ರಾಜ್ಯದ ಕಾಳುಮೆಣಸು ಬೆಳೆಗಾರರಿಗೆ ಇದೀಗ ಮತ್ತೆ ಹಳೇ ಗುಮ್ಮ ಕಾಡಲು ಶುರುವಾಗಿದೆ. ವಿಯೆಟ್ನಾಂನಿಂದ ಮತ್ತೆ ಕಾಳು ಮೆಣಸು ಆಮದು ಆರಂಭವಾಗಿದೆ. ಇದರಿಂದ ಬೆಲೆಯಲ್ಲಿ ಭಾರೀ ಕುಸಿತವಾಗಿದೆ.
ವಿಘ್ನೇಶ್ ಎಂ.ಭೂತನಕಾಡು
ಮಡಿಕೇರಿ [ಸೆ.12]: ಒಂದು ಕಡೆ ನಿರಂತರ ಮಳೆಯಿಂದ ಬೆಳೆ ನಷ್ಟ, ಇನ್ನೊಂದು ಕಡೆ ಸೂಕ್ತ ಬೆಲೆ ಇಲ್ಲದೆ ಕಂಗಾಲಾಗಿರುವ ರಾಜ್ಯದ ಕಾಳುಮೆಣಸು ಬೆಳೆಗಾರರಿಗೆ ಇದೀಗ ಮತ್ತೆ ಹಳೇ ಗುಮ್ಮ ಕಾಡಲು ಶುರುವಾಗಿದೆ. ವಿಯೆಟ್ನಾಂನಿಂದ ಮತ್ತೆ ಕಾಳು ಮೆಣಸು ಆಮದು ಆರಂಭವಾಗಿದೆ. ಆಗಸ್ಟ್ ತಿಂಗಳಲ್ಲಿ ಶ್ರೀಲಂಕಾ ಮೂಲಕ ಭಾರತಕ್ಕೆ ಸುಮಾರು 700 ಟನ್‌ಗಳಷ್ಟುಕಾಳುಮೆಣಸು ಆಮದಾಗಿದ್ದು, ದೇಶೀ ಕಾಳುಮೆಣಸು ಬೆಲೆ 730ರಿಂದ 330 ರು. ಗೆ ಕುಸಿದಿದೆ. ಅಂದರೆ ಬೆಲೆ ಅರ್ಧಕ್ಕರ್ಧ ಕುಸಿದಿದೆ.
ವಿಯೆಟ್ನಾಂ ಕಾಳುಮೆಣಸು ಆಮದು ಮಾಡಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಹಿಂದೆಯೂ ಇದೇ ರೀತಿ ಕಾಳುಮೆಣಸು ಆಮದಾಗುತ್ತಿದ್ದಾಗ ಕೊಡಗಿನ ಬೆಳೆಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಮತ್ತೆ ಆಮದು ಮಾತ್ರ ನಿರಾತಂಕವಾಗಿ ಮುಂದುವರಿದಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಿಶ್ರಣ ಮಾಡ್ತಾರೆ: ಕಾಳು ಮೆಣಸು ಉತ್ಪಾದನೆಯಲ್ಲಿ ಕೇರಳವನ್ನು ಬಿಟ್ಟರೆ ಕರ್ನಾಟಕವೇ ದೇಶದಲ್ಲಿ ಹೆಸರುವಾಸಿ. ಕೆಲ ವರ್ಷಗಳಿಂದ ಕೇರಳಕ್ಕೆ ಸಮನಾಗಿ ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಕೊಡಗು ಸುತ್ತಮುತ್ತ ಕಾಳುಮೆಣಸು ಬೆಳೆಯಲಾಗುತ್ತದೆ. ಭಾರತಕ್ಕೆ ಹೋಲಿಸಿದರೆ ವಿಯೆಟ್ನಾಂನ ಕಾಳುಮೆಣಸಿನ ಗುಣಮಟ್ಟಅಷ್ಟಕ್ಕಷ್ಟೆ. ಅಲ್ಲಿ ಕಳಪೆ ಗುಣಮಟ್ಟದ ಕಾಳುಮೆಣಸು ಕೆ.ಜಿ.ಗೆ .150ರ ದರದಲ್ಲಿ ಸಿಗುತ್ತದೆ. ಈ ಕಾಳುಮೆಣಸನ್ನು ಶ್ರೀಲಂಕಾ ಮೂಲಕ ಭಾರತಕ್ಕೆ ತಂದು ಮಾರಾಟ ಮಾಡಲಾಗುತ್ತದೆ. ಇನ್ನು ಕೆಲವರು ಈ ಕಳಪೆ ಗುಣಮಟ್ಟದ ಕಾಳುಮೆಣಸನ್ನು ದೇಶೀ ಕಾಳುಮೆಣಸಿನೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಾರೆ. ಇದರಿಂದ ನಮ್ಮ ಗುಣಮಟ್ಟದ ಕಾಳುಮೆಣಸು ದರ ಗಣನೀಯವಾಗಿ ಕುಸಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕಾಳು ಮೆಣಸು ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳು.
