ನಾವು ಪ್ರತಿನಿಧಿಸುವ ಮತಕ್ಷೇತ್ರಗಳಲ್ಲಿ ಅಭಿವೃದ್ಧಿ ಶೂನ್ಯ| ಯಾವ ಕೆಲಸಗಳಿಗೂ ಕ್ರಿಯಾ ಯೋಜನೆಗಳಾಗಿಲ್ಲ| ಪ್ರತಿ ಕೆಲಸ ಕಾರ್ಯಗಳಿಗೂ ಅಲೆದಾಡಬೇಕಾಗಿದೆ| ಅಧಿಕಾರಿ ವರ್ಗ ಸ್ಪಂದಿಸುತ್ತಿಲ್ಲ ಎಂದು ದೂರಿದ ಜಿಪಂ ಸದಸ್ಯರು|
ಬಾಗಲಕೋಟೆ(ಜ.18): ಜಿಪಂ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಭ್ರಷ್ಟಾಚಾರ ಮನೆ ಮಾಡಿದೆ. ಅಧಿಕಾರಿ ವರ್ಗದ ಬೇಜವಾಬ್ದಾರಿತನದಿಂದ ಯಾವ ಕೆಲಸಗಳೂ ಆಗುತ್ತಿಲ್ಲ ಎಂದು ಆರೋಪಿಸಿದ ಜಿಪಂ ಸದಸ್ಯರು ಇದಕ್ಕೆಲ್ಲ ಆಡಳಿತ ನಡೆಸುವ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಜಿಪಂ ಸಿಇಒ ಅವರೇ ಹೊಣೆ ಹೊರಬೇಕು ಎಂದು ಆಗ್ರಹಿಸಿದ ಘಟನೆ ಬಾಗಲಕೋಟೆ ಜಿಪಂನ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಶುಕ್ರವಾರ ನಡೆದ ಜಿಪಂನ 11ನೇ ಸಾಮಾನ್ಯ ಸಭೆಯಲ್ಲಿ ಪಕ್ಷಭೇದ ಮರೆತು ಮಾತನಾಡಿದ ಸದಸ್ಯರು, ನಾವು ಪ್ರತಿನಿಧಿಸುವ ಮತಕ್ಷೇತ್ರಗಳಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಯಾವ ಕೆಲಸಗಳಿಗೂ ಕ್ರಿಯಾ ಯೋಜನೆಗಳಾಗಿಲ್ಲ. ಪ್ರತಿ ಕೆಲಸ ಕಾರ್ಯಗಳಿಗೂ ಅಲೆದಾಡಬೇಕಾಗಿದೆ. ಅಧಿಕಾರಿ ವರ್ಗ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸದಸ್ಯ ಹೂವಪ್ಪ ರಾಠೋಡ ಮಾತನಾಡಿ, ಜಿಪಂನಲ್ಲಿ ಹಣ ನೀಡದೆ ಯಾವ ಕೆಲಸಗಳು ಆಗುತ್ತಿಲ್ಲ. ಪ್ರತಿ ಕಾಮಗಾರಿಗೂ ಕಮಿಷನ್ ನೀಡಬೇಕಾಗಿದೆ. ನಿರ್ಮಿತಿ ಕೇಂದ್ರ ಮತ್ತು ಭೂಸೇನಾ ನಿಗಮದ ಬಹುತೇಕ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಮನೆ ಮಾಡಿದೆ. ಯಾವ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಈ ಅವಧಿಯ ನಾಲ್ಕು ವರ್ಷದಲ್ಲಿ ಪ್ರತಿ ಕೆಲಸಕ್ಕೂ ಹೋರಾಟ ನಡೆಸುವ ಅನಿವಾರ್ಯತೆ ಬಂದಿದೆ. ಹೀಗಾದರೆ ಜನತೆಗೆ ಏನು ಉತ್ತರಿಸಬೇಕು ಎಂದು ಪ್ರಶ್ನಿಸಿದರಲ್ಲದೆ, ಹಣ ಕೊಡದೆ ಯಾವ ಕೆಲಸಗಳು ಆಗುತ್ತಿಲ್ಲ ಎಂದು ಆರೋಪಿಸಿದರು.
ಸದಸ್ಯ ಶಿವಾನಂದ ಪಾಟೀಲ ಮಾತನಾಡಿ, ಸಾಮಾನ್ಯ ಸಭೆ ಕರೆಯಲು 5 ತಿಂಗಳು ಬೇಕಾಯಿತು. ಸಭೆಯಲ್ಲಿನ ಗಂಭೀರ ವಿಷಯಗಳು ಚರ್ಚೆಯಾಗುತ್ತಿಲ್ಲ. ವಿವಿಧ ಸ್ಥಾಯಿ ಸಮಿತಿಗಳ ವಿಷಯವೂ ಚರ್ಚೆಗೆ ಬರುತ್ತಿಲ್ಲ. ಅಧಿಕಾರಿಗಳು ಸದಸ್ಯರಿಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದರಲ್ಲದೆ ಇಲಾಖಾವಾರು ಚರ್ಚೆಯಾಗಬೇಕೆಂದರೆ ಮತ್ತೊಮ್ಮೆ ಸಭೆ ನಡೆಸಬೇಕೆಂದು ಆಗ್ರಹಿಸಿದರು.
ಆರೋಗ್ಯ ಇಲಾಖೆಯಲ್ಲಿನ ನೇಮಕಾತಿ, ಇತ್ತೀಚಿಗೆ ಪಂಚಾಯ್ತಿಗಳಿಗೆ ತೆಗೆದುಕೊಂಡ ಎಂಜಿನಿಯರುಗಳ ಕುರಿತು ಸಮಗ್ರ ತನಿಖೆಯಾಗಬೇಕು. ಜಿಲ್ಲೆಯಲ್ಲಿರುವ ಎಲ್ಲ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕುರಿತು ತನಿಖೆಯಾಗಬೇಕು ಎಂದು ಹೇಳಿದ ಶಿವಾನಂದ ಪಾಟೀಲ, ಈ ಕುರಿತು ಸ್ಪಷ್ಟನೆ ಬಯಸಿದರು.
ಈ ವೇಳೆ ಮಾಜಿ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಯಲ್ಲಿನ ಸಂತ್ರಸ್ತರ ಕುರಿತು ಚರ್ಚೆಯಾಗಬೇಕು. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಆಗಿರುವ ಹಿನ್ನಡೆಯನ್ನು ಪರಾಮರ್ಶಿಸಬೇಕು. ಜೊತೆಗೆ ಕುಡಿಯುವ ನೀರು ಸಮಸ್ಯೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಗಿರುವ ಪ್ರಗತಿಯನ್ನು ಚರ್ಚಿಸಬೇಕೆಂದು ಮನವಿ ಮಾಡಿದರು.
5 ತಿಂಗಳ ನಂತರ ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಜಿಪಂ ಆಡಳಿತ ವ್ಯವಸ್ಥೆಯಲ್ಲಿನ ಲೋಪಗಳನ್ನು ಮುಂದಿಟ್ಟುಕೊಂಡು ಮಾತನಾಡುವ ಮೂಲಕ ವ್ಯವಸ್ಥೆಯಲ್ಲಿನ ದೋಷಗಳನ್ನು ಪಟ್ಟಿಮಾಡುವ ಮೂಲಕ ಸಭೆಯ ಗಮನಕ್ಕೆ ತಂದರೆನ್ನಬಹುದು.