ಶೌಚಾಲಯ ಶುಚಿಗೊಳಿಸಿದ ಗವಿಸಿದ್ಧೇಶ್ವರ ಶ್ರೀಗಳು!

By Suvarna News  |  First Published Jan 15, 2020, 8:12 AM IST

ಶೌಚಾಲಯ ಶುಚಿಗೊಳಿಸಿದ ಗವಿಸಿದ್ಧೇಶ್ವರ ಶ್ರೀಗಳು!| ಸ್ವತಃ ಕಸಬರಿಕೆ ಹಿಡಿದು ಕಸ ಗುಡಿಸಿದ ಶ್ರೀಗಳು| ಫೋಟೋ ತೆಗೆಯದಂತೆ ಸೂಚನೆ


 ಕೊಪ್ಪಳ[ಜ.15]: ಕಳೆದ ವರ್ಷ ಗವಿಸಿದ್ಧೇಶ್ವರ ಸ್ವಾಮಿಯ ಜಾತ್ರೆಯ ವೇಳೆ ಯಾತ್ರಾರ್ಥಿಗಳಿಗಾಗಿ ನಿರ್ಮಿಸಿದ್ದ ಶೌಚಾಲಯಗಳನ್ನು ಶುಚಿಗೊಳಿಸಿದ್ದ ಗವಿಸಿದ್ಧೇಶ್ವರ ಶ್ರೀಗಳು, ಈ ಬಾರಿಯೂ ಸ್ವತಃ ಕಸಬರಿಗೆ ಹಿಡಿದು ಜಾತ್ರಾಯ ಆವರಣದಲ್ಲಿ ಭಕ್ತರಿಗಾಗಿ ತೆರೆದಿರುವ ಶೌಚಾಲಯಗಳನ್ನು ಶುಚಿಗೊಳಿಸಿ, ಕಸ ಗುಡಿಸಿ ಸ್ವಚ್ಛತೆಯ ಮಹತ್ವವನ್ನು ಸಾರಿದ್ದಾರೆ.

ಇತಿಹಾಸ ಪ್ರಸಿದ್ಧ ಗವಿಮಠದ ಈ ಶ್ರೀ ಗವಿಸಿದ್ಧೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸಾಂಗಾವಾಗಿ ಸಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಜಾತ್ರೆಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಲೋಪವಾಗದಂತೆ ಪ್ರತಿಯೊಂದು ಕಾರ್ಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಗವಿಸಿದ್ಧೇಶ್ವರ ಶ್ರೀಗಳು ಮಂಗಳವಾರ ಮುಂಜಾನೆ 4.30- 5ರ ವೇಳೆಗೆ ಜಾತ್ರೆಯ ಆವರಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಜೊತೆಗಿದ್ದವರು ಎಷ್ಟೇ ಹೇಳಿದರೂ ಬಿಡದೆ, ಅವರನ್ನೆಲ್ಲ ದೂರ ಕಳುಹಿಸಿ, ತಾವೇ ಸ್ವಯಂ ಸ್ಫೂರ್ತಿಯಿಂದ ಶೌಚಾಲಯಗಳನ್ನು ಸ್ವಚ್ಛ ಮಾಡಿದ್ದಾರೆ.

Tap to resize

Latest Videos

ಕೊಪ್ಪಳದ ಜಾತ್ರೆಯಲ್ಲಿಯೂ ಮೋದಿ ಮೋದಿ, ಹೌದು ಹುಲಿಯಾದ್ದೇ ಹವಾ!

ವಿಡಿಯೋ, ಫೋಟೋ ತೆಗೆಯದಂತೆ ಸೂಚನೆ!:

ಇನ್ನು ಕಳೆದ ಬಾರಿ ಶ್ರೀಗಳು ಶೌಚಾಲಯ ಶುಚಿಗೊಳಿಸಿದ ವಿಡಿಯೋ ವೈರಲ್‌ ಆಗಿ ಸಾಕಷ್ಟುಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿದ ಶ್ರೀಗಳು ತಮ್ಮ ಜೊತೆಯಲ್ಲಿದ್ದವರಿಗೆ ಮೊಬೈಲ್‌ಗಳನ್ನು ಕಾರಿನಲ್ಲಿಟ್ಟು ಬರುವಂತೆ ಸೂಚಿಸಿದ್ದಾರೆ. ಅಲ್ಲದೇ ಯಾರು ಸಹ ತಾವು ಶುಚಿಗೊಳಿಸುವುದನ್ನು ವಿಡಿಯೋ ಮಾಡದಂತೆ, ಫೋಟೋ ತೆಗೆಯದಂತೆ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.

