ಕನ್ನಡ ನಾಡಿನ ಜೀವನದಿ, ಕೊಡಗಿನ ಕುಲ ದೇವತೆ ಕಾವೇರಿ ತವರು ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ತಲಕಾವೇರಿಯ ಪವಿತ್ರ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಪ್ರತ್ಯಕ್ಷವಾಗುತ್ತಾಳೆ. ಈ ಬಾರಿ ಅ.18ರ ಮುಂಜಾನೆ 12.59ಕ್ಕೆ ಕರ್ಕಾಟಕ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದ್ದು, ಬ್ರಹ್ಮ ಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿ ಬರಲಿದೆ.
ಮಡಿಕೇರಿ (ಅ. 17): ಕನ್ನಡ ನಾಡಿನ ಜೀವನದಿ, ಕೊಡಗಿನ ಕುಲ ದೇವತೆ ಕಾವೇರಿ ತವರು ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ತಲಕಾವೇರಿಯ ಪವಿತ್ರ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಪ್ರತ್ಯಕ್ಷವಾಗುತ್ತಾಳೆ. ಈ ಬಾರಿ ಅ.18ರ ಮುಂಜಾನೆ 12.59ಕ್ಕೆ ಕರ್ಕಾಟಕ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದ್ದು, ಬ್ರಹ್ಮ ಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿ ಬರಲಿದೆ.
ತಿಂಗಳ ಕಾಲ ಭಾಗಮಂಡಲ ಜಾತ್ರೆ:
ತೀರ್ಥೋದ್ಭವದ ಬಳಿಕ ಒಂದು ತಿಂಗಳ ಕಾಲ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಜಾತ್ರೆ ನಡೆಯಲಿದೆ. ವರ್ಷಕ್ಕೊಮ್ಮೆ ಘಟಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧೆಡೆ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಲಿದ್ದು ಇದಕ್ಕಾಗಿ ತಲಕಾವೇರಿ ಹಾಗೂ ತ್ರಿವೇಣಿ ಸಂಗಮ ಭಾಗಮಂಡಲದಲ್ಲಿ ಸಕಲ ರೀತಿಯಲ್ಲಿ ಸಿದ್ದತೆ ನಡೆದಿದೆ.
ಬ್ರಹ್ಮಗಿರಿ ತಪ್ಪಲಿನ ಸಣ್ಣ ಕುಂಡಿಕೆಯಿಂದ ಕಾವೇರಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸುಜ್ಯೋತಿ, ಕನ್ನಿಕೆಯೊಂದಿಗೆ ಸಂಗಮವಾಗುತ್ತಾಳೆ. ಹೀಗೆ ಕೊಡಗಿನ ಪರಿಸರದಲ್ಲಿ ಹಾದು ಹೋಗಿ ತಮಿಳುನಾಡು ಸೇರುತ್ತಾಳೆ. ಕಾವೇರಿ ಹಾದು ಹೋಗುವ ಜಲನಯನ ಪ್ರದೇಶದಲ್ಲಿ ಪೂಜೆಗಳು ನಡೆಯುತ್ತವೆ. ಕುಶಾಲನಗರ, ಮೈಸೂರು, ತಮಿಳುನಾಡಿನ ಕೆಲವು ಕಡೆಗಳಲ್ಲಿ ಕಾವೇರಿ ಮಾತೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಕೋಡಿ ಕುಟುಂಬದ ಜವಾಬ್ದಾರಿ:
ತಲಕಾವೇರಿ ದೇವಸ್ತಾನದ ಮುಖ್ಯಸ್ಥರನ್ನಾಗಿ ಅಂದಿನ ಕಾಲದಲ್ಲಿ ರಾಜರು ಕೋಡಿ ಕುಟುಂಬದವರನ್ನು ನೇಮಕ ಮಾಡಿದ್ದಾರೆ. ಉತ್ಸವಗಳನ್ನು ನಡೆಸಿಕೊಂಡು ಹೋಗುವ ಹೊಣೆ ಈ ಕುಟುಂಬದವರದ್ದು. ಸ್ವಾತಂತ್‌್ರಯಾನಂತರ ಮುಜರಾಯಿ ಇಲಾಖೆ ಉತ್ಸವ ನಡೆಸಿಕೊಂಡು ಬರುತ್ತಿದ್ದರೂ ಸಂಪ್ರದಾಯವನ್ನು ಕೋಡಿ ಕುಟುಂಬದವರು ಈಗಲೂ ನಿರ್ವಹಿಸುತ್ತಿದ್ದಾರೆ. ತಲಕಾವೇರಿ ದೇವಾಲಯದಲ್ಲಿ ಕೋಡಿ ಕುಟುಂಬ ಹಾಗೂ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲದಲ್ಲಿ ಬಲ್ಲಡ್ಕ ಕುಟುಂಬಸ್ಥರು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕೋಡಿ ಹಾಗೂ ಬಲ್ಲಡ್ಕ ಕುಟುಂಬದ ಮುಖ್ಯಸ್ಥರು ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ತಲಕಾವೇರಿ ಜಾತ್ರೆ ಆರಂಭವಾಗುತ್ತದೆ.
