ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳ ಪೈಕಿ ಈಗಾಗಲೇ ಅನ್ನಭಾಗ್ಯ, ನಾರಿಶಕ್ತಿ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮೀ ಸೇರಿದಂತೆ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಗೊಂಡು ಜನಪ್ರಿಯತೆ ಪಡೆದಿವೆ. ಈ ಗ್ಯಾರಂಟಿಗಳ ಸಾಲಿನಲ್ಲಿ ಯುವನಿಧಿ ಕೊನೆ ಯೋಜನೆಯಾಗಿದೆ. ಇದನ್ನೂ ಸಹ ಪದವೀಧರ ಸ್ನೇಹಿಯಾಗಿ, ಸರಳವಾಗಿ ತಂತ್ರಜ್ಞಾನ ಬಳಸಿ ಜಾರಿಗೆ ತರಲು ಭರದಿಂದ ಸಿದ್ಧತೆಗಳು ಸಾಗಿವೆ: ಸಚಿವ ಡಾ. ಶರಣಪ್ರಕಾಶ ಪಾಟೀಲ್
ಕಲಬುರಗಿ(ಸೆ.21): ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಡಿಪ್ಲೊಮಾ, ಪದವೀಧರರಿಗೆ ಪದವಿಧರರಾದ ತಿಂಗಳಿಂದ ಮುಂದಿನ 6 ತಿಂಗಳವರೆಗೆ ಮಾಸಿಕ 1,500 ರು. ಹಾಗೂ 3,000 .ರು ನೀಡುವ ಯುವನಿಧಿ ಯೋಜನೆ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ಡಿಸೆಂಬರ್‌ನಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮ ಶೀಲತೆ, ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳ ಪೈಕಿ ಈಗಾಗಲೇ ಅನ್ನಭಾಗ್ಯ, ನಾರಿಶಕ್ತಿ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮೀ ಸೇರಿದಂತೆ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಗೊಂಡು ಜನಪ್ರಿಯತೆ ಪಡೆದಿವೆ. ಈ ಗ್ಯಾರಂಟಿಗಳ ಸಾಲಿನಲ್ಲಿ ಯುವನಿಧಿ ಕೊನೆ ಯೋಜನೆಯಾಗಿದೆ. ಇದನ್ನೂ ಸಹ ಪದವೀಧರ ಸ್ನೇಹಿಯಾಗಿ, ಸರಳವಾಗಿ ತಂತ್ರಜ್ಞಾನ ಬಳಸಿ ಜಾರಿಗೆ ತರಲು ಭರದಿಂದ ಸಿದ್ಧತೆಗಳು ಸಾಗಿವೆ ಎಂದು ತಿಳಿಸಿದರು.
undefined
ತೆಲಂಗಾಣಕ್ಕೂ ಕಾಂಗ್ರೆಸ್ ಗ್ಯಾರಂಟಿ: ಸಿದ್ದರಾಮಯ್ಯ ಸ್ಟಾರ್ ಕ್ಯಾಂಪೇನರ್
ಯುವನಿಧಿ ಜಾರಿ ಹೊಣೆ ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆ ಹೊತ್ತಿದೆ. ರಾಜ್ಯದಲ್ಲಿ ಪದವೀಧರರು, ಡಿಪ್ಲೊಮಾ ಪದವೀಧರರು ಸೇರಿದಂತೆ 5 ಲಕ್ಷ ಯುವಕರು ಆರಂಭದ ವರ್ಷ ಯೋಜನೆಯಡಿ ನೆರವು ಪಡೆಯಲು ಅರ್ಹರಾಗುವ ಅಂದಾಜಿದೆ. ಇದಕ್ಕಾಗಿ ಬಜೆಟ್‌ನಲ್ಲಿ 250 ಕೋಟಿ ರು. ಹಣ ಮೀಸಲಿಡಲಾಗಿದೆ.
ಸೇವಾಸಿಂಧು ಪೋರ್ಟಲ್‌ನಲ್ಲಿಯೆ ಹೆಸರು ನೋಂದಣಿಗೆ ಅವಕಾಶ ಕಲ್ಪಿಸುವ ಚಿಂತನೆ ಇದೆ. ಸರಳವಾಗಿ ಅರ್ಹರಿಗೆ ತಲುಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಹೇಗೆ ಅನುಷ್ಠಾನಕ್ಕೆ ತರಬಹುದು ಎಂಬುದರ ಚಿಂತನೆ ಸಾಗಿದೆ. ಶೀಘ್ರವೇ ಹಲವು ಉಪಕ್ರಮಗಳನ್ನು ರೂಪಿಸಿ ಯುವಜನತೆಗೆ ತಿಳಿಸಲಾಗುತ್ತದೆ ಎಂದು ಡಾ. ಪಾಟೀಲ್ ಹೇಳಿದರು.