2 ದಿನದಲ್ಲಿ 5 ಲಕ್ಷ ಭಕ್ತರಿಂದ ಪ್ರಸಾದ ಸ್ವೀಕಾರ

ದಕ್ಷಿಣ ಭಾರತದ ಕುಂಭಮೇಳವೆಂದೇ ಪ್ರಸಿದ್ಧಿಯಾಗಿರುವ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಕೇವಲ ಎರಡೇ ದಿನದಲ್ಲಿ (ಭಾನುವಾರ, ಸೋಮವಾರ) 5 ಲಕ್ಷಕ್ಕೂ ಅಧಿಕ ಮಂದಿ ಪ್ರಸಾದ ಸ್ವೀಕರಿಸಿದ್ದಾರೆ. ಎರಡೂ ದಿನವೂ ಬೆಳಗ್ಗೆ 9ರ ವೇಳೆಗೆ ಆರಂಭಗೊಂಡ ದಾಸೋಹ ಸೇವೆ ಮಧ್ಯರಾತ್ರಿ 2ರ ವರೆಗೂ ಯಾವುದೇ ಅಡೆತಡೆ ಇಲ್ಲದೇ ನೆರವೇರಿದೆ.

ಎರಡೇ ದಿನದಲ್ಲಿ 200 ಕ್ವಿಂಟಲ್ ಮಾದಲಿ (ಸಿಹಿ ಪದಾರ್ಥ), 4ರಿಂದ 5 ಲಕ್ಷ ರೊಟ್ಟಿ, 200 ಕ್ವಿಂಟಲ್‌ ಅಕ್ಕಿ, 3 ಸಾವಿರ ಲೀಟರ್‌ ಹಾಲು, 7.5 ಕ್ವಿಂಟಲ್‌ ತುಪ್ಪ, 40 ಕ್ವಿಂಟಲ್‌ ತರಕಾರಿ, 35 ಕ್ವಿಂಟಲ್‌ ಬೇಳೆ, 12 ಕೊಪ್ಪರಿಗೆ ಸಾಂಬಾರು, 8 ಕ್ವಿಂಟಲ್‌ ಪುಟಾಣಿ ಚಟ್ನಿ, 10 ಕ್ವಿಂಟಲ್‌ ಉಪ್ಪಿನಕಾಯಿ ಹಾಗೂ 6 ಕ್ವಿಂಟಲ್‌ ಕೆಂಪು ಚಟ್ನಿಯನ್ನು ಪ್ರಸಾದ ಭೋಜನದ ರೂಪದಲ್ಲಿ ನೀಡಲಾಗಿದೆ.

ಒಂದೇ ತಾಸು ನಿದ್ದೆ!:

ದಾಸೋಹ ಸೇರಿದಂತೆ ಎಲ್ಲಾ ವ್ಯವಸ್ಥೆಗಳ ಪರಿಶೀಲನೆ ನಡೆಸಿದ ಶ್ರೀಗಳು, ಸೋಮವಾರ ಮಧ್ಯರಾತ್ರಿ 1.30ರ ವೇಳೆಗೆ ಗುಡ್ಡದ ಮೇಲೆ ಹೋಗಿದ್ದಾರೆ. ಈ ವೇಳೆ ಪೂಜೆ ನೆರವೇರಿಸಿ, ಪ್ರಸಾದ ಸ್ವೀಕರಿಸಿ ಬಂದ ಭಕ್ತರನ್ನು ಮಾತನಾಡಿಸಿ ಅವರಿಗೆ ದಾಸೋಹದ ವ್ಯವಸ್ಥೆ ಮಾಡುವಷ್ಟರಲ್ಲಿ ಮುಂಜಾನೆ 3 ಗಂಟೆ ಆಗಿದೆ. ಸ್ವಲ್ವ ಹೊತ್ತು ವಿಶ್ರಾಂತಿ ಪಡೆದ ಶ್ರೀಗಳು 4ಕ್ಕೆ ಎದ್ದು, ಪುನಃ ಜಾತ್ರೆಯ ಆವರಣಕ್ಕೆ ನಸುಕಿನಲ್ಲೇ ಆಗಮಿಸಿದರು ಎಂದು ಭಕ್ತರು ತಿಳಿಸಿದ್ದಾರೆ.

click me!