* ಊರ ಹಸಿರು ಮಾಡಲು ಹೊರಟ ಯುವಕರ ತಂಡ
* ಹಸಿರೇ ಉಸಿರು ತಂಡದ ಹಸಿರಿನ ಕೆಲಸ
* ವಿವಿಧ ಸಸಿಗಳ ನಾಟಿ
ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ, (ಮೇ.02): ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗಿ ದಾರಿ ತಪ್ಪುತ್ತಿದ್ದಾದೆ ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇಂತದರಲ್ಲಿ ಇಲ್ಲೊಂದು ಊರಲ್ಲಿ ಯುವಕರ ಗುಂಪೊಂದು ತಮ್ಮ ಊರನ್ನೇ ಹಸಿರಾಗಿಸಲು ಮುಂದಾಗಿದ್ದಾರೆ. ಅರೇ ಇದೇನಪ್ಪ ಯುವಕರಿಂದ ಅದು ಹೇಗೆ ಊರು ಹಸಿರಾಗುತ್ತೆ ಅಂತೀರಾ? ಅದು ಗೋತ್ತಾಗಬೇಕಂದರೆ ಈ ರಿಪೋರ್ಟ್ ನೋಡಿ.
ಹಸಿರೇ ಉಸಿರು ತಂಡದ ಹಸಿರಿನ ಕೆಲಸ
ಮನುಷ್ಯ ಉಸಿರಾಡಬೇಕೆಂದರೆ ಆಮ್ಲಜನಕ ಬೇಕೇ ಬೇಕು, ಆಮ್ಲಜನಕ ಇರಲಾರದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಹೀಗಾಗಿ ಆಮ್ಲಜನಕ್ ಉತ್ಪಾದನೆ ಆಗುವುದು ಮರಗಳಿಂದ ಈ ಹಿನ್ನಲೆಯಲ್ಲಿ ಹಸಿರೇ ಉಸಿರು ಎನ್ನುವ ತಂಡವು ಫಲಾಪೇಕ್ಷೆಯಿಲ್ಲದೇ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ, ಪರಿಸರ ಕಾಳಜಿ ಮೆರೆಯುತ್ತಿರುವುದು ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದೆ.
ಕೊಪ್ಪಳ ಜಿಲ್ಲೆ ಅಂದರೆ ಸಾಕು ನಮಗೆ ನೆನಪಿಗೆ ಬರುವುದು ಬಿಸಲ ನಾಡು,ಗಿಡ ಮರಗಳ ಕೊರತೆ ಇರುವ ಜಿಲ್ಲೆ ಎಂದು. ಇಂತಹ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಾಲೂಕಿನ ಮುಧೋಳ ಗ್ರಾಮದಲ್ಲಿ ಸದ್ದಿಲ್ಲದೆ ಯುವಕರ ಗುಂಪೊಂದು ಹಸಿರೇ ಉಸಿರು ಎನ್ನುವ ತಂಡವೊಂದನ್ನು ಮಾಡಿಕೊಂಡು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ತ್ರಿಲಿಂಗೇಶ್ವರ ಪ್ರೌಢ ಶಾಲೆ ಆವರಣದಲ್ಲಿ ಅರಣ್ಯ ಇಲಾಖೆಯಿಂದ ನೆಡಲಾದ ವಿವಿಧ ತಳಿಯ ಸಸಿಗಳ ಪಾಲನೆ, ಪೋಷಣೆ ಮಾಡುವ ಮೂಲಕ ಪರಿಸರ ಪ್ರೇಮ ಮೆರೆಯುತ್ತಿದೆ.
ಕೊಪ್ಪಳ: ಕನಸಿನ ನೀರಾವರಿ ಯೋಜನೆಗೆ ವಿಘ್ನ, ಟ್ರಯಲ್ ವೇಳೆ ಪೈಪ್ ಒಡೆದ ನೀರು ಪೋಲು
ಹಸಿರಾಗುವ ಕೆಲಸ ಏನೇಲ್ಲ ಮಾಡಿದ್ದಾರೆ?
500 ನೆಡುತೋಪು: 2021-22ನೇ ಸಾಲಿನ ನರೇಗಾ ಯೋಜನೆಯಡಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಹಾಗೂ ಹಸಿರೇ ಉಸಿರು ತಂಡದ ಮುಂದಾಳತ್ವದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ 300, ತ್ರಿಲಿಂಗೇಶ್ವರ ಪ್ರೌಢ ಶಾಲಾ ಆವರಣದಲ್ಲಿ 150 ಸೇರಿ ವಿವಿಧ ತಳಿಯ ಒಟ್ಟು 500 ನೆಡುತೋಪು ಕಳೆದ 10 ತಿಂಗಳ ಹಿಂದೆ ನೆಡಲಾಗಿತ್ತು. ಈಗ ಸಸಿಗಳು ನಿರೀಕ್ಷಿತ ಮಟ್ಟದಲ್ಲಿ ಬೆಳೆದು ನಿಂತಿದ್ದು, ನೋಡುಗರ ಕಣ್ಮನ ಸೆಳೆಯುವುದರ ಜತೆಗೆ ಆಸ್ಪತ್ರೆಯ ಮೆರಗು ಹೆಚ್ಚಿಸಿವೆ. ಅಲ್ಲದೇ ಆಸ್ಪತ್ರೆಗೆ ಬರುವ ರೋಗಿಗಳಿಗೆ ನೆರಳಿನ ಆಶ್ರಯ ಕಲ್ಪಿಸಿವೆ.