ಕಾವೇರಿ ನದಿ ಉಗಮದ ಹಿನ್ನಲೆ:
ಹಿಂದೆ ಕವೇರ ಎಂಬ ಮಹರ್ಷಿ ಕೊಡಗಿನ ಬ್ರಹ್ಮಗಿರಿ ಬೆಟ್ಟದಲ್ಲಿ ತಪಸ್ಸು ಮಾಡುತ್ತ ತನಗೆ ಸಂತತಿಯ ಭಾಗ್ಯವನ್ನು ನೀಡುವಂತೆ ಆದಿ ದೇವ ಬ್ರಹ್ಮನನ್ನು ಬೇಡುತ್ತಾನೆ. ಹೀಗೆ ಬ್ರಹ್ಮದೇವ ಕವೇರ ಋುಷಿಯ ಬಳಿ ಪ್ರತ್ಯಕ್ಷಗೊಂಡು ಜಗದಲ್ಲಿ ಲೋಪಮುದ್ರೆ ಎಂಬ ಹೆಸರು ಪಡೆದುಕೊಂಡಿರುವ ನನ್ನ ಮಾನಸ ಪುತ್ರಿಯನ್ನು ನಿನಗೆ ಮಗಳನ್ನಾಗಿ ನೀಡುವುದಾಗಿ ಭರವಸೆ ನೀಡುತ್ತಾರೆ.
ಹೀಗೆ ಲೋಪಮುದ್ರೆ(ಕಾವೇರಿ) ಬೆಳೆದು ದೊಡ್ಡವಳಾಗುತ್ತಾಳೆ. ಒಂದು ದಿನ ಕವೇರ ಮುನಿಗಳ ಆಶ್ರಮಕ್ಕೆ ಬಂದ ಅಗಸ್ತ್ಯ ಮಹರ್ಷಿ ಕಾವೇರಿಯನ್ನು ವಿವಾಹವಾಗಲು ಬಯಸುತ್ತಾರೆ. ಅಗಸ್ತ್ಯ ಮಹರ್ಷಿ ಬಯಕೆಯಂತೆ ಒಪ್ಪಿಕೊಂಡ ಕಾವೇರಿ ತನ್ನನ್ನು ಯಾವ ಕಾಲಕ್ಕೂ ಉಪೇಕ್ಷಿಸಿ ಹೊರಟು ಹೋಗಬಾರದು. ಹಾಗೊಂದು ವೇಳೆ ಹೋದರೆ ತಾನು ನದಿಯಾಗಿ ಹರಿದು ಸಮುದ್ರ ಸೇರುವುದಾಗಿ ತಿಳಿಸುತ್ತಾಳೆ. ಇದಕ್ಕೆ ಅಗಸ್ತ್ಯ ಮಹರ್ಷಿ ಸಮ್ಮತಿಯನ್ನು ಸೂಚಿಸಿ ವಿವಾಹವನ್ನು ಮಾಡಿಕೊಳ್ಳುತ್ತಾರೆ.
