ಬೆಂಗಳೂರು: ಫುಟ್ ಪಾತ್ ಒತ್ತುವರಿ ವಿರುದ್ಧ ಸಾರ್ವಜನಿಕರ ಆಕ್ರೋಶ, ಪಾದಚಾರಿಗಳು vs ವ್ಯಾಪಾರಿಗಳ ನಡುವೆ ಜಟಾಪಟಿ!

Published : Jul 03, 2026, 10:28 AM IST
GBA Safe Footpath

ಸಾರಾಂಶ

ಬೆಂಗಳೂರಿನಲ್ಲಿ 'ಸೇಫ್ ಫುಟ್‌ಪಾತ್' ಕಾರ್ಯಾಚರಣೆ ಆರಂಭವಾಗಿದ್ದು, ಗಾಂಧಿ ಬಜಾರ್‌ನಲ್ಲಿ ಫುಟ್‌ಪಾತ್ ಒತ್ತುವರಿ ವಿಚಾರವಾಗಿ ಪಾದಚಾರಿಗಳು ಮತ್ತು ಬೀದಿ ವ್ಯಾಪಾರಿಗಳ ನಡುವೆ ತೀವ್ರ ಜಟಾಪಟಿ ನಡೆದಿದೆ. ಓಡಾಡಲು ದಾರಿ ಬಿಡುವಂತೆ ಸಾರ್ವಜನಿಕರು ಪಟ್ಟು ಹಿಡಿದರೆ, ವ್ಯಾಪಾರಿಗಳು ಉದ್ಧಟತನ ಪ್ರದರ್ಶಿಸುತ್ತಿದ್ದಾರೆ. ಈ ಮಧ್ಯೆ, ಜಿಬಿಎ ಅಧಿಕಾರಿಗಳು ಹೋಟೆಲ್ ಮುಂದಿದ್ದ ಅಕ್ರಮ ಕಟ್ಟೆಯನ್ನು ತೆರವುಗೊಳಿಸಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಪಾದಚಾರಿಗಳಿಗೆ ಓಡಾಡಲು ಅನುವಾಗುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಜುಲೈ 1 ರಿಂದ 'ಸೇಫ್ ಫುಟ್‌ಪಾತ್' (Safe Footpath) ಕಾರ್ಯಾಚರಣೆ ಆರಂಭ ಮಾಡಿದೆ. ಇದೀಗ ನಗರದಲ್ಲಿ ಫುಟ್‌ಪಾತ್ ಒತ್ತುವರಿ ವಿರುದ್ಧ ಸಾರ್ವಜನಿಕರು ಹಾಗೂ ಪಾದಚಾರಿಗಳು ಫುಟ್‌ಪಾತ್ ಮೇಲೆ ಅಂಗಡಿ ಇಟ್ಟವರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಧ್ವನಿ ಎತ್ತಿದ್ದಾರೆ. "ನಮಗೆ ಓಡಾಡಲು ಫುಟ್‌ಪಾತ್ ಬೇಕು. ಮೊದಲು ಪಾದಚಾರಿಗಳಿಗೆ ಜಾಗ ಬಿಟ್ಟು, ಆಮೇಲೆ ನಿಮ್ಮ ವ್ಯಾಪಾರ ಮಾಡಿಕೊಳ್ಳಿ" ಎಂದು ಸಾರ್ವಜನಿಕರು ಒತ್ತುವರಿದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವಿಚಾರವಾಗಿ ಸದ್ಯ ಸಾರ್ವಜನಿಕರು ಮತ್ತು ಫುಟ್‌ಪಾತ್ ವ್ಯಾಪಾರಿಗಳ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ಜಟಾಪಟಿ ನಡೆದಿದೆ. ಈ ಘಟನೆ ನಡೆದಿರುವುದು ಬೆಂಗಳೂರಿನ ಗಾಂಧಿ ಬಜಾರ್ ‌ನಲ್ಲಿ. ಇಲ್ಲಿ ಅಕ್ರಮವಾಗಿ ಸಾವಿರಾರು ಜನ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುತ್ತಾರೆ

ನಾವು ರಸ್ತೆಯಲ್ಲಿ ನಡೆದರೆ ಬೈಯುತ್ತಾರೆ, ಫುಟ್‌ಪಾತ್‌ನಲ್ಲಿ ವಸ್ತುಗಳಿಟ್ಟರೆ ಎಲ್ಲಿ ನಡೆಯಬೇಕು?

ಒತ್ತುವರಿಯಿಂದ ಬೇಸತ್ತ ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದು, "ನಾವು ಫುಟ್‌ಪಾತ್ ಮೇಲೆಯೇ ನಡೆಯಬೇಕು. ಅದನ್ನು ಬಿಟ್ಟು ನೀವು ಫುಟ್‌ಪಾತ್‌ನಲ್ಲಿ ಇಟ್ಟಿರುವ ವಸ್ತುಗಳ ಮೇಲೆ ನಡೆಯಲು ಸಾಧ್ಯವೇ? ತಕ್ಷಣವೇ ಫುಟ್‌ಪಾತ್ ಕ್ಲಿಯರ್ ಮಾಡಿ" ಎಂದು ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಪಾದಚಾರಿಯೊಬ್ಬರು "ನಾವು ಜೀವ ಕೈಯಲ್ಲಿ ಹಿಡಿದು ರಸ್ತೆಯಲ್ಲಿ ನಡೆದರೆ ಆಟೋದವರು, ವಾಹನ ಚಾಲಕರು ಮನಸೋಇಚ್ಛೆ ಅಸಭ್ಯ ಪದಗಳಿಂದ ಬೈಯುತ್ತಾರೆ. 'ಸೈಡಿಗೆ ಹೋಗೋ...' ಎಂದು ನಿಂದಿಸುತ್ತಾರೆ. ತಪ್ಪು ಮಾಡದ ನಾವು ಯಾಕೆ ಅವರ ಹತ್ತಿರ ಬೈಸಿಕೊಳ್ಳಬೇಕು? ಮೊದಲು ನಮಗೆ ಓಡಾಡಲು ದಾರಿ ಬಿಡಿ." ಎಂದು ಹೇಳಿದರು