ಈ ವರ್ಷ ಯೋಜನೆಯಡಿ 5 ಲಕ್ಷ ಜನ ಫಲಾನುಭವಿಗಳಾಗುವ ಅಂದಾಜಿದ್ದರೆ, ಈ ಸಂಖ್ಯೆ ಬರುವ ವರ್ಷ ಹೆಚ್ಚಾಗುವ ಅಂದಾಜಿದೆ. ಹೀಗಾಗಿ ಮುಂದಿನ ಬಜೆಟ್‌ನಲ್ಲಿ ಇದೇ ಯೋಜನೆಗೆ 1,200 ಕೋಟಿ ರು. ಮೀಸಲಿಡಬೇಕಾಗುತ್ತದೆ. ಇಂತಹ ಎಲ್ಲಾ ಅಂದಾಜುಗಳನ್ನು ಪಕ್ಕಾ ಮಾಡಿಕೊಂಡೇ ಯುವನಿಧಿ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ತಾವು ಉಸ್ತುವಾರಿಯಾಗಿರುವ ರಾಯಚೂರು ಜಿಲ್ಲೆಗೆ ಏಮ್ಸ್ ಸಂಸ್ಥೆ ಕೊಡಬೇಕು ಎಂದು ಅದಾಗಲೇ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ನಿಯೋಗದಲ್ಲಿಯೂ ಹೋಗಿ ಮನವಿ ಮಾಡಿ ಗಮನ ಸೆಳೆಯಲಾಗಿದೆ. ಕೇಂದ್ರದಿಂದ ಧನಾತ್ಮಕ ಸ್ಪಂಧನೆಯೂ ಸಿಕ್ಕಿದೆ. ಆದರೆ ಇನ್ನೂ ಯಾವುದೇ ವಿಚಾರ ಅಂತಿಮವಾಗಿಲ್ಲ ಎಂದರು.
ಬರೆದಿಟ್ಟುಕೊಳ್ಳಿ.. ಕಾಂಗ್ರೆಸ್‌ನ ಎಲ್ಲ ಗ್ಯಾರಂಟಿಗಳೂ ಬಿದ್ದು ಹೋಗುತ್ತವೆ: ಬೊಮ್ಮಾಯಿ ವಿಶೇಷ ಸಂದರ್ಶನ
ಕರ್ನಾಟಕ ಸೇರಿದಂತೆ ದೇಶದ ಮೂರೇ ಮೂರು ರಾಜ್ಯಗಳಲ್ಲಿ ಏಮ್ಸ್ ಇಲ್ಲ. ಉಳಿದೆಲ್ಲ ರಾಜ್ಯಗಳಲ್ಲಿ ಈ ಸಂಸ್ಥೆ ಇದೆ. ಹೀಗಾಗಿ ಹಿಂದುಳಿದ ಪ್ರದೇಶವಾಗಿರುವ ಕಲ್ಯಾಣ ನಾಡಲ್ಲಿಯೇ ಇರುವ ರಾಯಚೂರಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರಕ್ಕೆ ಕೋರಿದ್ದಾಗಿ ಸಚಿವರು ತಮ್ಮ ಬೇಡಿಕೆಯನ್ನು ಸಮರ್ಥಿಸಿಕೊಂಡರು.
ನೀಪಾ ವೈರಸ್- ಹೈ ಅಲರ್ಟ್
ಕೇರಳದಲ್ಲಿ ನೀಪಾ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಹೈ ಆಲರ್ಟ್ ಇದೆ. ಈಗಾಗಲೇ ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲಾ ಡಿಸಿ, ಸಿಇಓಗಳ ಸಭೆ ಮಾಡಿದ್ದಾರೆ. ವಿಷಯದ ಬಗ್ಗೆ ಖಡಕ್ ಸೂಚನೆ ಕೂಡಾ ನೀಡಿದ್ದಾರೆ. ಕೇರಳ ಗಡಿ ಜಿಲ್ಲೆಗಳಲ್ಲಂತೂ ವಿಶೇಷ ನಿಗಾ ಇಡಲು ಸೂಚಿಸಲಾಗಿದೆ. ಇಡೀ ರಾಜ್ಯವೇ ಎಚ್ಚರದಿಂದ ಇದೆ ಎಂದು ಡಾ. ಪಾಟೀಲ್ ಹೇಳಿದರು. ನೀಪಾ ವೈರಸ್ ಹರಡಿದರೆ ಆಗಬಹುದಾದ ಆರೋಗ್ಯ ತೊಂದರೆಗಳನ್ನು ನಿಭಾಯಿಸಲು ರಾಜ್ಯದಲ್ಲಿರುವ ಆಸ್ಪತ್ರೆಗಳಲ್ಲಿಯೂ ಅಗತ್ಯ ಸಿದ್ಧತೆಗಳು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.