
ತುಮಕೂರು: ಉಪಮುಖ್ಯಮಂತ್ರಿ ಡಾ ಜಿ. ಪರಮೇಶ್ವರ ಹಾಗೂ ತುಮಕೂರು ಜಿಲ್ಲಾಧಿಕಾರಿ (ಡಿಸಿ) ಶುಭಾ ಕಲ್ಯಾಣ್ ಅವರ ವಿರುದ್ಧ ಸುಳ್ಳು ಹಾಗೂ ಅವಹೇಳನಕಾರಿ ಸುದ್ದಿ ಬಿತ್ತರಿಸಿದ್ದ ಯೂಟ್ಯೂಬರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 'ಡಿಟೆಕ್ಟಿವ್ ಲೆಜೆಂಡ್' (Detective Legend) ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಬ್ರಹ್ಮಾನಂದ ರೆಡ್ಡಿ ಬಂಧಿತ ಆರೋಪಿಯಾಗಿದ್ದಾನೆ. ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಜುಲೈ 1 ರಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೋ ಅಪ್‌ಲೋಡ್ ಮಾಡಿದ್ದ ಬ್ರಹ್ಮಾನಂದ ರೆಡ್ಡಿ, ಡಿಸಿಎಂ ಜಿ. ಪರಮೇಶ್ವರ್ ಮತ್ತು ಡಿಸಿ ಶುಭಾ ಕಲ್ಯಾಣ್ ಅವರ ನಡುವೆ ಪ್ರೇಮಾಂಕುರವಾಗಿದೆ ಎಂಬ ಅರ್ಥದಲ್ಲಿ ಸುಳ್ಳು ಸುದ್ದಿಯೊಂದನ್ನು ಸೃಷ್ಟಿಸಿ ಬಿತ್ತರಿಸಿದ್ದ. ಸುಮಾರು 17 ನಿಮಿಷಗಳ ಸುದೀರ್ಘ ವೀಡಿಯೋದಲ್ಲಿ ಇಬ್ಬರ ವೈಯಕ್ತಿಕ ಜೀವನ ಹಾಗೂ ಚಾರಿತ್ರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ನಿರೂಪಣೆ ಮಾಡಿದ್ದ. "75 ವರ್ಷದ ಡಿಸಿಎಂ ಜಿ. ಪರಮೇಶ್ವರ್ ಹಾಗೂ 42 ವರ್ಷದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮೇಡಂ ನಡುವೆ ಲವ್ ಆಗಿದೆ" ಎಂದೆಲ್ಲ ಬೊಗಳೆ ಬಿಟ್ಟು ಕಟ್ಟುಕಥೆ ಹೆಣೆದಿದ್ದ.
ರಾಜ್ಯದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲೆಯ ಜವಾಬ್ದಾರಿಯುತ ಉನ್ನತ ಅಧಿಕಾರಿಯೊಬ್ಬರ ವಿರುದ್ಧ ಈ ರೀತಿಯ ಸತ್ಯದೂರ ಮತ್ತು ಮಾನಹಾನಿಕರ ವೀಡಿಯೋ ಹರಿದಾಡುತ್ತಿದ್ದಂತೆ ತುಮಕೂರು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.
ಯೂಟ್ಯೂಬರ್‌ನ ಈ ಕೃತ್ಯ ಸಮಾಜದಲ್ಲಿ ಶಾಂತಿ ಕದಡುವ ಮತ್ತು ಗಣ್ಯರ ತೇಜೋವಧೆ ಮಾಡುವ ಉದ್ದೇಶದಿಂದ ಕೂಡಿದ್ದರಿಂದ, ಹೊಸ ಬಡಾವಣೆ ಪೊಲೀಸರು ಯಾವುದೇ ದೂರಿನ ನಿರೀಕ್ಷೆ ಮಾಡದೆ ಸ್ವಯಂಪ್ರೇರಿತವಾಗಿ (Suo Moto) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾದ ಬೆನ್ನಲ್ಲೇ ಆರೋಪಿ ಬ್ರಹ್ಮಾನಂದ ರೆಡ್ಡಿಯನ್ನು ಪತ್ತೆಹಚ್ಚಿ ಕಂಬಿ ಹಿಂದೆ ತಳ್ಳಲಾಗಿದೆ.