ವೈಯಕ್ತಿಕ ಶೀಲ ಚಾರಿತ್ರ್ಯ, ಲಿಂಗ ಸಮಾನತೆ,ಕಾಯಕ ದಾಸೋಹ, ಅನುಭಾವ ಚಿಂತನೆಯನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾದ ಡಾ.ಗೊ.ರು.ಚನ್ನಬಸಪ್ಪ ಸಲಹೆ ನೀಡಿದರು.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಜ.20): ವೈಯಕ್ತಿಕ ಶೀಲ ಚಾರಿತ್ರ್ಯ, ಲಿಂಗ ಸಮಾನತೆ, ಕಾಯಕ ದಾಸೋಹ, ಅನುಭಾವ ಚಿಂತನೆಯನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾದ ಡಾ.ಗೊ.ರು.ಚನ್ನಬಸಪ್ಪ ಸಲಹೆ ನೀಡಿದರು. ನಗರದ ಹದಡಿ ರಸ್ತೆಯಲ್ಲಿರುವ ಡಾ.ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ದಾವಣಗೆರೆ ಜಿಲ್ಲಾ ಕದಳಿ ಮಹಿಳಾ ಸಮಾವೇಶ - 2023 ಹಾಗೂ 14 ನೇ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಲೋಕ ನೆಮ್ಮದಿಯನ್ನು ಹಾರೈಸುವ ಸಾತ್ವಿಕರೆಲ್ಲ ಇಂದಿನ ಕ್ರೂರ ವಿದ್ಯಮಾನಗಳ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಇಂತಹ ಕಳವಳಕಾರಿ ಸನ್ನಿವೇಶದಲ್ಲಿ ಶರಣರ ವಿಚಾರಧಾರೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
undefined
ಮನುಷ್ಯರಾಗದೆ ಮೃಗೀಯ ವರ್ತನೆ ತೋರುತ್ತಿರುವುದು ಅಘಾತಕಾರಿಯಾಗಿದೆ ಇದೆಲ್ಲ ನೀಗಬೇಕೆಂದರೆ 12 ನೇ ಶತಮಾನದ ಪರಂಪರೆ ಮತ್ತೆ ಬರಬೇಕಿದೆ. ಶರಣೆಯರ ಬದುಕು ಅನುಸರಿಸಬೇಕು ಅಂದಿನ ಶರಣೆಯರು ಪ್ರತಿಭಟನೆ ಮಾಡಿ ರಸ್ತೆಗಿಳಿದವರಲ್ಲ. ಮನಪರಿವರ್ತನೆ ಮಾಡಿದವರು ಆ ರೀತಿಯ ಆತ್ಮವಿಶ್ವಾಸ ಹಾಗೂ ಸಂಕಲ್ಪ ಶಕ್ತಿ ಹೊಂದಿದ್ದರು ಎಂದರು.
ರಾಜ್ಯದ ಪ್ರಗತಿಪರ ಹೆಜ್ಜೆ ಇಟ್ಟಿರುವ ಮಹಿಳಾ ವೇದಿಕೆಯಲ್ಲಿ ಮೊದಲ ಸಾಲಿನಲ್ಲಿ ಕದಳಿ ವೇದಿಕೆ ಇದೆ.ಕದಳಿ ನೀವು ನೆಟ್ಟ ಸಸಿ ಶರಣ ಸಂಸ್ಕೃತಿಯಲ್ಲಿ ಸ್ತ್ರೀ ಪುರುಷರ ಬೇಧವಿಲ್ಲ ಮತ್ತೇಕೆ ಪ್ರತ್ಯೇಕ ವೇದಿಕೆ ಎಂದು ಅನೇಕರು ಪ್ರಶ್ನಿಸಿದ್ದರು ಆದರೆ ಕದಳಿ ವೇದಿಕೆ ಮಹಿಳೆಯರ ಅಭಿಪ್ರಾಯ ಅವರದೇ ಆದ ವಿಚಾರ ಚಿಂತನೆಗಳನ್ನು ಚರ್ಚಿಸುವ ವೇದಿಕೆಯಾಗಲಿದೆ ಎಂದು ಅವರಿಗೆ ಉತ್ತರಿಸಿದ್ದೇನೆ ಎಂದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ ಆದರೆ ಸಮೃದ್ದ ಭಾರತ ನಿರ್ಮಾಣ ಕಾರ್ಯ ಸಂಪೂರ್ಣವಾಗಿಲ್ಲ. ನೂರುಜನ, ನೂರು ಭಿನ್ನಾಭಿಪ್ರಾಯ, ನೂರು ವಿಚಾರದಲ್ಲಿ ತೊಡಗಿದ್ದೇವೆ. ಸೇಡು ದ್ವೇಷದಿಂದ ರಾಷ್ಟ್ರದ ನಿರ್ಮಾಣ ಮಾಡುವಲ್ಲಿ ವಿಫಲವಾಗಿದ್ದೇವೆ.