ಒಂದು ದಿನ ಅಗಸ್ತ್ಯ ಮಹರ್ಷಿ ಬ್ರಹ್ಮಗಿರಿಯ ಉತ್ತರ ತಪ್ಪಲಿನ ಕನ್ನಿಕಾ ನದಿಯ ತೀರಕ್ಕೆ ಸ್ನಾನಕ್ಕೆಂದು ತೆರಳುವ ಮುನ್ನ ಕಾವೇರಿಯನ್ನು ತಮ್ಮ ಕಮಂಡಲಕ್ಕೆ ಆವಾಹನೆ ಮಾಡಿ, ತಮ್ಮ ಶಿಷ್ಯರಿಗೆಲ್ಲ ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಕಾಯುತ್ತಿದ್ದ ಕಾವೇರಿ, ಪತಿ ಅಗಸ್ತ್ಯ ತನ್ನ ನಿಬಂಧನೆಗಳನ್ನು ಉಲ್ಲಂಘಿಸಿದರೆಂದು ಕಮಂಡಲದಿಂದ ತಕ್ಷಣ ಹೊರ ಬಂದು ಪಕ್ಕದ ಬ್ರಹ್ಮ ಕುಂಡಿಕೆಯನ್ನು ಸೇರಿ ಅಲ್ಲಿಂದ ಲೋಕ ಕಲ್ಯಾಣಕ್ಕಾಗಿ ಜಲ ರೂಪಿಣಿಯಾಗಿ ಹರಿಯ ತೊಡಗಿದಳು.
ಅಗಸ್ತ್ಯರ ಶಿಷ್ಯರಿಗೆ ಕಾಣಿಸಿಕೊಳ್ಳದೆ ಗುಪ್ತ ಕಾಮಿನಿಯಾಗಿ ಸ್ವಲ್ಪ ದೂರ ಹರಿದು ಮತ್ತೆ ಕಾಣಿಸಿಕೊಂಡಳು. ಅದಾಗಲೇ ಸ್ನಾನ ಮಾಡಿ ಹಿಂದಿರುಗುತ್ತಿದ್ದ ಪತಿ ಅಗಸ್ತ್ಯ ಮಹರ್ಷಿ ನದಿಯಾಗಿ ಮುಂದೆ ಹರಿಯದಂತೆ ಬೇಡಿಕೊಂಡರಲ್ಲದೆ, ಮರಳಿ ತನ್ನ ಪತ್ನಿಯಾಗಿ ಶರೀರಧಾರಿಯಾಗಿ ಬಾಳುವಂತೆ ಮವಿ ಮಾಡಿದರು. ಆದರೆ ಇದಕ್ಕೊಪ್ಪದ ಕಾವೇರಿ ತಾಯಿ ನದಿಯಾಗಿ ಹರಿದು ಇಂದು ದಕ್ಷಿಣ ಭಾರತದಲ್ಲಿ ಜೀವನದಿ ಎಂದು ಗುರುತಿಸಲ್ಪಟ್ಟಿದ್ದಾಳೆ.
ಅಂದಿನಿಂದ ಕಾವೇರಿ ಕೊಡಗಿನ ಜನರ ಕುಲ ದೇವತೆಯಾಗಿ ಹಾಗೂ ಆರಾಧ್ಯ, ಪೂಜ್ಯ ಮಾತೆಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ.
ಸಂಗೀತ ಕಾರ್ಯಕ್ರಮ
ತೀರ್ಥೋದ್ಭವದ ಹಿನ್ನೆಲೆಯಲ್ಲಿ ಅ.17ರ ಸಂಜೆ 6 ಗಂಟೆಯಿಂದ ಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ರಾತ್ರಿಯಿಡೀ ಭಕ್ತಿ ಗೀತೆಗಳು ಮೂಡಿ ಬರಲಿವೆ. ಅ.18 ರಂದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಪ್ಲಾಸ್ಟಿಕ್ ನಿಷೇಧ, 20 ತಾಮ್ರದ ಕೊಡ!