"ಪಾದಚಾರಿಗಳಿಗೆ ದಾರಿ ಬಿಡಿ ಎಂದು ಕೇಳಿದರೆ, ವ್ಯಾಪಾರಿಗಳು 'ನಾವು ಇಲ್ಲಿ 60 ವರ್ಷಗಳಿಂದ ಅಂಗಡಿ ಇಟ್ಟುಕೊಂಡಿದ್ದೇವೆ, ಸರ್ಕಾರವೇ ನಮಗೆ ಈ ಜಾಗ ಬರೆದುಕೊಟ್ಟಿದೆ' ಎಂದು ಉಡಾಫೆಯಾಗಿ ಉತ್ತರಿಸುತ್ತಾರೆ. ನಾವೇನು ಅವರ ಅಂಗಡಿಗಳನ್ನು ಸಂಪೂರ್ಣವಾಗಿ ಖಾಲಿ ಮಾಡಿ ಎನ್ನುತ್ತಿಲ್ಲ. ಓಡಾಡಲು ದಾರಿ ಬಿಟ್ಟು ವ್ಯಾಪಾರ ಮಾಡಿ ಎಂದಿದ್ದಕ್ಕೆ ಇಷ್ಟೊಂದು ವಾದ ಮಾಡುತ್ತಾರೆ ಎಂದು ಹೇಳಿದರು.

ಇದೇ ವೇಳೆ ಪಾದಾಚಾರಿಯೊಬ್ಬರು ಫುಟ್‌ಫಾತ್‌ ನಲ್ಲಿ ಅಂಗಡಿ ಇಟ್ಟವರನ್ನು ಪ್ರಶ್ನಿಸಿದಾಗ 'ನಾನು ಎಲ್ಲಿ ಬೇಕಾದರೂ ಅಂಗಡಿ ಇಟ್ಟುಕೊಳ್ಳುತ್ತೇನೆ, ನೀನು ಆ ಹಿಂದುಗಡೆ ಇರೋ ಜಾಗದಲ್ಲಿ ನಡಿ ಎಂದು ಹೋಗು' ಎಂದು ವ್ಯಾಪಾರಿಯೊಬ್ಬರು ಉದ್ಧಟತನದಿಂದ ಉತ್ತರ ನೀಡಿರುವ ಘಟನೆಯೂ ನಡೆದಿದೆ.

ಹೋಟೆಲ್ ಮುಂಭಾಗದ ಅಕ್ರಮ ಸಿಮೆಂಟ್ ಕಟ್ಟೆ ತೆರವು

ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯ ಭಾಗವಾಗಿ, ಹೋಟೆಲೊಂದರ ಮುಂಭಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಸಿಮೆಂಟ್ ಕಟ್ಟೆಯನ್ನು ಜಿಬಿಎ (GBA) ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಹೋಟೆಲ್ ಮಾಲೀಕರು ತಮ್ಮ ಗ್ರಾಹಕರು ಕೂರಲು ಅನುಕೂಲವಾಗುವಂತೆ ಸಾರ್ವಜನಿಕ ಫುಟ್‌ಪಾತ್ ಅನ್ನೇ ಒತ್ತುವರಿ ಮಾಡಿಕೊಂಡು ದೊಡ್ಡ ಸಿಮೆಂಟ್ ಕಟ್ಟೆಯನ್ನು ನಿರ್ಮಿಸಿದ್ದರು. ಅಧಿಕಾರಿಗಳು ಜೆಸಿಬಿ ಮೂಲಕ ಇದನ್ನು ತೆರವುಗೊಳಿಸಲು ಮುಂದಾದಾಗ, ಹೋಟೆಲ್ ಮಾಲೀಕರು ಹಾಗೂ ಸಿಬ್ಬಂದಿಯಿಂದ ತೀವ್ರ ವಿರೋಧ ವ್ಯಕ್ತವಾಯಿತು.

ಆದರೆ, ಮಾಲೀಕರ ಯಾವುದೇ ವಿರೋಧಕ್ಕೆ ಮಣಿಯದ ಜಿಬಿಎ ಅಧಿಕಾರಿಗಳು, ತಕ್ಷಣವೇ ಹೋಟೆಲ್ ಬಂದ್ ಮಾಡಿಸಿ, ಫುಟ್‌ಪಾತ್ ಮೇಲಿದ್ದ ಅಕ್ರಮ ಕಟ್ಟೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಧಿಕಾರಿಗಳ ಈ ಕಠಿಣ ಕ್ರಮಕ್ಕೆ ಪಾದಚಾರಿಗಳಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

PREV
Read more Articles on
click me!

Recommended Stories

ಬೆಂಗಳೂರು: ಭೀಕರ ಬೆಂಕಿ ಅವಘಡಕ್ಕೆ ಪಾರ್ಕಿಂಗ್‌ ನಲ್ಲಿದ್ದ 400 ಇವಿ ಬೈಕ್‌ ಗಳು ಸುಟ್ಟು ಬೂದಿ!
ಲಕ್ಕುಂಡಿ ಗ್ರಾ. ಪಂಚಾಯಿತಿಯಲ್ಲಿ ದಿಢೀರ್ ಬದಲಾವಣೆ; ಆಡಳಿತಾಧಿಕಾರಿ, PDO ವರ್ಗಾವಣೆ