ರಾಜ್ಯ ಸರ್ಕಾರದ ದ್ರೋಹ ಖಂಡಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ

By Web Desk  |  First Published Oct 18, 2019, 7:38 AM IST

ರಾಜ್ಯ ಸರ್ಕಾರ ಒಪ್ಪಿರುವ ಪಿಂಚಣಿ ಕೊಡದೆ ಮೋಸ| ಬಿಸಿಯೂಟ ನೌಕರರಿಗೆ ಮಾಡಿರುವ ದ್ರೋಹ ಖಂಡಿಸಿ ಪ್ರತಿಭಟನೆ| ಮಾನವ ಸಂಪನ್ಮೂಲ ಇಲಾಖೆಯಡಿ ಅಕ್ಷರ ದಾಸೋಹ ಯೋಜನೆ 2001-2002ರಿಂದ ಪ್ರಾರಂಭ|
17 ವರ್ಷಗಳಿಂದ ಈ ನೌಕರರಿಗೆ ಸೂಕ್ತವಾದ ವೇತನ, ಪಿಂಚಣಿ ಹಾಗೂ ಇತರೆ ಯಾವುದೇ ಸೌಲಭ್ಯಗಳನ್ನು ನೀಡದೆ ಮೋಸ ಮಾಡುತ್ತಿದೆ| 
 


ಕೊಪ್ಪಳ(ಅ.18): ರಾಜ್ಯ ಸರ್ಕಾರ ಒಪ್ಪಿರುವ ಪಿಂಚಣಿ ಸೌಲಭ್ಯ ಕೊಡದೆ ಬಿಸಿಯೂಟ ನೌಕರರಿಗೆ ಮಾಡಿರುವ ದ್ರೋಹವನ್ನು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಖಂಡಿಸುತ್ತದೆ ಎಂದು ಪ್ರತಿಭಟನೆ ಕೈಗೊಳ್ಳುವ ಮೂಲಕ ಘೋಷಣೆಗಳನ್ನು ಕೂಗುತ್ತಾ ವಿವಿಧ ಬೇಡಿಕೆಗೆ ಒತ್ತಾಯಿಸಿ ಅಪಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ನಂತರ ಮನವಿದಾರರು ಮಾತನಾಡಿ, ಮಾನವ ಸಂಪನ್ಮೂಲ ಇಲಾಖೆಯಡಿ ಅಕ್ಷರ ದಾಸೋಹ ಯೋಜನೆ 2001-2002ರಿಂದ ಪ್ರಾರಂಭವಾಗಿದೆ. ಇಂದಿನ ಸರ್ಕಾರಗಳು ಅಕ್ಕಿ ಅನ್ನ ಆಗಬೇಕು, ಅನ್ನ ಬೇಯಿಸಲು ತಗಲುವ ಖರ್ಚು ಮಾತ್ರ ನಮಗೆ ಸಂಬಂಧಿಸಿದ್ದು, ಅದರಲ್ಲಿರುವ ಉದ್ಯೋಗಿಗಳು ಲೆಕ್ಕಕ್ಕಿಲ್ಲ ಎನ್ನುವ ರೀತಿಯಲ್ಲಿ ಪರಿಗಣಿಸುತ್ತಿದೆ. 17 ವರ್ಷಗಳಿಂದ ಈ ನೌಕರರಿಗೆ ಸೂಕ್ತವಾದ ವೇತನ, ಪಿಂಚಣಿ ಹಾಗೂ ಇತರೆ ಯಾವುದೇ ಸೌಲಭ್ಯಗಳನ್ನು ನೀಡದೆ ಮೇಲಿನಿಂದ ಮೇಲೆ ಮೋಸ ಮಾಡುತ್ತಿದೆ. ಈ ವಿಷಯದ ಮೇಲೆ ಹಲವಾರು ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದೆ ಹಲವು ಹೋರಾಟಗಳು ನಡೆದಿದೆ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ದುಡಿಯುವ ಈ ಮಹಿಳೆಯರಿಗೆ ಕೇವಲ 2,600ರಿಂದ 2,700 ತಿಂಗಳ ಸಂಬಳ ಬಿಟ್ಟರೆ ಬೇರಾರ‍ಯವ ಸೌಲಭ್ಯಗಳು ಇಲ್ಲ. ಈಗಾಗಲೇ ಈ ಬಡ ಮಹಿಳೆಯರು ತಮ್ಮ ನಿವೃತ್ತಿ ಆಸುಪಾಸಿನಲ್ಲಿದ್ದಾರೆ. ರಾಜ್ಯದಲ್ಲಿ ಇರುವ 1.18 ಸಾವಿರ ಮಹಿಳೆಯರು ಈ ಯೋಜನೆಯಡಿ ದುಡಿಯುತ್ತಿದ್ದಾರೆ. ಈ ನೌಕರರ ಭವಿಷ್ಯ ನಿಧಿ (ಪಿಂಚಣಿ)ಗಾಗಿ 2016-2017 ಮತ್ತು 2018 ರಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಎಲ್‌ಐಸಿ ಪಿಂಚಣಿ ವಿಭಾಗದ ಅಧಿಕಾರಿಗಳು, ಸಂಘಟನಾ ಮುಖಂಡರೊಂದಿಗೆ ಜಂಟಿ ಮಾತುಕತೆ ನಡೆದಿದ್ದು, ಈ ಮಾತುಕತೆಯಲ್ಲಿ ಈ ನೌಕರರ ವೇತನದಲ್ಲಿ 100 ಹಾಗೂ ಸರ್ಕಾರ ಇದಕ್ಕೆ  1 ಸಾವಿರ ಕಡಿತ ಮಾಡಿ ಈ ಹಣವನ್ನು ಎಲ್‌ಐಸಿ ಮುಖಾಂತರ ವಿಶೇಷ ಪಿಂಚಣಿ ಯೋಜನೆ ರೂಪಿಸಲು ಒಪ್ಪಿಗೆ ಸೂಚಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ನೌಕರರ ವಯಸ್ಸಿನ ಆಧಾರ ಸಂಗ್ರಹಣೆ ಈಗಾಗಲೇ ಎಲ್ಲ ಜಿಲ್ಲೆಗಳಿಂದ ಸಂಗ್ರಹಿಸಿದೆ.