ಕಟ್ಟುವ ಕೆಲಸ ಒಂದು ಕಡೆಯಾದರೆ ಕೆಡುವ ಕೆಲಸವೂ ನಡೆಯುತ್ತಿರುವುದು ವಿಷಾಧಕರ.ಮಹಿಳೆಯರು ಸಂಘಟಿತರಾಗಿ ಕೆಲಸ ಮಾಡಿ ರಾಷ್ಟ್ರ ಕಟ್ಟುವ ಕೆಲಸ ಮಾಡುತ್ತಾರೆ ಕೌಟುಂಬಿಕ, ಸಾಮಾಜಿಕವಾಗಿ ಸಂಬಂಧಿಸಿದ ಸೇತುವೆ ಕಟ್ಟ ಬೇಕಿದೆ. ಎಲ್ಲರಲ್ಲೂ ಮಾನಸಿಕ ಸಿದ್ದತೆಬೇಕು ಅದಕ್ಕಾಗಿ 12 ನೇ ಶತಮಾನದ ಶರಣರ ಮನಸ್ಥಿತಿ ಬೇಕಿದೆ. ಅಕ್ಕ ಮಹಾದೇವಿ ಕಂಡ ಕಲ್ಯಾಣದನಸ್ಥಿತಿ ಬರಬೇಕಿದೆ.
Womens Equality Day 2022: ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯ ಹೋಗಲಾಡಿಸುವುದು ಹೇಗೆ ?
12 ನೇ ಶತಮಾನದಲ್ಲಿ ಅಕ್ಕನನ್ನು ಕಾಡಿದ ಕೌಶಿಕನ ಸಂತತಿ ಇಂದು ಸಾವಿರ ಸಾವಿರ ಆಗಿದೆ ಅಕ್ಕ ಮಾತ್ರ ಏಕಾಂಗಿಯಾಗಿದ್ದಾಳೆ. ಇಂದಿನ ಕರಾಳ ವಿದ್ಯಾಮನಗಳಿಂದ ಕಂಗೆಟ್ಟ ನಾವೆಲ್ಲ ಮತ್ತೆ ಕಲ್ಯಾಣಕ್ಕೆ ಹೋಗಬೇಕು ಅಂದಿನ ಶರಣರೂ ತಿಳಿಸಿದ ವೈಯಕ್ತಿಕ ವರ್ಣಾಶ್ರಮವ್ಯವಸ್ಥೆ ನಿರಾಕರಣೆ, ಅನುಭಾವ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದರು.ಸಮಾರಂಭದಲ್ಲಿ ರಶ್ಮಿ ಹೆಣ್ಣುಮಕ್ಕಳ ಉಚಿತ ವಸತಿಯುತ ಶಾಲೆಯ ಟ್ರಸ್ಟ್ ಕಾರ್ಯದರ್ಶಿ ಪ್ರೇಮಾ ನಾಗರಾಜ್ ಅವರಿಗೆ ಕದಳಿ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
Parenting Tips: ಸಮಾಜದಲ್ಲಿ ಲಿಂಗ ಸಮಾನತೆ ಬೇಕಂದ್ರೆ ಮನೇಲಿ ಮಕ್ಕಳನ್ನು ಹೀಗೆ ಬೆಳೆಸಿ
ಈ ವೇಳೆ ಗದಗದ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಎಂ.ಜಿ ಈಶ್ವರಪ್ಪ, ಬಾಪೂಜಿ ವಿದ್ಯಾಸಂಸ್ಥೆಯ ಕಿರುವಾಡಿ ಗಿರಿಜಮ್ಮ, ಶಸಾಪ ಜಿಲ್ಲಾಧ್ಯಕ್ಷ ಕೆ.ಬಿ ಪರಮೇಶ್ವರಪ್ಪ,ಕಸಾಪ ಜಿಲ್ಲಾಧ್ಯಕ್ಷ ಸಾವಿತ್ರಮ್ಮ ಸಿದ್ದಪ್ಪ, ಪ್ರೇಮಾ ಸೋಮಶೇಖರಪ್ಪ ಹಾಗೂ ಕದಳಿ ವೇದಿಕೆ ಸದಸ್ಯರು ಉಪಸ್ಥಿತರಿದ್ದರು. ಗಾಯತ್ರಿ ವಸ್ತ್ರದ್ ಸ್ವಾಗತಿಸಿದರು. ವೇದಿಕೆ ಜಿಲ್ಲಾಧ್ಯಕ್ಷೆ ಕುಸುಮ ಲೋಕೇಶ್ ಪ್ರಾಸ್ತವಿಕವಾಗಿ ಮಾತನಾಡಿದರು.