ಈ ಬಾರಿಯ ತೀರ್ಥೋದ್ಭವದ ಸಂದರ್ಭ ಪವಿತ್ರ ಕಾವೇರಿ ಕುಂಡಿಕೆಯಿಂದ ಪ್ಲಾಸ್ಟಿಕ್ ಬಿಂದಿಗೆಯಲ್ಲಿ ತೀರ್ಥ ತೆಗೆಯುವುದನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೊಡವ ಪಡೆ ತಂಡ 20 ತಾಮ್ರದ ಕೊಡವನ್ನು ನೀಡಿದ್ದು, ಈ ತಾಮ್ರದ ಕೊಡದಲ್ಲಿ ಕುಂಡಿಕೆಯಿಂದ ತೀರ್ಥವನ್ನು ತೆಗೆದು ಭಕ್ತರಿಗೆ ವಿತರಿಸಲಾಗುತ್ತದೆ.
ಒಂದು ತಿಂಗಳು ಅನ್ನದಾನ
ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ತಲಕಾವೇರಿ ಕ್ಷೇತ್ರದಲ್ಲಿ ಒಂದು ತಿಂಗಳ ಕಾಲ ಅನ್ನದಾನ ವ್ಯವಸ್ಥೆ ಇರಲಿದೆ. ಕೊಡಗು ಏಕೀಕರಣ ರಂಗ ಅನ್ನದಾನದ ವ್ಯವಸ್ಥೆ ಮಾಡಿದೆ. ಮತ್ತೊಂದೆಡೆ ಮಂಡ್ಯದ ಭಕ್ತ ವತ್ಸಲ ತಂಡದಿಂದ ಅ.17 ಹಾಗೂ 18ರಂದು ಎರಡು ದಿನಗಳ ಕಾಲ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ.
ತಲಕಾವೇರಿಗೆ ಹೆಚ್ಚುವರಿ ಬಸ್
ಜಾತ್ರೆಯ ಹಿನ್ನೆಲೆಯಲ್ಲಿ ಭಾಗಮಂಡಲದಿಂದ ತಲಕಾವೇರಿಗೆ 10 ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಮಡಿಕೇರಿಯಿಂದ ಭಾಗಮಂಡಲಕ್ಕೆ ಭಕ್ತಾದಿಗಳ ಸಂಖ್ಯೆ ಗಮನಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕಿ ಗೀತಾ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ್ದಾರೆ. ಮಡಿಕೇರಿಯಿಂದ ತಲಕಾವೇರಿಗೆ ಸಾಗುವ ರಸ್ತೆಯ ಅಲ್ಲಲ್ಲಿ ಗುಂಡಿ ಬಿದ್ದಿದ್ದು ಜಲ್ಲಿ ಹಾಕುವ ಮೂಲಕ ದುರಸ್ತಿ ಮಾಡಲಾಗುತ್ತಿದೆ.
12 ಕಿ.ಮೀ.ದೂರದ ದೀಪದ ವ್ಯವಸ್ಥೆ
ಜಾತ್ರೆಯ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ 12 ಕಿಲೋಮೀಟರ್ ದೂರದಿಂದಲೇ ಲೈಟಿಂಗ್ ವ್ಯವಸ್ಥೆಗಾಗಿ ಸುಮಾರು 1,500ಕ್ಕೂ ಹೆಚ್ಚು ಟ್ಯೂಬ್ ಲೈಟ್‌ಗಳನ್ನು ಹಾಕಲಾಗಿದೆ. ತಾತ್ಕಾಲಿಕ ಶೌಚಾಲಯ, ಅನ್ನದಾನಕ್ಕೆ ವ್ಯವಸ್ಥೆ, ಭದ್ರತೆಗಾಗಿ ಹೆಚ್ಚಿನ ಸಿಸಿಟಿವಿ ಸೇರಿದಂತೆ 400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಏಕಮುಖ ಸಂಚಾರದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ.