ಬಿಜೆಪಿ ಅವಧಿಯ ಬಿಬಿಎಂಪಿ ಭಾರೀ ಅಕ್ರಮ ತನಿಖಾ ವರದಿ: ಕಾಂಗ್ರೆಸ್‌ಗೆ ಹೊಸ ರಾಜಕೀಯ ಅಸ್ತ್ರ!

Published : Aug 30, 2025, 11:07 AM IST
BBMP latest news today photo

ಸಾರಾಂಶ

ಬಿಬಿಎಂಪಿ ಕಾಮಗಾರಿಗಳಲ್ಲಿನ ಅಕ್ರಮಗಳ ತನಿಖಾ ವರದಿಯನ್ನು ಇಂದು ಸರ್ಕಾರಕ್ಕೆ ಸಲ್ಲಿಸಲಾಗುವುದು. ೨೦೧೯ ರಿಂದ ೨೦೨೩ ರ ನಡುವಿನ ಅವಧಿಯ ಕಾಮಗಾರಿಗಳ ಗುಣಮಟ್ಟ ಮತ್ತು ಅನುದಾನ ದುರ್ಬಳಕೆ ಕುರಿತು ಆಯೋಗವು ಪರಿಶೀಲನೆ ನಡೆಸಿದೆ. ವರದಿಯು ರಾಜಕೀಯ ಪರಿಣಾಮ ಬೀರುವ ಸಾಧ್ಯತೆ ಇದೆ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 2019ರಿಂದ 2023ರವರೆಗೆ ನಡೆದ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ರಚಿಸಲಾದ ಏಕಸದಸ್ಯ ತನಿಖಾ ಆಯೋಗ ತನ್ನ ಅಂತಿಮ ವರದಿಯನ್ನು ಇಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ಮಾಜಿ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ನೇತೃತ್ವದ ಈ ಆಯೋಗವು ಸುಮಾರು ನಾಲ್ಕು ವರ್ಷಗಳ ಅವಧಿಯಲ್ಲಿ ನಡೆದ ಕಾಮಗಾರಿಗಳ ಗುಣಮಟ್ಟ, ಅನುದಾನದ ದುರ್ಬಳಕೆ ಮತ್ತು ಗುತ್ತಿಗೆ ಪ್ರಕ್ರಿಯೆಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಹಲವು ಮೂಲಸೌಕರ್ಯ ಕಾಮಗಾರಿಗಳ ಗುಣಮಟ್ಟದ ಕುರಿತು ತೀವ್ರ ಆಕ್ಷೇಪಣೆಗಳು ಕೇಳಿಬಂದಿದ್ದವು. ವಿಶೇಷವಾಗಿ 15ನೇ ಹಣಕಾಸು ಆಯೋಗದಿಂದ ಬಂದ ಅನುದಾನ ಮತ್ತು ನಗರೋತ್ಥಾನ ಯೋಜನೆಯಡಿ ಬಿಡುಗಡೆಗೊಂಡ ಅನುದಾನವನ್ನು ನಿಯಮಾನುಸಾರ ಬಳಸದೆ ಭಾರೀ ಅಕ್ರಮ ನಡೆದಿದೆ ಎಂಬ ಆರೋಪವನ್ನು ವಿರೋಧ ಪಕ್ಷಗಳು ಮುನ್ನಡೆಯಿಸಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ನ್ಯಾಯಮೂರ್ತಿ ನಾಗಮೋಹನದಾಸ್ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿತ್ತು.

ಆಯೋಗವು ನೂರಾರು ಕಡತಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ನಾಗರಿಕರಿಂದ ಹೇಳಿಕೆಗಳನ್ನು ದಾಖಲಿಸಿ ತೀವ್ರ ತನಿಖೆ ನಡೆಸಿದೆ. ಈ ಅವಧಿಯಲ್ಲಿ ನಡೆದ ಕಾಮಗಾರಿಗಳಲ್ಲಿ ಗುಣಮಟ್ಟದ ಗಂಭೀರ ಲೋಪಗಳು ಕಂಡುಬಂದಿದ್ದು, ಕೆಲ ಗುತ್ತಿಗೆದಾರರು ಮತ್ತು ಬಿಜೆಪಿ ನಾಯಕರ ವಿರುದ್ಧ ನೇರ ಹೊಣೆಗಾರಿಕೆಯ ಸೂಚನೆಗಳು ವರದಿಯಲ್ಲಿ ಇರಬಹುದೆಂಬ ಊಹಾಪೋಹಗಳು ಸದ್ಯ ಕೇಳಿ ಬರುತ್ತಿವೆ.

ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಲಿರುವ ನ್ಯಾ. ನಾಗಮೋಹನದಾಸ್ ಅವರ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಆಯೋಗವು ನೀಡುವ ಶಿಫಾರಸುಗಳು ಬಿಬಿಎಂಪಿ ಚುನಾವಣೆಗೂ ಮುನ್ನ ರಾಜಕೀಯವಾಗಿ ದೊಡ್ಡ ಆಯುಧವಾಗುವ ಸಾಧ್ಯತೆ ಇದೆ.

ವಿಶೇಷವಾಗಿ ಬೆಂಗಳೂರು ರಾಜಕೀಯದಲ್ಲಿ ಪ್ರಮುಖ ನಾಯಕರ ಮೇಲೆ ನೇರ ಹೊಣೆಗಾರಿಕೆ ಸಾಬೀತಾದರೆ, ಕಾಂಗ್ರೆಸ್ ಸರ್ಕಾರವು ಇದನ್ನು ಬಿಜೆಪಿ ವಿರುದ್ಧದ ರಾಜಕೀಯ ಅಸ್ತ್ರವಾಗಿ ಬಳಸುವ ತಂತ್ರವನ್ನು ರೂಪಿಸಬಹುದು. ಮತ್ತೊಂದೆಡೆ, ಬಿಜೆಪಿ ಇದನ್ನು ರಾಜಕೀಯ ಪ್ರೇರಿತ ತನಿಖೆ ಎಂದು ತಿರಸ್ಕರಿಸುವ ಸಾಧ್ಯತೆ ಇದೆ. ಹೀಗಾಗಿ ಬಿಬಿಎಂಪಿ ಕಾಮಗಾರಿಗಳ ಅಕ್ರಮದ ಕುರಿತು ಹೊರಬರುವ ಆಯೋಗದ ವರದಿ, ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯಕ್ಕೆ ಹೊಸ ಚರ್ಚೆಯ ಅಂಗಳವನ್ನು ತೆರೆಯುವ ನಿರೀಕ್ಷೆಯಿದೆ.

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