10 ರು. ನಾಣ್ಯಗಳನ್ನು ತೆಗೆದುಕೊಳ್ಳದ- ಗ್ರಾಹಕರಿಂದ ಸ್ವೀಕರಿಸಲು ನಿರಾಕರಿಸುವ ಬ್ಯಾಂಕ್‌ಗೆ 10 ಲಕ್ಷದ ವರೆಗೆ ದಂಡ| ನೋಟು ಮುದ್ರಣದಲ್ಲಿ ಖರ್ಚಿನ ಹೊರೆ ಇಳಿಸುವ ಸಲುವಾಗಿ 10 ರು. ನೋಟುಗಳ ಮುದ್ರಣ ನಿಲ್ಲಿಸುವ ಸಾಧ್ಯತೆ| ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಬ್ಯಾಂಕಿಂಗ್ ಲೋಕಪಾಲ ವ್ಯವಸ್ಥೆ ಜಾರಿಯಲ್ಲಿದೆ|
ಕುಷ್ಟಗಿ(ಅ.29): ಚಲಾವಣೆಯಲ್ಲಿರುವ ಎಲ್ಲ ರೀತಿಯ 10 ರು. ನಾಣ್ಯಗಳನ್ನು ತೆಗೆದುಕೊಳ್ಳದ ಅಥವಾ ಗ್ರಾಹಕರಿಂದ ಸ್ವೀಕರಿಸಲು ನಿರಾಕರಿಸುವ ಬ್ಯಾಂಕ್‌ಗಳಿಗೆ 10 ಲಕ್ಷದ ವರೆಗೆ ದಂಡ ವಿಧಿಸಲು ನಿಯಮಗಳಲ್ಲಿ ಅವಕಾಶವಿದೆ ಎಂದು ಬೆಂಗಳೂರಿನ ರಿಸರ್ವ್ ಬ್ಯಾಂಕ್‌ನ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಟಿ.ರಾಜಗೋಪಾಲ ಅವರು ಹೇಳಿದ್ದಾರೆ.
ಬೆಂಗಳೂರಿನ ರಿಸರ್ವ್ ಬ್ಯಾಂಕ್ ಮತ್ತು ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ವತಿಯಿಂದ ಶುಕ್ರವಾರ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆರ್ಥಿಕ ಸಾಕ್ಷರತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೋಟು ಮುದ್ರಣದಲ್ಲಿ ಖರ್ಚಿನ ಹೊರೆ ಇಳಿಸುವ ಸಲುವಾಗಿ 10 ರು. ನೋಟುಗಳ ಮುದ್ರಣವನ್ನು ನಿಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಿದರು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಬ್ಯಾಂಕಿಂಗ್ ಒಂಬಡ್ಸ್‌ಮನ್ (ಲೋಕಪಾಲ) ವ್ಯವಸ್ಥೆ ಜಾರಿಯಲ್ಲಿದೆ. ಬ್ಯಾಂಕಿನ ವಿಷಯಗಳಲ್ಲಿ ತೊಂದರೆಯಾದಾಗ ಗ್ರಾಹಕರು ಅಂಚೆ ಮೂಲಕ ದೂರು ಸಲ್ಲಿಸಿದರೂ ಯಾವುದೇ ಖರ್ಚಿಲ್ಲದೆ ಗ್ರಾಹಕರ ತೊಂದರೆ ನಿವಾರಣೆಗೆ ಆರ್‌ಬಿಐ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಸಾಕ್ಷರತಾ ಸಮಾಲೋಚಕ ದೊಡ್ಡಪ್ಪ ಜ್ಯೋತಿ ಮಾತನಾಡಿ, ಬ್ಯಾಂಕ್‌ಗಳ ವಿವಿಧ ಠೇವಣಿ ಹಾಗೂ ಸಾಲದ ಯೋಜನೆಗಳು, ಉಳಿತಾಯದ ಮಹತ್ವ, ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಬದುಕಿನಲ್ಲಿ ಪ್ರಾಮಾಣಿಕತೆ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಸಪ್ತಾಹದ ನಿಮಿತ್ತ ವಿದ್ಯಾರ್ಥಿಗಳು, ಶಿಕ್ಷಕರು, ಬ್ಯಾಂಕ್ ಅಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು.
ಕೊಪ್ಪಳದ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಬುರಾವ್ ಬೋರಾಳೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಶರಣಯ್ಯ ಹಿರೇಮಠ, ಸಹ ಶಿಕ್ಷಕ ವೀರೇಶಪ್ಪ, ಮುರ್ತುಜಾಸಾಬ ಇದ್ದರು. ಡಾ. ಕೆ. ಶರಣಪ್ಪ ನಿರೂಪಿಸಿದರು.