2018ರ ಫೆಬ್ರವರಿಯಲ್ಲಿ ರಾಜ್ಯಮಟ್ಟದ ಹೋರಾಟ ಬೆಂಗಳೂರಿನಲ್ಲಿ ನಡೆದಾಗ ಪಿಂಚಣಿಗೆ ಸಂಬಂಧಿಸಿದ ಬೇಡಿಕೆ ಬಗ್ಗೆ ಮಾತನಾಡಿದ್ದು, ಹೋರಾಟದ ಸ್ಥಳಕ್ಕೆ ಆಗಮಿಸಿದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಉಮಾಶಂಕರ್‌ ಸಹ ಮೌಖಿಕವಾಗಿ ಒಪ್ಪಿಗೆ ಸೂಚಿಸಿರುತ್ತಾರೆ. ಅಲ್ಲದೆ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸಚಿವರಾದ ಸುರೇಶ್‌ ಕುಮಾರ್‌ ಅವರನ್ನು ಸೆ. 19ರಂದು ಭೇಟಿಯಾದಾಗ ನಮ್ಮ ಬೇಡಿಕೆಗಳ ಮನವಿ ನೀಡಿ ಮೌಖಿಕವಾಗಿ ಸಹ ಚರ್ಚೆ ನಡೆಸಲಾಗಿದೆ. ಈ ವಿಚಾರ ಮಾತನಾಡಲು ಸೆ. 30ರ ನಂತರ ಮಾತುಕತೆಗೆ ದಿನಾಂಕ ನಿಗದಿಗೊಳಿಸಲಾಗುವುದು ಎಂದು ಒಪ್ಪಿಕೊಂಡಿರುತ್ತಾರೆ. ಎಲ್ಲವೂ ಅಂತಿಮವಾಗುವ ಹಂತದಲ್ಲಿರುವಾಗ ಶಿಕ್ಷಣ ಇಲಾಖೆಯಿಂದ ಸೆ. 19ರಂದು ಪ್ರಧಾನಮಂತ್ರಿ ಶ್ರಮಯೋಗಿ-ಮನ್‌-ಧನ್‌ ಪಿಂಚಣಿ ಯೋಜನೆಗೆ ಶಾಲಾ ಬಿಸಿಯೂಟ ನೌಕರರನ್ನು ಒಳಪಡಿಸುವ ಆದೇಶ ಹೊರಡಿಸಿದೆ. ಸುತ್ತೋಲೆ ನೀಡಿ ಆದೇಶವು ನಮಗೆ ದೊಡ್ಡ ಆಘಾತ ಉಂಟು ಮಾಡಿದೆ.

