
ಮೈಸೂರು [ಸೆ.12]: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸೆ.17ರಿಂದ 25 ಹಮ್ಮಿಕೊಂಡಿರುವ ‘ಯುವ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಲು ಖ್ಯಾತ ಚಲನಚಿತ್ರ ನಟ ಗಣೇಶ್ ಅವರನ್ನು ಆಹ್ವಾನಿಸಲಾಗಿದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
‘ಯುವ ಸಂಭ್ರಮ’ ಪೋಸ್ಟರ್ ಬಿಡುಗಡೆ ಮಾಡಿದ ಅವರು ಈ ಬಾರಿ 278 ಕಾಲೇಜುಗಳು ಯುವ ಸಂಭ್ರಮದಲ್ಲಿ ಭಾಗವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ಈ ಬಾರಿ ಯುವ ಸಂಭ್ರಮದಲ್ಲಿ ಕಿರು ನಾಟಕ, ಮೈಮ್ ಇತ್ಯಾದಿಗಳಿಗೆ ಅವಕಾಶ ನೀಡಲಾಗಿದೆ. ಪರಿಸರ ಸಂರಕ್ಷಣೆ ಮತ್ತು ಮಾನವ ನಿರ್ಮಿತ ಆಪತ್ತುಗಳು, ರಾಷ್ಟ್ರೀಯ ಭಾವೈಕ್ಯತೆ ಮತ್ತು ಪಾರಂಪರಿಕ ಆಸ್ತಿಗಳ ಸಂರಕ್ಷಣೆ, ಭಾರತದ ಸ್ವಾತಂತ್ರ್ಯ ಚಳವಳಿ, ಸಂಚಾರ ನಿಯಮಗಳ ಪಾಲನೆ ಇತ್ಯಾದಿ ವಿಷಯಗಳ ಆಧಾರಿತ ಪ್ರದರ್ಶನ ನೀಡಲು ಕಾಲೇಜುಗಳಿಗೆ ತಿಳಿಸಲಾಗಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ದೂರದ ಊರುಗಳಿಂದ ಬರುವ ಕಾಲೇಜು ತಂಡಗಳಿಗೆ ಮೈಸೂರು ರೈಲು ಹಾಗೂ ಬಸ್ ನಿಲ್ದಾಣದಿಂದ ವಾಹನ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್ ಇದ್ದರು.