ವಿವಿಧ ಸಸಿಗಳ ನಾಟಿ
ಆರೋಗ್ಯ ಕೇಂದ್ರದ ಆವರಣದಲ್ಲಿ ಅರಳಿ, ಚರ‍್ರಿ, ಅಶೋಕ, ಟೊಕೊಮೊ, ಬಂಗಾಳಿ, ಬದಾಮಿ, ಹಲಸು, ನೇರಳೆಗಿಡ, ಹುಣಸೆ, ಹಾಗೂ ತ್ರಿಲಿಂಗೇಶ್ವರ ಪ್ರೌಢ ಶಾಲಾ ಆವರಣದಲ್ಲಿ ನಾನಾ ತಳಿಯ ಅಲಂಕಾರಿಕ ಹಾಗೂ ಔಷಧಿ ಸಸಿ ನೆಡಲಾಗಿದ್ದು, ಅವು ಹಸಿರಿನಿಂದ ಕಂಗೊಳಿಸುತ್ತಿವೆ.
5 ಸಾವಿರ ಸಸಿ ವಿತರಣೆ
ಹಸಿರೇ ಉಸಿರು ತಂಡದವರು ತಮ್ಮ ಸ್ವಯಂ ಪ್ರೇರಣೆಯಿಂದ ಹಣ ಸಂಗ್ರಹ ಮಾಡಿಕೊಂಡು ಮುಧೋಳದಲ್ಲಿ ಸುಮಾರು 5000 ಸಾವಿರ ಸಸಿಗಳನ್ನು ಮನೆ ಮನೆಗೆ ವಿರಿಸಲಾಗಿದೆ. ಸಸಿಗಳನ್ನು ಪೋಷಣೆ ಮಾಡಲು ತಂಡದವರು ಜವಾಬ್ದಾರಿ ಹಂಚಿಕೊಂಡು ತಮ್ಮ ಕೈಲಾದ ಮಟ್ಟಿಗೆ ಪಾಲನೆ ಪೋಷಣೆ ಮಾಡಲು ಮುಂದಾಗಿದ್ದಾರೆ.
ಸಹಕಾರದಿಂದ ಎಲ್ಲವೂ ಸಾಧ್ಯ
ಇನ್ನು ಯಾವುದೇ ಒಂದು ಸಮಾಜಮುಖಿ ಕೆಲಸ ಮಾಡಬೇಕಾದರೆ ಸಮಾಜದ ಸಹಕಾರ ಅಷ್ಟೇ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ಪರಿಸರ ಪ್ರೇಮ ಮೆರೆಯುತ್ತಿರುವ ಹಸಿರೇ ಉಸಿರು ತಂಡಕ್ಕೆ ಸ್ಥಳೀಯ ಗ್ರಾಪಂ, ಅರಣ್ಯ ಇಲಾಖೆ, ಆರೋಗ್ಯ, ಶಾಲಾ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ. ಯುವಕರ ಈ ಒಂದು ಸಾಮಾಜಿಕ ಕೆಲಸ ಆದರ್ಶ ಪ್ರಾಯವಾಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಮುಂದಿನ ದಿನಗಳಲ್ಲಿಯೂ ಕೂಡ ಹಸಿರೇ ಉಸಿರು ತಂಡವರು ಹಸಿರೀಕರಣಕ್ಕಾಗಿ ಹೆಚ್ಚು ಸಸಿ ಬೆಳೆಸಲು ನಿರೀಕ್ಷೆ ಹೊಂದಿದ್ದಾರೆ. ತೋರಿಕೆಗೆ ಗಿಡ ಹಚ್ಚಿ ಪೋಟೋ ತೆಗೆಸಿಕೊಂಡು ಪ್ರಚಾರ ಪಡೆದುಕೊಳ್ಳುವವರ ಮಧ್ಯೆ ಮುಧೋಳದ ಹಸಿರೇ ಉಸಿರು ತಂಡದ ಯುವಕರು ನೈಜ ಪರಿಸರ ಪ್ರೇಮ ಮೆರೆದು, ತಮ್ಮ ಜೀವನದ ಸಾಮಾಜಿಕ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ಹೇಳುವದರಲ್ಲಿ ಯಾವುದೇ ಅತಿಶಯೋಕ್ತಿ ಎನ್ನಿಸಲಾರದು. ಯುವಕರ ಈ ಕಾರ್ಯ ನಿಜಕ್ಕೂ ಮಾದರಿಯೇ ಸರಿ.