
ಬೆಳ್ತಂಗಡಿ: ವಿವಾದಾತ್ಮಕ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಇಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾದರು. ನಿನ್ನೆ ಅನಾರೋಗ್ಯದ ಕಾರಣ ನೀಡಿ ಗೈರಾಗಿದ್ದ ಸಮೀರ್, ತನ್ನ ವಕೀಲರ ಮೂಲಕ ಮೆಮೊ ಸಲ್ಲಿಸಿದ್ದರೂ, ಪೊಲೀಸರು ಇಂದು ಸ್ವತಃ ಹಾಜರಾಗಲೇ ಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದರು. ಅದರಂತೆ ಸಮೀರ್ ಬೆಳ್ತಂಗಡಿ ಠಾಣೆಗೆ ಬಂದು, ಹಲವು ದಾಖಲೆಗಳನ್ನು ತನಿಖಾ ಅಧಿಕಾರಿಗಳಿಗೆ ಒಪ್ಪಿಸಿದರು. ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್, ಮೂಲ ವೀಡಿಯೊ ದಾಖಲೆಗಳು ಹಾಗೂ ತಾಂತ್ರಿಕ ಮಾಹಿತಿಗಳು ಸೇರಿದಂತೆ ಪ್ರಮುಖ ಸಾಕ್ಷ್ಯಾಧಾರಗಳನ್ನು ಪೊಲೀಸರು ಸಂಗ್ರಹಿಸಿದರು.
ಈ ಪ್ರಕರಣದಲ್ಲಿ ಪ್ರಮುಖ ಅಂಶವೆಂದರೆ, ಸಮೀರ್ ಅಪ್‌ಲೋಡ್ ಮಾಡಿದ AI ಮೂಲಕ ಸೃಷ್ಟಿಸಿರುವ ವೀಡಿಯೊ. ವೀಡಿಯೊ ಮಾಡಿದ ಉದ್ದೇಶ ನಿಜವಾಗಿಯೂ ‘ಹಣಕಾಸು ಲಾಭಕ್ಕಾಗಿ’ ಆಗಿದೆಯೇ?, ಅಥವಾ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯಲು ತಪ್ಪು ಹಾಗೂ ಸುಳ್ಳು ವಿಷಯಗಳನ್ನು ಉದ್ದೇಶಪೂರ್ವಕವಾಗಿ ಹಂಚಿದ್ದಾನೆಯೇ? ಎಂಬುದನ್ನು ದೃಢೀಕರಿಸಲು ಪೊಲೀಸರು ದಾಖಲೆಗಳನ್ನು ಸಂಗ್ರಹಿಸಿದರು.
ಸುಮಾರು 45 ನಿಮಿಷಗಳ ವಿಚಾರಣೆ ನಡೆದಿದ್ದು, ಅಗತ್ಯ ದಾಖಲಾತಿಗಳಲ್ಲಿ ಕೆಲವು ಸಲ್ಲಿಸಿದ ಬಳಿಕ ಸಮೀರ್ ಠಾಣೆಯಿಂದ ಹೊರಟರು. AI ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ.