ಗಂಗಾವತಿ: ಅಕ್ರಮ ಮರಳು ದಂಧೆ ಮೇಲೆ ದಾಳಿ, 40 ಟ್ರಕ್‌ ಲೋಡ್ ಮರಳು ವಶ

By Web DeskFirst Published Nov 7, 2019, 8:34 AM IST
Highlights

ಬೆಂಗಳೂರು, ದಾವಣಗೆರೆ ಜಿಲ್ಲೆಗಳಲ್ಲಿ ಭಾರಿ ಮೊತ್ತಕ್ಕೆ ಮಾರಾಟ ಮಾಡಲು ಸಂಗ್ರಹಿಸಿದ ಮರಳು | ದಂಧೆಕೋರರು ನಾಪತ್ತೆ|8 ಜನರ ಮೇಲೆ ಪ್ರಕರಣ ದಾಖಲು|ರಾತ್ರೋ ರಾತ್ರಿ ಪೊಲೀಸರ ಕಣ್ಣು ತಪ್ಪಿಸಿ ಮರಳು ಸಾಗಾಣಿಕೆ|

ಗಂಗಾವತಿ[ನ.7]: ತಾಲೂಕಿನ ಗೂಗಿಬಂಡಿ ಕ್ಯಾಂಪ್, ಸಿಂಗನಗುಂಡ ಗ್ರಾಮಗಳ ಹತ್ತಿರವಿರುವ ತುಂಗಭದ್ರಾ ದಡದಲ್ಲಿಅವ್ಯಾಹತವಾಗಿ ಮರಳು ದಂಧೆ ನಡೆದಿದ್ದು, ಮರಳನ್ನು ಬೆಂಗಳೂರು, ದಾವಣಗೇರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಮೊತ್ತಕ್ಕೆ ಮರಳು ಮಾರಾಟ ಮಾಡಲು ಸಂಗ್ರಹಿಸಿದ್ದ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಈ ವೇಳೆ ದಂಧೆಕೋರರು ನಾಪತ್ತೆಯಾಗಿದ್ದಾರೆ. ಗೂಗಿಬಂಡಿ ಕ್ಯಾಂಪ್, ಸಿಂಗನಗುಂಡ ಗ್ರಾಮಗಳಲ್ಲಿಅವ್ಯಾಹತವಾಗಿ ಮರಳು ದಂಧೆ ನಡೆಯುತ್ತಿರುವುದಕ್ಕೆ ರೈತರು ರೋಸಿ ಹೋಗಿದ್ದರು. ಹಗಲು ರಾತ್ರಿ ನೂರಾರು ವಾಹನಗಳ ಓಡಾಟದಿಂದ ಗದ್ದೆಗೆ ಹೋಗುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದವು. ನದಿ ತೀರದಲ್ಲಿ 40 ಟ್ರಕ್‌ ಲೋಡ್ ಮರಳು ಸಂಗ್ರಹಿಸಿದ್ದು,ಇದರ ಮಾಹಿತಿ ಪಡೆದ ಭೂ ವಿಜ್ಞಾನ, ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಮರಳನ್ನು ಜಪ್ತಿ ಮಾಡಿದ್ದಲ್ಲದೆ 8 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ನಿಲ್ಲದ ದಂಧೆ:

ಕಳೆದ ನಾಲ್ಕು ತಿಂಗಳ ಹಿಂದೆ ಸಮೀಪದ ನವಲಿ ಗ್ರಾಮದಲ್ಲಿ ಗುಜರಾತ ಮೂಲದ ಕಾರ್ಮಿಕರ ಮೂವರು ಮಕ್ಕಳು ಮರಳಿನಲ್ಲಿ ಸಿಲುಕಿ ಮೃತಪಟ್ಟಿದ್ದರು. ಅಲ್ಲದೇ ಹೇರೂರು ಗ್ರಾಮದಲ್ಲಿ ಹಳ್ಳದಲ್ಲಿ ಸಿಲುಕಿ ಮರಳಿನ ದಂಧೆಯಿಂದಾಗಿ ಓರ್ವ ಬಾಲಕ ಮೃತಪಟ್ಟಿರುವ ಉದಾಹರಣಗಳಿವೆ. ಅಲ್ಲದೇ ಮರಳು ದಂಧೆಯ ಸ್ಥಳದಲ್ಲಿ ದನಕರುಗಳು ಸಿಕ್ಕು ಮೃತಪಟ್ಟ ಉದಾಹರಣೆಗಳು ಇದ್ದರೂ ಮರಳು ದಂಧೆ ಮಾತ್ರ ಎಗ್ಗಿಲ್ಲದೇ ನಡೆದಿದೆ ಎಂಬ ಅರೋಪ ಕೇಳಿ ಬರುತ್ತಿದೆ. ಮರಳು ಕುಸಿದು ಮೃತಪಟ್ಟ ಪಾಲಕರಿಗೆ ದಂಧೆ ಮಾಡುವವರು ಪರಿಹಾರ ನೀಡದೆವಂಚಿಸಿದ್ದಾರೆ. ಈ ಕುರಿತು ಗಂಗಾವತಿ ಮತ್ತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರು ಸಹ ಮೃತ ಪಾಲಕರಿಗೆ ಮಾತ್ರ ಪರಿಹಾರ ಮರಿಚೀಕೆಯಾಗಿ ಉಳಿದಿದೆ. 

