ಸಂಡೂರು: ಸಾರಿಗೆ ಬಸ್‌ ಉರುಳಿ ಬಿದ್ದು 60 ಮಂದಿಗೆ ಗಾಯ, ಭಾರೀ ಅನಾಹುತ ತಪ್ಪಿಸಿದ ಮರ..!

By Kannadaprabha News  |  First Published Sep 21, 2023, 10:13 PM IST

ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿ ಬಿದ್ದಿದೆ. ಬಸ್ ಅವಘಡಕ್ಕೆ ಕಾರಣ ತಿಳಿದಿಲ್ಲ. ಪರಿಶೀಲನೆ ನಡೆಸಲಾಗುತ್ತದೆ ಎಂದ ಸಂಡೂರು ಬಸ್ ಘಟಕದ ವ್ಯವಸ್ಥಾಪಕ ಶಂಕರ್
 


ಸಂಡೂರು(ಸೆ.21): ತಾಲೂಕಿನ ಗಿರೇನಳ್ಳಿಯಿಂದ ಸಂಡೂರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಗ್ಗು ಪ್ರದೇಶದಲ್ಲಿ ಉರುಳಿ ಬಿದ್ದ ಪರಿಣಾಮ ಬಸ್‌ನಲ್ಲಿದ್ದ 36 ವಿದ್ಯಾರ್ಥಿಗಳು ಸೇರಿ 60 ಜನರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಬುಧವಾರ ಬೆಳಗ್ಗೆ ಉತ್ತರಮಲೆ ಹಾಗೂ ಕಾಟಿನಕಂಬ ಗ್ರಾಮಗಳ ನಡುವೆ ನಡೆದಿದೆ.

ಸುದ್ದಿ ತಿಳಿದು ಅಕ್ಕಪಕ್ಕದ ಗ್ರಾಮಗಳಿಂದ ಬಂದ ಜನತೆ ಬಸ್ಸಿನ ಒಳಗಿದ್ದವರು ಹೊರಬರಲು ಸಹಕರಿಸಿದ್ದಾರೆ. ಕೂಡಲೆ ಗಾಯಾಳುಗಳನ್ನು ಆ್ಯುಂಬುಲೆನ್ಸ್‌ ಮೂಲಕ ಸಂಡೂರಿನ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು, ಚಿಕಿತ್ಸೆ ಕೊಡಿಸಿದ್ದಾರೆ. ಬಸ್ಸಿನ ನಿರ್ವಾಹಕನ ಕೈಗೆ ಹೆಚ್ಚಿನ ಗಾಯವಾಗಿದ್ದು, ಸಂಡೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ 11 ಜನರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

Latest Videos

undefined

ಧಾರವಾಡ: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ, ಸ್ಥಳದಲ್ಲೇ ಪೊಲೀಸ್ ಕಾನ್ಸ್‌ಟೇಬಲ್ ಸಾವು

ಸಂಡೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿದ್ಯಾರ್ಥಿಗಳು ಸೇರಿ ಒಟ್ಟು 49 ಜನರಲ್ಲಿ 46 ಜನರು ಮಧ್ಯಾಹ್ನ ತಮ್ಮ ಮನೆಗಳಿಗೆ ತೆರಳಿದ್ದಾರೆ. ಮೂವರು ಮಾತ್ರ ಸಂಡೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ಹೆಚ್ಚಿನ ಅನಾಹುತ ತಪ್ಪಿಸಿದ ಮರ:

ರಸ್ತೆ ಪಕ್ಕ ಉರುಳಿ ಬಿದ್ದ ಬಸ್ ಪಕ್ಕದಲ್ಲಿದ್ದ ಮರವೊಂದಕ್ಕೆ ತಾಗಿ ನಿಂತಿದೆ. ಮರವಿಲ್ಲದಿದ್ದರೆ, ಹೆಚ್ಚಿನ ಅನಾಹುತವಾಗುವ ಸಂಭವವಿತ್ತು ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.

ಕಿಕ್ಕಿರಿದ ಜನ:

ಸುದ್ದಿ ತಿಳಿದು ಸಾರ್ವಜನಿಕರು ಹಾಗೂ ಗಾಯಾಳುಗಳ ಪಾಲಕರು ಸಂಡೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಿಕ್ಕಿರಿದು ಸೇರಿದ್ದರು. ನಂತರ ಪೊಲೀಸರು ಸಾರ್ವಜನಿಕರನ್ನು ಹೊರಕಳಿಸಿ, ಗಾಯಾಳುಗಳು ಅಗತ್ಯ ಚಿಕಿತ್ಸೆ ಪಡೆಯಲು ಸಹಕರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಡಿವೈಎಸ್‌ಪಿ ಪ್ರಸಾದ್ ಗೋಖಲೆ, ತಹಸೀಲ್ದಾರ್ ಜಿ. ಅನಿಲ್‌ಕುಮಾರ್, ತಾಲೂಕು ಪಂಚಾಯಿತಿ ಇಒ ಎಚ್. ಷಡಾಕ್ಷರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಶಾಸಕರ ಪತ್ನಿ ಅನ್ನಪೂರ್ಣ ತುಕಾರಾಂ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದರು.

ಕಲಬುರಗಿ: ರೈಲು ಡಿಕ್ಕಿ ಹೊಡೆದು ಸಾಯಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಾವು

ಸಂಡೂರು ಬಸ್ ಘಟಕದ ವ್ಯವಸ್ಥಾಪಕ ಶಂಕರ್ ಕನ್ನಡಪ್ರಭದೊಂದಿಗೆ ಮಾತನಾಡಿ, ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿ ಬಿದ್ದಿದೆ. ಬಸ್ ಅವಘಡಕ್ಕೆ ಕಾರಣ ತಿಳಿದಿಲ್ಲ. ಪರಿಶೀಲನೆ ನಡೆಸಲಾಗುತ್ತದೆ ಎಂದರು.

ಮುಖಂಡರಾದ ವಿ.ಜೆ. ಶ್ರೀಪಾದಸ್ವಾಮಿ ಹಾಗೂ ಧರ್ಮಾನಾಯ್ಕ ಅವರು ಮಾತನಾಡಿ, ಸಂಡೂರು ಘಟಕದ ಬಸ್‌ಗಳಲ್ಲಿ ಹೆಚ್ಚಿನವು ಹಳೆಯ ಬಸ್‌ಗಳಾಗಿವೆ. ತಾಲೂಕಿನಲ್ಲಿ ಗಣಿ ಪ್ರದೇಶವಿದೆ. ಜಿಲ್ಲಾ ಖನಿಜ ನಿಧಿ ಸೇರಿದಂತೆ ವಿವಿಧ ಅನುದಾನಗಳಿಂದ ತಾಲೂಕಿನಲ್ಲಿ ಹೊಸ ಬಸ್‌ಗಳನ್ನು ಖರೀದಿಸಿ, ಅವುಗಳನ್ನು ಜನರ ಸೇವೆಗಾಗಿ ಬಳಸುವ ಅಗತ್ಯವಿದೆ ಎಂದರು.

click me!