ಕೋಲಾರದಲ್ಲಿ ಜಾಲಪ್ಪ ಸಂಸ್ಥೆಗಳ ಮೇಲೆ ಐಟಿ ದಾಳಿ

By Kannadaprabha NewsFirst Published Oct 11, 2019, 10:17 AM IST
Highlights

ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ ಅವರ ಅಳಿಯ ಹಾಗೂ ಮಗನ ಮನೆ ಮೇಲೆ ಐಟಿ ದಾಳಿ ನಡೆದಿರುವುದು ಮಾತ್ರವಲ್ಲದೆ ಅವರ ಅಧಿನದಲ್ಲಿರುವ ಸಂಸ್ಥೆಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಹೊರವಲಯದಲ್ಲಿರುವ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ಮತ್ತು ಮೆಡಿಕಲ್‌ ಕಾಲೇಜಿನ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ಕೋಲಾರ(ಅ.11): ನಗರದ ಹೊರವಲಯದಲ್ಲಿರುವ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ಮತ್ತು ಮೆಡಿಕಲ್‌ ಕಾಲೇಜಿನ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು.

ಕೇಂದ್ರದಲ್ಲಿ ಮಾಜಿ ಸಚಿವರಾಗಿದ್ದ ಆರ್‌.ಎಲ್‌.ಜಾಲಪ್ಪ ಅವರಿಗೆ ಸೇರಿದ ಕೋಲಾರದ ಹೊರವಲಯ ಟಮಕ ಬಳಿಯ ದೇವರಾಜ ಅರಸು ಮೆಡಿಕಲ್‌ ಕಾಲೇಜು ಮತ್ತು ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ಬೆಳ್ಳಂಬೆಳಗ್ಗೆ 5.30ಕ್ಕೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ಚಿಕ್ಕಬಳ್ಳಾಪುರ: ಮಾಜಿ ಸಚಿವರ ಅಳಿಯ, ಮಗನ ನಿವಾಸದ ಮೇಲೆ ಐಟಿ ದಾಳಿ

ಈ ತನಿಖೆ ಮೂರು ದಿವಸಗಳ ಕಾಲ ನಡೆಯಲಿದೆ ಎಂದು ಹೇಳಲಾಗುತ್ತಿತ್ತು. ತನಿಖೆ ವೇಳೆ ಯಾರನ್ನೂ ಒಳಗೆ ಬಿಡದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದರು.

ಇತ್ತ ಐಟಿ ಅಧಿಕಾರಿಗಳು ತಮ್ಮ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದರೆ ಅತ್ತ ಮೆಡಿಕಲ್‌ ಸಂಸ್ಥೆಯ ಸಂಸ್ಥಾಪಕರೂ ಆಗಿರುವ ಆರ್‌.ಎಲ್‌.ಜಾಲಪ್ಪ ಅವರು ತಮ್ಮ ಕಚೇರಿಯಲ್ಲಿದ್ದರು. ಮೆಡಿಕಲ್‌ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಿರುವ ವೇಳೆ ಕೋಟ್ಯಂತರ ರು. ಡೊನೇಷನ್‌ ಪಡೆದಿದ್ದರು ಎಂಬ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷವೂ ಇದೇ ರೀತಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ದಾಖಲೆ ಇಲ್ಲದ ಸುಮಾರು .2 ಕೋಟಿ ಹಣ ಮತ್ತು ಕೆಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದರು ಎನ್ನಲಾಗಿದೆ.

ಗೆಸ್ಟ್‌ಹೌಸ್‌ನಲ್ಲಿ ತಣ್ಣಗಿದ್ದ ಆರ್‌.ಎಲ್‌.ಜಾಲಪ್ಪ

ನಗರದ ಹೊರವಲಯದಲ್ಲಿರುವ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸುವ ವೇಳೆ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ ಅವರ ಗೆಸ್ಟ್‌ ಹೌಸ್‌ನಲ್ಲಿ ತಣ್ಣಗಿದ್ದರು.

ಬುಧವಾರ ರಾತ್ರಿ ಮೆಡಿಕಲ್‌ ಕಾಲೇಜಿನಲ್ಲಿರುವ ತಮ್ಮ ಗೆಸ್ಟ್‌ಹೌಸ್‌ನಲ್ಲಿ ತಂಗಿದ್ದ ಅವರು, ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಸುದ್ದಿ ಕೇಳಿ ಬೆಳಗ್ಗೆ 10.30ಕ್ಕೆ ತಮ್ಮ ಕಚೇರಿಯಲ್ಲಿ ಬಂದು ಕುಳಿತ್ತಿದ್ದರು. ನಂತರ ತಮ್ಮ ಗೆಸ್ಟ್‌ಹೌಸ್‌ಗೆ ವಾಪಸ್ಸಾದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಲು ನಿರಾಕರಿಸಿದರು.

ಬೆಂಗಳೂರಿನ ಡಾಲ​ರ್ಸ್ ಕಾಲೋನಿಯಲ್ಲಿ ವಾಸವಿರುವ ಜಾಲಪ್ಪ ಅವರು ಸಾಮಾನ್ಯವಾಗಿ ವಾರಕ್ಕೆ ಮೂರು ದಿವಸ ಕೋಲಾರದ ತಮ್ಮ ಮೆಡಿಕಲ್‌ ಕಾಲೇಜಿನ ಗೆಸ್ಟ್‌ಹೌಸ್‌ಗೆ ಬಂದು ತಂಗುತ್ತಾರೆ. ಅದರಂತೆ ಬುಧವಾರ ರಾತ್ರಿ ಕೂಡ ಅವರು ಕೋಲಾರದ ಗೆಸ್ಟ್‌ಹೌಸ್‌ಗೆ ಬಂದು ತಂಗಿದ್ದರು.

ಕೋಲಾರ: ನೀರಿಲ್ಲದ ಕೊಳವೆ ಬಾವಿಗೂ ವಿದ್ಯುತ್‌ ಬಿಲ್‌!.

click me!