ಭಾರಿ ಮೊತ್ತಕ್ಕೆ ಮಾರಾಟ:

ಗಂಗಾವತಿ ಸೇರಿದಂತೆ ಜಿಲ್ಲೆಯಲ್ಲಿ ಮರಳು ಸಾಗಾಣಿಕೆ ಮಾಡಿದರೆ ಟ್ರಕ್‌ಗೆ 6 ರಿಂದ 8 ಸಾವಿರ ಸಿಗುತ್ತದೆ. ಆದರೆ ಬೆಂಗಳೂರು, ದಾವಣಗೇರಿ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಮರಳು ಸಾಗಾಣಿಕೆ ಮಾಡಿದರೆ ಟ್ರಕ್‌ಗೆ 80 ರಿಂದ 90 ಸಾವಿರ ಲಾಭ ಸಿಗುತ್ತದೆ. ಈ ಕಾರಣಕ್ಕೆ ಅಕ್ರಮವಾಗಿ ಮರಳು ದಂಧೆ ಮಾಡುವವರು ಈಗ ತುಂಗಭದ್ರಾ ನದಿಗೆ ಲಗ್ಗೆ ಇಟ್ಟಿದ್ದಾರೆ. ರಾತ್ರೋ ರಾತ್ರಿ ಪೊಲೀಸರ ಕಣ್ಣು ತಪ್ಪಿಸಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸ್ ಇಲಾಖೆ ಪಡೆದಿದೆ. 

ನದಿ ತೀರ ಆಯ್ಕೆ:

ಈಗಾಗಲೇ ಗಂಗಾವತಿತಾಲೂಕಿನಲ್ಲಿರುವ ಹಳ್ಳಗಳಲ್ಲಿ ಮರಳು ತೆಗೆದು ಮಾರಾಟ ಮಾಡಿ ಖಾಲಿ ಮಾಡಿದ್ದಾರೆ. ಈಗ ನದಿ ತೀರದ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ನವಲಿ, ಈಚನಾಳ, ಸಿದ್ದಾಪುರ, ಸೋಮನಾಳ ಕಕ್ಕರಗೋಳ ನಂದಿಹಳ್ಳಿ, ಗೂಡೂರು ಸೇರಿದಂತೆ ಹಳ್ಳಗಳಿರುವ ಪ್ರದೇಶಗಳಲ್ಲಿ ಮರಳು ದಂಧೆ ಮಾಡುತ್ತಿದ್ದರು. ಈಗ ಆ ಪ್ರದೇಶ ಬರಿದಾಗಿದ್ದರಿಂದ ತುಂಗಭದ್ರಾ ನದಿ ತೀರದ ಪ್ರದೇಶ ಆಯ್ಕೆ ಮಾಡಿದ್ದಾರೆ. ಗೂಗಿಬಂಡಿ ಕ್ಯಾಂಪ್, ಸಿಂಗನಗೊಂಡ ಮತ್ತು ದೇವಘಾಟ್ ಬಳಿ ಇರುವ ನದಿ ಪ್ರದೇಶದಲ್ಲಿಅವ್ಯಾಹತವಾಗಿ ಮರಳು ದಂಧೆ ನಡೆಸಿದ್ದಾರೆ. ಈಚೆಗೆ ನದಿ ಪ್ರವಾಹ ಬಂದಿದ್ದರಿಂದ ಮರಳು ಹೇರಳವಾಗಿ ಲಭ್ಯವಾಗುತ್ತದೆ ಎಂಬ ಕಾರಣಕ್ಕೆ ದಂಧೆಕೋರರು ನದಿ ತೀರದ ಪ್ರದೇಶಕ್ಕೆ ಲಗ್ಗೆ ಇಟ್ಟಿದ್ದಾರೆ. ಈಗ ಮರಳು ಸಂಗ್ರಹಿಸಿದವರು ನಾಪತ್ತೆಯಾಗಿದ್ದು ವಾಹನಗಳನ್ನು ಮಾತ್ರ ಜಪ್ತಿ ಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗಂಗಾವತಿ ತಾಲೂಕಿನ ಗೂಗಿಬಂಡಿ ಕ್ಯಾಂಪ್‌ನಸರ್ಕಾರಿ ಭೂಮಿಯಲ್ಲಿ ಮರಳು ದಂಧೆ ಮಾಡುವುದಕ್ಕಾಗಿ 40 ಟ್ರಕ್‌ ನಷ್ಟು ಮರಳು ಸಂಗ್ರಹಿಸಿದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿಮಾಡಿದ್ದು, ಈ ವೇಳೆ ದಂಧೆಕೋರರು ನಾಪತ್ತೆಯಾಗಿದ್ದಾರೆ. ವಾಹನವನ್ನು ಜಪ್ತಿ ಮಾಡಲಾಗಿದ್ದು, ಮರಳನ್ನು ನಿರ್ಮಿತಿ ಕೇಂದ್ರಕ್ಕೆ ಒಪ್ಪಿಸಲಾಗಿದೆ. ಈ ಕುರಿತು ತನಿಖೆ ನಡೆದಿದ್ದು, ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು  ಕೊಪ್ಪಳ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಫಯಾಜ್ ಅವರು ಹೇಳಿದ್ದಾರೆ. 
 

click me!