ಗ್ರಾಪಂ ವತಿಯಿಂದ ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು. ಮೊದಲ ಹಂತವಾಗಿ ಕಲಬುರಗಿ ಮತ್ತು ಮಾಲೂರಿನಲ್ಲಿ ಪ್ರಾಯೋಗಿಕವಾಗಿ ಸೋಲಾರ್ ಪ್ಲಾಂಟ್ ನಿರ್ಮಿಸಲಾಗುವುದು.
ಕೋಲಾರ: ಮಾಲೂರು ರಾಜ್ಯದಲ್ಲಿಯೇ ಮೊದಲ ಬಾರಿಗೆ ಗ್ರಾಪಂ ವತಿಯಿಂದ ಸೋಲಾರ್‌ಮೂಲಕ ವಿದ್ಯುತ್ ನ್ನು ಉತ್ಪಾದಿಸಿ ಗ್ರಾಪಂಗಳಿಗೆ ಪೂರೈಸುವ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದು, ಮೊದಲ ಹಂತದಲ್ಲಿ ಕಲಬುರಗಿ ಹಾಗೂ ಮಾಲೂರಿನಲ್ಲಿ ಪ್ರಾಯೋಗಿಕವಾಗಿ ಸೋಲಾರ್‌ಪ್ಲಾಂಟ್ ನಿರ್ಮಿಸಿ ಅನುಕೂಲ ಕಲ್ಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ತಾಲೂಕಿನ ಸಂತೆಹಳ್ಳಿಯಲ್ಲಿ ನಿರ್ಮಿಸಿ ರುವ ನೂತನ ಗ್ರಾಪಂ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಪಂಗಳಿಂದ ಬೆಸ್ಕಾಂ ಇಲಾಖೆಗೆ ₹2500 ಕೋಟಿ ಬಾಕಿ ನೀಡಬೇಕಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದು ಗ್ರಾಪಂನಲ್ಲಿ ಸಾಕಷ್ಟು ಆದಾಯವಿದ್ದು, ನಾವು ಸ್ವಂತ ವಿದ್ಯುತ್‌ನ್ನು ಏಕೆ ತಯಾರಿಸಬಾರದು ಎಂದು ಮನವಿ ಸಲ್ಲಿಸಲಾಯಿತು. ಇದಕ್ಕೆ ಸಿಎಂ ಅನುಮೋ ದನೆ ನೀಡಿದ್ದು, ಕಲಬುರಗಿ ಹಾಗೂ ಮಾಲೂ ರಲ್ಲಿ ಪ್ರಾಯೋಗಿಕವಾಗಿ ಸೋಲಾರ್ ಪ್ಲಾಂಟ್ ನಿರ್ಮಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರ ಬಗ್ಗೆ ಪ್ರಿಯಾಂಕ್ ಖರ್ಗೆ ಪೋಸ್ಟ್
ಇಂದು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಸಂತೇಹಳ್ಳಿ ಗ್ರಾಮ ಪಂಚಾಯತಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದೆ. ಬಡವರ, ಮಹಿಳೆಯರ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಆರ್ಥಿಕ ಸ್ಥಿರತೆಯ ಕಾರ್ಯಕ್ರಮಗಳಿಂದ ಗ್ರಾಮೀಣ ಕುಟುಂಬಗಳಲ್ಲಿ ಇಂದು ನೆಮ್ಮದಿ ಮೂಡಿದೆ, ಮಕ್ಕಳ ವಿದ್ಯಾಭ್ಯಾಸ, ಸಾಲ ಮರು ಪಾವತಿ, ಪೌಷ್ಠಿಕ ಆಹಾರ ಸೇವನೆ, ಸಣ್ಣ ಪುಟ್ಟ ವ್ಯಾಪಾರದ ಮೂಲಕ ಜನರಿಂದು ಆರ್ಥಿಕ ಸಬಲೀಕರಣದತ್ತ ಹೊಸ ಹೆಜ್ಜೆ ಇಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭಗಳೆಲ್ಲ ಜನಪರವಾದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಗ್ರಾಮೀಣ ಜನರಲ್ಲಿ ನೆಮ್ಮದಿಯನ್ನು ತಂದಿದೆ, ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಗಳಾಗಿದ್ದ ಸಮಯದಲ್ಲಿ ಅನುಷ್ಠಾನಗೊಳಿಸಿದ ನರೇಗಾ ಯೋಜನೆ ಇಂದು ಗ್ರಾಮೀಣ ಜನರಿಗೆ ವಾರ್ಷಿಕ 100 ದಿನಗಳ ಉದ್ಯೋಗ ತಂದುಕೊಟ್ಟಿದೆ, ತಮ್ಮ ಸರ್ಕಾರ ಆರಂಭಿಸಿರುವ 3,867 ಕೂಸಿನಮನೆಗಳಲ್ಲಿ 50,000ಕ್ಕೂ ಹೆಚ್ಚು ಮಕ್ಕಳ ಪೋಷಣೆ ಮಾಡಲಾಗುತ್ತಿದೆ, ಈ ಮೂಲಕ 50,000 ಮಹಿಳೆಯರು ನರೇಗಾ ಕಾರ್ಯಕ್ರಮದಡಿ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ: 'ಜನರೇ ಜಟ್ಕಾ ಕಟ್ ಮಾಡಿ ಬಿಸಾಡಿದ್ದಾರೆ..' ಬಿಜೆಪಿಯ ಹಲಾಲ್ ಬಜೆಟ್ ಟೀಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ
ಗ್ರಾಮಗಳಿಗೆ ಅವಶ್ಯವಾದ ಸೌರ ವಿದ್ಯುತ್ತನ್ನು ಗ್ರಾಮಪಂಚಾಯತಿಗಳೇ ಉತ್ಪಾದಿಸುವ ವಿನೂತನ ಯೋಜನೆಯನ್ನು ಈ ಬಾರಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಈ ಬಾರಿಯ ಆಯವ್ಯಯದಲ್ಲಿ ಪ್ರಕಟಿಸಲಾಗಿದೆ, ಮಾಲೂರು ಹಾಗೂ ಕಲಬುರಗಿಯಲ್ಲಿ ಈ ಬಾರಿ ಸೌರ ಘಟಕಗಳನ್ನು ಅರಂಭಿಸಲಾಗುವುದು. ಇಡೀ ದೇಶದಲ್ಲಿಯೇ ಮೊದಲ ರಾಜ್ಯವಾಗಿ, ರಾಜ್ಯ ಸರ್ಕಾರವೇ ಅನುದಾನ ಭರಿಸಿ ಪ್ರಗತಿಪಥ ಯೋಜನೆ ಮೂಲಕ ₹6,190 ಕೋಟಿ ವೆಚ್ಚದಲ್ಲಿ 2,267 ಕಿಲೋಮೀಟರ್ ಗ್ರಾಮೀಣ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದೆ, ಈ ಮೂಲಕ ಗ್ರಾಮಗಳ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಸಾಧ್ಯವಾಗಲಿದೆ. ಈ ಸಂದರ್ಭದಲ್ಲಿ ಮಾಲೂರು ಶಾಸಕರಾದ ನಂಜೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: 'ಖರ್ಗೆ ಹಾಲು ಕುಡಿದಷ್ಟು, ನಾನು ನೀರು ಕುಡಿದಿಲ್ಲ' ಟಿಎ ಶರವಣ ಮಾತಿಗೆ ಪರಿಷತ್‌ನಲ್ಲಿ ಪ್ರಿಯಾಂಕ್ ಕೆಂಡಾಮಂಡಲ!