ಮನವಿಗೆ ಬೆಲೆಯೇ ಇಲ್ಲ: ವಿಯೆಟ್ನಾಂನಿಂದ ಕಾಳುಮೆಣಸು ಆಮದು ಸ್ಥಗಿತಕ್ಕೆ ಸುಮಾರು 17 ಬೆಳೆಗಾರರ ಸಂಘಟನೆಗಳು ಒಂದಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಜಾರಿ ನಿರ್ದೇಶನಾಲಯ(ಇ.ಡಿ.)ಗೂ ದೂರು ನೀಡಲಾಗಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೆಳೆಗಾರರ ಒಕ್ಕೂಟದ ಪ್ರಮುಖರು ಬೇಸರ ವ್ಯಕ್ತಪಡಿಸುತ್ತಾರೆ.
ಶ್ರೀಲಂಕಾದ ಮೂಲಕ ಆಮದು!
ಶ್ರೀಲಂಕಾ-ಭಾರತ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಇದೆ. ಇದನ್ನೇ ಬಂಡವಾಳ ಮಾಡಿಕೊಂಡು ಶ್ರೀಲಂಕಾ ಮೂಲಕ ಭಾರತವನ್ನು ವಿಯೆಟ್ನಾಂನ ಕಳಪೆ ಗುಣಮಟ್ಟದ ಕಾಳುಮೆಣಸು ಪ್ರವೇಶಿಸುತ್ತದೆ. ಅದರಂತೆ ಜೂನ್ ಹಾಗೂ ಜುಲೈಯಲ್ಲಿ 100-200 ಟನ್, ಆಗಸ್ಟ್ ತಿಂಗಳಲ್ಲಿ ಸುಮಾರು 700 ಟನ್‌ಗಳಷ್ಟುಕಾಳುಮೆಣಸನ್ನು ಆಮದು ಮಾಡಿಕೊಳ್ಳಲಾಗಿದೆ. ಸ್ಥಳೀಯ ಬೆಳೆಗಾರರ ಒತ್ತಡದ ಹಿನ್ನೆಲೆಯಲ್ಲಿ ಐದಾರು ತಿಂಗಳ ಹಿಂದೆ ವಿಯೆಟ್ನಾಂನಿಂದ ಆಮದಾಗುವ ಕಾಳುಮೆಣಸಿಗೆ ಕಡಿವಾಣ ಹಾಕಲಾಗಿತ್ತು. ಆದರೆ ಇದೀಗ ಮತ್ತೆ ಆಮದು ಆರಂಭವಾಗಿದೆ.
