖರ್ಚು ಮಾಡುವುದಿಲ್ಲ ಎನ್ನುವ ಆರೋಪವೂ ಇದೆ.
ಏಪ್ರಿಲ್‌ನಿಂದ ಪೂರೈಕೆ ಮಾಡಿಲ್ಲ
ಹಾಲಿನ ಪೌಡರ್ ಪೊರೈಕೆಗೆ ಬಂದ ಅನುದಾನ ಇಲಾಖೆಯಲ್ಲಿಯೇ ಕೆಲವೊಂದು ಸಿಡಿಪಿಒ ಕಚೇರಿಯಲ್ಲಿ ಬೇರೆಯದ್ದೇ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತದೆ. ಹೀಗಾಗಿ ಸಮಸ್ಯೆಯಾಗುತ್ತಿದೆ. ಕೆಲವೊಂದು ಸಿಡಿಪಿಒ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿಯೂ ಹಾಲಿನ ಪೌಡರ್ ಪೂರೈಕೆ ಮಾಡಿದ್ದರೆ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಏಪ್ರಿಲ್ ತಿಂಗಳಿಂದಲೂ ಪೂರೈಕೆ ಮಾಡಿಲ್ಲ.
ಬಾಕಿ ಹಣ ಬರದೇ ಇರುವುದರಿಂದ ಹಾಲಿನ ಪೌಡರ್ ಪೂರೈಕೆ ಮಾಡಲು ಆಗುತ್ತಿಲ್ಲ. ಅಂಗನವಾಡಿಗೆ 3-4 ತಿಂಗಳಿಂದ ಪೂರೈಕೆ ಮಾಡಿದ ಹಾಲಿನ ಪೌಡರ್‌ನ ಬಾಕಿ ಬಾರದಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಡಿಎಂ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಹಾಲು ಒಕ್ಕೂಟ ಜಿ.ಐ. ಪಡಸಾಲಗಿ ಅವರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಡಿಡಿ ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಕೊಪ್ಪಳ ಈರಣ್ಣ ಪಂಚಾಳ ಅವರು, ಕೆಲವೊಂದು ತಾಲೂಕಿನಲ್ಲಿ ಮಾತ್ರ ಸಮಸ್ಯೆಯಾಗಿದೆ. ಹಾಲಿನ ಪೌಡರ್ ಪೂರೈಕೆಯಲ್ಲಿ ಕೊರತೆಯಾಗಿ ವಿತರಣೆಯಾಗುತ್ತಿಲ್ಲ ಹೊರತು ಅನುದಾನದ ಕೊರತೆ ಇಲ್ಲ. ಆದರೂ ಈ ಕುರಿತು ಮಾಹಿತಿಯನ್ನು ತರಿಸಿಕೊಂಡು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ಮೂರು ತಿಂಗಳಿಂದ ಅಂಗನವಾಡಿ ಮಕ್ಕಳಿಗೆ ಹಾಲಿನ ಪೌಡರ್ ಪೂರೈಕೆಯನ್ನೇ ಮಾಡಿಲ್ಲ. ಇದರಿಂದ ಮಕ್ಕಳಿಗೆ ಹಾಲು ಇಲ್ಲದಂತಾಗಿದೆ. ಆದರೂ ಸರ್ಕಾರ ಕಣ್ಣು ತೆರೆದು ನೋಡುತ್ತಿಲ್ಲ ಎಂದು ಎಐಟಿಯುಸಿ ಜಿಲ್ಲಾ ಸಂಚಾಲಕರಾದ ಬಸವರಾಜ್ ಶೀಲವಂತರ ಅವರು ಹೇಳಿದ್ದಾರೆ.