ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ಪಕ್ಷ ಸಂಘಟನೆಗೆ ಒತ್ತು, ಹಿಂದೆ ಕಲ್ಯಾಣ ನಾಡಲ್ಲಿ ಜನತಾ ಪರಿವಾರದ ಫಸಲು ಸಮೃದ್ಧವಾಗಿತ್ತು, ಆದರೀಗ ಕೆಲ ತಪ್ಪುಗಳಿಂದಾಗಿ ಪಕ್ಷ ಸಂಘಟನೆ ಸೊರಗಿದೆ. ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ನಾವು ಹೆಚ್ಚಿನ ಸಂಘಟನೆ ಮಾಡಬೇಕಿದೆ. ಯಾರಿಂದ ತಪ್ಪಾಗಿವೆಯೋ ಅವರೆಲ್ಲರೂ ಚರ್ಚಿಸಿ ಈ ಭಾಗದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕಿದೆ ಎಂದ ವೈಎಸ್‌ವಿ ದತ್ತಾ
ಕಲಬುರಗಿ(ಅ.28): ಕಲ್ಯಾಣ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಸಂಘಟಿಸುವ ಸಂಕಲ್ಪ ತಮ್ಮದಾಗಿದೆ. ಪಕ್ಷದ ಹಿರಿಯ ನಾಯಕರೊಂದಿಗೂ ಮಾತುಕತೆ ನಡೆಸಿ, ಇದ್ದದ್ದನ್ನು ಇದ್ದಹಾಗೆ ಹೇಳುವ ಮೂಲಕ ಈ ಭಾಗದಲ್ಲಿ ಎಂದಿನಂತೆ ಪಕ್ಷ ಬೆಳೆಯುವ ವಾತಾವರಣ ನಿರ್ಮಾಣಕ್ಕೆ ಯತ್ನಿಸುವುದಾಗಿ ಪಕ್ಷದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವೈಎಸ್‌ವಿ ದತ್ತಾ ಹೇಳಿದ್ದಾರೆ.
ಕಲಬುರಗಿ ಪ್ರವಾಸದಲ್ಲಿರುವ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಕಲ್ಯಾಣ ನಾಡಲ್ಲಿ ಜನತಾ ಪರಿವಾರದ ಫಸಲು ಸಮೃದ್ಧವಾಗಿತ್ತು. ಆದರೀಗ ಕೆಲ ತಪ್ಪುಗಳಿಂದಾಗಿ ಪಕ್ಷ ಸಂಘಟನೆ ಸೊರಗಿದೆ. ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ನಾವು ಹೆಚ್ಚಿನ ಸಂಘಟನೆ ಮಾಡಬೇಕಿದೆ. ಯಾರಿಂದ ತಪ್ಪಾಗಿವೆಯೋ ಅವರೆಲ್ಲರೂ ಚರ್ಚಿಸಿ ಈ ಭಾಗದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕಿದೆ. ಇಂತಹ ಸಂಕಷ್ಟದಲ್ಲೂ 4 ಶಾಸಕರು ಕಲ್ಯಾಣ ನಾಡಿನಿಂದ ನಮ್ಮ ಜೊತೆಗಿದ್ದಾರೆ ಎಂದರೆ ಇಲ್ಲಿ ಇನ್ನೂ ಜನತಾ ದಳದ ಪ್ರಭಾವ ಇದೆ ಎಂದರ್ಥ. ಅದನ್ನು ಬರುವ ದಿನಗಳಲ್ಲಿ ಹೆಚ್ಚಿಸಬೇಕಿದೆ ಎಂದು ಹೇಳಿದರು.
ಕಲಬುರಗಿ: ಲಾರಿ ತಡೆದು ದರೋಡೆ ಮಾಡುತ್ತಿದ್ದ ಖದೀಮರು, ಪತ್ರಕರ್ತ ಸೇರಿ ಮೂವರ ಬಂಧನ
ಹೊರಗುತ್ತಿಗೆ ಕರಾಳ ರೂಪ:
ಹೊರಗುತ್ತಿಗೆ ನೌಕರಿ ಕರಾಳ ಸ್ವರೂಪದ ಬಗ್ಗೆ ಮಾತನಾಡಿದ ಅವರು, ಇಂಧನ ಇಲಾಖೆಯ ಎಲ್ಲಾ ಎಸ್ಕಾಂಗಳಲ್ಲಿನ ಹೊರಗುತ್ತಿಗೆ ನೌಕರರ ಬದುಕಿಗೆ ಭದ್ರತೆ ಒದಗಿಸಿಕೊಡಲು ತಾವು ಕಾನೂನು, ರಾಜಕೀಯ ಹಾಗೂ ಹೋರಾಟ ಹೀಗೆ ಮೂರು ಹಂತಗಳಿಂದ ಯತ್ನಿಸಲಾಗುತ್ತಿದೆ. ಹೊರ ಗುತ್ತಿಗೆ ಗುಮ್ಮನಂತೆ ಕಾಡುತ್ತಿದೆ. ಇದರಲ್ಲಿ ನೌಕರರನ್ನು ದುಡಿಸಿಕೊಳ್ಳಲಾಗುತ್ತದೆ ಹೊರತು ಯಾವುದೇ ಸವಲತ್ತು ನೀಡೋದಿಲ್ಲ. ಇದರಿಂದ ನೌಕರರು ಯಾವಾಗ ಬೇಕಾದರೂ ಕೆಲಸ ಕಳೆದುಕೊಳ್ಳುವ ಭಯದಲ್ಲಿರುತ್ತಾರೆ. ಎಸ್ಕಾಂಗಳಲ್ಲಿ ಇದೇ ನಡೆಯುತಿದೆ. ಈ ಬಗ್ಗೆ ಹೋರಾಟ ಸಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದು, ಹೊರ ಗುತ್ತಿಗೆ ಸಮಸ್ಯೆಗೆ ಪೂರ್ಣ ವಿರಾಮ ನೀಡುವಂತೆ ಗಮನ ಸೆಳೆದಿದ್ದಾರೆ. ಇದಕ್ಕೆ ಸ್ಪಂದಿಸಿರುವ ಯಡಿಯೂರಪ್ಪ ಎಲ್ಲಾ ಎಸ್ಕಾಂಗಳಿಗೆ ಪತ್ರ ಬರೆದು ಹೊರಗುತ್ತಿಗೆ ನೌಕರರ ಮಾಹಿತಿ ಕ್ರೂಢೀಕರಣಕ್ಕೆ ಸೂಚಿಸಿದ್ದಾರೆ. ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಂದ ಪತ್ರ ರವಾನೆಯಾಗಿವೆ. ಆದಾಗ್ಯೂ ತಮ್ಮ ಹಂತದಲ್ಲಿ ಗೌಡರ ಪತ್ರದ ಜೊತೆಗೆ ರಾಜ್ಯದ ಹೆಸ್ಕಾಂ, ಜೆಸ್ಕಾಂ, ಬೆಸ್ಕಾಂ, ಮೆಸ್ಕಾಂ ಎಲ್ಲಾ ಕಡೆಗಳಲ್ಲಿ ಸಂಚಾರ ನಡೆಸಿ ಮಾಹಿತಿ ಕೋರುತ್ತಿರೋದಾಗಿ ಹೇಳಿದ್ದಾರೆ.