2017ರಲ್ಲೂ ಆಮದಾಗಿತ್ತು: 2017ರ ಆಗಸ್ಟ್‌ನಲ್ಲಿ ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಆರ್‌ಎಂಸಿ(ಕೃಷಿ ಉತ್ಪನ್ನ ಮಾರುಕಟ್ಟೆ)ಯಲ್ಲಿ ವಿಯೆಂಟ್ನಾಂ ಕಾಳುಮೆಣಸು ಆಮದಾಗಿತ್ತು. ಇದು ರಾಜ್ಯಾದ್ಯಂತ ದೊಡ್ಡ ಸುದ್ದಿಯೂ ಆಗಿತ್ತು. ಆರ್‌ಎಂಸಿಯಲ್ಲಿ ಇತರೆ ದೇಶದ ಕಾಳುಮೆಣಸು ಆಮದು ಮಾಡಿಕೊಳ್ಳುವಂತಿಲ್ಲ. ಗೋಣಿಕೊಪ್ಪಲು ಆರ್‌ಎಂಸಿ ನಾಮ ನಿದೇರ್ಶಿತ ಸದಸ್ಯರು ಆಗ ಕಳಪೆ ಕಾಳುಮೆಣಸನ್ನು್ನ ಕೊಡಗಿನ ಕಾಳುಮೆಣಸಿನೊಂದಿಗೆ ಬೆರೆಸಿ ಮಾರಾಟ ಮಾಡುತ್ತಿರುವುದು, ಕಾಳುಮೆಣಸು ಪುಡಿ ಮಾಡುತ್ತಿರುವ ಮಿಲ್, ಸ್ಥಾವರ, ಪ್ಯಾಕಿಂಗ್ ಘಟಕ ಮತ್ತಿತರ ಅವ್ಯವಹಾರ ಬೆಳಕಿಗೆ ತಂದಿದ್ದರು. ನಂತರ ಬೆಳೆಗಾರರ ಒಕ್ಕೂಟ ಕಳಪೆ ಕಾಳುಮೆಣಸು ದಾಸ್ತಾನು ಪತ್ತೆ ಹಚ್ಚಿ ಪೊಲೀಸರು, ತಹಸೀಲ್ದಾರರ ಸಮ್ಮುಖದಲ್ಲಿ ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಾಗಿತ್ತು. ಇಲ್ಲಿ ವಶಪಡಿಸಿಕೊಳ್ಳಲಾದ ಕಾಳುಮೆಣಸು ಪುಡಿಯ ಸ್ಯಾಂಪಲ್ ಅನ್ನು ಮೈಸೂರು ಪ್ರಯೋಗಾಲಯಕ್ಕೆ ಕಳುಹಿಸಿ ಪರಿಶೀಲಿಸಿದಾಗ, ಆ ಪುಡಿ ಆಹಾರ ಪದಾರ್ಥವಾಗಿ ಬಳಸಲು ಯೋಗ್ಯವಲ್ಲ ಎಂಬುದು ಬೆಳಕಿಗೆ ಬಂದಿತ್ತು
ಶ್ರೀಲಂಕಾ ಮೂಲಕ ಭಾರತಕ್ಕೆ ವಿಯೆಟ್ನಾಂನಿಂದ ನಿಯಮಬಾಹಿರವಾಗಿ ಕಾಳುಮೆಣಸು ಆಮದು ಮಾಡಲಾಗುತ್ತಿದೆ. ಆಗಸ್ಟ್‌ನಲ್ಲಿ ಸುಮಾರು 700 ಟನ್‌ಗಳಷ್ಟುಮೆಣಸನ್ನು ಆಮದು ಮಾಡಿಕೊಳ್ಳಲಾಗಿದೆ. ಇದರಿಂದ ದೇಶೀ ಬೆಳೆಗಾರರಿಗೆ ತೊಂದರೆಯಾಗುತ್ತದೆ. ಈ ವಿಚಾರವಾಗಿ ಈ ಹಿಂದೆ ವಾಣಿಜ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ.
-ಕೆ.ಕೆ. ವಿಶ್ವನಾಥ್, ಸಂಚಾಲಕರು, ಕಾಳುಮೆಣಸು ಬೆಳೆಗಾರರ ಒಕ್ಕೂಟದ ಸಮನ್ವಯ ಸಮಿತಿ.
ಇದರಿಂದ ಬೆಳೆಗಾರರಿಗೆ ನಷ್ಟವಾಗುತ್ತಿದ್ದು ಕಳ್ಳ ವ್ಯಾಪಾರಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ವಿಯೆಟ್ನಾಂ ಕಾಳುಮೆಣಸಿನಲ್ಲಿ ಎಣ್ಣೆ ಅಂಶ ತೆಗೆದು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಾರ ಮಂಡಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
-ಪ್ರದೀಪ್ ಪೂವಯ್ಯ, ತಾಂತ್ರಿಕ ಸದಸ್ಯರು ಕಾಳುಮೆಣಸು ಬೆಳೆಗಾರರ ಒಕ್ಕೂಟದ ಸಮನ್ವಯ ಸಮಿತಿ.