ಈ ಯೋಜನೆಯು ತಾತ್ಕಾಲಿಕವಾಗಿದ್ದು, 40 ವರ್ಷ ವಯಸ್ಸಿನವರಿಗೆ, ಯೋಜನೆ ಜನಸಾಮಾನ್ಯರಿಗೆ ಮಾತ್ರ. ಆದರೆ ನಾವು ಒತ್ತಾಯಿಸುತ್ತಿರುವುದು ಶಿಕ್ಷಣ ಇಲಾಖೆ ಅಡಿಯಲ್ಲಿ ದುಡಿಯುತ್ತಿರುವ 1.18 ಸಾವಿರ ಸಿಬ್ಬಂದಿಗೆ ವಿಶೇಷವಾಗಿ ಪಿಂಚಣಿ ಸೌಲಭ್ಯ ಬೇಕೆಂಬುದು ಸಂಘಟನೆಯ ಬೇಡಿಕೆ ಮತ್ತು ಸೆ. 19ರ ಸುತ್ತೋಲೆಯಲ್ಲಿ ಸಂಘಟನೆ ಬೇಡಿಕೆ ಎಂಬುದಾಗಿ ಸರ್ಕಾರ ಸುಳ್ಳು ಹೇಳಿರುವುದು ನಾಚಿಕೆಗೇಡಿನ ವಿಷಯ. ಈ ನೌಕರರಿಗೆ ಯಾವುದೇ ರೀತಿಯ ಪ್ರಯೋಜನವಾಗದ ಈ ಆದೇಶವನ್ನು ನಮ್ಮ ಸಂಘಟನೆ ಬಲವಾಗಿ ವಿರೋಧಿಸುತ್ತದೆ.

ಇಲಾಖೆಯು ಈ ಆದೇಶ ರದ್ದುಪಡಿಸಿ ಈ ಹಿಂದೆ ಮಾತುಕತೆ ನಡೆಸಿದ ಪ್ರಕಾರ ಜಾರಿ ಮಾಡದಿದ್ದಲ್ಲಿ ಮುಂದಿನ ದಿನಗಲ್ಲಿ ಈ ಹೋರಾಟವು ಬೆಂಗಳೂರಿನಲ್ಲಿ ಬೃಹತ್‌ ಆಗಿ ನಡೆಸಲಾಗುವುದು. ಹಾಗೆ ವಿವಿಧ ಬೇಡಿಕೆಗಳಾದ ನಾಲ್ಕು ತಿಂಗಳಿಂದ ತಡೆಯಾಗಿರುವ ವೇತನ ಬಿಡುಗಡೆ ಮಾಡಬೇಕು, ಹಾಜರಾತಿ ನೆಪದಲ್ಲಿ ಕೆಲಸ ತೆಗೆಯುವುದು ಬಿಡಬೇಕು, ಹೊಸ ಪಿಂಚಣಿ ಯೋಜನೆಗೆ ನೊಂದಣಿ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಚುನಾವಣೆ ಬಂದ ಸಂದರ್ಭದಲ್ಲಿ ಎಲ್ಲ ಚುನಾವಣೆ ಸಿಬ್ಬಂದಿಗೆ ಸಂಭಾವನೆ ನೀಡುತ್ತಾರೆ. ಆದರೆ, ಬಿಸಿಯೂಟ ಕೆಲಸಗಾರರನ್ನು ಚುನಾವಣೆ ಸಮಯದಲ್ಲಿ ಅಡುಗೆ ಮಾಡುವವರಿಗೆ ಸಂಭಾವನೆ ಕೊಡುತ್ತಿಲ್ಲ. ಇವರಿಗೂ ವೇತನವನ್ನು ಚುನಾವಣಾಧಿಕಾರಿಗಳು ಸಂಭಾವನೆ ಕೊಡಲು ಜಾರಿ ಮಾಡಬೇಕು. ಎಸ್‌ಡಿಎಂಸಿ ಅಧ್ಯಕ್ಷರು ಬದಲಾವಣೆಯಾದಂತೆ ಬಿಸಿಯೂಟ ಅಡುಗೆಯವರನ್ನು ಬದಲಾವಣೆ ಮಾಡಬಾರದು. ಎಸ್‌ಡಿಎಂಸಿ ಅಧ್ಯಕ್ಷರ ಕಿರುಕುಳವನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಲಕ್ಷ್ಮೀದೇವಿ ಸೋನಾರ್‌, ಅನ್ನಪೂರ್ಣ, ಪ್ರಧಾನ ಕಾರ್ಯದರ್ಶಿಗಳಾದ ಶಿವನಗೌಡ, ಮಂಜುನಾಥ ಡಗ್ಗಿ, ಅಪ್ಪಾಸಾಬ್‌ ಡಂಬಳಿ, ಹನುಮೇಶ ಕಲ್ಮಂಗಿ, ಸಿಐಟಿಯುನ ಖಾಸಿಮ್‌ಸಾಬ್‌ ಸರದಾರ, ಹನುಮೇಶ ಕಲ್ಮಂಗಿ, ಸುಂಕಪ್ಪ ಗದಗ, ಪದ್ಮಾವತಿ ಪಿ. ಕುಡಗುಂಟಿ, ಅನಸೂಯಾ ಗಂಗಾವತಿ, ಅಪ್ಪಾಸಾಬ್‌ ಡಂಬಳಿ, ಜಯಶ್ರೀ ಕುಕನೂರ, ಕಸ್ತೂರೆಮ್ಮ ವಂಕಲಕುಂಟಾ, ಶಾರದಾ ಕಿನ್ನಾಳ ಇತರರು ಇದ್ದರು.
 

click me!